For Quick Alerts
  ALLOW NOTIFICATIONS  
  For Daily Alerts

  ವಿಮರ್ಶೆ: ಕವಿರಾಜರ ಕಲ್ಪನೆಯ ಮದುವೆ ಹೇಗಿದೆ ಗೊತ್ತಾ?

  By ಸುನೀತಾ ಗೌಡ
  |

  ಇಲ್ಲಿಯವರೆಗೆ ಕೈಯಲ್ಲಿ ಬರೀ ಪೆನ್ನು ಹಿಡಿಯುತ್ತಿದ್ದ ಗೀತ ರಚನೆಕಾರ ಕವಿರಾಜ್ ಅವರು ಈ ಬಾರಿ ಪೆನ್ನಿನ ಜೊತೆಗೆ ಮೈಕ್ ಹಿಡಿದು ಆಕ್ಷನ್-ಕಟ್ ಹೇಳಿದ್ದಾರೆ. ಅವರ 'ಮದುವೆಯ ಮಮತೆಯ ಕರೆಯೋಲೆ' ಸಿನಿಮಾ ಹೇಗಿರಬಹುದು? ಸಿನಿಮಾ ಪೂರ್ತಿ ಮದುವೆನೇ ಇರಬಹುದಾ? ಅಂತ ಆಲೋಚನೆ ಮಾಡಿ ನೀವು ಥಿಯೇಟರ್ ಗೆ ಕಾಲಿಟ್ರೆ, ಅಲ್ಲಿ ಮದುವೆ ಮಾತ್ರ ಮಾಡೋಲ್ಲ.

  ಬದ್ಲಾಗಿ ಪಕ್ಕಾ ರೊಮ್ಯಾಂಟಿಕ್ ಮತ್ತು ಫ್ಯಾಮಿಲಿ ಎಂರ್ಟಟೈನರ್ ಡ್ರಾಮಾ ಇರುವ ಈ ಸಿನಿಮಾದಲ್ಲಿ ಕೃಷ್ಣೇ ಗೌಡ ಮತ್ತು ಮಿ.ಪಾಟೀಲ್ ಎಂಬ ಎರಡು ಕುಟುಂಬಗಳ ಬಗ್ಗೆ ಮತ್ತು ಒಂದು ಮದುವೆಯ ಸುತ್ತ ಸುತ್ತುವ ಕಥೆಯನ್ನು ಹೇಳಲಾಗಿದೆ.[ಗೋಲ್ಡನ್ ಕ್ವೀನ್ ಮದುವೆಗೆ ನೀವೂ ಬರ್ತಿರಾ ಅಲ್ವಾ? ]

  ಬರೀ ನ್ಯೂಸ್ ಚಾನಲ್ ಮತ್ತು ಯೂಟ್ಯೂಬ್ ನಲ್ಲಿ ಸುದ್ದಿಯಾಗಿದ್ದ ಫೈರಿಂಗ್ ಸ್ಟಾರ್ ವೆಂಕಟ್ ಅವರ ಡೈಲಾಗ್ ಈ ಬಾರಿ ನೇರವಾಗಿ ಸಿನಿಮಾಗೂ ಲಗ್ಗೆ ಇಟ್ಟಿದೆ. ಚಿಕ್ಕಣ್ಣ 'ನನ್ ಮಗಂದ್' ಎಂದು ಹೊಡಿಯೋ ಡೈಲಾಗ್ ಮಾತ್ರ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತದೆ.

  ತೂಗುದೀಪ ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ ಮಮತೆಯ ಕರೆಯೋಲೆ ನಿಮ್ಮನ್ನು ಕೊನೆಗಂತೂ ಬಿದ್ದು ಬಿದ್ದು ನಗುವಂತೆ ಮಾಡುತ್ತದೆ. [ಮಮತೆಯಿಂದ ಕವಿರಾಜ್ ನೀಡಿದ ಮದುವೆಯ ಕರೆಯೋಲೆ ]

  Rating:
  3.0/5

  ಚಿತ್ರ : 'ಮದುವೆಯ ಮಮತೆಯ ಕರೆಯೋಲೆ'
  ನಿರ್ಮಾಣ : ತೂಗುದೀಪ ಪ್ರೊಡಕ್ಷನ್ಸ್ (ಮೀನಾ ತೂಗುದೀಪ್)
  ಕಥೆ-ಚಿತ್ರಕಥೆ-ನಿರ್ದೇಶನ : ಕವಿರಾಜ್
  ಸಂಗೀತ : ವಿ.ಹರಿಕೃಷ್ಣ
  ಸಂಕಲನ : ಕೆ.ಎಂ.ಪ್ರಕಾಶ್
  ತಾರಾಗಣ : ಅಮೂಲ್ಯ, ಸೂರಜ್ ಗೌಡ, ಅನಂತ್ ನಾಗ್, ಚಿತ್ರಾ ಶೆಣೈ, ಚಿಕ್ಕಣ್ಣ, ಸಾಧುಕೋಕಿಲ, ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಸಂಗೀತಾ, ಬುಲೆಟ್ ಪ್ರಕಾಶ್, ಮನ್ ದೀಪ್ ರಾಯ್, ಶಾಲಿನಿ, ಯೋಗೀಶ್ ರಾಜ್, ಶೋಭರಾಜ್ ಮತ್ತು ಮುಂತಾದವರು.
  ಬಿಡುಗಡೆ : ಜನವರಿ 8

  ಸ್ಯಾಂಡಲ್ ವುಡ್ ನ ಹೊಸ ಪ್ರತಿಭೆ ನಟ ಸೂರಜ್ ಮತ್ತು ಬೇಬಿ ಡಾಲ್ ನಟಿ ಅಮೂಲ್ಯ ಅವರ 'ಮದುವೆಯ ಮಮತೆಯ ಕರೆಯೋಲೆ'ಯ ಪೂರ್ತಿ ವಿಮರ್ಶೆಯನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..

  ಇಡ್ಲಿ-ಚಟ್ನಿಯಂತಿರುವ 2 ಅನ್ಯೋನ್ಯ ಕುಟುಂಬ

  ಇಡ್ಲಿ-ಚಟ್ನಿಯಂತಿರುವ 2 ಅನ್ಯೋನ್ಯ ಕುಟುಂಬ

  ನಿವೃತ್ತ ಪ್ರಾಂಶುಪಾಲ ಕೃಷ್ಣೇ ಗೌಡ (ಅನಂತ್ ನಾಗ್) ಮತ್ತು ನಿಷ್ಠಾವಂತ ಆರ್.ಟಿ.ಓ ಆಫೀಸರ್ ಮಿ.ಪಾಟೀಲ್ (ಅಚ್ಯುತ್ ಕುಮಾರ್) ಎಂಬಿಬ್ಬರ ಕುಟುಂಬಗಳು ಇಡ್ಲಿಯಲ್ಲಿ ಬೆರೆತ ಚಟ್ನಿಯಂತೆ ಅನ್ಯೋನ್ಯವಾಗಿ ಇರುತ್ತಾರೆ. ಸುಮಾರು 15 ವರ್ಷಗಳ ನಂತರ ಎದುರು-ಬದುರು ಮನೆಯಲ್ಲಿ ಮತ್ತೆ ಒಂದಾಗುವ ಈ ಆಪ್ತ ಸ್ನೇಹಿತರಿಂದ ಸಿನಿಮಾದ ಕಥೆ ಶುರುವಾಗುತ್ತದೆ.

  ಅಮೂಲ್ಯ-ಸೂರಜ್ ನಡುವೆ ಲವ್ಮಿ-ಡವ್ವಿ

  ಅಮೂಲ್ಯ-ಸೂರಜ್ ನಡುವೆ ಲವ್ಮಿ-ಡವ್ವಿ

  ತುಂಬಾ ವರ್ಷಗಳ ನಂತರ ಭೇಟಿಯಾಗುವ ಆಪ್ತ ಸ್ನೇಹಿತರಿಬ್ಬರ ಮಕ್ಕಳಾದ ಖುಷಿ (ಅಮೂಲ್ಯ) ಮತ್ತು ಸೂರಜ್ (ಸೂರಜ್ ಗೌಡ) ಪರಿಚಯ ಆಗಿ ಕಾಲೆಳೆದು ಜಗಳವಾಡುತ್ತಿರುತ್ತಾರೆ. ಕೊನೆಗೆ ಈ ಜಗಳವೇ ಪ್ರೀತಿಗೆ ತಿರುಗಿ ಇಬ್ಬರ ನಡುವೆ ಲವ್ ಶುರುವಾಗುತ್ತೆ. ಇವರಿಬ್ಬರ ಪ್ರೀತಿಯನ್ನು ಎರಡು ಕುಟುಂಬಗಳು ಅಷ್ಟೇ ಸಂತೋಷದಿಂದ ಸ್ವೀಕರಿಸಿ ತಮ್ಮ ಮಕ್ಕಳ ನಿಶ್ಚಿತಾರ್ಥ ಮಾಡುವ ಮೂಲಕ ಸ್ನೇಹಿತರಾಗಿದ್ದವರು ಬೀಗರಾಗುತ್ತಾರೆ.

  ಕಥೆಯಲ್ಲಿ ಟ್ವಿಸ್ಟ್

  ಕಥೆಯಲ್ಲಿ ಟ್ವಿಸ್ಟ್

  ಹೀಗೆ ಎಲ್ಲವೂ ಸುಗಮವಾಗಿ ಸಾಗುತ್ತಿದೆ ಎನ್ನುವ ಸಂದರ್ಭದಲ್ಲಿ ಕಥೆಗೆ ಒಂದು ಟ್ವಿಸ್ಟ್ ಸಿಗುತ್ತದೆ. ಡ್ರೈವಿಂಗ್ ಬಾರದಿರುವ ಅನಂತ್ ನಾಗ್ ತನ್ನ ಕಾರಿನ ಡ್ರೈವರ್ ನಿಂದ ಅಪಮಾನಗೊಂಡು ತಾನೇ ಡ್ರೈವಿಂಗ್ ಕಲಿಯಲು ನಿರ್ಧರಿಸುತ್ತಾರೆ. ಈ ನಡುವೆ ಡ್ರೈವಿಂಗ್ ಲೈಸೆನ್ಸ್ ಕೊಡುವ ಆರ್.ಟಿ.ಓ ಆಫೀಸರ್ ಅಚ್ಯುತ್ ಬಗ್ಗೆ 'ಲಂಚ ಕೊಟ್ಟರೆ, ಡ್ರೈವಿಂಗ್ ಬರದಿರುವವರಿಗೂ, ಲೈಸೆನ್ಸ್ ಸಿಕ್ಕಿಬಿಡುತ್ತೆ' ಅಂತ ಅನಂತ್ ತಮಾಷೆಯಾಗಿ ಆಡುವ ಮಾತು ಸೀರಿಯಸ್ಸಾಗುತ್ತದೆ. ನಂತರ ಸರಿಯಾಗಿ ಡ್ರೈವಿಂಗ್ ಬಾರದ ಅನಂತ್ ಫೇಲ್ ಆಗುತ್ತಾರೆ. ಸೋ, ಲೈಸೆನ್ಸ್ ಕ್ಯಾನ್ಸಲ್.

  ನೊಂದುಕೊಂಡ ಅನಂತ್ ದುಡುಕಿನ ನಿರ್ಧಾರ

  ನೊಂದುಕೊಂಡ ಅನಂತ್ ದುಡುಕಿನ ನಿರ್ಧಾರ

  ಸಾವಿರಾರು ಮಕ್ಕಳಿಗೆ ಪಾಠ ಮಾಡಿ ಗೆದ್ದಿರುವ ನಾನು ಈ ಪರೀಕ್ಷೆಯಲ್ಲಿ ಸೋತೆ ಎಂದು ನೊಂದುಕೊಳ್ಳುವ ಅನಂತ್ ಗೆ ತಮ್ಮ ಗೋವಿಂದ ಸಾಥ್ ಕೊಡಲು ಹೋಗಿ ಚಿಕ್ಕದಾಗಿದ್ದ ಸಮಸ್ಯೆ ದೊಡ್ಡದಾಗಿ ಸಣ್ಣ-ಮಕ್ಕಳಂತೆ ಎರಡು ಕುಟುಂಬಗಳು ಕಿತ್ತಾಡುತ್ತಾರೆ. ಮಾತು ವಿಕೋಪಕ್ಕೆ ತಿರುಗಿ ಮಕ್ಕಳಿಬ್ಬರ ನಿಶ್ಚಿತಾರ್ಥ ಮುರಿದು ಬೀಳುವಲ್ಲಿಗೆ ತಲುಪುತ್ತದೆ. ಕೆಲದಿನಗಳು ಕಳೆದ ನಂತರ ದೊಡ್ಡವರಿಗೆ ತಮ್ಮ ತಪ್ಪು ಅರಿವಾಗಿ ಕ್ಷಮೆ ಕೇಳಲು ಹೊರಟಾಗ ಮಕ್ಕಳಾದ ಖುಷಿ ಸೂರಜ್ ನಡುವೆ ತಮ್ಮ ತಂದೆ-ತಾಯಿಯರ ವಿಷಯದಲ್ಲಿ ಭಿನ್ನಾಬಿಪ್ರಾಯ ಮೂಡಿ ಇವರಿಬ್ಬರು ಕಿತ್ತಾಡುತ್ತಾರೆ. ಒಟ್ನಲ್ಲಿ ಎರಡು ಕುಟುಂಬಗಳು ಹಾವು-ಮುಂಗುಸಿ ತರ ಕಿತ್ತಾಡತೊಡುಗುತ್ತಾರೆ. ಅಲ್ಲಿಗೆ ಮಧ್ಯಂತರ.

  ಸೆಕೆಂಡ್ ಹಾಫ್ ಫುಲ್ ಟ್ವಿಸ್ಟ್

  ಸೆಕೆಂಡ್ ಹಾಫ್ ಫುಲ್ ಟ್ವಿಸ್ಟ್

  ಕೋಪಗೊಂಡ ಅನಂತ್ ಮಗಳಿಗೆ ಬೇರೆ ಸಂಬಂಧ ನೋಡುತ್ತಾರೆ, ಇತ್ತ ಖುಷಿ ಕೂಡ ಅಪ್ಪ-ಅಮ್ಮನ ಮಾತು ಮೀರದೇ, ಅವರ ಮನಸ್ಸನ್ನು ನೋಯಿಸಲು ಇಚ್ಛಿಸದೆ ಅಪ್ಪನ ಮಾತಿಗೆ ತಲೆಬಾಗಿ ಬೇರೆ ಮದುವೆಗೆ ಒಪ್ಪಿಕೊಳ್ಳುತ್ತಾಳೆ. ಮುಂದೇನಾಗುತ್ತೆ ಆ ಮದುವೆ ನಡೆಯುತ್ತಾ?, ಮತ್ತೆ ಆ ಎರಡು ಫ್ಯಾಮಿಲಿ ಒಂದಾಗುತ್ತಾ, ಖುಷಿ-ಸೂರಜ್ ಒಂದಾಗ್ತಾರಾ?, ಅಂತ ನಾವು ಹೇಳಲ್ಲ. ನೀವೇ ಹೋಗಿ ನೋಡಿ.

  ಒಂದು ಮದುವೆ ಸುತ್ತ ಸುತ್ತುವ ಕಥೆ

  ಒಂದು ಮದುವೆ ಸುತ್ತ ಸುತ್ತುವ ಕಥೆ

  ಚೊಚ್ಚಲ ನಿರ್ದೇಶಕ ಕವಿರಾಜ್ ಆಕ್ಷನ್-ಕಟ್ ಹೇಳಿರುವ 'ಮದುವೆಯ ಮಮತೆಯ ಕರೆಯೋಲೆ' ಚಿತ್ರದಲ್ಲಿ ನಮ್ಮ ಸುತ್ತ-ಮುತ್ತಲಲ್ಲಿ ಸಾಮಾನ್ಯವಾಗಿ ಕುಟುಂಬಗಳ ನಡುವೆ ನಡೆಯುವ ಕಥೆಯನ್ನೇ ಸಿನಿಮಾವಾಗಿಸಿದ್ದಾರೆ. ಯಾವುದೇ ಫೈಟ್, ಆಕ್ಷನ್ ಇಲ್ಲದ ಸಿನಿಮಾವನ್ನು ಇಡೀ ಫ್ಯಾಮಿಲಿ ಒಟ್ಟಾಗಿ ಕುಳಿತು ನೋಡಬಹುದು. ಎಲ್ಲರೂ ಸಿನಿಮಾದ ಕ್ಲೈಮಾಕ್ಸ್ ಅನ್ನು ಟ್ರ್ಯಾಜಿಡಿ ಮಾಡಿದರೆ ಇವರು ಕಾಮಿಡಿಯಾಗಿ ಮಾಡಿದ್ದಾರೆ. ಕವಿಗಳ ನಿರ್ದೇಶನ ಓಕೆ.

  ಹೊಸ ಪ್ರತಿಭೆ ಸೂರಜ್ ನಟನೆ ಹೇಗಿದೆ?

  ಹೊಸ ಪ್ರತಿಭೆ ಸೂರಜ್ ನಟನೆ ಹೇಗಿದೆ?

  ಮೈಸೂರಿನ ಹುಡುಗ ಮಾಡೆಲ್ ಆಗಿದ್ದ ನಟ ಸೂರಜ್ ಅವರದು ಇದು ಮೊದಲ ಸಿನಿಮಾ. ನೋಡಲು ಕ್ಯೂಟ್ ಆಗಿ ಚಾಕಲೇಟ್ ಹೀರೋ ತರ ಇದ್ದರೂ ಅಭಿನಯದಲ್ಲಿ ಸ್ವಲ್ಪ ಸಪ್ಪೆ.

  ಅಮೂಲ್ಯ ನಟನೆ?

  ಅಮೂಲ್ಯ ನಟನೆ?

  ಯಾವಾಗಲೂ ಚೆಲ್ಲು-ಚೆಲ್ಲಾಗಿ ಆಡುತ್ತಿದ್ದ ಅಮೂಲ್ಯ ಅವರು ಈ ಸಿನಿಮಾದಲ್ಲಿ ಮಾತ್ರ ಸಖತ್ ಗಂಡುಬೀರಿಯಂತೆ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಬುಲೆಟ್ ಓಡಿಸಿ, ಅಣ್ಣಮ್ಮನ ಸ್ಟೆಪ್ ಹಾಕಿ ಕ್ಯೂಟ್ ಆಗಿ ಬಬ್ಲಿ ಬಬ್ಲಿ ಆಗಿ ನಟಿಸಿ ತಮ್ಮ ಅಭಿಮಾನಿಗಳನ್ನು ಮೆಚ್ಚಿಸಿದ್ದಾರೆ.

  ಇನ್ನುಳಿದವರ ಕಥೆ?

  ಇನ್ನುಳಿದವರ ಕಥೆ?

  ಅನಂತ್ ನಾಗ್, ಅಚ್ಯುತ್ ಕುಮಾರ್, ಚಿತ್ರಾ ಶೆಣೈ, ಸಂಗೀತಾ, ಶರತ್ ಲೋಹಿತಾಶ್ವ ಮುಂತಾದವರು ತಮ್ಮ ಪಾತ್ರಗಳನ್ನು ತುಂಬಾ ಚೆನ್ನಾಗಿ ನಿಭಾಯಿಸಿದ್ದಾರೆ. ಅಚ್ಯುತ್ ಅವರು ಉತ್ತರ ಕರ್ನಾಟಕದ ಭಾಷೆಯನ್ನು ಸಖತ್ ಆಗಿ ಮಾತಾಡಿದ್ದಾರೆ. ಚಿಕ್ಕಣ್ಣ ಅವರಂತೂ ಹುಚ್ಚ ವೆಂಕಟ್ ಅವರ 'ನನ್ ಮಗಂದ್' ಡೈಲಾಗ್ ಹೊಡೆದು ತುಂಬಾ ನಗಿಸುತ್ತಾರೆ. ಉಳಿದಂತೆ ಸಾಧುಕೋಕಿಲ, ಶೋಭರಾಜ್ ಮುಂತಾದವರು ಹೀಗೆ ಬಂದು ಹಾಗೆ ಹೋಗುತ್ತಾರೆ.

  ಸಂಗೀತ ಮತ್ತು ತಾಂತ್ರಿಕತೆ

  ಸಂಗೀತ ಮತ್ತು ತಾಂತ್ರಿಕತೆ

  ವಿ.ಹರಿಕೃಷ್ಣ ಅವರ ಸಂಗೀತದಲ್ಲಿ ಮೂಡಿಬಂದಿರುವ ನಾಲ್ಕು ಹಾಡುಗಳಿಗೆ ಫುಲ್ ಮಾರ್ಕ್ಸ್. ಅದರಲ್ಲೂ 'ಹುಡುಗಿ ಕೈಯ ಏಟು' ಹಾಡು ಮತ್ತೆ ಮತ್ತೆ ಗುನುಗುನಿಸುತ್ತದೆ. ಕ್ಯಾಮಾರ ಕೈ ಚಳಕ ತುಂಬಾ ಚೆನ್ನಾಗಿದೆ. ಹಿನ್ನಲೆ ಧ್ವನಿ ರಮೇಶ್ ಅರವಿಂದ್ ಅವರದು ಜೊತೆಗೆ ಹಿನ್ನಲೆ ಸಂಗೀತ ಕೂಡ ಚೆನ್ನಾಗಿ ಮೂಡಿಬಂದಿದೆ.

  ಒಟ್ಟಾರೆ 'ಮದುವೆ' ಹೇಗಿತ್ತು?

  ಒಟ್ಟಾರೆ 'ಮದುವೆ' ಹೇಗಿತ್ತು?

  ಚೊಚ್ಚಲ ನಿರ್ದೇಶನದಲ್ಲಿ ಕವಿರಾಜ್ ಅವರು ಇನ್ನು ಮುಂದೆ ಆಕ್ಷನ್-ಕಟ್ ಹೇಳಬಹುದು ಎಂಬ ಭರವಸೆಯನ್ನು ಮೂಡಿಸಿದ್ದಾರೆ. ಮ್ಯೂಸಿಕಲ್ ಹಿಟ್ ಆಗಿರುವ, ತೂಗುದೀಪ್ ಪ್ರೊಡಕ್ಸನ್ಸ್ ನ 4ನೇ ಸಿನಿಮಾ 'ಮದುವೆಯ ಮಮತೆಯ ಕರೆಯೋಲೆ' ಪಕ್ಕಾ ಫ್ಯಾಮಿಲಿ ಎಂರ್ಟಟೈನರ್ ಜೊತೆಗೆ ಕಾಮಿಡಿ ಚಿತ್ರ. ಬಹಳ ಶಾಂತವಾಗಿ ಸಾಗುವ ಸಿನಿಮಾ ಸೌಂಡ್, ಫೈಟ್, ಆಕ್ಷನ್ ಸಿನಿಮಾಗಳನ್ನು ಆವಾಯ್ಡ್ ಮಾಡುವವರಿಗೆ ಹೇಳಿ ಮಾಡಿಸಿದ್ದು. ಈ ವೀಕೆಂಡ್ ಫ್ರೀ ಇದ್ದರೆ ಒಮ್ಮೆ ನೋಡಿ ಬನ್ನಿ.

  English summary
  Kannada Movie 'Maduveya Mamatheya Kareyole' Review. Kannada Actress Amoolya, Kannada Actor Sooraj Gowda in the lead role. The movie is directed by debut director Kaviraj.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X