»   » ಚಿತ್ರ ವಿಮರ್ಶೆ: ಸ್ನೇಹದ ಉಲ್ಲಾಸ ಪ್ರೀತಿಯ ಉತ್ಸಾಹ

ಚಿತ್ರ ವಿಮರ್ಶೆ: ಸ್ನೇಹದ ಉಲ್ಲಾಸ ಪ್ರೀತಿಯ ಉತ್ಸಾಹ

By: *ಉದಯರವಿ
Subscribe to Filmibeat Kannada

'ಪ್ರೀತಿನೇ ಬೇರೆ ಸ್ನೇಹನೇ ಬೇರೆ' ಎಂಬ ಸಣ್ಣ ಎಳೆಯನ್ನು ಇಟ್ಟುಕೊಂಡು ಹೆಣೆಯಲಾಗಿರುವ ಚಿತ್ರ 'ಉಲ್ಲಾಸ ಉತ್ಸಾಹ'. ಸ್ನೇಹದಉತ್ಸಾಹ ಪ್ರೀತಿಯ ಉಲ್ಲಾಸದಲ್ಲಿ ಪ್ರೇಕ್ಷಕನ ಉಲ್ಲಾಸ ಉತ್ಸಾಹಗಳೂ ಇಮ್ಮಡಿಸುತ್ತವೆ. ತೆಲುಗಿನಲ್ಲಿ ಯಶಸ್ವಿಯಾದ 'ಉಲ್ಲಾಸಂಗಾ ಉತ್ಸಾಹಂಗಾ' ಚಿತ್ರವನ್ನು ಯಥಾವತ್ತಾಗಿ ಕನ್ನಡಕ್ಕೆ ತರಲಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದಲ್ಲಿ ಎಂದಿನಂತೆ ಲವಲವಿಕೆಯಿದೆ. ಗಣೇಶನ ಉತ್ಸಾಹಕ್ಕೆ ಯಾಮಿ ಗೌತಮ್ ಉಲ್ಲಾಸ ಜೊತೆಯಾಗಿದೆ.

ಬಾಲ್ಯದ ಗೆಳೆಯನ ನೆನಪಿನ ಜೋಕಾಲಿಯಲ್ಲಿ ಜೀಕುವ ಹುಡುಗಿ ಮಹಾಲಕ್ಷ್ಮಿ (ಯಾಮಿ ಗೌತಮ್). ಉಲ್ಲಾಸ ಉತ್ಸಾಹದ ಅಮಲಿನಲ್ಲಿ ತೇಲುವ ಹುಡುಗ ಪ್ರೀತಂ (ಗಣೇಶ್). ತನ್ನ ತರ್ಲೆ ಗ್ಯಾಂಗನ್ನು ಬೆನ್ನಿಗೆ ಹಾಕಿಕೊಂಡು ಸಖತ್ ಆಟ ಆಡುತ್ತಿರುತ್ತಾನೆ . ಮನೆಯಲ್ಲಿ ಅಪ್ಪನ ಬೈಗುಳ, ಅಮ್ಮನ ಪ್ರೀತಿ, ಅಣ್ಣ ಅತ್ತಿಗೆಯ ಸಲುಗೆ ಎಲ್ಲವೂ ಪ್ರೀತಂಗೆ ಸಿದ್ಧಿಸಿರುತ್ತವೆ. ಒಟ್ಟಿನಲ್ಲಿ ಪ್ರೀತಂನ ಚೇಷ್ಟೆಗಳಿಗೆ ಲಂಗು ಲಗಾಮು ಹಾಕುವರು ಇರುವುದಿಲ್ಲ.

ಪ್ರೀತಂನ ಏರಿಯಾಗೆ ಹೊಸ ಹುಡುಗಿ ಮಹಾಲಕ್ಷ್ಮಿ ಅಡಿಯಿಡುತ್ತಾಳೆ. ಮೊದಲ ನೋಡದಲ್ಲೆ ಕೋಮ ಕೋಮ ಕೋಮ ಪ್ರೇಮಾ...ತನ್ನ ಪ್ರೇಮ ನಿವೇದನೆಗಾಗಿ ಪ್ರೀತಂ ಮಾಡುವ ಫ್ಲಾನ್ ಗಳೆಲ್ಲಾ ಉಲ್ಟಾಪಲ್ಟಾ ಆಗುತ್ತದೆ. ಆದರೆ ಹುಡುಗಿ ಮಾತ್ರ ಬಾಲ್ಯದ ಗೆಳೆಯ ಬಾಲಾಜಿ ನೆನಪಿನಲ್ಲೇ ವಿಹರಿಸುತ್ತಿರುತ್ತಾಳೆ. ಚಿಕ್ಕಂದಿನಲ್ಲೇ ಇಬ್ಬರೂ ಒಬ್ಬರಿಗೊಬ್ಬರು ದೂರವಾಗಿರುತ್ತಾರೆ. ಮಹಾಲಕ್ಷ್ಮ್ನಿಗೆ ಕುಂತ್ರೆ ನಿಂತ್ರೆ ಬಾಲಾಜಿಯದ್ದೇ ಧ್ಯಾನ.

ಸ್ವಲ್ಪ ಅವಕಾಶ ಸಿಕ್ಕರೆ ಸಾಕು ಮಹಾಲಕ್ಷ್ಮಿ ಬಾಳಿನಲ್ಲಿ ಪ್ರೀತಂ ಸ್ಥಾನ ಸಂಪಾದಿಸಲು ಹಾತೊರೆಯುತ್ತಿರುತ್ತಾನೆ. ಪ್ರೀತಂನ ಪಡಿಪಾಟಲು ನೋಡಲಾಗದೆ ರೋಸಿಹೋದ ಮಹಾಲಕ್ಷ್ಮಿ ಬಾಲ್ಯದ ಗೆಳೆಯ ಬಾಲಾಜಿಯನ್ನು ಮದುವೆಯಾಗುವುದಾಗಿ ತಿಳಿಸುತ್ತಾಳೆ. ಬಾಲಾಜಿಯನ್ನು ಹುಡುಕಲು ಪ್ರೀತಂ ಸಹಾಯ ಮಾಡುತ್ತಾನೆ. ಬಾಲಾಜಿಗಾಗಿ ಕೋಲ್ಕತ್ತಾಗೆ ಇಬ್ಬರೂ ರೈಲು ಹತ್ತಿ ಹೊರಡುತ್ತಾರೆ. ಹಾವು ಮುಂಗಸಿಯಂತೆ ಕಿತ್ತಾಡುತ್ತಾ ಕೋಲ್ಕತ್ತಾ ತಲುಪುವ ಹೊತ್ತಿಗೆ ಇಬ್ಬರೂ ಒಬ್ಬರಿಗೊಬ್ಬರು ಹತ್ತಿರವಾಗಿರುತ್ತಾರೆ.

ಕಡೆಗೆ ಮಹಾಲಕ್ಷ್ಮಿಗೆ ಬಾಲಾಜಿ ಸಿಗುತ್ತಾನೆಯೇ? ಪ್ರೀತಂ ಕತೆ ಏನಾಗುತ್ತದೆ? ಎಂಬುದನ್ನು ಚಿತ್ರಮಂದಿರಲ್ಲಿ ನೋಡಿದರೇನೆ ಚೆಂದ. ತಂದೆಯ ಪಾತ್ರಧಾರಿ ರಂಗಾಯಣ ರಘು ನಟನೆಯಲ್ಲಿ ವೈವಿಧ್ಯತೆ ಇಲ್ಲ. ತೆಲುಗು ಸಂಭಾಷಣೆಯನ್ನು ಕಥಾವತ್ತಾಗಿ ಕನ್ನಡಕ್ಕೆ ಭಾಷಾಂತರಿಸಲಾಗಿದೆ. ಹಾಗಾಗಿ ಚಿತ್ರದಲ್ಲಿ ಆಡು ಭಾಷೆ ಹಳಿ ತಪ್ಪಿತ ರೈಲಿನಂತಾಗಿದೆ. ಯಾಮಿ ಗೌತಮ್ ನಟನೆ ಸಪ್ಪೆ ಎಂತಲೇ ಹೇಳಬೇಕು. ತೆಲುಗಿನ ಕೆಲ ದೃಶ್ಯಗಳನ್ನು ನೇರವಾಗಿ ಎತ್ತಿಕೊಂಡು ಸಂಕಲನ ಮಾಡಲಾಗಿದೆ.

ಜಯಂತ್ ಕಾಯ್ಕಿಣಿ ಸಾಹಿತ್ಯದಲ್ಲಿ ಹೊಸತನವಿಲ್ಲ. ಕವಿರಾಜ್ ಹಾಗೂ ರಾಮ್ ನಾರಾಯಣ್ ಅವರ ಗೀತೆಗಳು ನೆನಪಿನಲ್ಲಿ ಉಳಿಯುವುದಿಲ್ಲ. ಜಿ ವಿ ಪ್ರಕಾಶ್ ಕುಮಾರ್ ಅವರ ಸಂಗೀತ ಪರ್ವಾಗಿಲ್ಲ. ಸೀತಾರಾಂ ಅವರ ಛಾಯಾಗ್ರಹಣ ಕಣ್ಣಿಗೆ ಹಿತವಾಗಿದೆ. ಕನ್ನಡದ ಹುಡುಗ ಯಶೋಸಾಗರ್ ನಲ್ಲಿನ ತುಂಟ ನಟ ಗಣೇಶನಲ್ಲೂ ಮರುಕಳಿಸಿದ್ದಾನೆ. ಒಟ್ಟಿನಲ್ಲಿ ಚಿತ್ರವನ್ನು ಒಮ್ಮೆ ನೋಡಲು ಅಡ್ಡಿಯಿಲ್ಲ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada