»   »  ರಾಕಿ: ಬಿಯಾಂಕ ಬಿಂಕ, ಯಶ್ ಯಶಸ್ಸು

ರಾಕಿ: ಬಿಯಾಂಕ ಬಿಂಕ, ಯಶ್ ಯಶಸ್ಸು

Subscribe to Filmibeat Kannada

*ವಿನಾಯಕರಾಮ್ ಕಲಗಾರು

Yash and Bienca Desai
ಗೆಳೆಯ: ನೀನು ನನ್ನ ಜೀವ, ಉಸಿರು, ರಕ್ತದ ಕಣಕಣದಲ್ಲಿ ಬೆರೆತು ಹೋಗಿರುವೆ...
ಗೆಳತಿ: ಓ ಗೆಳೆಯಾ...ನನಗೆ ಆ ಸಿಂಗರ್ ವಿಶ್ವನ ಮೇಲೆ ಎಲ್ಲಿಲ್ಲದ ಪ್ರೀತಿ. ಅವನನ್ನು ಒಮ್ಮೆ ಭೇಟಿ ಮಾಡಬೇಕು.ನನ್ನ ಹೃದಯ ಕದ್ದ ಚೋರನವ...
ಗೆಳೆಯ: ಅಷ್ಟೇ ತಾನೆ, ನಾನು ಅದಕ್ಕೆ ವ್ಯವಸ್ಥೆ ಮಾಡಿಸುತ್ತೇನೆ. 'ನಿನಗಾಗಿ" ಇಷ್ಟನ್ನೂ ಮಾಡಲಾರೆನೇ...
***
ಈತ : ರೀ ಮಿಸ್ಟರ್, ನೀವು ನಮ್ ಹುಡುಗಿಗೆ ಸಖತ್ ಇಷ್ಟ . ಅವಳನ್ನು ಲವ್ ಮಾಡಬೇಕು...
ಆತ: ಯಾರೊ ನೀನು? ನಿನಗೆ ತಲೆ ಕೆಟ್ಟಿದೆಯಾ? ಹೋಗೊ ಸುಮ್ಮನೆ...
ಈತ: ನೋಡಿ, ನಿಮ್ಮನ್ನ ಬಿಟ್ಟು ಅವಳು ಇರೊಲ್ಲ, ಅವಳನ್ನು ಬಿಟ್ಟು ನಾನಿರೊಲ್ಲ, ಸೋ...
***
ಈಕೆ: ಅಲ್ಲ ಕಣೊ, ವಿಶ್ವ ನನಗೆ ಮೊದಲಿಂದಲೂ ಇಷ್ಟ. ಆದರೆ ನೀನು ಇನ್ನೂ ಇಷ್ಟ. ಅದು ಯಾಕೆ ಅಂತ ಗೊತ್ತಿಲ್ಲ.
ಈತ: ಅಂದ್ರೆ ನಿನಗೆ ಅವ ಸಿಗದಿದ್ದರೆ ನನ್ನನ್ನೇ ಪ್ರೀತಿ ಮಾಡ್ತಿದ್ಯಾ?
ಈಕೆ: ಈಗ ಆತ ಸಿಕ್ಕಿದ್ದಾನಲ್ಲ!
ಈತ: ಸ್ವಗತ(ಆತನನ್ನು ಒದ್ದು ಓಡಿಸಿದರೆ ಈಕೆ ನನ್ನವಳಾಗುತ್ತಾಳೆ ಅಷ್ಟೇ!)

ಈಗ ನಿಮಗೆ ರಾಕಿ ಚಿತ್ರದ ಕತೆಯ ಹಣೆಬರಹ ಏನು ಎನ್ನುವುದು ಗೊತ್ತಾಗಿರಬಹುದು. ಹಾಗಂತ ಇದು ತೆಲುಗಿನ ಆರ್ಯ ಚಿತ್ರದ ಯಥಾವತ್ ನಕಲು ಅಲ್ಲ. ಅಲ್ಲಿನ ಕೆಲವು ಅಂಶಗಳನ್ನು ಆಯ್ದು, ರಾಕಿಗೆ ಕ್ಯಾಮೆರಾ ಹಿಡಿಯಲಾಗಿದೆ. ಇದು ನಾಗೇಂದ್ರ ಅರಸ್ ಎಂಬ ನಿರ್ದೇಶಕನ ಚಿತ್ರ ಚಾತುರ್ಯ!

ಕನ್ನಡ ಚಿತ್ರಗಳು ಏಕೆ ಓಡುತ್ತಿಲ್ಲ ಎಂದು ಖಾಲಿಯಾದ ಬಾಲ್ಕನಿಯಲ್ಲಿ ಕುಳಿತು ಚಿಂತಿಸುವ ಮುನ್ನ ಅದರಲ್ಲಿ ನಿರ್ದೇಶಕ, ಸಂಗೀತ, ಛಾಯಾಗ್ರಾಹಕನ ಪಾತ್ರ ಎಷ್ಟಿದೆ ಎಂದು ಲೆಕ್ಕಾಚಾರ ಹಾಕಬೇಕು...

ಇಲ್ಲಿ ನಾಯಕ ಯಶಸ್ ಚೆನ್ನಾಗಿ ನಟಿಸಿದ್ದಾರೆ. ನಾಯಕಿ ಬಿಯಾಂಕಾ ಕೊಂಚ ಬಿಂಕ ತೋರಿದರೂ ಸಹಿಸಲಾಧ್ಯ ಎನ್ನುವ ಹಾಗಿಲ್ಲ. ವೆಂಕಟ್-ನಾರಾಯಣ್ ಸಂಗೀತ ಮತ್ತೆ ಮತ್ತೆ ಗುನುಗದಿದ್ದರೂ ಒಮ್ಮೆ ಕೇಳಲು ಅಡ್ಡಿಯಿಲ್ಲ. ಆದರೆ ಹಿಂದಿನ ಹಾರ್ಟ್‌ಬೀಟ್ ಚಿತ್ರಕ್ಕೆ ಹೋಲಿಸಿದರೆ ಇದು ಏನೂ ಅಲ್ಲ. ಇಷ್ಟಿದ್ದರೂ ಸಿನಿಮಾ ಸಿನಿಮಾ ಥರ ಇಲ್ಲ . ಕಾರಣ: ನಿರೂಪಣೆ-ದೃಶ್ಯ ಜೋಡಣೆಯಲ್ಲಿ ಸಾಕಷ್ಟು ತಪ್ಪು ತಿಪ್ಪೆಸಾರಿಸುತ್ತವೆ. ಅದು ಹಳಿ ತಪ್ಪಿದ ಚುಕುಬುಕು ರೈಲು. ನೋಡ ನೋಡುತ್ತಿದ್ದ ಹಾಗೆ ಹಾಡು, ಅದು ನಿಂತ ನಂತರ ಒಂದಷ್ಟು ಕಾಮಿಡಿ; ಅದನ್ನು ಸಹಿಸಿಕೊಂಡರೆ ಮತ್ತೊಂದು ಹೊಡೆದಾಟ... ಅಲ್ಲಿಂದ ಒಂದಷ್ಟು ಮಾತುಕತೆ...ರಾಕಿ-ನಾಯಕಿ ಸರಸ, ಸಲ್ಲಾಪ...

ಮುರಳಿ ನೃತ್ಯಸಂಯೋಜನೆಯಿಂದ ಎರಡು ಹಾಡುಗಳು ನೋಡಬೇಕೆನಿಸುತ್ತವೆ. ಸಂಭಾಷಣೆ ಈಗಾಗಲೇ ಎಷ್ಟೋ ಚಿತ್ರಗಳಲ್ಲಿ ಬಂದು ಹೋಗಿವೆ. ಪ್ರೀತಿ, ಆಸೆ, ಸ್ನೇಹ, ವ್ಯಾಮೋಹ...ಗಳ ಸುತ್ತ ಅದು ಗಿರಕಿ ಹೊಡೆಯುತ್ತೆ. ಕಾಮಿಡಿಯನ್ನು ಕೆಲವು ಕಡೆ ಅರಗಿಸಿಕೊಳ್ಳುವುದು ಕಷ್ಟ.

ಯಶ್ ಎಲ್ಲಾ ಕಡೆ ಮಿಂಚಿದ್ದಾರೆ. ಬಿಯಾಂಕಾ ಹಾಡಿಗೆ ಹೆಜ್ಜೆ ಹಾಕುವಾಗ ಇಷ್ಟವಾಗುತ್ತಾರೆ. ಖಳನಟರ ಮುಖಗಳು ಗೋಡೆಗೆ ಮೆತ್ತಿಕೊಂಡ ರಾಗಿ ಮುದ್ದೆಯಂತಿವೆ. ಉಳಿದಂತೆ ರಮೇಶ್ ಭಟ್, ಲಕ್ಷ್ಮೀದೇವಿ, ಕರಿಬಸವಯ್ಯ, ಸಂತೋಷ್... ಪಾತ್ರಕ್ಕೆ ಹೊಂದಿಕೊಳ್ಳಲು ಯತ್ನಿಸಿದ್ದಾರೆ.

ಒಟ್ಟಾರೆ ಇತ್ತೀಚೆಗೆ ಬಂದ ಒಂದಷ್ಟು ಚಿತ್ರಗಳ ಆಯ್ದ ಭಾಗಗಳು ರಾಕಿಯಲ್ಲಿವೆ. ನಿರ್ದೇಶಕರು ಇನ್ನಷ್ಟು ಅಪ್‌ಡೇಟ್ ಆಗಬೇಕೆನ್ನುವುದು ಕ್ಲೈಮ್ಯಾಕ್ಸ್‌ನಲ್ಲಿ ಗೊತ್ತಾಗುವುದೇ ರಾಕಿಂಗ್ ನ್ಯೂಸ್, ಗೊತ್ತಾಗದಿದ್ದರೆ ಅದು ಶಾಕಿಂಗ್ ನ್ಯೂಸ್ !

ಬಿಯಾಂಕ ದೇಸಾಯಿ ಚಿತ್ರಪಟ
ಮಾಯವಾಗಿದೆ ಪ್ರೀತಂ ಗುಬ್ಬಿ ಮ್ಯಾಜಿಕ್ ಸ್ಪರ್ಶ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada