»   » ಕಥೆ ವ್ಯಥೆ, ಕಷ್ಟ ಸುಖಗಳ ಡಿಕ್ಷನರಿಯೇ ಭಟ್ಟರ 'ಪರಪಂಚ'!

ಕಥೆ ವ್ಯಥೆ, ಕಷ್ಟ ಸುಖಗಳ ಡಿಕ್ಷನರಿಯೇ ಭಟ್ಟರ 'ಪರಪಂಚ'!

By: ಸುನೀತಾ ಗೌಡ
Subscribe to Filmibeat Kannada

ಮನೋರಂಜನೆಯಿಂದ ಕೂಡಿರುವ 'ಪರಪಂಚ'ದಲ್ಲಿ ಒಂದು ಪ್ರಪಂಚನೇ ಇದೆ. ಮೋಸ, ಕಥೆ-ವ್ಯಥೆ, ಸುಖ-ದುಃಖ, ಅಳು-ನಗು ಹೀಗೆ ಒಂಥರಾ ಭಾವನೆಗಳ ಡಿಕ್ಷನರಿನೇ ಇರುವ 'ಪರಪಂಚ' ನಿಮ್ಮನ್ನು ಚಿತ್ರಮಂದಿರಕ್ಕೆ ಸ್ವಾಗತಿಸುತ್ತದೆ.


ಮನೆ ಹಾಗೂ ತಂದೆ-ತಾಯಿ ಬೇಡ ನೀವು ಕೊಡಿಸಿದ ಬಟ್ಟೆಯೂ ಬೇಡ ಎಂದು ಬೆತ್ತಲೆಯಾಗಿ ಪಟ್ಟಣಕ್ಕೆ ಬರುವ ಬೊಗಳೆ ಸೀನ (ದಿಗಂತ್) 'ಪರಪಂಚ' ಎಂಬ ಹೊಸ ಪ್ರಪಂಚಕ್ಕೆ ಎಂಟ್ರಿ ಕೊಡುತ್ತಾನೆ.

ತಂದೆ ಮಾಡಿರುವ ತಪ್ಪಿನಿಂದ ಮನನೊಂದು ದಿನನಿತ್ಯ ಪಶ್ಚಾತ್ತಾಪ ಪಡುವ ಸೀನು (ದಿಗಂತ್) 'ಪರಪಂಚ' ಎಂಬ ಬಾರ್ ಅಂಡ್ ರೆಸ್ಟೋರೆಂಟ್ ಒಂದರಲ್ಲಿ ಕೆಲಸ ಸೇರುತ್ತಾನೆ ಅಲ್ಲಿಂದ ಕಥೆ ಆರಂಭ. ಮುಂದೇನಾಗುತ್ತೇ ಅನ್ನೋದನ್ನ ಕೆಳಗಿನ ಸ್ಲೈಡ್ಸ್ ಗಳಲ್ಲಿ ಓದಿ..[ಯಾವುದೇ ಕಟ್ಸ್ ಇಲ್ಲದೆ ಸೆನ್ಸಾರ್ ಪಾಸ್ ಆದ ಭಟ್ರ 'ಪರಪಂಚ']


Rating:
2.5/5

ಚಿತ್ರ : 'ಪರಪಂಚ'
ನಿರ್ಮಾಣ : ಯೋಗರಾಜ್ ಭಟ್
ಕಥೆ-ಚಿತ್ರಕಥೆ-ನಿರ್ದೇಶನ : ಕ್ರಿಷ್ ಜೋಷಿ
ಛಾಯಾಗ್ರಹಣ : ಸಂತೋಷ್ ರೈ ಪಾತಾಜೆ
ಸಂಗೀತ : ವೀರ್ ಸಮರ್ಥ್
ಸಂಕಲನ : ಸುರೇಶ್
ತಾರಾಗಣ : ದಿಗಂತ್, ಭಾವನಾ ರಾವ್, ರಾಗಿಣಿ ದ್ವಿವೇದಿ, ಅನಂತ್ ನಾಗ್, ಯೋಗರಾಜ್ ಭಟ್, ರಂಗಾಯಣ ರಘು, ಅನಿತಾ ಭಟ್, ವಿ.ಮನೋಹರ್, ವಿಕಾಸ್ ಮತ್ತು ಇತರರು
ಬಿಡುಗಡೆ : ಜನವರಿ 15


ಡಿಫರೆಂಟ್ ಹಾಡುಗಳ ಮೂಲಕ ಇಡೀ ಗಾಂಧಿನಗರದ ಮೂಲಕ ಸುದ್ದಿಯಾಗಿದ್ದ ಯೋಗರಾಜ್ ಭಟ್ರ ನಿರ್ಮಾಣದಲ್ಲಿ ಮೂಡಿಬಂದಿರುವ 'ಪರಪಂಚ' ಸಿನಿಮಾ ಇಂದು (ಜನವರಿ 15) ಸಂಕ್ರಾಂತಿ ಹಬ್ಬಕ್ಕೆ ಭರ್ಜರಿಯಾಗಿ ರಿಲೀಸ್ ಆಗಿದೆ. ಚಿತ್ರದ ಸಂಪೂರ್ಣ ವಿಮರ್ಶೆ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..


'ಪರಪಂಚ'ದೊಂದಿಗೆ ಪಯಣ

ತಂದೆ ಮಾಡಿದ ತಪ್ಪಿನಿಂದ ಮನನೊಂದು ತನ್ನೂರು ಬಿಟ್ಟು ಬೆತ್ತಲೆಯಾಗಿ ಪಟ್ಟಣ ಸೇರುವ ಬೊಗಳೆ ಸೀನು (ದಿಗಂತ್) ಗೆ ಮಾಜಿ ಸೈನಿಕ ಕಲಿಪಿಲಿ (ಯೋಗರಾಜ್ ಭಟ್) ಸಿಗುತ್ತಾರೆ. ಅಲ್ಲಿಂದ ಬಟ್ಟೆ ಹಾಕಿಕೊಳ್ಳುವ ಸೀನು ಕೆಲಸ ತೆಗೆಸಿಕೊಡಿ ಎಂದು ಕಲಿಪಿಲಿಗೆ ಕೇಳಿಕೊಳ್ಳುತ್ತಾನೆ. ಆವಾಗ ಕಲಿಪಿಲಿ, ಸೀನುವನ್ನು 'ಪರಪಂಚ' ಬಾರ್ ಗೆ ತಂದು ಬಿಟ್ಟು ಹೋಗುತ್ತಾರೆ. ಅಲ್ಲಿಂದ ಸೀನು ಜರ್ನಿ ಆರಂಭ, ಬಾರ್ ನಲ್ಲಿ ವೈಟರ್ ಆಗಿ ಎಲ್ಲರ ಕಷ್ಟ-ಸುಖಗಳನ್ನು ಹಂಚಿಕೊಳ್ಳುವ ಒಬ್ಬ ಆಪತ್ಪಾಂಧವ ಆಗುತ್ತಾನೆ.[ಭಟ್ರ ಸಾಹಿತ್ಯಕ್ಕೆ ಗಾನ ಸುಧೆ ಹರಿಸಿದ ಹುಚ್ಚ ವೆಂಕಟ್.!]


ತಿಪ್ಪೆ ಸ್ವಾಮಿ (ರಂಗಾಯಣ ರಘು)

ಚಿಕ್ಕಂದಿನಿಂದಲೇ ಸಂಬಂಧಗಳ ಬಗ್ಗೆ ರೋಸಿ ಹೋಗಿರುವ ತಿಪ್ಪೆ ಸ್ವಾಮಿ (ರಂಗಾಯಣ ರಘು) ಒಬ್ಬ ಸುಪಾರಿ ಕಿಲ್ಲರ್ ಆಗಿ ಬೆಳೆದಿರುತ್ತಾನೆ. ಅವನು 'ಪರಪಂಚ'ಕ್ಕೆ ಕಾಲಿಡಲು ಕಾರಣ ಒಬ್ಬನನ್ನು ಕೊಲ್ಲಲು ಸುಪಾರಿ ತೆಗೆದುಕೊಂಡಿರುತ್ತಾನೆ. ಬರೀ 'ಯಾಕೆ ಯಾಕೆ' 'ಟೈಮ್ ಎಷ್ಟು' ಎಂದು ಕೇಳುತ್ತಾ, ಕೇಳುತ್ತಾ, ತನ್ನ ಇಡೀ ಜೀವನದ ವೃತ್ತಾಂತವನ್ನು ಹೇಳುತ್ತಾ, ಕಲಿಪಿಲಿಯ ಜೀವ ಹಿಂಡುತ್ತಿರುತ್ತಾನೆ.


'ಪರಪಂಚ'ದಲ್ಲಿ ಇಡೀ ಪ್ರಪಂಚಾನೇ ಇದೆ

ಭಟ್ಟರ 'ಪರಪಂಚ'ದಲ್ಲಿ ಇಡೀ ಪ್ರಪಂಚಾನೇ ಇರುತ್ತದೆ. ಇಲ್ಲಿ ನೊಂದವರು, ಬೆಂದವರು, ಸಮಸ್ಯೆ ಇದ್ದವರು, ಲವ್ ಫೈಲ್ಯೂರ್ ಆದವರು, ಎಲ್ಲರೂ ಇರುತ್ತಾರೆ. ಇವರೆಲ್ಲರ ಸಮಸ್ಯೆಗೆ ಪರಿಹಾರ ಒದಗಿಸೋದು ನಮ್ಮ ವೈಟರ್ ಸೀನು. ಚೆಸ್ ಬೋರ್ಡ್ ಮಾದರಿಯ ಬಟ್ಟೆ ಹಾಕಿಕೊಂಡು ವಿಚಿತ್ರವಾಗಿರುವ ಕಲಿಪಿಲಿ, ಗನ್ ಹಿಡಿದುಕೊಂಡು ತಲೆಕೆಟ್ಟು ಹುಚ್ಚನಾಗಿರುವ ಸುಪಾರಿ ಕಿಲ್ಲರ್ ತಿಪ್ಪೆ, ಲವ್ ಫೈಲ್ಯೂರ್ ಆಗಿ ಸಾವಿಗೊಂದು ಹಂಸ ಗೀತೆ ಹಾಡಲು ಹೊರಟಿರುವ ಆಟೋ ಕವಿ, ಪರಿಸ್ಥಿತಿಯ ಕೈಗೊಂಬೆ ಆಗಿ ಬಾರ್ ಡ್ಯಾನ್ಸರ್ ಆಗಿರುವ ಕಸ್ತೂರಿ (ರಾಗಿಣಿ ದ್ವಿವೇದಿ), ಗುರುಗಳಾದ ಅನಂತ್ ನಾಗ್, ಶ್ರೀಮಂತ ಉದ್ಯಮಿಯ ಕುಟುಂಬ ಸಮಸ್ಯೆ, ಕೆಲಸ ಕಳೆದುಕೊಂಡವರ ಸಮಸ್ಯೆ, ಆಫೀಸ್ ನಲ್ಲಿ ಬಾಸ್ ಗಳಿಂದ ಕಿರುಕುಳ ಅನುಭವಿಸುವ ಉದ್ಯೋಗಿಯೊಬ್ಬಳ ಸಮಸ್ಯೆ. ಎಲ್ಲರಿಗೂ ಪರಿಹಾರ ವೈಟರ್ ಸೀನು.


ಎಲ್ಲರಿಗೆ ಪರಿಹಾರ ಆಗಿರುವ ಸೀನು ಬೆನ್ನಹಿಂದೆ ಸಾವು

ಈ 'ಪರಪಂಚ'ದಲ್ಲಿ ಎಲ್ಲರ ಸಮಸ್ಯೆಗೆ ಕಿವಿಯಾಗುವ ಹಾಗೂ ಹೆಗಲು ಕೊಡುವ ಸೀನು ಬೆನ್ನಹಿಂದೆ ಸಾವು ಬಂದು ನಿಂತಿರುತ್ತದೆ. ಅದನ್ನು ತಿಳಿಯದ ಮುಗ್ದ ಬಡಪಾಯಿ ಸೀನು ಅತ್ತವರ ಕಣ್ಣೀರು ಒರೆಸಿ, ಎಲ್ಲರ ಮನಸ್ಸಿನ ನೋವಿಗೆ ಮುಲಾಮು ಹಚ್ಚುತ್ತಿರುತ್ತಾನೆ. 'ಪರಪಂಚ' ಬಾರ್ ನಲ್ಲಿ ಎಲ್ಲರ ಸಮಸ್ಯೆಯನ್ನು ಸೀನು ಹೇಗೆ? ಬಗೆಹರಿಸುತ್ತಾನೆ, ಆತನನ್ನು ಕೊಲ್ಲಲು ಹೊಂಚು ಹಾಕಿರುವವರು ಯಾರು? ತನ್ನ ಬೆನ್ನಹಿಂದೆ ಸಾವು ಬೆನ್ನಟ್ಟಿ ಬರುತ್ತಿದೆ ಎಂದು ಸೀನುಗೆ ಗೊತ್ತಾಗೋದು ಯಾವಾಗ? ಮುಂತಾದವುಗಳನ್ನು ತಿಳಿಯಲು ಥಿಯೇಟರ್ ಗೆ ಭೇಟಿ ಕೊಡಿ.


ವೆಜ್ ಅಂಡ್ ನಾನ್ ವೆಜ್ ನಲ್ಲಿ ಫನ್ನು ಕಾಣೆ

ಯೋಗರಾಜ್ ಭಟ್ ಮತ್ತು ರಂಗಾಯಣ ರಘು ಅವರ ಕಾಂಬಿನೇಷನ್ ಸೂಪರ್. ಜೊತೆಗೆ ಅವರಿಬ್ಬರ ಮನರಂಜನೆ ಬಿಟ್ಟರೆ ಚಿತ್ರದಲ್ಲಿ ಇನ್ನೆಲ್ಲೂ ಮನರಂಜನೆ ಇಲ್ಲ. ಬರೀ ಡೈಲಾಗ್ ಗಳೇ ಜಾಸ್ತಿ ಇರುವುದರಿಂದ ಪ್ರೇಕ್ಷಕರು ತಲೆ ಕೆರೆದುಕೊಳ್ಳಬೇಕು, ಆ ಥರಾ ಸಿನಿಮಾ ಮಾಡಿದ್ದಾರೆ. ಒಟ್ನಲ್ಲಿ 'ಪರಪಂಚ'ದಲ್ಲಿ ಫನ್ನು ಅನ್ ಲಿಮಿಟೆಡ್ ಅನ್ನೋ ಮಾತು ಮಾತ್ರ ಸ್ವಲ್ಪ ಸುಳ್ಳಾಗುತ್ತದೆ. ಒಂದೊಂದು ಕಡೆ ಕಥೆ ಅರ್ಥವಾಗದೇ ಪ್ರೇಕ್ಷಕರು ಕನ್ ಫ್ಯೂಶನ್ ಆಗುತ್ತಾರೆ.


ವೆಂಕಟ್ ಫುಲ್ ಮಿಂಚಿಂಗ್

'ಹುಟ್ಟಿದ ಊರನ್ನು ಬಿಟ್ಟು ಬಂದಾ ಮ್ಯಾಲೆ' ಅಂತ 'ಫೈರಿಂಗ್ ಸ್ಟಾರ್' ವೆಂಕಟ್ ರಿಕ್ಷಾ ಹತ್ತಿ ಬಂದಾಗ ಮಾತ್ರ ಥಿಯೇಟರ್ ಫುಲ್ ಶಿಳ್ಳೆ, ಕೇಕೆ ಸದ್ದು. ಒಟ್ನಲ್ಲಿ ಫೈರಿಂಗ್ ಸ್ಟಾರ್ ಒಂದು ಹಾಡಿನ ಮೂಲಕ ಪ್ರೇಕ್ಷಕರಿಗೆ 'ಢಗ ಢಗ' ಅಂತ ಫುಲ್ ಫೈರಿಂಗ್ ಮಾಡಿದ್ದಾರೆ.


ಬೋಲ್ಡ್ ಆಗಿ ಕಾಣಿಸಿಕೊಂಡಿರುವ ರಾಗಿಣಿ

ಚಿತ್ರದಲ್ಲಿ ನಟಿ ರಾಗಿಣಿ ದ್ವಿವೇದಿ ಅವರು ಮಾತ್ರ ಸಖತ್ ಬೋಲ್ಡ್ ಆಗಿ ಬಾರ್ ಡ್ಯಾನ್ಸರ್ ಕಸ್ತೂರಿ ಪಾತ್ರದಲ್ಲಿ ಮೈ ಚಳಿ ಬಿಟ್ಟು ನಟಿಸಿದ್ದಾರೆ.. 'ಬಾಯಿ ಬಸಳೆ ಸೊಪ್ಪು, ಈರುಳ್ಳಿ, ಆಲೂಗೆಡ್ಡೆ' ಅಂತ ಐಟಂ ಸಾಂಗ್ ಮೂಲಕ ಎಂಟ್ರಿಯಾಗುವ ರಾಗಿಣಿ ಚಿತ್ರದುದ್ದಕ್ಕೂ ಅಲ್ಲಲ್ಲಿ ಮಿಂಚಿದ್ದಾರೆ.


ಯೋಗರಾಜ್ ಭಟ್, ದಿಗಂತ್, ರಂಗಾಯಣ ರಘು ನಟನೆ?

'ದ್ಯಾವ್ರೆ' ಚಿತ್ರದ ನಂತರ ನಿರ್ಮಾಪಕ ಕಮ್ ನಿರ್ದೇಶಕ ಯೋಗರಾಜ್ ಭಟ್ಟರು ಮತ್ತೆ 'ಪರಪಂಚ' ಮೂಲಕ ತೆರೆ ಮೇಲೆ ಭರ್ಜರಿಯಾಗಿ ಮಿಂಚಿದ್ದಾರೆ. ಚಿತ್ರದಲ್ಲಿ ಕಲಿಪಿಲಿ ಆಗಿ ರಂಗಾಯಣ ರಘು ಜೊತೆ ಸಖತ್ತಾಗಿ ನಟಿಸಿದ್ದು, ಪ್ರೇಕ್ಷಕರಿಗೆ ಇವರಿಬ್ಬರ ಮನೋರಂಜನೆ ಒಂಥರಾ ಕಚಗುಳಿ ಇಟ್ಟಂತ್ತಾಗುತ್ತದೆ. ಚಾಕ್ಲೇಟ್ ಹೀರೋ ದಿಗಂತ್ ಈ ಚಿತ್ರದ ಮುಖ್ಯ ಪಾತ್ರಧಾರಿಯಾಗಿದ್ದು, ಎಂದಿನಂತೆ ತಮ್ಮ ಅಭಿನಯದಿಂದ ಪ್ರೇಕ್ಷಕರ ಮನಗೆದ್ದಿದ್ದಾರೆ. ರಂಗಾಯಣ ತಮ್ಮ ನಟನೆಯಿಂದ ಪ್ರೇಕ್ಷಕರ ಮನಸ್ಸಲ್ಲಿ ಕೊನೇ ತನಕ ಉಳಿಯುತ್ತಾರೆ.
ಇನ್ನುಳಿದವರು ಕಥೆ ಏನು?

ಇನ್ನುಳಿದಂತೆ ವಿ.ಮನೋಹರ್ ಜ್ಯೊತಿಷಿ ಪಾತ್ರದಲ್ಲಿ, ಪ್ರೀತ್ಸು ಅಂತ ದಿಗಂತ್ ಹಿಂದೆ ಬೀಳುವ 'ಗಾಳಿಪಟ' ಖ್ಯಾತಿಯ ಭಾವನಾ ರಾವ್, ಪ್ರಶಾಂತ್ ವೈಟರ್ ಪಾತ್ರದಲ್ಲಿ, ಅನಿತಾ ಭಟ್ ಕಿರುಕುಳ ಅನುಭವಿಸುವ ಉದ್ಯೋಗಿಯಾಗಿ, ಗುರುಗಳಾಗಿ 'ನಾಲ್ಕಣೆ', ಪಾತ್ರದಲ್ಲಿ ಅನಂತ್ ನಾಗ್ ಎಲ್ಲರೂ ತೆರೆಯ ಮೇಲೆ ಹೆಚ್ಚು ಹೊತ್ತು ಇಲ್ಲದಿದ್ದರೂ ತಮ್ಮ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.


ತಾಂತ್ರಿಕತೆ

ಇಡೀ ಚಿತ್ರದ ಚಿತ್ರೀಕರಣ ಒಂದು ಬಾರ್ ನಲ್ಲಿ ನಡೆದಿರುವುದಿರಂದ ಇಲ್ಲಿ ಲವ್ ರೊಮ್ಯಾನ್ಸ್ ಗೆ ಅಷ್ಟಾಗಿ ಜಾಗ ಇಲ್ಲ. ವಿದೇಶ ಅದೂ-ಇದೂ ಅಂತ, ಅಲ್ಲಿ ಇಲ್ಲಿ ಅಂತ ಹೊರಗಡೆ ಎಲ್ಲೂ ಶೂಟಿಂಗ್ ಮಾಡಿಲ್ಲ. ಇದ್ದದ್ದನ್ನೇ ಚೆನ್ನಾಗಿ ಬಳಸಿಕೊಂಡಿದ್ದಾರೆ ಸಿನಿಮಾಟೋಗ್ರಾಫರ್ ಸಂತೋಷ್ ರೈ. ಇಡೀ ಒಂದು ಬಾರ್ ನ ಸುತ್ತ ಸುತ್ತುವ ಕಥೆಯೇ 'ಪರಪಂಚ'.
ಸಂಗೀತ

'ಬಾಯಿ ಬಸಳೆ ಸೊಪ್ಪು', 'ಹೆಲ್ತ್ ಇಂಪಾರ್ಟೆಂಟು', 'ಸಾವಿಗೊಂದು ಹಂಸಗೀತೆ', 'ಹುಟ್ಟಿದ ಊರನ್ನು' ಹಾಡುಗಳು ಹಿಟ್ ಆಗಿದ್ದು ವೀರ್ ಸಮರ್ಥ್ ಅವರಿಗೆ ಫುಲ್ ಮಾರ್ಕ್ಸ್ ಕೊಡಬಹುದು. ಅಂತೂ ಎಲ್ಲಾ ಹಾಡುಗಳಿಗೆ ಸಾಹಿತ್ಯ ಬರೆದಿರುವ ಭಟ್ರ ಮಂಡೆ ಅದ್ಭುತ ಮಾರ್ರೆ...


ಒಟ್ಟಾರೆ 'ಪರಪಂಚ'

'ಗಾಂಧಿ ಸ್ಮೈಲ್ಸ್' ಸಿನಿಮಾ ಮಾಡಿದ್ದ ನಿರ್ದೇಶಕ ಕ್ರಿಷ್ ಜೋಷಿ ಅವರು 'ಪರಪಂಚ'ದಲ್ಲಿ ಇಡೀ ಪ್ರಪಂಚಾನೇ ತಂದ್ರು ಕೂಡ ಪ್ರೇಕ್ಷಕರಿಗೆ ಮನೋರಂಜನೆ ಕೊಡುವಲ್ಲಿ ಸ್ವಲ್ಪ ಎಡವಿದ್ದಾರೆ. 'ಕುಡಿದು' ಆರೊಗ್ಯ ಹಾಳು ಮಾಡಿಕೊಳ್ಳಬೇಡಿ ಅಂತ ಸಂದೇಶ ಕೊಡಲು ಚಿತ್ರ ಮುಗಿಯುವಲ್ಲಿವರೆಗೂ ಪ್ರೇಕ್ಷಕರನ್ನು ಕಾಯಿಸಿದ್ದಾರೆ. ಎಲ್ಲರನ್ನೂ ಒಂದೇ 'ಪರಪಂಚ'ದಲ್ಲಿ ಕೂಡಿ ಹಾಕಿ ಪ್ರೇಕ್ಷಕರ ಮನಸ್ಸನ್ನು ಗೊಬ್ಬರ ಮಾಡಿದ್ದಾರೆ. ಆದ್ರೂ ಭಟ್ರು ಮತ್ತು ರಂಗಾಯಣ ರಘು ಇರೋದ್ರಿಂದ ಒಂದು ಬಾರಿ ನೋಡಲಡ್ಡಿಯಿಲ್ಲ. ಫ್ರೀ ಇದ್ದರೆ ಈ ವೀಕೆಂಡ್ ನಲ್ಲಿ ಸಿನಿಮಾ ನೋಡಿ..
English summary
Kannada Movie 'Parapancha' Review. Kannada actor Diganth, Yogesh, Kannada actress Ragini Dwivedi in the lead role. The movie is directed by Krish Joshi.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada