»   » ಹನಿಮೂನ್‌ ಎಕ್ಸ್‌ಪ್ರೆಸ್‌ : ತುಟಿಯ ಮೇಲೆ ತುಂಟ ಕಿರುನಗೆ

ಹನಿಮೂನ್‌ ಎಕ್ಸ್‌ಪ್ರೆಸ್‌ : ತುಟಿಯ ಮೇಲೆ ತುಂಟ ಕಿರುನಗೆ

Posted By:
Subscribe to Filmibeat Kannada


ಕೆಲವು ದೌರ್ಬಲ್ಯಗಳ ನಡುವೆಯೂ ಚಿತ್ರದಲ್ಲಿ ನಗೆ ಮಲ್ಲಿಗೆ ಅರಳುತ್ತದೆ. ಒಮ್ಮೆ ಎದ್ದು ಬಿದ್ದು ನಕ್ಕರೆ, ಇನ್ನೊಮ್ಮೆ ಬಿದ್ದು ಎದ್ದು ನಗು. ಮಗದೊಮ್ಮೆ ಸಹಜ ನಗು, ಇನ್ನೊಮ್ಮೆ...

  • ಚೇತನ್‌ ನಾಡಿಗೇರ್‌
ಅಣ್ಣ ತಮ್ಮ , ಅಕ್ಕ ತಂಗಿಯನ್ನು ಪ್ರೀತಿಸಿರುತ್ತಾರೆ. ಆದರೆ ಮದುವೆಯಾದರೆ ಆರು ತಿಂಗಳಲ್ಲಿ ಅಣ್ಣ ತಮ್ಮ ಸಾಯುತ್ತಾರೆ ಎಂದು ಜ್ಯೋತಿಷಿ ಹೇಳುತ್ತಾನೆ. ಹಾಗೇ ಒಂದು ಸಲಹೆ ಕೊಡುತ್ತಾನೆ.

ಅಣ್ಣ ಪ್ರೀತಿಸಿದ ಹುಡುಗಿಯನ್ನು ತಮ್ಮ, ತಮ್ಮ ಪ್ರೀತಿಸಿದ ಹುಡುಗಿಯನ್ನು ಅಣ್ಣ ಮದುವೆಯಾದರೆ ಕಂಟಕವಿಲ್ಲ. ಅದಕ್ಕೆ ಅಣ್ಣ ತಮ್ಮ ಒಪ್ಪುತ್ತಾರೆ. ತಾಳಿ ಕಟ್ಟುವ ಸಮಯದಲ್ಲಿ ಕರೆಂಟ್‌ ಹೋಗುತ್ತದೆ.

ಕತ್ತಲಲ್ಲಿ ಅವರು ತಾವು ಪ್ರೀತಿಸಿದ ಹುಡುಗಿಗೇ ತಾಳಿ ಕಟ್ಟಿ ಎಲ್ಲರಿಗೂ ಮೋಸ ಮಾಡುತ್ತಾರೆ. ಅಲ್ಲಿಂದ ಸಮಸ್ಯೆ ಶುರು. ಎಲ್ಲರ ಕಣ್ಣು ತಪ್ಪಿಸಿ ತಮ್ಮ ತಮ್ಮ ಹೆಂಡತಿ ಬಳಿ ಹೋಗುವುದು ಹೇಗೆ? ಬೇರೆ ಊರಿಗೆ ಹೋದರೆ ತಮ್ಮ ಹನಿಮೂನ್‌ ಮಾಡಬಹುದೆಂದು ಐಡಿಯಾ ಮಾಡುತ್ತಾರೆ. ಅಲ್ಲಿ ಅವರ ಅತ್ತೆ ಹಾಜರಾಗುತ್ತಾಳೆ. ಆಕೆಯ ಕಣ್ಣು ತಪ್ಪಿಸುವುದು ಮತ್ತೊಂದು ಹಗರಣ. ಅಷ್ಟರಲ್ಲಿ ಮತ್ತೊಂದು ಹೆಣ್ಣು ಬರುತ್ತಾಳೆ. ಅವಳಿಂದ ಯಾರ ಗಂಡ, ಯಾರ ಹೆಂಡತಿ ಸಮಸ್ಯೆಗೆ ನಾಂದಿ. ಹನಿಮೂನ್‌ ಮಾಡಲು ಬಂದು ಬರೀ....

ಇದು ಕತೆಯ ಐದು ಪೈಸೆ ಮಾತ್ರ. ಹೇಳುತ್ತಾ ಹೋದರೆ ಅದೇ ಒಂದು ದೊಡ್ಡ ಕತೆಯಾಗುತ್ತದೆ. ಹಾಸ್ಯ ಕತೆಗಳಲ್ಲಿ ಗೊಂದಲದ್ದೇ ಕಾರುಬಾರು. ಜನರಿಗೆ ನಗಿಸಲು ಅದೇ ತಾನೇ ಸರಕು? ಹಾಸ್ಯ ಚಿತ್ರವೆಂದರೆ ಇದು ಇದ್ದರೇ ಚೆಂದ ಅನ್ನುವುದು ನಿರ್ದೇಶಕ ನಾಗೇಂದ್ರ ಮಾಗಡಿ ಅವರ ಸಾಮಾನ್ಯಜ್ಞಾನ. ಅದಕ್ಕೆ ತಕ್ಕಂತೆ ಚಿತ್ರಕತೆ ರೆಡಿಯಾಗಿದೆ.

ಮೊದಲಾರ್ಧ ತಮ್ಮನಿಗೆ ಲವ್‌ ಟ್ರೇನಿಂಗ್‌ ಕೊಡುವ ಅಣ್ಣನ ಸಾಹಸ, ಆಮೇಲೆ ಹನಿಮೂನ್‌ ಮಾಡಲು ಪರದಾಟ. ಇದಿಷ್ಟನ್ನು ಇಟ್ಟುಕೊಂಡು ಮೂರು ಗಂಟೆ ಚಿತ್ರಕ್ಕೆ ಕ್ಯಾಮೆರಾ ಹಿಡಿಯಲಾಗಿದೆ. ನಗಿಸಲೆಂದೇ ಕೆಲವು ಪಾತ್ರಗಳನ್ನು ಸೃಷ್ಟಿಸಲಾಗಿದೆ.

ಅದಕ್ಕೆ ತಕ್ಕಂತೆ ಅವರೆಲ್ಲ ಮಾತಿನಲ್ಲೇ ಮನೆ ಕಟ್ಟುತ್ತಾರೆ. ನಗುತ್ತಾರೆ, ನಗಿಸುತ್ತಾರೆ. ಕೆಲವೊಮ್ಮೆ ಬೆಚ್ಚಿ ಬೀಳಿಸುತ್ತಾರೆ. ಆದರೆ ಜಗ್ಗೇಶ್‌ ಬಂದಾಗಲೇ ನೋಡಿ ಮಜಾ. ಅವರೇ ಇಡೀ ಚಿತ್ರದ ಬಂಡವಾಳ. ಎಲ್ಲವನ್ನೂ ಏಕಾಂಗಿಯಾಗಿ ತಲೆ ಮೇಲೆ ಹೊತ್ತು ನಡೆಯುತ್ತಾರೆ.

ಚಿತ್ರಕತೆ ಹೇಗೇ ಇರಲಿ, ನನ್ನ ಪಾತ್ರಕ್ಕೆ ನಾನೇ ಜೀವ ತುಂಬುತ್ತೇನೆ ಎನ್ನುವ ನಿಲುವಿಗೆ ಅಂಟಿಕೊಂಡಿದಾ ್ದರೆ. ಹೀಗಾಗಿಯೇ ಜಗ್ಗೇಶ್‌ ತೆರೆ ಮೇಲೆ ಇರುವಷ್ಟು ಹೊತ್ತು ನಗು ನೀ ನಗು ಕಿರುನಗೆ ನಗು... ಕೆಲವು ದೌರ್ಬಲ್ಯಗಳ ನಡುವೆಯೂ ನಗೆ ಮಲ್ಲಿಗೆ ಇಲ್ಲಿ ಅರಳುತ್ತದೆ. ಒಮ್ಮೆ ಎದ್ದು ಬಿದ್ದು ನಕ್ಕರೆ, ಇನ್ನೊಮ್ಮೆ ಬಿದ್ದು ಎದ್ದು ನಗು. ಮಗದೊಮ್ಮೆ ಸಹಜ ನಗು, ಇನ್ನೊಮ್ಮೆ ....ಹೀಗೆ ನಾಯಕ ನಾಯಕಿ ಹನಿಮೂನ್‌ ಮುಗಿಸುವ ಹೊತ್ತಿಗೆ ನಾಲಿಗೆ ಮೇಲೆ ನಗೆಯ ಓಕುಳಿ.

ಇನ್ನು ಅಭಿನಯದ ವಿಷಯಕ್ಕೆ ಬಂದರೆ ವಿವರ ಹೀಗಿದೆ.

ಎಸ್‌. ನಾರಾಯಣ್‌ ನಿರ್ದೇಶನವನ್ನಷ್ಟೇ ಮಾಡಿಕೊಂಡಿದ್ದರೆ ಚೆನ್ನ. ಶ್ರೀನಾಥ್‌, ರಂಗಾಯಣ್‌ ರಘು ಗಾಬರಿ ಹುಟ್ಟಿಸುತ್ತಾರೆ. ಕೋಮಲ್‌, ಶರಣ್‌ ಆಗಾಗ ತುಂಟಾಟ ಆಡುತ್ತಾರೆ. ದೀಪು ದಿಗಿ ದಿಗಿ ಉರಿಯುತ್ತಾಳೆ. ಸಂತೋಷಿ ಅನೇಕ ರೀತಿಯಿಂದ ಸಂತೋಷ ಕೊಡುತ್ತಾಳೆ.

ಪಟ್ನಾಯಕ್‌ ಸಂಗೀತ ಕೊಟ್ಟಿರುವ ರೀತಿ ನೋಡಿದರೆ ನಮ್ಮ ರಾಜೇಶ್‌ ರಾಮನಾಥ್‌ ಉತ್ತಮ ಅನ್ನಿಸುತ್ತಾರೆ. ಜಗ್ಗೇಶ್‌ ಜಗವನ್ನು ಗೆಲ್ಲುವ ಖುಷಿ ಕೊಡುತ್ತಾರೆ. ನಿರ್ದೇಶಕ ಇನ್ನಷ್ಟು ಶ್ರಮ ಪಡುವ ಅಗತ್ಯವಿದೆ. ಯಾಕೆಂದರೆ ಕೆಲವೊಮ್ಮೆ ಅವರು ಇಲ್ಲದೆ ದೃಶ್ಯ ಚಿತ್ರೀಕರಣವಾದ ಗುಮಾನಿ ಇದೆ. ಒಟ್ಟಿನಲ್ಲಿ ಚಳಿಗಾಲದಲ್ಲಿ ಬೆಚ್ಚನೆ ಹನಿಮೂನ್‌ ಅನುಭವಕ್ಕೆ ಮನೆ ಮಂದಿಯೆಲ್ಲ ತಯಾರಾಗಬಹುದು.

(ಸ್ನೇಹ ಸೇತು : ವಿಜಯಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada