twitter
    For Quick Alerts
    ALLOW NOTIFICATIONS  
    For Daily Alerts

    ಅದ್ದೂರಿ ಎಂಬ ಒಳ್ಳೆಯ 'ಅಚ್ಚು-ರಚ್ಚು' ಲವ್ ಸ್ಟೋರಿ

    By * ಶ್ರೀರಾಮ್ ಭಟ್
    |

    ಎ ಪಿ ಅರ್ಜುನ್ ನಿರ್ದೇಶನದ 'ಅದ್ದೂರಿ' ಚಿತ್ರವನ್ನು ಒಳ್ಳೆಯ 'ಲವ್ ಸ್ಟೋರಿ' ಸಿನಿಮಾ ಎನ್ನಬಹುದು. ಈ ಮೊದಲು 'ಅಂಬಾರಿ' ಎಂಬ ಸೂಪರ್ ಹಿಟ್ ಚಿತ್ರ ಕೊಟ್ಟಿದ್ದ ನಿರ್ದೇಶಕ ಅರ್ಜುನ್, ಈಗ 'ಅದ್ದೂರಿ' ಎಂಬ ಚಿತ್ರವನ್ನು ಸಿನಿಪ್ರೇಕ್ಷಕರ ಮುಂದಿಟ್ಟಿದ್ದಾರೆ. ಚಿತ್ರದ ಅಡಿಬರಹದಂತೆ ಇದೊಂದು ಒಳ್ಳೆಯ ಅಚ್ಚು-ರಚ್ಚು ಲವ್ ಸ್ಟೋರಿ. ಕಾಸು ಕೊಟ್ಟು ನೋಡುವ ಪ್ರೇಕ್ಷಕರಿಗೆ ನಿರಾಸೆ ಮೂಡಿಸುವುದಿಲ್ಲ, ಒಮ್ಮೆ ನೋಡುವಂತಹ ಸಿನಿಮಾ.

    ಶಂಕರ್ ರೆಡ್ಡಿ ಹಾಗೂ ಕೀರ್ತಿ ಸ್ವಾಮಿ ನಿರ್ಮಾಣದ 'ಅದ್ದೂರಿ' ಚಿತ್ರ ಬಿಡುಗಡೆಗಿಂತ ಮೊದಲು ಸಾಕಷ್ಟು ನಿರೀಕ್ಷೆ ಹಾಗೂ ಕುತೂಹಲ ಮೂಡಿಸಿತ್ತು. ನಿರೀಕ್ಷೆಗೆ ಕಾರಣ, ನಿರ್ದೇಶಕ ಎ ಪಿ ಅರ್ಜುನ್ ಈ ಮೊದಲಿನ ಅಂಬಾರಿ ಯಶಸ್ಸು. ಹಾಗೇ ಕುತೂಹಲಕ್ಕೆ ಕಾರಣ, ಚಿತ್ರದ ನಾಯಕ ಅರ್ಜುನ್ ಸರ್ಜಾ ಕುಟುಂಬದ ಕುಡಿ, ನಾಯಕನಟ ಚಿರಂಜೀವಿ ಸರ್ಜಾ ತಮ್ಮ ಧ್ರುವ ಸರ್ಜಾ. ಈ ಇಬ್ಬರೂ ತಮ್ಮ ಮೇಲಿದ್ದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.

    ಅದ್ದೂರಿ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ-ಸಾಹಿತ್ಯ-ನಿರ್ದೇಶನ ಎಲ್ಲವೂ ಎಪಿ ಅರ್ಜುನ್ ಅವರದು. ಚಿತ್ರದ ಕಥೆ ಮಾಮೂಲಿ ಲವ್ ಸ್ಟೋರಿ ಅಷ್ಟೇ. ಕಥೆಯಲ್ಲೇನೂ ಹೊಸತನವಿಲ್ಲ. ಈ ರೀತಿಯ ಚಿತ್ರಗಳು ಅದೆಷ್ಟೋ ಬಂದುಹೋಗಿವೆ. ಆದರೆ ಚಿತ್ರವನ್ನು ಚಿತ್ರಕಥೆ ಹಾಗೂ ಸಂಭಾಷಣೆಯಲ್ಲಿ ನಿರ್ದೇಶಕರು ಕಟ್ಟಿಕೊಟ್ಟಿರುವ ರೀತಿ ಚೆನ್ನಾಗಿದೆ. ಮೊದಲಿನಿಂದ ಕೊನೆಯವರೆಗೂ ನಿರ್ದೇಶಕ ಅರ್ಜುನ್ ಅವರಿಗೆ ಚಿತ್ರದ ನಿರೂಪಣೆಯ ಮೇಲೆ ಇರುವ ಬಿಗಿಹಿಡಿತ ಎದ್ದುಕಾಣುತ್ತದೆ. ಸಂಭಾಷಣೆ ಸೂಪರ್.

    ಮಾಮೂಲಿ ಪ್ರೇಮಕಥೆಯೊಂದನ್ನು ಪ್ರೇಕ್ಷಕರಿಗೆ ಇಷ್ಟವಾಗುವಂತೆ ಚಿತ್ರಕಥೆ ಹೆಣೆದು, ಅದಕ್ಕೆ ಪೂರಕವಾದ ಸಂಭಾಷಣೆ, ಸಾಹಿತ್ಯ, ನಿರೂಪಣೆಯ ಮೂಲಕ ಕಟ್ಟಿಕೊಟ್ಟ ಅರ್ಜುನ್ ಪ್ರಯತ್ನಕ್ಕೆ 'ಭೇಷ್' ಎನ್ನಲೇಬೇಕು. ಮೊದಲ ಚಿತ್ರ ಅಂಬಾರಿಯಲ್ಲಿ ಮೂಡಿಸಿದ್ದ ಭರವಸೆಯನ್ನು ಉಳಿಸಿಕೊಂಡಿದ್ದಾರೆ ಅರ್ಜುನ್. ಹೊಸ ಪ್ರಯತ್ನಕ್ಕೆ ಕೈಹಾಕದಿದ್ದರೂ ಮಾಡಿರುವ ಚಿತ್ರ ಚೆನ್ನಾಗಿದೆ, ಕೊಟ್ಟ ಕಾಸಿಗೆ ಮೋಸವಿಲ್ಲ. ದೋಷವೇ ಇಲ್ಲವೆಂದಲ್ಲ, ಆದರೆ ಚಿತ್ರ ಎಲ್ಲೂ ಬೋರೆನಿಸುವುದಿಲ್ಲ.

    ಮಕ್ಕಳಿಂದ ಮುದುಕರವೆರೆಗೂ, ಕುಟುಂಬದಿಂದ ಸಮಾಜದವೆರೆಗೂ ಜಗಳ, ಮನಸ್ತಾಪಗಳು ಇದ್ದದ್ದೇ. ಅವುಗಳ ಜೊತೆಯೇ ಬದುಕಿಯೂ ಪ್ರೀತಿ-ಪ್ರೇಮಗಳು, ನವಿರಾದ ಸಂಬಂಧಗಳು ಕೆಲವೊಮ್ಮೆ ಚದುರಿಯೂ ನಲುಗಿಯೂ ಹೇಗೆ ಉಳಿದುಕೊಳ್ಳುತ್ತವೆ ಎಂಬುದು ಒನ್ ಲೈನ್ ಸ್ಟೋರಿ. ಚಿತ್ರದ ಪೂರ್ತಿ ಕಥೆಯನ್ನು ವಿಮರ್ಶೆಯಲ್ಲಿ ಹೇಳಿದರೆ ನೋಡಬೇಕಾದ ಪ್ರೇಕ್ಷಕರು ಹೋಗಿ ನೋಡುವುದೇನು? ಹೀಗಾಗಿ ಚಿತ್ರವನ್ನು ತೆರೆಯಲ್ಲಿ ನೋಡಿ ಆನಂದಿಸಿ ಎನ್ನುವುದೇ ಸೂಕ್ತ.

    ಕಲಾವಿದರ ನಟನೆಗೆ ಬಂದರೆ ನಾಯಕಿ ರಾಧಿಕಾ ಪಂಡಿತ್ ಬಗ್ಗೆ ಎರಡು ಮಾತಿಲ್ಲ. ಚಿತ್ರದುದ್ದಕ್ಕೂ ಲವಲವಿಕೆ ಕಾಪಾಡಿಕೊಂಡಿರುವ ರಾಧಿಕಾ ನಟನೆ ಎಂದಿನಂತೆ ಲೀಲಾಜಾಲ. ನಟನೆ ವಿಷಯದಲ್ಲಿ ರಾಧಿಕಾ ಫುಲ್ ಪ್ಯಾಕೇಜ್. ಚಿತ್ರ ನೋಡಿ ಈಚೆ ಬಂದರೆ ಹೆಚ್ಚು ಉಳಿಯುವುದು ರಾಧಿಕಾ ನೆನಪು ಮಾತ್ರ. ಮೊದಲ ಬಾರಿಗೆ ತೆರೆಯ ಮೇಲೆ ಬಂದಿರುವ ಧ್ರುವ ಸರ್ಜಾ ಫೈಟ್ಸ್, ಡಾನ್ಸ್ ಸೂಪರ್. ಸಂಭಾಷಣೆ ಹೇಳುವ ರೀತಿಯೂ ಈ ಪ್ರೇಮಕಥೆಗೆ ಪೂರಕ. ಎಕ್ಸ್ ಟ್ರಾ ಎನರ್ಜಿ ಹಾಗೂ ಲವಲವಿಕೆಯಿದ್ದರೂ ನಟನೆ ಓಕೆ, ಇನ್ನೂ ಪಳಗಬೇಕು ಎನ್ನಬಹುದು. ಮೊದಲ ಚಿತ್ರವಾದ್ದರಿಂದ ಪರವಾಗಿಲ್ಲ.

    ಅತಿಥಿ ಪಾತ್ರದಲ್ಲಿ ಕಾಣಿಸಿಕೊ0ಡಿರುವ ನಟ ತರುಣ್ ಅಭಿನಯ ಚಿತ್ರಕ್ಕೆ ಬೋನಸ್. ಚಿಕ್ಕ ಪಾತ್ರದಲ್ಲೂ ತೆರೆಯ ಮೇಲಿರುವಷ್ಟೂ ಹೊತ್ತು ತರುಣ್ ಎಲ್ಲರ ಗಮನಸೆಳೆಯುತ್ತಾರೆ. ಇನ್ನು ಪೋಷಕವರ್ಗದಲ್ಲಿ ನಟಿಸಿರುವ ತಬಲಾ ನಾಣಿ, ಬುಲೆಟ್ ಪ್ರಕಾಶ್, ನೀನಾಸಂ ಸತೀಶ್ ಹಾಗೂ ರಾಜು ತಾಳಿಕೋಟೆ ಅವರದು ಪಾತ್ರಕ್ಕೆ ತಕ್ಕ ಪೋಷಣೆ. ಪಾತ್ರಗಳಿಗೆ ತಕ್ಕ ಕಲಾವಿದರ ಆಯ್ಕೆಯಲ್ಲೂ ನಿರ್ದೇಶಕ ಅರ್ಜುನ್ ಜಾಣತನ ಮೆರೆದಿದ್ದಾರೆ.

    ಅರ್ಜುನ್ ಸಾಹಿತ್ಯದ ಎಲ್ಲಾ ಹಾಡುಗಳಿಗೆ ವಿ ಹರಿಕೃಷ್ಣ ಸಂಗೀತ ಸಂಯೋಜನೆ ಪೂರಕವಾಗಿದೆ. 'ಅಮ್ಮಾಟೆ...' ಹಾಡು ಚಿತ್ರಮಂದಿರದಲ್ಲಿ ಮಾಸ್ ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆಗೆ ಸಾಕ್ಷಿಯಾಗುತ್ತದೆ. ಉಳಿದ ಹಾಡುಗಳೂ ಕೇಳುವಂತಿದ್ದು ಚಿತ್ರಕ್ಕೆ ಸಾಥ್ ನೀಡುವಲ್ಲಿ ಸಫಲವಾಗಿವೆ. ಎ ಹರ್ಷ ಹಾಗೂ ಇಮ್ರಾನ್ ಸರ್ದಾರಿಯಾ ಕೋರಿಯೋಗ್ರಫಿ, ಸೂರ್ಯ ಎಸ್ ಕಿರಣ್ ಛಾಯಾಗ್ರಹಣ ಹಾಗೂ ದೀಪು ಎಸ್ ಕುಮಾರ್ ಸಂಕಲನ ಮೆಚ್ಚುವಂತಿದೆ.

    ಒಟ್ಟಿನಲ್ಲಿ ಹೊಸ-ಹಳಬರ ಅರ್ಜುನ್ ತಂಡ, ಸ್ಯಾಂಡಲ್ ವುಡ್ ಪ್ರೇಕ್ಷಕರು ನೋಡುವಂತಹ ಸಿನಿಮಾವೊಂದನ್ನು 'ಅದ್ದೂರಿ' ಎಂಬ ಹೆಸರಿನಲ್ಲಿ ತಂದಿದ್ದಾರೆ. ಈ ಚಿತ್ರದ ಮೂಲಕ 'ಧ್ರುವ ಸರ್ಜಾ' ಎಂಬ ಹೊಸ ನಾಯಕನಟನ ಉದಯವಾಗಿದೆ ಎಂದರೆ ಆಶ್ಚರ್ಯವೇನೂ ಇಲ್ಲ. ಅದ್ದೂರಿಯ ಮೂಲಕ ನಿರ್ದೇಶಕ ಎಪಿ ಅರ್ಜುನ್ ಇನ್ನೂ ಒಂದು ಸ್ಟೆಪ್ ಮೇಲೇರುವುದು ಗ್ಯಾರಂಟಿ ಎಂದು ಧಾರಾಳವಾಗಿ ಹೇಳಬಹುದು.

    English summary
    This is Kannada Movie AP Arjun directed Addhuri Review. Dhruv Sarja and Radhika Pandit are in Lead Role and performed well. V Harikishna music and Surya S Kiran Camera work also good. Shankar Reddy and Keerthi Swamy produced this movie Addhuri.
 
    Sunday, June 17, 2012, 16:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X