»   » ಮೂರು ಕಥೆಗಳ ರೀಮಿಕ್ಸ್ 'ಜಾಕ್ಸನ್'ಗೆ ಮೂರು ಸ್ಟಾರ್

ಮೂರು ಕಥೆಗಳ ರೀಮಿಕ್ಸ್ 'ಜಾಕ್ಸನ್'ಗೆ ಮೂರು ಸ್ಟಾರ್

Posted By:
Subscribe to Filmibeat Kannada

ಕಥೆ ನಂ.1 : ಟಪೋರಿ ಹುಡುಗ ಜಾತ್ರೆ ಜವರೇಗೌಡ (ಜಾಕ್ಸನ್-ದುನಿಯಾ ವಿಜಿ)ಗೆ ಎದುರು ಮನೆ ಕುಮುದ (ಪಾವನಾ) ಮೇಲೆ ಲವ್ವು. ಆರನೇ ಕ್ಲಾಸ್ ನಿಂದಲೂ ಕುಮುದಳನ್ನ ಮನಸಾರೆ ಪ್ರೀತಿ ಮಾಡುತ್ತಿರುವ ಜಾಕ್ಸನ್ ಕಂಡ್ರೆ, ಕುಮುದ ಮಾರುದ್ದ ದೂರ. ಜಾಕ್ಸನ್ ಕಾಟ ತಪ್ಪಿಸೋಕೆ ಕುಮುದ ತಂದೆ, ಅಣ್ಣಯ್ಯನಿಗೆ (ರಂಗಾಯಣ ರಘು) ಹೇಳಿ ಪಂಚಾಯಿತಿ ಮಾಡಿಸ್ತಾರೆ.

ಕಥೆ ನಂ.2 : ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಅಭಿಗೆ ತಂಗಿ ಮದುವೆಯನ್ನ ಅದ್ಧೂರಿಯಾಗಿ ಮಾಡಬೇಕೆನ್ನುವ ಕನಸು. ಆಫೀಸ್ ನಲ್ಲಿ ಬಾಸ್ ಕೊಡೋ ಟಾರ್ಚರ್ ಒಂದ್ಕಡೆಯಾದರೆ, ಇನ್ನೊಂದ್ಕಡೆ ಪ್ರೀತಿಸಿದ ಹುಡುಗಿ ಐಶ್ವರ್ಯಗೆ ಸುಳ್ಳು ಹೇಳಿ ಪೇಚಿಗೆ ಸಿಕ್ಕಿಹಾಕಿಕೊಳ್ಳುವ ಅಭಿಗೆ ಕುಡಿಯುವ ಚಟ. ''ಇನ್ಮೇಲೆ ಕುಡಿಯಲ್ಲ'' ಅಂತ ಐಶ್ವರ್ಯ ಮೇಲೆ ಆಣೆ ಮಾಡಿದ್ರೂ, ಬಾಟಲ್ ಗಟ್ಟಲೇ ಇಳಿಸಿ, ಗರ್ಭಿಣಿ ಹೆಂಗಸಿಗೆ ಆಕ್ಸಿಡೆಂಟ್ ಮಾಡುತ್ತಾನೆ.

ಕಥೆ ನಂ.3 : ಬೇಬಿ (ದೀಪಾ) ಸುಪಾರಿಯ ಮೇರೆಗೆ ರಾಕೆಟ್ ರಾಜ ಮತ್ತು ಬಕೆಟ್ ಬಾಬು ಬೇಬಿ ಗಂಡನನ್ನ ಬಾರ್ ವೊಂದರಲ್ಲಿ ಕೊಲೆ ಮಾಡುತ್ತಾರೆ.

ಮೂರು ವಿಭಿನ್ನ ಕಥೆಗಳು, ಬೇರೆ ಬೇರೆ ಪಾತ್ರಗಳು, ಇವರೆಲ್ಲರಿಗೂ 'ಜಾಕ್ಸನ್' ಕೊಂಡಿ ಇದ್ದ ಹಾಗೆ. ಹೀಗೆ, ಸಾಕಷ್ಟು ತಿರುವು, ಸ್ವಲ್ಪ ಕಾಮಿಡಿ, ಸ್ವಲ್ಪ ಲವ್ ಇರುವ ದುನಿಯಾ ವಿಜಿ ಅಭಿನಯದ 'ಜಾಕ್ಸನ್' ಸಿನಿಮಾ ಮನರಂಜನೆಯ ರಸದೌತಣ.

Rating:
3.0/5

ಚಿತ್ರ : ಜಾಕ್ಸನ್
ನಿರ್ಮಾಣ : ಸುಂದರ್ ಗೌಡ, ಅನಿಲ್
ನಿರ್ದೇಶನ : ಸನತ್ ಕುಮಾರ್
ಸಂಗೀತ : ಅರ್ಜುನ್ ಜನ್ಯ
ತಾರಾಗಣ : ದುನಿಯಾ ವಿಜಿ, ಪಾವನಾ, ಐಶ್ವರ್ಯ, ರಂಗಾಯಣ ರಘು, ಬುಲ್ಲೆಟ್ ಪ್ರಕಾಶ್ ಮತ್ತು ಇತರರು
ಬಿಡುಗಡೆ : ಜನವರಿ 15, 2015

ತೆರೆಮೇಲೆ ಕರಿ ಚಿರತೆ ಕಮಾಲ್

ಬರೀ ಆಕ್ಷನ್ ಸಿನಿಮಾಗಳಿಗೆ ಮಾತ್ರ ಸೀಮಿತವಾಗಿದ್ದ ದುನಿಯಾ ವಿಜಿಯನ್ನ 'ಜಾಕ್ಸನ್' ಚಿತ್ರದಲ್ಲಿ ಕೊಂಚ ವಿಭಿನ್ನವಾಗಿ ನೋಡಬಹುದು. ಅಲ್ಲಲ್ಲಿ, 'ಜಾನಿ ಮೇರಾ ನಾಮ್' ಚಿತ್ರದ ಹ್ಯಾಂಗೋವರ್ ನಲ್ಲಿದ್ದಂತೆ ಕಾಣುವ ವಿಜಿ, ಮೈಕೇಲ್ 'ಜಾಕ್ಸನ್' ಆಗಿ ಡ್ಯಾನ್ಸ್ ಮಾಡುವುದರಲ್ಲೂ ಸೈ, ವಿಲನ್ ಗಳನ್ನ ಮಣ್ಣು ಮುಕ್ಕಿಸುವುದರಲ್ಲೂ ಜೈ. ಹಾಗೆ, ಪ್ರೇಕ್ಷಕರನ್ನ ನಗೆಗಡಲಲ್ಲಿ ತೇಲಿಸುವುದರಲ್ಲಿ ವಿಜಿ ಅಭಿನಯ ಲೀಲಾಜಾಲ. ['ದುನಿಯಾ ವಿಜಿ'ಯ ನಾನಾ ಮುಖಗಳು]

ಪಾವನಾ-ಐಶ್ವರ್ಯ ಅಭಿನಯ ಅಷ್ಟಕಷ್ಟೆ

ವಿಜಿ ಚುಡಾಯಿಸುವುದನ್ನ ಕಂಡು ಮೂಗು ಮುರಿಯಬೇಕಿದ್ದ 'ಗೊಂಬೆಗಳ ಲವ್' ಖ್ಯಾತಿಯ ನಟಿ ಪಾವನಾ ತೆರೆಮೇಲೆ ಕೊಂಚ ಮಂಕಾಗಿದ್ದಾರೆ. ಅವರ ಅಭಿನಯದಲ್ಲಿ ಅಷ್ಟು ಲವಲವಿಕೆಯಿಲ್ಲ. ಆಗೊಮ್ಮೆ ಈಗೊಮ್ಮೆ ತೆರೆಮೇಲೆ ಕಾಣುವ ನಟಿ ಐಶ್ವರ್ಯ ನಟನೆಯಲ್ಲಿ ಇದ್ದಿದ್ದರಲ್ಲಿ ಓಕೆ. [ನಾಯಕಿಯಿಂದ 'ಜಾಕ್ಸನ್' ವಿಜಿಗೆ ಪೊರಕೆ ಸೇವೆ!]

ರಂಗಾಯಣ ರಘು-ಬುಲ್ಲೆಟ್ ಪ್ರಕಾಶ್ ಕಾಮಿಡಿ ಝಲಕ್

ಕೆಲವೇ ಹೊತ್ತು ತೆರೆಮೇಲೆ ಕಾಣಿಸಿದರೂ, ರಂಗಾಯಣ ರಘು ಮತ್ತು ಬುಲ್ಲೆಟ್ ಪ್ರಕಾಶ್ ಕಾಮಿಡಿ ಎಲ್ಲರನ್ನ ನಕ್ಕು ನಲಿಸುತ್ತೆ.

ತಮಿಳಿನ ರೀಮೇಕ್

ತಮಿಳಿನಲ್ಲಿ ಬ್ಲಾಕ್ ಬಸ್ಟರ್ ಆಗಿದ್ದ 'ಇದರ್ಕ್ಕುತಾನೆ ಆಸೈಪಟ್ಟೈ ಬಾಲಕುಮಾರ' ಚಿತ್ರದ ರೀಮೇಕ್ ಈ 'ಜಾಕ್ಸನ್'. ಆದರೂ, ಅಲ್ಲಿನ ನಿರೂಪಣಾ ಶೈಲಿ ಇಲ್ಲಿ ಇಲ್ಲ. ತಮಿಳಿನ ಚಿತ್ರಕಥೆಯಲ್ಲಿ ವೇಗ ಇದೆ. ಹೊಟ್ಟೆ ಹುಣ್ಣಾಗಿಸುವಷ್ಟು ಕಾಮಿಡಿ ಇದೆ. ಮೊದಲಾರ್ಧ ಮುಗಿಯುವ ಹೊತ್ತಿಗೆ ಸಸ್ಪೆನ್ಸ್ ಇದೆ. ಕಡೆಯವರೆಗೂ ಥ್ರಿಲ್ ಇದೆ. ಈ ಎಲ್ಲಾ ಅಂಶಗಳು 'ಜಾಕ್ಸನ್'ನಲ್ಲಿ ಕೊಂಚ ವೀಕ್ ಇದೆ.

ಮೊದಲ ಪ್ರಯತ್ನದಲ್ಲಿ ಸನತ್ ಓಕೆ

''ರೀಮೇಕ್ ಸೇಫ್'' ಅಂತ್ಹೇಳುವ ನಿರ್ದೇಶಕರ ಪೈಕಿ, ಮೊದಲ ಬಾರಿ ನಿರ್ದೇಶನಕ್ಕೆ ಕೈಹಾಕಿರುವ ಸನತ್, ರೀಮೇಕ್ ಚಿತ್ರದ ಮೊರೆ ಹೋಗಿದ್ದಾರೆ. ಯಥಾವತ್ತಾಗಿ ತಮಿಳಿನಿಂದ ಬಟ್ಟಿ ಇಳಿಸದೆ, ಅಲ್ಲಲ್ಲಿ 'ಕತ್ರಿ' ಕೆಲಸ ಮಾಡಿರುವ ಸನತ್, ಕೊಂಚ ಜಾಗರೂಕತೆ ವಹಿಸಿದ್ದರೆ, 'ಜಾಕ್ಸನ್' ಖಂಡಿತ ಉತ್ತಮ ಚಿತ್ರವಾಗುತ್ತಿತ್ತು. [ಸ್ಟಾರ್ ವಾರ್ ನಿಂದ ಹಿಂದೆ ಸರಿದ ದುನಿಯಾ ವಿಜಯ್]

ಅರ್ಜುನ್ ಜನ್ಯ ಮ್ಯೂಸಿಕ್

ಅರ್ಜುನ್ ಜನ್ಯ ಸಂಗೀತ ಮಾಸ್ ಪ್ರೇಕ್ಷಕರಿಗೆ ಇಷ್ಟವಾಗುತ್ತೆ. ಆದ್ರೆ, ಅದನ್ನ ಚಿತ್ರದಲ್ಲಿ ಅನಾವಶ್ಯಕವಾಗಿ ತುರುಕಿದಂತೆ ಕೆಲ ಕಡೆ ಭಾಸವಾಗುತ್ತೆ. [ದುನಿಯಾ ವಿಜಿ ಅಪ್ಪ, ವೆಸ್ಟ್ ಇಂಡೀಸ್ ಕ್ರಿಕೆಟ್ ಟೀಂ ಓಪನರ್!]

ಒಮ್ಮೆ ನೋಡೋಕೆ ಅಡ್ಡಿಯಿಲ್ಲ

ತಮಿಳಿನ 'ಇದರ್ಕ್ಕುತಾನೆ ಆಸೈಪಟ್ಟೈ ಬಾಲಕುಮಾರ' ಚಿತ್ರವನ್ನ ನೀವು ನೋಡಿಲ್ಲ ಅಂದ್ರೆ, 'ಜಾಕ್ಸನ್' ಚಿತ್ರವನ್ನ ಒಮ್ಮೆ ನೋಡುವುದಕ್ಕಂತೂ ಅಡ್ಡಿಯಿಲ್ಲ. ಕಂಪ್ಲೀಟ್ ಫ್ಯಾಮಿಲಿ ಎಂಟರ್ಟೇನರ್ ಆಗಿರುವ 'ಜಾಕ್ಸನ್' ಚಿತ್ರವನ್ನ ಇಡೀ ಫ್ಯಾಮಿಲಿ ನೋಡಿ ಎಂಜಾಯ್ ಮಾಡಬಹುದು.

English summary
Duniya Vijay starrer Kannada movie 'Jackson' has hit the screens today (January 15th). Jackson is a treat for Duniya Vijay fans.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada