For Quick Alerts
ALLOW NOTIFICATIONS  
For Daily Alerts

'ಗೋಲಿಸೋಡ' ಕುಡಿದ ವಿಮರ್ಶಕರು ಥ್ರಿಲ್ಲ್ ಆದ್ರಾ.?

By Suneetha
|

ಯಾವುದೇ ಅದ್ಧೂರಿತನ ಆಗ್ಲಿ, ಸ್ಟಾರ್ ನಟ-ನಟಿ ಇಲ್ಲದೇ, ನಮ್ಮ-ನಿಮ್ಮ ನಡುವೆ ಇರುವಂತಹ ಸಾಮಾನ್ಯ ಜನರ ಬದುಕಿನ ಕಥಾಹಂದರವನ್ನಿಟ್ಟುಕೊಂಡು, ಸಿನಿಮಾ ಮಾಡಬಹುದು ಎಂಬುದಕ್ಕೆ 'ಗೋಲಿಸೋಡ' ಚಿತ್ರತಂಡ ತಾಜಾ ಉದಾಹರಣೆ.

ಮಾರ್ಕೆಟ್ ನಲ್ಲಿ ಮೂಟೆ ಹೊರುವ ಹದಿಹರೆಯದ ಹುಡುಗರು, ಅನಾಥ ಹುಡುಗರಿಗೆ ನೆಲೆ ಕಾಣಿಸಲು ಹೋರಾಟ ಮಾಡುವ, ತರಕಾರಿ ಮಾರುವ ಪುಟ್ಟಕ್ಕ (ನಟಿ ತಾರಾ).

ಇನ್ನು ಅನಾಥ ಹುಡುಗರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ನಡೆಸುವ ಗುದ್ದಾಟ. ಇವೆಲ್ಲಾ ಕಥೆ-ವ್ಯಥೆಯನ್ನು ನಿರ್ದೇಶಕ ರಘು ಜಯ ಅವರು 'ಗೋಲಿಸೋಡ' ಚಿತ್ರದ ಮೂಲಕ ಪ್ರೇಕ್ಷಕರಿಗೆ ಉಣ ಬಡಿಸಿದ್ದಾರೆ.['ಮುಂಗಾರು ಮಳೆ'ಯಲ್ಲಿ ನೆನೆದು 'ಗೋಲಿಸೋಡ' ಕುಡಿಯುವ ಅವಕಾಶ ನಿಮಗೆ]

ಎರಡು ವರ್ಷಗಳ ಹಿಂದೆ ತಮಿಳಿನಲ್ಲಿ ತೆರೆಕಂಡ 'ಗೋಲಿಸೋಡ' ಚಿತ್ರವನ್ನು, ಅದೇ ಹೆಸರಿನಲ್ಲಿ ಫ್ರೇಂ ಟು ಫ್ರೇಂ ಭಟ್ಟಿ ಇಳಿಸಿದರು ಕೂಡ, ಕಲಾವಿದರು ನಮ್ಮವರೇ ಅನ್ನೋದು ಸಮಾಧಾನಕರ ಸಂಗತಿ.

ವಿಕ್ರಮ್, ಪ್ರಿಯಾಂಕ ಜೈನ್, ದಿವ್ಯಾ ಎನ್, ಸಿಳ್ಳೆ ಮಂಜು, ಚಂದನ್, ಹೇಮಂತ್, ನಟಿ ತಾರಾ, ನಟ ಮಧು ಸೂಧನ್, ನಟ ಶೋಭರಾಜ್, ನಟ ರಘು ಕರುಮಂಚಿ ಮುಂತಾದವರು ಕಾಣಿಸಿಕೊಂಡಿರುವ 'ಗೋಲಿಸೋಡ' ಚಿತ್ರಕ್ಕೆ, ಕನ್ನಡ ವಿಮರ್ಶಕರು ಕೂಡ ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕನ್ನಡದ ಖ್ಯಾತ ವಿಮರ್ಶಕರ ವಿಮರ್ಶೆಯನ್ನು ಓದಲು ಮುಂದೆ ನೋಡಿ....

'ಕಿಕ್ ಕೊಡುವ ಗೋಲಿಸೋಡ' -ವಿಜಯ ಕರ್ನಾಟಕ

ಚಿತ್ರದ ಹೀರೋ ಅಂದರೆ ಕತೆ ಮತ್ತು ಸ್ಕ್ರಿಪ್ಟ್‌. ಕಸ, ತಿಪ್ಪೆಗಳ ನಡುವೆಯೂ ಹೃದಯ ಕಲಕುತ್ತದೆ. ಹುಡುಗರ ನಡುವಿನ ಸ್ನೇಹ ಸ್ಟ್ರಾಂಗ್. ಪ್ರಾಣಕ್ಕೆ ಪ್ರಾಣ ಕೊಡುವ ಸ್ನೇಹಕ್ಕೆ ಪ್ರೇಕ್ಷಕ ಫಿದಾ ಆಗುತ್ತಾನೆ. ಎಲ್ಲರೂ ರೌಡಿಗಳ ಹೊಡೆತಕ್ಕೆ ಚಿಂದಿಯಾಗಿ ದಿಕ್ಕಾಪಾಲಾದರೂ ಮತ್ತೆ ಸೆಟೆದು ನಿಲ್ಲುವ ಅವರೊಳಗಿನ ಇಚ್ಛಾಶಕ್ತಿ ಪ್ರೇಕ್ಷಕನಿಗೆ ಥ್ರಿಲ್ ನೀಡುತ್ತದೆ. ರೌಡಿಗಳನ್ನು ಅವರು ಚಾಣಾಕ್ಷತನದಿಂದ ದುರ್ಬಲರನ್ನಾಗಿ ಮಾಡುತ್ತಾರೆ. ಅಂದಹಾಗೆ, ಚಿತ್ರದಲ್ಲಿ ರಕ್ತ ಸಂಬಂಧಿಗಳಲ್ಲದವರ ನಡುವಿನ ಮನುಷ್ಯ ಪ್ರೀತಿ ಮನತಟ್ಟುತ್ತದೆ. ಎಲ್ಲೂ ಬೋರ್‌ ಹೊಡೆಸದೆ, ಕ್ಷಣಕ್ಷಣವೂ ಕುತೂಹಲ ಕೆರಳಿಸುವ ಸ್ಕ್ರಿಪ್ಟ್‌ ಸಹಜವಾಗಿದೆ. ಎಲ್ಲರ ಅಭಿನಯವೂ ಚೆನ್ನಾಗಿದೆ. ಬಿಗ್‌ ಬಜೆಟ್‌ ಸಿನಿಮಾಗಳಲ್ಲಿ ಕಣ್ಣಿಗೆ ಕಲರ್‌ಫುಲ್‌ ಅನ್ನಿಸಬಹುದು. ಆದರೆ, ಈ ಚಿತ್ರದ ತಾಜಾತನ ಮೈಮರೆಸುತ್ತವೆ. ಮನರಂಜನೆಯ ಬೇರೆ ಆಯಾಮಗಳನ್ನು ಅರಿಯಲು ಈ ಸಿನಿಮಾ ನೋಡಿ. ರೇಟಿಂಗ್: 3.5/5.-ಪದ್ಮಾ ಶಿವಮೊಗ್ಗ.

'ಮಕ್ಕಳ ಉತ್ಸಾಹದ ಬಂಡವಾಳ' -ಪ್ರಜಾವಾಣಿ

ಕಸುಗಾಯಿಯ ಒಗರು ಹಾಗೂ ತಾಜಾತನ ಗೋಲಿಸೋಡದ ಗುಣ. ಈ ಪಾನೀಯವನ್ನು ಕುಡಿದಾಗ ಒಂದು ರೀತಿಯ ಚೈತನ್ಯದ ಅನುಭವವಾಗುತ್ತದೆ. ‘ಗೋಲಿಸೋಡ' ಚಿತ್ರದಲ್ಲೂ ‘ರಾ' ಎನ್ನಬಹುದಾದ ಈ ತಾಜಾತನವಿದೆ. ಕಥೆಯಲ್ಲೂ ಚೈತನ್ಯವಿದೆ. ತಮಿಳಿನ ಯಶಸ್ವಿ ಚಿತ್ರ ‘ಗೋಲಿಸೋಡ'ವನ್ನು ಅದೇ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ ನಿರ್ದೇಶಕ ರಘುಜಯ. ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯಲ್ಲಿ ಮೂಟೆ ಹೊತ್ತು ದಿನದ ಅನ್ನ ದುಡಿಯುವ ದುಬ್ಬ, ಮಂಜ, ಕ್ಯಾತ, ಚಿಕ್ಕ ಎಂಬ ನಾಲ್ಕು ಹುಡುಗರ ಕಥೆ ‘ಗೋಲಿಸೋಡ'ದಲ್ಲಿದೆ. ಹದಿನಾಲ್ಕು-ಹದಿನಾರು ವರ್ಷಗಳ ಈ ಅನಾಥ ಮಕ್ಕಳು ಮೂಟೆ ಹೊರುವುದರ ಹೊರತಾಗಿಯೂ ಇನ್ನೇನಾದರೂ ಮಾಡಬೇಕು ಎಂದುಕೊಳ್ಳುವಲ್ಲಿಂದ ಕಥೆ ಚುರುಕು ಪಡೆದುಕೊಳ್ಳುತ್ತದೆ.-ಗಣೇಶ ವೈದ್ಯ.

'ಮಾರುಕಟ್ಟೆಯೊಳಗಿನ ಮನೋವ್ಯಾಪಾರ' -ಕನ್ನಡ ಪ್ರಭ

ಪುಟ್ಟಕ್ಕನ ಆಶ್ರಯದಲ್ಲಿ ಮೂಟೆ ಹೊರುತ್ತಾ ನೆಲೆ ಕಂಡುಕೊಂಡ ಹುಡುಗರು, ಹೊಸದೊಂದು ಕೆಲಸಕ್ಕೆ ಮುಂದಾಗುವುದು, ಅದಕ್ಕೆ ಗೌಡರ ಗೂಂಡಾ ಪಡೆಯಿಂದ ಅಡ್ಡಿಯಾಗುವುದು, ಕೊನೆಗೆ ಚಿಗುರು ಮೀಸೆ ಹುಡುಗರು ಆ ಗೂಂಡಾಗಿರಿ ಮೇಲೆರಗಿ ಒದೆ ತಿಂದು ದಿಕ್ಕಾಪಾಲಾಗುವ ಸನ್ನಿವೇಶಗಳು ಚಿತ್ರದ ಮೊದಲಾರ್ಧದಲ್ಲಿ ಕಾಣಸಿಗುತ್ತವೆ. ಹಾಸ್ಯದ ಜೊತೆ ಅಲ್ಲಲ್ಲಿ ಈ ಸನ್ನಿವೇಶಗಳನ್ನು ತಂದಿರುವ ನಿರ್ದೇಶಕರ ಪ್ರಯತ್ನ ಬೋರ್ ಎನಿಸಿದರೂ, ದ್ವಿತೀಯಾರ್ಧ ರೋಚಕ. ವಿಕ್ರಮ್, ಸಿಳ್ಳೆ ಮಂಜ, ಚಂದನ್, ಹೇಮಂತ್ ಪೈಕಿ ಸಿಳ್ಳೆ ಮಂಜ ಅಭಿನಯದ ಬಗ್ಗೆ ಮರು ಮಾತಿಲ್ಲ. ಉಳಿದವರ ಅಭಿನಯದಲ್ಲಿ ಆ ತೀವ್ರತೆ ಕಾಣಿಸದು. ಪೋಷಕ ಪಾತ್ರಗಳಲ್ಲಿ ತಾರಾ, ಮಧು ಸೂಧನ್, ಡ್ಯಾನಿ ಕುಟ್ಟಪ್ಪ ಹೆಚ್ಚು ಸೆಳೆಯುತ್ತಾರೆ. ನಾಯಕಿ ಪ್ರಿಯಾಂಕ ಜೈನ್, ಹಾಗೂ ಆಕೆಯ ಗೆಳತಿಯಾಗಿ ದಿವ್ಯಾ ರಂಗಾಯಣ ಅವರ ಪಾತ್ರಗಳು ಪ್ರೇಕ್ಷಕರ ಮನಗೆಲ್ಲುತ್ತದೆ. ರೇಟಿಂಗ್: 3/5.-ದೇಶಾದ್ರಿ ಹೊಸ್ಮನೆ.

'ಮಕ್ಕಳ ಮಾರಾಮಾರಿಯ ವೈಭವೀಕರಣ' -ವಿಜಯವಾಣಿ

'ಗೋಲಿಸೋಡ' ನೋಡುವುದಕ್ಕೆ ತುಂಬಾ ಶಾಂತವಾಗಿರುತ್ತದೆ. ಆದರೆ ಒಮ್ಮೆ ಕುಲುಕಿದರೆ ಅದರೊಳಗಿನ ಒತ್ತಡ ಏನೆಂಬುದು ಗೊತ್ತಾಗುತ್ತದೆ. ಚಿತ್ರದಲ್ಲಿ ಒಂದು ಪಾತ್ರ 'ಗೋಲಿಸೋಡ'ವನ್ನು ಹೀಗೆ ಬಣ್ಣಿಸುತ್ತದೆ. ಇದಕ್ಕೆ ಅನ್ವರ್ಥವಾಗಿ ಚಿತ್ರದಲ್ಲಿ ನಾಲ್ಕು ಮಕ್ಕಳ ಕಥೆ ಇದೆ. ಒಂದು ಹಂತದವರೆಗೂ ಎಲ್ಲಾ ಅನ್ಯಾಯ, ಹಿಂಸೆ ಸಹಿಸಿಕೊಳ್ಳುವ ಮಕ್ಕಳು ತಿರುಗಿಬಿದ್ದರೆ? ಇದೇ 'ಗೋಲಿಸೋಡ'ದ ಒನ್ ಲೈನ್ ಸ್ಟೋರಿ. ರೇಟಿಂಗ್: 2/5.-ಅವಿನಾಶ್ ಜಿ.ರಾಮ್.

'ಸಂಯಮದ ನಟನೆಯಿಂದ ಸಹ್ಯವಾಗುವ ಸರಳ ಕತೆ' -ಉದಯವಾಣಿ

ಚಿಕ್ಕವರಿಗೆ ಭಯ ಇರುತ್ತೆ; ದೊಡ್ಡವರಿಗೆ ಜವಾಬ್ದಾರಿ ಇರುತ್ತೆ; ಚಿಗುರು ಮೀಸೆ ಹುಡುಗರಿಗೆ? ಭಯವೂ ಇಲ್ಲ, ಜವಾಬ್ದಾರಿಯೂ ಇಲ್ಲ. ಅವರಿಗೆ ಛಲ ಇರುತ್ತೆ ಉತ್ಸಾಹ ಇರುತ್ತೆ. ಎಲ್ಲಕ್ಕಿಂತ ಹೆಚ್ಚಾಗಿ ಏನ್ ಬೇಕಾದರೂ ಆಗಲಿ, ಫೇಸ್ ಮಾಡೋಣ ಎನ್ನುವ ಹುಂಬತನ ವಿಪರೀತ ಇರುತ್ತದೆ. ಅಂತಹ ಹುಂಬ ಹುಡುಗರ ಕಥೆಯೇ ಈ 'ಗೋಲಿಸೋಡ'. ಮಾರ್ಕೆಟ್ ನಲ್ಲಿ ಕೂಲಿ ಕೆಲಸ ಮಾಡಿ ಬದುಕು ಸಾಗಿಸುವ ನಾಲ್ವರು ಅನಾಥ ಹುಡುಗರನ್ನು ಕೆಣಕಿದರೆ ಏನಾಗಬಹುದು? ಅದೇ ಈ ಚಿತ್ರದ ಕಥೆ ಎಂದು ಸುಲಭವಾಗಿ ಹೇಳಿ ಬಿಡಬಹುದು. ಆದರೆ, 'ಗೋಲಿಸೋಡ' ಗಮನ ಸೆಳೆಯುವುದು ಇ ಒನ್ ಲೈನ್ ನಿಂದಲ್ಲ, ಚಿತ್ರಕಥೆಯಿಂದ ಎಂದರೆ ತಪ್ಪಿಲ್ಲ. ಏಕೆಂದರೆ, ಬಹಳ ಸರಳವಾಗಿ ಕಾಣುವ ಒನ್ ಲೈನ್ ನಲ್ಲಿ ಸಿಕ್ಕಾಪಟ್ಟೆ ಟ್ವಿಸ್ಟ್ ಗಳು ಇವೆ. ಹಾಗಾಗಿ 'ಗೋಲಿಸೋಡ' ಬೇರೆ ಶೈಲಿಯ ಸಿನಿಮಾ ಎಂದರೆ ತಪ್ಪಿಲ್ಲ. -ಚೇತನ್ ನಾಡಿಗೇರ್.

English summary
Kannada movie 'Golisoda' Critics review. Actor Vikram, Actress Priyanka Jain, Actress Tara, Actor Madhusudhan, Actor Shobaraj starrer 'Golisoda' has received mixed response from the critics. Here is the collection of reviews by Top News Papers of Karnataka. The movie is directed by Raghu Jaya.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more