»   » ಕಾಮಿಡಿಯಲ್ಲಿ ಮನಗೆದ್ದ ಗಣೇಶ್ ರೋಮಿಯೋ

ಕಾಮಿಡಿಯಲ್ಲಿ ಮನಗೆದ್ದ ಗಣೇಶ್ ರೋಮಿಯೋ

By: * ಉದಯರವಿ
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಭವಿಷ್ಯ ಏನಾಗುತ್ತದೋ ಏನೋ ಎಂದುಕೊಂಡಿದ್ದವರಿಗೆ 'ರೋಮಿಯೋ' ಚಿತ್ರ ಉತ್ತರ ನೀಡಿದೆ. ಸೂತ್ರಹರಿದ ಗಾಳಿಪಟದಂತಾಗಿದ್ದ ಗಣೇಶ್ ವೃತಿಬದುಕಿಗೆ 'ರೋಮಿಯೋ' ಹೊಸ ದಿಕ್ಕು ನೀಡಿದೆ. ಬಾಕ್ಸಾಫೀಸಲ್ಲಿ ಸದ್ದು ಮಾಡುವ ಎಲ್ಲ ಲಕ್ಷಣಗಳೂ ಚಿತ್ರಕ್ಕಿವೆ.

ಚಿತ್ರದ ಹೆಸರು 'ರೋಮಿಯೋ' ಎಂದಿದ್ದರೂ ಗಣೇಶ್ ಇಲ್ಲಿ ಭಗ್ನಪ್ರೇಮಿಯಲ್ಲ. ಎಲ್ಲರನ್ನೂ ನಕ್ಕು ನಲಿಸುವ ಕಾಮಿಡಿ ಪ್ರೇಮಿ. ಈ ಚಿತ್ರದ ಪ್ಲಸ್ ಪಾಯಿಂಟ್ ಎಂದರೆ ಅದು ನಿಸ್ಸಂದೇಹವಾಗಿ ಕಾಮಿಡಿ. ಗಣೇಶ್ ಕಾಮಿಡಿ ಟೈಂ ಇಲ್ಲಿ ಗೆದ್ದಿದೆ. ಅವರ ವೃತ್ತಿಜೀವನದಲ್ಲಿ ಕಾಮಿಡಿ ಟೈಂ ಮತ್ತೆ ಅವರ ಕೈಹಿಡಿದು ಗೋಲ್ಡನ್ ಡೇಸ್ ಗೆ ಮರಳಿಸುವ ಎಲ್ಲ ಸೂಚನೆಗಳನ್ನು ನೀಡಿದೆ.


ಚಿತ್ರದ ನಾಯಕನ ಹೆಸರು ಗಣೇಶ್. ಇವನು ಪಕ್ಕಾ ಮಾಸ್. ಆದರೆ ಹೈಕ್ಲಾಸ್ ಹುಡುಗನಂತೆ ಲೀಲಾಜಾಲವಾಗಿ ಅಭಿನಯಿಸಿ ದಂತದಗೊಂಬೆಯಂತಹ ಶ್ರುತಿ (ಭಾವನಾ) ಎಂಬ ಹುಡುಗಿಗೆ ಬಲೆ ಬೀಸುತ್ತಾನೆ. ಇವನ ಪ್ರೇಮದ ಬಲೆಗೆ ಬಂಗಾರದ ಜಿಂಕೆ ಸುನಾಯಾಸವಾಗಿ ಬೀಳುತ್ತದೆ. ಮದುವೇನೂ ಆಗುತ್ತದೆ.

ಕಡೆಗೆ ಕೈಹಿಡಿದವನ ಮನೆಗೆ ಬಂದಾಗ ಅವನ ಅಸಲಿ ಕತೆ ಗೊತ್ತಾಗುತ್ತದೆ. ಶಿವರಾತ್ರಿ ಮನೆಗೆ ಏಕಾದಶಿ ಬಂದಂಗಾಗುತ್ತದೆ. ಬಾಯಿಬಿಟ್ಟರೆ ಟಾಟಾ, ಬಿರ್ಲಾ, ಅಂಬಾನಿ ಎನ್ನುತ್ತಿದ್ದನ ಬಣ್ಣ ಬಯಲಾಗುತ್ತದೆ. ಅಲ್ಲಿಂದ ನಾಯಕಿ ತವರುಮನೆ ಬಾಗಿಲು ತಟ್ಟುತ್ತಾಳೆ. ಇಬ್ಬರೂ ದೂರಾಗಲು ಡಿವೋರ್ಸ್ ಗೆ ಮೊರೆಹೋಗುತ್ತಾರೆ. ಪರಸ್ಪರ ಒಪ್ಪಿಗೆಯ ಮೇರೆಗೆ ಇಬ್ಬರೂ ದೂರಾಗುತ್ತಾರೆ.

ಕತೆ ಅಲ್ಲಿಗೆ ಮುಗಿಯುವುದಿಲ್ಲ. ಹೊಸ ತಿರುವು ಪಡೆದುಕೊಳ್ಳುತ್ತದೆ. ಬಳಿಕ ಮುಂದೇನಾಗುತ್ತದೆ ಎಂಬುದೇ ಕಥಾವಸ್ತು. ಇದನ್ನು ನೀಟಾಗಿ ತೆರೆಗೆ ತರುವಲ್ಲಿ ನಿರ್ದೇಶಕ ಪಿ.ಸಿ. ಶೇಖರ್ ಅವರ ಶ್ರಮ ಎದ್ದುಕಾಣುತ್ತದೆ. ಇದಕ್ಕೆ ಸಾಥ್ ನೀಡಿರುವುದು ನಟರಾಜ್ ಅವರ ಪಂಚಿಂಗ್ ಡೈಲಾಗ್ಸ್.

ಅವರ ಹಿಂದಿನ ಚಿತ್ರಗಳಿಗಿಂತ ಇಲ್ಲಿ ಗಣೇಶ್ ಲವಲವಿಕೆಯಿಂದ ಅಭಿನಯಿಸಿರುವುದು ಗಮನಾರ್ಹ. ಗಂಭೀರವಾಗಿ ಕಾಣುವ ಹುಡುಗಿ ಪಾತ್ರದಲ್ಲಿ ಭಾವನಾ ಅವರ ಅಭಿನಯ ಕೂಡ ತಾಜಾತನದಿಂದ ಕೂಡಿದೆ. ಭಾವನಾತ್ಮಕ ಸನ್ನಿವೇಶಗಳಲ್ಲಿ, ಹಾಸ್ಯರಸ ಉಕ್ಕಿಸುವಲ್ಲಿ ಗಣೇಶ್ ಅಭಿನಯ ಲೀಲಾಜಾಲ.

ಗಣೇಶ್ ಅವರ ತಂದೆತಾಯಿಯಾಗಿ ರಂಗಾಯಣ ರಘು ಹಾಗೂ ಸುಧಾ ಬೆಳವಾಡಿ ಪಾತ್ರ ಪೋಷಣೆ ಚಿತ್ರಕ್ಕೆ ಒಂದು ಚೌಕಟ್ಟನ್ನು ಒದಗಿಸಿದೆ. ಸೀರಿಯಸ್ ಅಲ್ಲದ ಅಪ್ಪಅಮ್ಮನ ಪೋಷಕ ಪಾತ್ರಗಳಲ್ಲಿ ಇಬ್ಬರೂ ಜಿದ್ದಿಗೆ ಬಿದ್ದಂತೆ ಅಭಿನಯಿಸಿದ್ದಾರೆ.

ರಂಗಾಯಣ ರಘು ಹಾಗೂ ಸಾಧು ಕೋಕಿಲ ಅವರ ಸಮಯೋಚಿತ ಕಾಮಿಡಿ ಮತ್ತೊಂದು ಹೈಲೈಟ್. ಬೆಲ್ಲಕ್ಕೆ ತಾಟಿ ಬೆಲ್ಲ ಸೇರಿಸಿದಂತೆ ಅವರಿಬ್ಬರ ಕಾಮಿಡಿ ಬೆರೆತುಹೋಗಿದೆ. ಈ ಚಿತ್ರದ ಮೂಲಕ ರಂಗಾಯಣ ರಘು ಹಾಗೂ ಸಾಧು ಕೋಕಿಲ ತಮ್ಮ ಕಾಮಿಡಿ ವರಸೆಗಳನ್ನು ಬದಲಾಯಿಸಿರುವುದು ವಿಶೇಷ. ಅವರ ಎಂದಿನ ಶೈಲಿ ನೋಡಿ ನೋಡಿ ಸಾಕಾಗಿದ್ದ ಪ್ರೇಕ್ಷಕರು ಇಲ್ಲಿ ಹೊಟ್ಟೆ ತುಂಬ ನಗಬಹುದು.

ಅರ್ಜುನ್ ಜನ್ಯ ಸಂಗೀತ ಪಾಂಚಜನ್ಯದಂತೆ ಮೊಳಗಿದೆ. 'ನಾಯಕ' ಚಿತ್ರದ ಬಳಿಕ ಪಿಸಿ ಶೇಖರ್ ಗೆ ಇದು ಎರಡನೇ ಚಿತ್ರವಾದರೂ ಕತೆ, ಚಿತ್ರಕತೆ ಹಾಗೂ ನಿರ್ದೇಶನದ ಜವಾಬ್ದಾರಿಗಳನ್ನು ನೀಟಾಗಿ ನಿಭಾಯಿಸಿದ್ದಾರೆ. ವೈದಿ ಎಸ್ ಅವರ ಛಾಯಾಗ್ರಹಣ ಕಣ್ಣಿಗೆ ಹಿತವಾಗಿದೆ.

"ಹೆಂಡತಿಗೆ ತನ್ನ ಗಂಡನೇ ರೋಮಿಯೋ". "ಸುಳ್ಳು ಹೇಳಬೇಕಾದಾಗ ಸುಳ್ಳು ಹೇಳಿ. ನಿಜ ಹೇಳಬೇಕಾದಾಗ ನಿಜ ಹೇಳಿ" ಎಂಬುದು ಚಿತ್ರದಲ್ಲಿನ ಎರಡು ವಿಭಿನ್ನ ಸಂದೇಶಗಳು. ರೋಮಿಯೋ ಮೂಲಕ ಗಣೇಶ್ ಈ ಬಾರಿ ಪ್ರೇಕ್ಷಕರಿಗೆ ನಿರಾಸೆ ಮೂಡಿಸಿಲ್ಲ. ಒಮ್ಮೆ ಹೋಗಿ ಬನ್ನಿ. ಶುಭಂ!

English summary
Read Kannada film Romeo review. Golden Star Ganesh and talentedBhavana in the lead roles in romantic love story written and directed by PC Shekhar. Arjun Janya has composed the music and Vaidhi has handled the camera work. Overall Romeo is definitely worth a watch.
Please Wait while comments are loading...