»   » ವಿಮರ್ಶೆ: ದರ್ಶನ್ ಇಮೇಜ್ ಬದಲಿಸಿದ 'ತಾರಕ್'

ವಿಮರ್ಶೆ: ದರ್ಶನ್ ಇಮೇಜ್ ಬದಲಿಸಿದ 'ತಾರಕ್'

Posted By:
Subscribe to Filmibeat Kannada

ದರ್ಶನ್ ಸಿನಿಮಾಗಳು ಅಂದ್ರೆ, ಮಾಸ್ ಆಗೊಂದು ಇಂಟ್ರೊಡಕ್ಷನ್ ಸಾಂಗ್, ಜಬರ್ ದಸ್ತ್ ಫೈಟ್ಸ್, ಕೌಂಟರ್ ಡೈಲಾಗ್ಸ್, ಹಾಗೆ ಬಂದು ಹೀಗೆ ಹೋಗುವ ಹೀರೋಯಿನ್ಸ್, ಆಗಾಗ ಅಬ್ಬರಿಸುವ ವಿಲನ್ಸ್ ಎಂಬ ಮಾತಿದೆ. ಆದ್ರೆ, ಇಷ್ಟು ಅಂಶಗಳಿಗೂ ತದ್ವಿರುದ್ಧವಾದ ಚಿತ್ರ 'ತಾರಕ್'. ಪೂರ್ತಿ ವಿಮರ್ಶೆ ಮುಂದೆ ಓದಿ.....


Rating:
4.0/5

ಚಿತ್ರ: ತಾರಕ್
ನಿರ್ಮಾಣ: ಲಕ್ಷ್ಮಣ ದುಶ್ಯಂತ್
ನಿರ್ದೇಶನ: ಪ್ರಕಾಶ್ ಜಯರಾಂ
ಸಂಗೀತ: ಅರ್ಜುನ್ ಜನ್ಯ
ಛಾಯಾಗ್ರಹಣ: ಎ.ವಿ.ಕೃಷ್ಣಕುಮಾರ್
ತಾರಾಗಣ: ದರ್ಶನ್, ಶ್ರುತಿ ಹರಿಹರನ್, ಶಾನ್ವಿ, ದೇವರಾಜ್, ಕುರಿ ಪ್ರತಾಪ್, ಶರತ್ ಲೋಹಿತಾಶ್ವ ಮತ್ತಿತರರು.
ಬಿಡುಗಡೆ: ಸೆಪ್ಟೆಂಬರ್ 29, 2017


ದರ್ಶನ್ ಇಮೇಜ್ ಬದಲಿಸುವ 'ತಾರಕ್'

ದರ್ಶನ್ ತಮ್ಮ ರೆಗ್ಯೂಲರ್ ಸಿನಿಮಾಗಳಿಂದ ಹೊರಬಂದು 'ತಾರಕ್' ಸಿನಿಮಾ ಮಾಡಿದ್ದಾರೆ. ಇದೊಂದು ಕಂಪ್ಲೀಟ್ ಫ್ಯಾಮಿಲಿ ಸಿನಿಮಾ. ಮಾಸ್ ಡೈಲಾಗ್ಸ್, ಬಿಲ್ಡಪ್ ಫೈಟ್ಸ್, ಐಟಂ ಸಾಂಗ್ ಏನೂ ಇಲ್ಲದ ಸ್ವಚ್ಛ ಸಿನಿಮಾ. ಇದುವರೆಗೂ ದರ್ಶನ್ ಅವರ ಸಿನಿಮಾಗಳಿಗಿದ್ದ ಇಮೇಜ್ ಇಲ್ಲಿಂದ ಬದಲಾದರೂ ಅಚ್ಚರಿಯಿಲ್ಲ.


ಮಾಸ್ ಎಲಿಮೆಂಟ್ಸ್ ಕೂಡ ಇದೆ

ಫ್ಯಾಮಿಲಿ ಎಂಟರ್ ಟೈನ್ ಮೆಂಟ್ ಸಿನಿಮಾ ಎಂದಾಕ್ಷಣ ಮಾಸ್ ಇಲ್ವಾ ಎಂದು ಯೋಚಿಸಬೇಡಿ. ದರ್ಶನ್ ಅಭಿಮಾನಿಗಳು ನಿರೀಕ್ಷೆ ಮಾಡುವ ಮೂರು ಭರ್ಜರಿ ಫೈಟ್ ಇದೆ. ಪಂಚಿಂಗ್ ಡೈಲಾಗ್ಸ್ ಕೂಡ ಇದೆ. ಆದ್ರೆ, ಬಿಲ್ಡಪ್ ಎನಿಸಲ್ಲ.


ಕಥೆ ಬಗ್ಗೆ ಹೇಳುವುದಾದರೇ.....

ನಿರ್ದೇಶಕರು ಮೊದಲೇ ಹೇಳಿದಂತೆ ಇದು ತಾತ ಮತ್ತು ಮೊಮ್ಮಗನ ಸಂಬಂಧದ ಕಥೆ. ಕಾರಣಾಂತರಗಳಿಂದ ದೂರವಿರುವ ತಾತ-ಮೊಮ್ಮಗನ ಕಥೆ. ವಿದೇಶದಲ್ಲಿರುವ ಮೊಮ್ಮಗನ ಆಗಮನಕ್ಕಾಗಿ ಹಂಬಲಿಸುತ್ತಿರುವ ತಾತನ ಭಾವನಾತ್ಮಕ ಕಥೆ. ತಾತ ಮೊಮ್ಮಗನ ಜುಗಲ್ ಬಂದಿಯ ಜೊತೆ ಮುದ್ದಾದ ಪ್ರೇಮಕಥೆ ಕೂಡ ಇದೆ. ಸಂಬಂಧಗಳ ಮೌಲ್ಯವಿದೆ. ಆದ್ರೆ, ತಾತ ಮತ್ತು ಮೊಮ್ಮಗ ಯಾಕೆ ದೂರುವಾಗಿರ್ತಾರೆ, ಇಬ್ಬರು ನಾಯಕಿಯರ ಯಾಕೆ? ಎಂಬುದನ್ನ ಸಿನಿಮಾದಲ್ಲೇ ನೋಡಿ.


ಬದಲಾದ ದರ್ಶನ್

ದರ್ಶನ್ ಅಭಿನಯದ ಈ ಹಿಂದಿನ ಸಿನಿಮಾಗಳಲ್ಲಿ ಉದ್ದುದ್ದ ಡೈಲಾಗ್, ಧೂಳೆಬ್ಬಿಸುವ ಫೈಟ್ಸ್ ಇರ್ತಿತ್ತು. ಆದ್ರೆ, 'ತಾರಕ್' ಅವರತಾರದಲ್ಲಿ ದರ್ಶನ್ ಕಂಪ್ಲೀಟ್ ಬದಲಾಗಿದ್ದಾರೆ. ಲವರ್ ಬಾಯ್ ಆಗಿ, ಜವಾಬ್ದಾರಿಯುತ ಯುವಕನಾಗಿ, ಒಬ್ಬ ಯಶಸ್ವಿ ಬಿಸ್ ನೆಸ್ ಮ್ಯಾನ್ ಆಗಿ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಎಮೋಷನ್ ದೃಶ್ಯಗಳಲ್ಲಿ ದರ್ಶನ್ ಹೆಚ್ಚು ಇಷ್ಟವಾಗ್ತಾರೆ.


ಮನಮುಟ್ಟುವ ದೇವರಾಜ್

ತಾತನ ಪಾತ್ರದಲ್ಲಿ ಡೈನಾಮಿಕ್ ಸ್ಟಾರ್ ದೇವರಾಜ್ ಅವರು ಅತ್ಯುತ್ತಮವಾಗಿ ಅಭಿನಯಿಸಿದ್ದಾರೆ. ದೇವರಾಜ್ ಅವರ ಮ್ಯಾನರಿಸಂ, ಅವರ ಅಭಿನಯ ನೋಡಿದ್ರೆ, ನಿಜವಾಗಲೂ ಇಷ್ಟೊಂದು ವಯಸ್ಸು ಆಗಿದ್ಯಾ ಎಂಬ ಅನುಮಾನ ಕಾಡುತ್ತೆ. ತಾರಕ್ ನಿಗೆ ತಕ್ಕ ತಾತ ದೇವರಾಜ್.
ಶಾನ್ವಿ ಅಭಿನಯ

'ತಾರಕ್' ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಶಾನ್ವಿ ಕೂಡ ಒಬ್ಬರು. ಬಬ್ಲಿ ಹುಡುಗಿ ಆಗಿ ಕಾಣಿಸಿಕೊಂಡಿರುವ ಶಾನ್ವಿ ಸಿಕ್ಕಾಪಟ್ಟೆ ಇಷ್ಟವಾಗ್ತಾರೆ. ಹೀಗೆ ಬಂದು ಹಾಗೆ ಹೋಗುವ ಪಾತ್ರವಂತೂ ಅಲ್ಲ, ಕಥೆಗೆ ಟ್ವಿಸ್ಟ್ ಕೊಡುವ ಕ್ಯಾರೆಕ್ಟರ್ ಇವರದ್ದು.


ಮೋಡಿ ಮಾಡುವ ಶ್ರುತಿ

ಭಾರತ ದೇಶದ ಸಂಪ್ರದಾಯಸ್ಥ ಯುವತಿ ಪಾತ್ರ ನಿರ್ವಹಿಸಿರುವ ಶ್ರುತಿ ತಮ್ಮ ನೈಜ ಅಭಿನಯದ ಮೂಲಕ ಗಮನ ಸೆಳೆಯುತ್ತಾರೆ. ದರ್ಶನ್ ಅವರಿಗೆ ಉತ್ತಮ ಸಾಥ್ ನೀಡುವ ಮೂಲಕ ತೆರೆಮೇಲೆ ಮಿಂಚಿದ್ದಾರೆ.


'ತಾರಕ್' ನಿರ್ದೇಶಕನ ಸಿನಿಮಾ

'ತಾರಕ್' ಪಕ್ಕಾ ನಿರ್ದೇಶಕನ ಸಿನಿಮಾ. ಪ್ರಕಾಶ್ ಅವರ ನಿರ್ದೇಶನ ಈ ಹಿಂದಿನ ಸಿನಿಮಾಗಳಂತೆ 'ತಾರಕ್' ಚಿತ್ರದಲ್ಲೂ ಇಷ್ಟವಾಗುತ್ತೆ. ಕಥೆಗೆ ಪ್ರಾಮುಖ್ಯತೆ ನೀಡಿದ್ದು, ಪಾತ್ರಗಳಿಗೂ ಅಷ್ಟೇ ಪ್ರಾಮುಖ್ಯತೆ ನೀಡಿದ್ದಾರೆ. 'ರಿಷಿ', 'ಖುಷಿ', 'ಮಿಲನ' ರೀತಿಯಲ್ಲೇ 'ತಾರಕ್' ಕೂಡ ಪ್ರೇಕ್ಷಕರನ್ನ ರಂಜಿಸುತ್ತೆ.


ಉಳಿದ ಕಲಾವಿದರ ಅಭಿನಯ ಹೇಗಿದೆ

ಅವಿನಾಶ್, ರಾಜೇಶ್ ನಟರಂಗ, ಜೈ ಜಗದೀಶ್, ಸುಮಿತ್ರ, ಶರತ್ ಲೋಹಿತಾಶ್ವ ಅವರು ಪೋಷಕ ಕಲಾವಿದರಾಗಿ ಕಾಣಿಸಿಕೊಂಡಿದ್ದು, ಪಾತ್ರಕ್ಕೆ ತಕ್ಕ ಅಭಿನಯ ಮಾಡಿದ್ದಾರೆ. ಕುರಿ ಪ್ರತಾಪ್ ಮತ್ತು 'ಡ್ಯಾಮಾ ಜ್ಯೂನಿಯರ್ಸ್' ಖ್ಯಾತಿಯ ಮಹೇಂದ್ರ ಕಾಮಿಡಿ ಜವಾಬ್ದಾರಿ ವಹಿಸಿಕೊಂಡಿದ್ದು, ಪ್ರೇಕ್ಷಕರನ್ನ ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಟೆಕ್ನಿಕಲಿ ಸಿನಿಮಾ....

ಹಾಡುಗಳನ್ನ ಚಿತ್ರೀಕರಣ ಬಹುತೇಕ ವಿದೇಶದಲ್ಲಿ ಚಿತ್ರೀಕರಿಸಲಾಗಿದ್ದು, ಲೊಕೇಶನ್ ಇಷ್ಟವಾಗುತ್ತೆ. ಕೃಷ್ಣ ಕುಮಾರ್ ಅವರ ಕ್ಯಾಮೆರಾ ವರ್ಕ್ ತಾರಕ್ ಚಿತ್ರಕ್ಕೆ ಹೈವೋಲ್ಟೇಜ್ ನೀಡಿದೆ. ಅರ್ಜುನ್ ಜನ್ಯ ಅವರ ಹಾಡುಗಳು ವಿಭಿನ್ನವಾಗಿದೆ.


ಫಸ್ಟ್ ಹಾಫ್ ನಿಧಾನ, ಸೆಕೆಂಡ್ ಹಾಫ್ ಪ್ರಧಾನ

'ತಾರಕ್' ಸಿನಿಮಾದ ಫಸ್ಟ್ ಹಾಫ್ ನಿಧಾನವಾಗಿದೆ. ಆರಂಭದಲ್ಲೇ ಪ್ರೇಕ್ಷಕರ ತಾಳ್ಮೆಯನ್ನ ಪರೀಕ್ಷಿಸುತ್ತೆ. ಆದ್ರೆ, ಸೆಕೆಂಡ್ ಹಾಫ್ ನಲ್ಲಿ ಸಿನಿಮಾ ಪ್ರಧಾನವೆನಿಸುತ್ತೆ. ಕುತೂಹಲ ಕಾಪಾಡಿಕೊಳ್ಳುತ್ತ, ಕೆಲವೊಂದು ಟ್ವಿಸ್ಟ್ ಕೊಟ್ಟು ಕ್ಲೈಮ್ಯಾಕ್ಸ್ ವರೆಗೂ ಪ್ರೇಕ್ಷಕರನ್ನ ಹಿಡಿದಿಡುವಲ್ಲಿ ನಿರ್ದೇಶಕ ಜಾಣ್ಮೆಯನ್ನ ಮೆಚ್ಚಬೇಕು.


ಕೊನೆಯ ಮಾತು

ದರ್ಶನ್ ಅವರ ಸಿನಿಮಾ ಅಂದಾಕ್ಷಣ ಒಂದಿಷ್ಟು ನಿರೀಕ್ಷೆ ಇಟ್ಕೊಂಡು ಥಿಯೇಟರ್ ಗೆ ಬರುವ ಪ್ರೇಕ್ಷಕರಿಗೆ ಸ್ವಲ್ಪ ನಿರಾಸೆಯಾಗಬಹುದು. ಯಾಕಂದ್ರೆ, ಇದು ದರ್ಶನ್ ಅವರ ರೆಗ್ಯೂಲರ್ ಫಾರ್ಮೆಟ್ ನಿಂದ ಹೊರತಾದ ಸಿನಿಮಾ. ಆದ್ರೆ, ದರ್ಶನ್ ಅವರನ್ನ ಹೊಸ ರೀತಿಯಲ್ಲಿ ನೋಡ್ಬೇಕು ಎಂದುಕೊಂಡವರಿಗೆ ತಾರಕ್ ರಾಮ್ ಹೆಚ್ಚು ಇಷ್ಟವಾಗ್ತಾನೆ. ಸಿನಿಮಾ ಮುಗಿದು ಹೊರಬಂದಾಗ ' ದರ್ಶನ್ ಡಿಫ್ರೆಂಟ್' ಸಿನಿಮಾ ಮಾಡಿದ್ದಾರೆ ಎಂದು ಮಾತನಾಡಿಕೊಳ್ಳುತ್ತಾರೆ. ಬರಿ ಹೊಡಿ, ಬಡಿ,ಹೀರೋಯಿಸಂ, ವಿಲನ್ ಗಳ ಅಬ್ಬರ ನೋಡಿ ತಲೆಕೆಟ್ಟು ಹೋಗಿರುವ ಪ್ರೇಕ್ಷಕರಿಗೆ ದಸಾರ ಹಬ್ಬಕ್ಕೆ ಒಳ್ಳೆಯ ಮನರಂಜನೆ.


English summary
Kannada Actor, Challenging Star Darshan starrer Kannada Movie 'Tarak' review.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada