»   » ಶಂಕರ್ ಐಪಿಎಸ್: ಪಡ್ಡೆ ಹುಡುಗರ ಪಾಲಿನ ಪಂಚಾಮೃತ

ಶಂಕರ್ ಐಪಿಎಸ್: ಪಡ್ಡೆ ಹುಡುಗರ ಪಾಲಿನ ಪಂಚಾಮೃತ

Posted By: *ಕಲಗಾರು, ದೇವಶೆಟ್ಟಿ
Subscribe to Filmibeat Kannada

'ಕಾಮ ಅನ್ನೋದು ಮಕ್ಕಳನ್ನು ಹುಟ್ಟು ಹಾಕೋ ಕಲೆಯಾಗಿರಬೇಕೇ ಹೊರತು ಸುಟ್ಟು ಹಾಕೋ ಬೆಂಕಿಯಾಗಿರಬಾರದು' ನಾಯಕ ಹೀಗೆ ಹೇಳುತ್ತಲೇ ಕಾಮಂಧರ ಮಗ್ಗಲು ಮುರಿ ಯುತ್ತಾನೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುತ್ತಾನೆ. ಜಾಸ್ತಿ ಮಾತನಾಡಿದರೆ ಪಿಸ್ತೂಲು ತೆಗೆಯುತ್ತಾನೆ. ಆತನನ್ನು 'ಮಹಾತ್ಮ"ಎನ್ನುವುದಕ್ಕಿಂತ 'ಅಂತ"ರ್ಯಾಮಿ ಎನ್ನಬಹುದು.

ಅವನದ್ದು ಒಂದು ಪೊಲೀಸ್ ಸ್ಟೋರಿ. ಅನ್ಯಾಯಕ್ಕೆ ಹೋರಾಡಿದ ಅವನಿಗೆ ಸಿಕ್ಕ ನ್ಯಾಯವದು. ಹಾಗಾಗಿ ಆತ ಕಾನೂನು ಕೈಗೆತ್ತಿಕೊಳ್ಳುತ್ತಾನೆ.ಹೊಡೆಯುತ್ತಾನೆ. ಬಡಿಯುತ್ತಾನೆ. ಬಡಿದಾಡುತ್ತಾನೆ. ಮಧ್ಯೆ ಮಧ್ಯೆ ಒಂದಷ್ಟು ಡೈಲಾಗ್ ಒಗಾಯಿಸುತ್ತಾನೆ. ಮೈ ಕೈ ಕಸರತ್ತು ಮಾಡುತ್ತಾನೆ. ಸಿಕ್ಸ್ ಪ್ಯಾಕ್ಸ್ ತೋರಿಸುತ್ತಾನೆ. ಹೊಡೆದಾಟದ ಹಾದಿ ಕೊನೆಗೊಂಡಾಗ ಬೀಚ್ ಮಧ್ಯೆ ಬಂದು ನಾಯಕಿಯ ಜತೆ 'ಹಗ್ಗ ಜಗ್ಗಾಟ" ಶುರುಮಾಡುತ್ತಾನೆ!

ಒಟ್ಟಾರೆ ಶಂಕರ್ ಐಪಿಎಸ್ ಪಡ್ಡೆ ಹುಡುಗರ ಪಾಲಿನ ಪಂಚಾಮೃತ. 'ಸಿಳ್ಳೆ'ಖ್ಯಾತ ಹೈದರಿಗಂತೂ ಹಬ್ಬವೋ ಹಬ್ಬ.ವಿಜಯ್ ಬಾಯಿಂದ ಉಂಡೆಯಂತೆ ಡೈಲಾಗ್ ಉಗುಳುತ್ತಿದ್ದರೆ ಜನ ಧರೆ ಹತ್ತಿ ಉರಿದಂತೆ ಕೇಕೆ ಹಾಕುತ್ತಾರೆ. ನಿರ್ದೇಶಕ ಎಮ್.ಎಸ್.ರಮೇಶ್ ಆ ಮಟ್ಟಿಗೆ ಡೈರೆಕ್ಷನ್ ಜೊತೆ ಡೈಲಾಗ್ ಕರೆಕ್ಷನ್ ಅನ್ನೂ ವ್ಯವಸ್ಥಿತ ರೀತಿಯಲ್ಲಿ ಮಾಡಿದ್ದಾರೆ.

ಅಮಾಯಕ ಹೆಣ್ಣುಮಕ್ಕಳ ಮೇಲೆ ಆಸಿಡ್ ದಾಳಿ ಎಂಬ ವಿಷಯಾಧಾರಿತ ಎಳೆಯನ್ನು ಚಿತ್ರವಾಗಿಸಿ ಗೆದ್ದಿದ್ದಾರೆ. ವಿಜಯ್ ಸಿಕ್ಸ್ ಪ್ಯಾಕ್ಸ್ ನೋಡೋಕೇ ಚೆಂದ. ರಾಗಿಣಿ ಕುಣಿತ ಕಾಣೋಕೆ ಅಂದ. ಇನ್ನೊಬ್ಬಾಕೆ ಕ್ಯಾತರಿನ್ ನಡೆದಾಡುವ ಬೊಂಬೆ. ನಗುವೊಂದೇ ಆಕೆಯ ಬಂಡವಾಳ. ರಂಗಾಯಣ ರಘು ಬಹಳ ದಿನಗಳ ನಂತರ ಅತ್ಯುತ್ತಮ ಪಾತ್ರ ಮಾಡಿದ್ದಾರೆ. ಅವರು ಕೇವಲ
ಕಾಮಿಡಿಯನ್ ಎಂದು ನಕ್ಕವರ ಮುಖಕ್ಕೆ ಹೊಡೆದಂತೆನಟಿಸಿದ್ದಾರೆ.

ಶೋಭರಾಜ್, ಅವಿನಾಶ್ ಎಲ್ಲರಿಗೂ ನೋಟ್ ಆಗುವ ಪಾತ್ರ. ಕಾಮಿಡಿಗೆ ಇನ್ನೊಂದಿಷ್ಟು ಒತ್ತು ಕೊಡಬಹುದಿತ್ತು. ಗುರುಕಿರಣ್ ಸಂಗೀತ ಪರವಾಗಿಲ್ಲ. ಸಾಹಸ ದೃಶ್ಯಗಳು ಮನಮೋಹಕ, ರೋಮಾಂಚಕ. ಒಟ್ಟಾರೆ ವಿಜಯ್ ಹಾಗೂ ಆಕ್ಷನ್ ಅಭಿಮಾನಿಗಳಿಗೆ ಶಂಕರ್ ಹೋಳಿಗೆ ಊಟ ಇದ್ದಂತೆ! (ಸ್ನೇಹಸೇತು: ವಿಜಯ ಕರ್ನಾಟಕ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada