»   » ಮಿಲನ ಚಿತ್ರದಲ್ಲಿ ಹಿಂದಿ ಮತ್ತು ತಮಿಳು ಚಿತ್ರಗಳ ಛಾಯೆ!

ಮಿಲನ ಚಿತ್ರದಲ್ಲಿ ಹಿಂದಿ ಮತ್ತು ತಮಿಳು ಚಿತ್ರಗಳ ಛಾಯೆ!

By: * ದೇವಶೆಟ್ಟಿ ಮಹೇಶ್
Subscribe to Filmibeat Kannada
Puneeth Rajkumar
ಎಲ್ಲರೂ ಕುಳಿತು ನೋಡುವಂಥ ಚಿತ್ರವನ್ನು ಪ್ರಕಾಶ್ ಮಾಡಿದ್ದಾರೆ. ಆದರೆ ಯಾಕೋ ಪಾತ್ರ, ಕತೆ ಮತ್ತು ನಿರೂಪಣೆಯಲ್ಲಿ ಹಿಂದಿ, ತಮಿಳು ಚಿತ್ರಗಳ ನೆರಳನ್ನು ಅನುಕರಿಸಿದ್ದಾರೆ. ಇನ್ನೊಂದು ಕಡೆಯಿಂದ ಸ್ಫೂರ್ತಿ ಪಡೆಯುವುದು ತಪ್ಪಲ್ಲ. ಅದು ಇವರಿಗೂ ಗೊತ್ತು. ಆದರೂ ಯಾಕೋ ಕ್ರಿಯೇಟಿವ್ ಹುಡುಗ ಪ್ರಕಾಶ್ ಹೀಗೆ ಮಾಡುವುದು?

ಇನ್ನೇನು ಫಸ್ಟ್ ನೈಟ್ ಬಂತಲ್ಲಪ್ಪಾ.. ಎಂದು ಬಾಯಿ ಚಪ್ಪರಿಸುತ್ತಾ ಕುಳಿತ ಗಂಡನಿಗೆ ಸೋಡಾ ಚೀಟಿ ಅಲಿಯಾಸ್ ಡೈವರ್ಸ್ ಕೊಡ್ತೀನಿ ಅಂತ ಹೆಂಡತಿ ಹೇಳಿದರೆ ಆತನಿಗೆ ಹೇಗಾಗಬೇಡ? ಹಾಗೂ ಇಲ್ಲ ಹೀಗೂ ಇಲ್ಲ. ಅವರವರ ದಾರಿ ಅವರು ಹಿಡಿದು ಬದುಕುತ್ತಾರೆ. ಒಂದು ಹಂತದಲ್ಲಿ ಹೆಂಡತಿಯ ಮೊದಲ ಪ್ರೇಮಿಯನ್ನು ಹುಡುಕುವುದರಲ್ಲಿ ಹಾಲಿ ಗಂಡನೇ ಸಹಾಯ ಮಾಡುತ್ತಾನೆ. ಇದು ಸಾಧ್ಯವೇ ಎಂದು ಕೇಳಬೇಡಿ. ನಮ್ಮಲ್ಲಿ ಎಲ್ಲವೂ ಸಾಧ್ಯವಿದೆ. ಕಲ್ಪನೆಗೆ ಎಲ್ಲವೂ ನಿಲುಕುತ್ತದೆ. ಹೊಸತನ ಹುಡುಕುವಾಗ ಇದೆಲ್ಲಾ ಸಾಮಾನ್ಯ. ಇದು ಮಿಲನ ಚಿತ್ರದ ಒನ್ ಲೈನ್ ಸ್ಟೋರಿ.

ಕತೆಯನ್ನು ಕೇಳಿದರೆ ಕೆಲವು ಹಿಂದಿ ತಮಿಳು ಚಿತ್ರ ನೆನಪಿಗೆ ಬರುತ್ತದೆ. ಆದರೆ ಅದೇ ಕತೆಯನ್ನು ಇಟ್ಟುಕೊಂಡು ಹೊಸ ಬಾಟಲಿಯಲ್ಲಿ ಕೊಟ್ಟಿದ್ದಾರೆ ನಿರ್ದೇಶಕ ಪ್ರಕಾಶ್. ಒಂದು ಸಾಮಾನ್ಯ ಕತೆಯನ್ನು ಪ್ರೆಷ್ಷಾಗಿ ಹೇಳಲು ಯತ್ನಿಸಿದ್ದಾರೆ. ಗಂಭೀರ ಕತೆಗೆ ತಮತಮಾಷೆ ಸಂಭಾಷಣೆ ಹೊಸೆದು ನೋಡೆಬಲ್ ಆಗಿಸಿದ್ದಾರೆ. ಹಾಡು, ಸಂಗೀತ, ಲೊಕೇಶನ್ಸ್, ಡಾನ್ಸ್, ಫೈಟ್ಸ್ ಗಳನ್ನು ಎಷ್ಟು ಬೇಕೊ ಅಷ್ಟು ತುಂಬಿದ್ದಾರೆ. ಎಲ್ಲದರಲ್ಲೂ ಸಾಧ್ಯವಾದಷ್ಟು ಹೊಸತನ ತುಂಬಲು ಶ್ರಮಿಸಿದ್ದಾರೆ.

ಮೊದಲೇ ಹೇಳಿದಂತೆ ಇದು ಗಂಡ ಹೆಂಡತಿಯ ಪ್ರೇಮಕತೆ. ನಾಯಕ ಹುಡುಗಿಯ ಪ್ರೇಮದಿಂದ ವಂಚಿತನಾಗಿರುತ್ತಾನೆ. ಆಕೆಯ ಗುಂಗಲ್ಲೇ ಕಾಲ ಕಳೆಯುವಾಗ ಅಪ್ಪ ಅಮ್ಮಂದಿರ ಒತ್ತಾಯಕ್ಕೆ ಮಣಿದು ಇನ್ನೊಂದು ಹುಡುಗಿಯನ್ನು ಮದುವೆಯಾಗುತ್ತಾನೆ. ಆದರೆ ಆಕೆ ಮೊದಲ ರಾತ್ರಿಯೇ ಡೈವೋರ್ಸ್ ಕೇಳುತ್ತಾಳೆ. ಕಾರಣ ಆಕೆ ಇನ್ನೊಬ್ಬ ಹುಡುಗನಿಗೆ ಮನಸ್ಸು ಕೊಟ್ಟಿರುತ್ತಾಳೆ. ಅಪ್ಪನ ಒತ್ತಾಯಕ್ಕೆ ಮಣಿದು ಈತನನ್ನು ಮದುವೆಯಾದವಳು ಒಪ್ಪಿದವಳು. ಹೀಗೆ ಗಂಡ ಹೆಂಡತಿ ಮದುವೆಯಾದ ಏಳನೇ ದಿನಕ್ಕೆ ಡೈವೋರ್ಸ್ ಗಾಗಿ ಅರ್ಜಿ ಸಲ್ಲಿಸುತ್ತಾರೆ. ಅಲ್ಲಿಂದ ಆರಂಭವಾಗುತ್ತದೆ ಕತೆ.

ಒಂದು ಗಂಡು ಹೆಣ್ಣು ಹೇಗೊ ಸೇರಿಕೊಂಡು ಕಾಣದೊಂದು ಕನಸು ಕಂಡು.. ಎನ್ನುವಂತೆ ಜಗಳ ಆಡುತ್ತಾ, ತುಂಟಾಟ ಆಡುತ್ತ, ಗೆಳೆಯರಾಗುತ್ತಾ ಬದುಕುತ್ತಿರುತ್ತಾರೆ. ಆಗ ಆಕೆ ತನ್ನ ಪ್ರೇಮಿಯನ್ನು ಹುಡುಕಿ ಕೊಡು ಎಂದು ಗಂಡನನ್ನೇ ಕೇಳುತ್ತಾಳೆ. ಆತ ಯಸ್ ಎನ್ನುತ್ತಾನೆ. ಹುಡುಕಿ ಕೊಡುತ್ತಾನೆ. ಆದರೆ ಪ್ರೇಮಿ ಮೊದಲಿನಂತೆ ಇರುವುದಿಲ್ಲ. ದುಡ್ಡಿನ ಅಹಂಕಾರ ನೆತ್ತಿಗೇರಿರುತ್ತದೆ. ಆ ಮುಖ ಗೊತ್ತಾದಾಗ ಮತ್ತೆ ಹಳೆ ಗಂಡನ ಪಾದವೇ ಗತಿ ಎಂದು ಬರುತ್ತಾಳೆ. ಆತನನ್ನು ಪ್ರೇಮಿಸಲು ಆರಂಭಿಸುತ್ತಾಳೆ. ಆದರೆ ಅದನ್ನು ಬಾಯಿಬಿಟ್ಟು ಹೇಳುವುದಿಲ್ಲ. ದಿನಗಳು ಉರುಳುತ್ತವೆ. ಕೊನೆಗೊಂದು ದಿನ ಡೈವೋರ್ಸ್ ಸಿಗುತ್ತದೆ. ಮುಂದೇನು? ತೆರೆ ಮೇಲೆಯೇ ನೋಡಿ.

ಮೊದಲ ದೃಶ್ಯದ ನಂತರ ಕತೆ ಹೀಗೇ ಸಾಗುತ್ತದೆ ಎಂದು ಗೊತ್ತಾಗುತ್ತದೆ. ಬಹುಶಃ ಇದೇ ಕತೆಯ ತಮಿಳು ಚಿತ್ರವನ್ನು ನೋಡಿದ ಪ್ರಭಾವವೂ ಇರಬಹುದು.

ಒಟ್ಟಿನಲ್ಲಿ ಇದೊಂದು ದೊಡ್ಡ ಮನಸ್ಸಿನ ನಾಯಕನ ಕತೆ. ಅದಕ್ಕೆ ಪುನೀತ್ ಸೂಟ್ ಆಗುತ್ತಾರೋ ಇಲ್ಲವೋ ಎನ್ನುವುದು ಈ ಚಿತ್ರದ ಗೆಲುವನ್ನು ಅವಲಂಭಿಸಿದೆ. ಗೆಳೆಯನಲ್ಲದ ಗೆಳೆಯನಾಗಿ, ಗಂಡನಲ್ಲದ ಗಂಡನಾಗಿ, ಪ್ರೇಮಿಯಲ್ಲದ ಪ್ರೇಮಿಯಾಗಿ.. ಆಯಾ ಭಾವಕ್ಕೆ ಜೀವ ತುಂಬಿದ್ದಾರೆ. ಅದು ನಾಟಕೀಯ ಅನಿಸದಂತೆ ಎಚ್ಚರವಹಿಸಿದ್ದಾರೆ. ಹಾಡಿನಲ್ಲಿ ಹೀ ಲುಕ್ಸ್ ನೈಸ್. ಫೈಟಿಂಗಿನಲ್ಲೂ ಹಿಂದೆ ಬಿದ್ದಿಲ್ಲ. ಆದರೆ ಕೆಲವು ಕೋನಗಳಲ್ಲಿ ಕ್ಯಾಮರಾ ನೇರ ಮುಖಕ್ಕೆ ಹಿಡಿಯುವುದನ್ನು ತಪ್ಪಿಸಿದ್ದರೆ ಚೆನ್ನಾಗಿತ್ತು.

ನಾಯಕಿ ಪಾರ್ವತಿ ಕೂಡ ಕೊಟ್ಟ ಮಾತಿಗೆ ತಪ್ಪದಂತೆ ಪಾತ್ರ ನಿರ್ವಹಿಸಿದ್ದಾರೆ. ಕೋಪ, ರೋಷ, ನೋವು, ಪ್ರೀತಿಯನ್ನು ಒಂದೇ ಚಿತ್ರದಲ್ಲಿ ತೋರಿಸುವ ಅಪರೂಪದ ಅವಕಾಶ ಅವರಿಗೆ ಸಿಕ್ಕಿದೆ. ಇವೆರಡೆ ಪಾತ್ರಗಳು ಚಿತ್ರವನ್ನು ಆವರಿಸಿಕೊಂಡಿವೆ. ಉಳಿದಂತೆ ಕಾಮಿಡಿಗಾಗಿ ಸಿಹಿಕಹಿ ಚಂದ್ರು, ರಂಗಾಯಣ ರಘು ಇದ್ದಾರೆ. ಸುಮಿತ್ರಾ ತಾಯಿಯಾಗಿ ಸ್ಕೋರ್ ಮಾಡಿದ್ದಾರೆ. 'ನಿನ್ನಿಂದಲೇ 'ಎನ್ನುವ ಹಾಡಿಗೆ ಮನೋಮೂರ್ತಿ ಸಂಗೀತ ವಂಡರ್ ಫುಲ್.

ಎಲ್ಲರೂ ಕುಳಿತು ನೋಡುವಂಥ ಚಿತ್ರವನ್ನು ಪ್ರಕಾಶ್ ಮಾಡಿದ್ದಾರೆ. ಆದರೆ ಯಾಕೋ ಪಾತ್ರ, ಕತೆ ಮತ್ತು ನಿರೂಪಣೆಯಲ್ಲಿ ಹಿಂದಿ, ತಮಿಳು ಚಿತ್ರಗಳ ನೆರಳನ್ನು ಅನುಕರಿಸಿದ್ದಾರೆ. ಇನ್ನೊಂದು ಕಡೆಯಿಂದ ಸ್ಫೂರ್ತಿ ಪಡೆಯುವುದು ತಪ್ಪಲ್ಲ. ಅದು ಇವರಿಗೂ ಗೊತ್ತು. ಆದರೂ ಯಾಕೋ ಕ್ರಿಯೇಟಿವ್ ಹುಡುಗ ಪ್ರಕಾಶ್ ಹೀಗೆ ಮಾಡುವುದು..

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada