»   » ದೇವ್ರು : ಪಡ್ಡೆ ಹುಡುಗರಿಗೆ 'ವಿಜಯೋ'ತ್ಸವ!

ದೇವ್ರು : ಪಡ್ಡೆ ಹುಡುಗರಿಗೆ 'ವಿಜಯೋ'ತ್ಸವ!

Posted By: *ವಿನಾಯಕರಾಮ್ ಕಲಗಾರು
Subscribe to Filmibeat Kannada

ಕಪ್ಪೆ ಹುಳು ಹುಪ್ಪಟೆ ನುಂಗಿದರೆ, ಹಾವು ಕಪ್ಪೆಯನ್ನು ನುಂಗುತ್ತದೆ. ಅದೇ ಹಾವನ್ನು ಹದ್ದು ಗುಳುಂ ಅಂತ ನುಂಗಿ ತೇಗುತ್ತದೆ. ಹದ್ದಿಗೂ ಒಂದು ಗತಿ ಕಾಣಿಸುವ ವಿಶೇಷ ಪಡೆಯೇ ಇರುತ್ತದೆ. ಮನುಷ್ಯನನ್ನು ಕಂಟ್ರೋಲ್ ಮಾಡುವ ರಿಮೋಟ್ ದೇವ್ರ ಕೈಯಲ್ಲಿರುತ್ತೆ!

ಇದೇ ಎಳೆ ಹಾಗೂ ಸಿದ್ಧಾಂತ ಆಧರಿಸಿದ ಚಿತ್ರ ದೇವ್ರು.ಅದಕ್ಕೊಂದಿಷ್ಟು ರೌಡಿಸಂ, ರಾಜಕೀಯ ಲೇಪನ ಮಾಡಿ, ಸಿನಿಮಾ ರೂಪ ಕೊಡಲಾಗಿದೆ. ಇದು ತಮಿಳಿನ 'ತಲೈ ನಗರಂ' ಚಿತ್ರದ ಕನ್ನಡ ಅವತರಿಣಿಕೆ. ಅಲ್ಲಿ ಅದು ಹಿಟ್ಟಪ್ಪ ಹಿಟ್ಟು. ಒಂದಷ್ಟು ಹೊಡೆದಾಟ, ಮಧ್ಯೆ ಮಧ್ಯೆ ತೂರಿಕೊಳ್ಳುವ ಹಾಡುಗಳು, ಸೇರಿಕೊಳ್ಳುವ ಕಾಮಿಡಿ, ನಾಯಕ ನಟನ ವೈಭವೀಕರಣ, ಜಂಗ್ಲೀಕರಣ, ಗನ್ನು-
ಗುನ್ನಾಗಳ ವಿಕೇಂದ್ರೀಕರಣ...

ಒಬ್ಬನನ್ನು ಕೊಂದ ಎಂಬ ಕಾರಣಕ್ಕೆ ಅವನ ಕಡೆಯವನು ಇನ್ನೊಬ್ಬನನ್ನು ಕೊಲ್ಲುವುದು. ರಕ್ತ ತರ್ಪಣಕ್ಕೆ ತಕ್ಕ ಅಶ್ರು 'ದರ್ಪ'ಣ, ಗಲಾಟೆ, ದೊಂಬಿ, ದರ್ಬಾರು... ಅಲ್ಲಲ್ಲಿ ಹಾಡುಗಳ ಕಾರುಬಾರು... ಇದು ದೇವ್ರು ಚಿತ್ರದ highಲೈಟ್ಸ್.ದುನಿಯಾ ವಿಜಿ ಇಲ್ಲಿ ಬಾಲ್ಡೆಡ್ ಜಂಗ್ಲಿ... ಕೇಶರಹಿತ ಡೆಡ್ಲಿ ಕಮಾಲುಗಳು, ಇಂಗ್ಲಿಷ್‌ನ ಬ್ರೂಸ್‌ಲಿಗೇ ಸವಾಲು ಹಾಕುವ ಹೊಡೆತಗಳು. ನವಿರೇಳಿಸುವ ಮೈ-ಸಿರಿ. ಮಾತುಮಾತಿಗೂ ಬೀಳುವ ಧರ್ಮದೇಟು... ದೇವ್ರು: ಪಡ್ಡೆ ಹುಡುಗರಿಗೆ ಇದೊಂದು 'ವಿಜಯೋ"ತ್ಸವ'.

ನಿರ್ದೇಶಕ ಕೋಕಿಲ ಸಾಧು ಒಂದು ಕಮರ್ಷಿಯಲ್ ಕತೆಯನ್ನು ಕಲಾತ್ಮಕವಾಗಿ ನಿರ್ದೇಶಿಸಿದ್ದಾರೆ. ಒಂದು ಸಣ್ಣ ಎಳೆಯ ಕತೆಯನ್ನು ಎರಡೂಕಾಲು ತಾಲು ಎಳೆದುಕೊಂಡು ಹೋಗುವಲ್ಲಿ ಎಡವಿದ್ದಾರಾ ಎಂಬ ಪ್ರಶ್ನೆಗೆ ಇಲ್ಲಿ ಉತ್ತರವಿಲ್ಲ. ಏಕೆಂದರೆ ಮೂಲ ಕತೆಯ ಬಂಡವಾಳ ಏನು ಎಂಬುದನ್ನು ಅಳೆಯಲು ಕಷ್ಟಸಾಧ್ಯ.ಅದೇ ಹೊಡೆದಾಟದ ಹಾದಿ, ಅದೇ ಆಕಾಶಕ್ಕೆ ಏಣಿ ಹಾಕುವ ಮಿಕ್ಸ್ ಆಕ್ಷನ್, 'ಅನಾ"ನಸ್ ಜ್ಯೂಸ್ ಥರ ಇರುವ 'ಸಿನ್"ಮ್ಯಾಟಿಕ್ ದೃಶ್ಯಗಳು... ಎಲ್ಲವನ್ನೂ ಕೂಲಂಕಷವಾಗಿ ಅವಲೋಕಿಸಿದಾಗ ಏಳುವ ಏಕೈಕ ಪ್ರಶ್ನೆ 'ದೇವ್ರ" ಆಟ ಬಲ್ಲೆ ಬಲ್ಲೆ!

ಸಾಧು ನಿರ್ದೇಶನ ವಿಭಾಗಕ್ಕಿಂತ ಹೆಚ್ಚು ಸ್ಕೋರ್ ಮಾಡುವುದು ಕಾಮಿಡಿಯಲ್ಲಿ. ಚಿತ್ರ-ವಿಚಿತ್ರ ಮುಖಭಾವ, ಗೆಟಪ್‌ಗಳು, ಹಾಸ್ಯದ ಮೇಲೆ ಹಾಸಿಗೆ ಹಾಸಿ ಮಲಗುವ ಪರಿಯೆಲ್ಲ ಚೆನ್ನ.ಉಳಿದದ್ದು ದೇವರಿಗೆ ಬಿಟ್ಟಿದ್ದು...ವಿಜಯ್ ನಟನೆ, ನಾಟ್ಯಎಲ್ಲವೂ ವಿಶೇಷವಾಗಿದೆ. ಬೇಕಾದರೆ ಮೈ-ಕಲ್ಲರಳಿ ಹೆಬ್ಬಂಡೆಯಾಗಿ ಎನ್ನಬಹುದು.

ಮಹಡಿಯಿಂದ ಮಹಡಿಗೆ ಜಂಪ್ ಮಾಡುವಾಗಲಂತೂ ಪಕ್ಕಾಅಭಿನಯ ಜಾಂಬುವಂತ. ನಾಯಕಿ ಪ್ರಜ್ಞಾಥೇಟ್ ಮಿಸೆಸ್ ಪೇಂಟರ್. ಮುಖಕ್ಕೆ ಬಣ್ಣ ಬಳಿದುಕೊಳ್ಳುವುದರೆಡೆಗೆ ತುಡಿವುದೇ ಜೀವನ ಎಂದುಕೊಂಡಿದ್ದರೆ ಅದು ತಪ್ಪಮ್ಮಾ ತಪ್ಪು... ಡ್ಯಾನ್ಸ್ ಮಾಡುವಾಗ ಮಾತ್ರ ಧರೆಗಿಳಿದ ಲೇಡಿ ಮೈಕಲ್...

ಶೋಭರಾಜ್, ರವಿಕಾಳೆ, ಪಿ.ಎನ್.ಸತ್ಯ, ಯತಿರಾಜ್, ಆಶಿಷ್ ವಿದ್ಯಾರ್ಥಿ ಎಲ್ಲರೂ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಸಾಧು ಸಂಗೀತದಲ್ಲಿ ಎರಡು ಹಾಡುಗಳನ್ನು ಕಿವಿಯಾರೇ ಕೇಳಬಹುದು. ತುಷಾರ್ ರಂಗನಾಥ್ ಬರೆದಿರುವ ಮೂಲವ್ಯಾಧಿ, ಚಿಕೂನ್ ಗುನ್ಯಾ ಮೊದಲಾದ ಕಾಯಿಲೆಯುಕ್ತ ಹಾಡು ಭಿನ್ನವಾಗಿದೆ. ಅದನ್ನು ವಿಜಿ ಹಾಡಿದ್ದಾರೆ ಎನ್ನುವುದು ಪ್ಲಸ್ ಪಾಯಿಂಟ್. ಸಂಭಾಷಣೆಯಲ್ಲೂ ರಂಗನಾಥ್ ಹಿಡಿತ ಸಾಧಿಸಿದ್ದಾರೆ. ಗಾಂಧಿನಗರ, ಕಲಾಸಿಪಾಳ್ಯ ಹಾಗೂ ಗೋರಿ ಪಾಳ್ಯದ ಭಾಷೆಯನ್ನು ಬೆರೆಸಿ, ಕಲಸನ್ನ ಮಾಡಿದ್ದಾರೆ.

ಪಂಚಿಂಗ್ ಡೈಲಾಗ್‌ಗಳು ಹಾಸ್ಯದ ಅಲೆ ಎಬ್ಬಿಸುತ್ತವೆ. ಉದಾಹರಣೆಗೆ: ಕಣ್ಣಲ್ಲಿ ನೀರು ಬರದೇ ಇನ್ನೇನ್ ಕೊಕ್ಕೊಕೋಲಾ ಬರುತ್ತಾ?! ಒಟ್ಟಾರೆ ಇಡೀ ಚಿತ್ರ ವಿಜಿ ಅಭಿಮಾನಿಗಳನ್ನು ಮತ್ತೊಂದು ದುನಿಯಾಗೆ ಕರೆದೊಯ್ಯುತ್ತದೆ. ...ಆಕ್ಷನ್+ ಹಾಡು+ರೌಡಿಸಂ+ಕಾಮಿಡಿ+ಸೆಂಟಿಮೆಂಟ್+ವಿಜಯ್=ದೇವ್ರು!

ರಾಕ್-ಶೈನ್ ವೆಂಕಟೇಶ್!
ರವಿ ಕಾಳೆ ಪಾತ್ರ ಹಾಗೂ ಅಭಿನಯಕ್ಕೆ ಸರಿಸಾಟಿಯಾಗಿ ನಿಲ್ಲುವವರು ರಾಕ್‌ಲೈನ್ ವೆಂಕಟೇಶ್.ಪೊಲೀಸ್ ಪಾತ್ರದಲ್ಲಿ ಅವರು ಮಿರಮಿರ ಮಿಂಚಿಂಗು. ಈ ವಯಸ್ಸಲ್ಲೂ ಅವರ ಬಾಡಿ ಲ್ಯಾಂಗ್ವೇಜ್ ಹಾಗೂ ಬಳಸುವ ಭಾಷೆ ಇಷ್ಟವಾಗುತ್ತದೆ. ಕನ್ನಡದಲ್ಲಿ ಪೋಷಕ ನಟರ ಕೊರತೆ ಕಾಡುತ್ತಿದೆ ಎಂಬ ಮಾತನ್ನು ರಾಕ್ ಸುಳ್ಳು ಮಾಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada