»   » ಚಿತ್ರ ವಿಮರ್ಶೆ : ರಂಗುರಂಗಿನ 'ರಿಂಗ್ ರೋಡ್' ಜರ್ನಿ

ಚಿತ್ರ ವಿಮರ್ಶೆ : ರಂಗುರಂಗಿನ 'ರಿಂಗ್ ರೋಡ್' ಜರ್ನಿ

Posted By:
Subscribe to Filmibeat Kannada

'ಈ ಕಥೆಯಲ್ಲಿ ಬರುವ ಎಲ್ಲಾ ಪಾತ್ರಗಳು, ಸನ್ನಿವೇಶಗಳು ಕೇವಲ ಕಾಲ್ಪನಿಕ. ಯಾವುದೇ ವ್ಯಕ್ತಿಗೆ ಅಥವಾ ನಿಜ ಘಟನೆಗೆ ಸಂಬಂಧಿಸಿರುವುದಿಲ್ಲ' ಅಂತ ಚಿತ್ರದ ಆರಂಭದಲ್ಲೇ ವಿಶೇಷ ಸೂಚನೆ ಸಿಗುತ್ತದೆ.


ಹೀಗಿದ್ದರೂ, 'ರಿಂಗ್ ರೋಡ್' ನಲ್ಲಿ ನಡೆದ ಕ್ರೈಂ ಸ್ಟೋರಿಯೇ ಚಿತ್ರದ ಜೀವಾಳ. ಅದನ್ನ ನಿರ್ದೇಶಕಿ ಪ್ರಿಯಾ ಬೆಳ್ಳಿಯಪ್ಪ ತಮ್ಮದೇ ಶೈಲಿಯಲ್ಲಿ ತೆರೆಮೇಲೆ ತೋರಿಸಿದ್ದಾರೆ.

ನಿಜ ಘಟನೆಯ ಸತ್ಯಾಸತ್ಯತೆ ಕೆದಕದೆ, 'ಕ್ರಿಮಿನಲ್ ಬ್ಯೂಟಿ'ಯೊಬ್ಬಳ ಮಾನಸಿಕ ತುಮುಲಗಳು, ಹರೆಯದ ಹುಚ್ಚು ಕೋಡಿ ಮನಸ್ಸಿನ ಹಲವಾರು ಮುಖಗಳು 'ರಿಂಗ್ ರೋಡ್' ಪಯಣದಲ್ಲಿ ಅನಾವರಣವಾಗಿದೆ.


'ರಿಂಗ್ ರೋಡ್' ಚಿತ್ರದ ಸಂಪೂರ್ಣ ವಿಮರ್ಶೆಗಾಗಿ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ......


Rating:
3.0/5

ಚಿತ್ರ - 'ರಿಂಗ್ ರೋಡ್'
ನಿರ್ಮಾಣ - ರಂಜಿನಿ ರವೀಂದ್ರ ದಾಸ್
ನಿರ್ದೇಶನ - ಪ್ರಿಯಾ ಬೆಳ್ಳಿಯಪ್ಪ
ಸಂಗೀತ ನಿರ್ದೇಶಕ - ವಾಣಿ ಹರಿಕೃಷ್ಣ
ಸಾಹಿತ್ಯ, ಸಂಭಾಷಣೆ - ರೇಖಾ ರಾಣಿ
ಛಾಯಾಗ್ರಹಣ - ರೇಶ್ಮಿ ಸರ್ಕಾರ್
ಸಂಕಲನ - ಮರಿಯಾನ್ ಡಿಸೋಜ
ತಾರಾಗಣ - ಖುಷಿ, ದುನಿಯಾ ವಿಜಯ್, ನಿಕಿತಾ ತುಕ್ರಾಲ್, ಅವಿನಾಶ್, ಮಾಳವಿಕ ಅವಿನಾಶ್, ನೀತು ಮತ್ತು ಇತರರು.
ಬಿಡುಗಡೆ - ಅಕ್ಟೋಬರ್ 22, 2015


'ರಿಂಗ್ ರೋಡ್'ನಲ್ಲಿ ನಡೆಯುವುದೇನು?

ಹೆಣ್ಮಕ್ಕಳೆಲ್ಲಾ ಸೇರಿ ಒಂದು ಸಿನಿಮಾ ಮಾಡ್ಬೇಕು ಅಂತ ಹೊರಡುವ ಚಿತ್ರತಂಡಕ್ಕೆ 'ಆಕ್ಸಿಡೆಂಟ್' ಆಗಿ ಸಿಗುವ ರಕ್ತಸಿಕ್ತ ಕಥೆ ಕ್ರಿಮಿನಲ್ ಬ್ಯೂಟಿ ಸುಮಾಳದ್ದು.


ಯಾರೀ ಸುಮ?

ಖ್ಯಾತ ಕ್ರಿಮಿನಲ್ ಲಾಯರ್ ಪುತ್ರಿ ಸುಮಾ. ಸುರ ಸುಂದರಿ. ಆಕೆಯ ಸೌಂದರ್ಯಕ್ಕೆ ಮಾರುಹೋಗದ ಪಡ್ಡೆ ಹುಡುಗರಿಲ್ಲ. ಇದೇ ಕಾರಣಕ್ಕೆ ಸುಮಾಗೆ ಬೇಗ ಮದುವೆ ಮಾಡ್ಬೇಕು ಅಂತ ಆಕೆಯ ಕುಟುಂಬ ನಿರ್ಧರಿಸುತ್ತೆ. ಅದರಂತೆ ನಿಶ್ಚಿತಾರ್ಥವೂ ನಡೆಯುತ್ತೆ. ಅದರ ಬೆನ್ನಲ್ಲೇ ಒಂದು ಮರ್ಡರ್ ಕೂಡ ಆಗುತ್ತೆ. ಅದಕ್ಕೆ ಕಾರಣ ಸುಮಾ ಮತ್ತು ಆಕೆಯ ಖುಷಿ..!


ಖುಷಿ ಯಾರು?

ಈ ಸಿನಿಮಾದಲ್ಲಿ ಹೆಣ್ಣೊಬ್ಬಳ ಮಾನಸಿಕ ತುಮುಲ, ಆಕೆಯ ಇಚ್ಛೆ, ವಯೋಸಹಜ ಕನಸು, ಬಯಕೆ, ಕನವರಿಕೆಗಳನ್ನ 'ರಂಗುರಂಗಾಗಿ' ತೆರೆಮೇಲೆ ತೋರಿಸಲಾಗಿದೆ. ಅಪ್ಪ-ಅಮ್ಮನ ಆಜ್ಞೆ ಮೀರಿ ನಡೆಯದ ಸಭ್ಯ ಹುಡುಗಿ ಮಾನಸಿಕ ಸಂಘರ್ಷದಿಂದ ದುರ್ಘಟನೆಗೆ ಹೇಗೆ ನಾಂದಿ ಹಾಡ್ತಾಳೆ ಅನ್ನೋದೇ ಚಿತ್ರದ ಪ್ರಮುಖ ಅಂಶ.


ದುನಿಯಾ ವಿಜಯ್ ಲೈಫ್ ಸ್ಟೋರಿ ಇದ್ಯಾ?

'ರಿಂಗ್ ರೋಡ್' ಚಿತ್ರದಲ್ಲಿ ದುನಿಯಾ ವಿಜಯ್ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಪ್ರಾಣಕ್ಕಿಂತ ಹೆಚ್ಚಾಗಿ ಹೆಂಡತಿಯನ್ನ ಪ್ರೀತಿಸುವ 'ಹೆಂಡತಿ ಗಂಡ'ನಾಗಿ ದುನಿಯಾ ವಿಜಯ್ ಇದ್ರೆ, ಅವರ ಪತ್ನಿಯಾಗಿ ನಿಕಿತಾ ಇದ್ದಾರೆ. ಸುಮಾಗೂ, ವಿಜಯ್ ದಾಂಪತ್ಯ ಬೀದಿಗೆ ಬರುವುದಕ್ಕೆ ಲಿಂಕ್ ಏನು ಅಂತ ತಿಳಿದುಕೊಳ್ಳುವ ಕುತೂಹಲ ನಿಮಗೆ ಇದ್ದರೆ, 'ರಿಂಗ್ ರೋಡ್' ಚಿತ್ರವನ್ನ ನೀವು ಥಿಯೇಟರ್ ನಲ್ಲಿ ನೋಡಿ....


'ಸುಮಾ' ನಟನೆ ಹೇಗಿದೆ?

ಸುಮಾ ಪಾತ್ರಧಾರಿ ಖುಷಿ ದಂತದ ಬೊಂಬೆ. ಮುಖದಲ್ಲಿ ಭಾವನೆಗಳು ಕೊಂಚ ಕಮ್ಮಿ ಅನ್ನೋದು ಬಿಟ್ಟರೆ, ಖುಷಿ ಪಡ್ಡೆ ಹೈಕ್ಳ ನಿದ್ದೆಗೆಡಿಸುವುದು ಗ್ಯಾರೆಂಟಿ. ಅಷ್ಟರಮಟ್ಟಿಗೆ ಅವರ ನಟನೆಗಿಂತ ಆಕೆಯ 'ಗ್ಲಾಮರ್' ಎಲ್ಲರ ಕಣ್ಣುಕುಕ್ಕುತ್ತೆ.


ಉಳಿದವರ ಕಥೆ?

ದುನಿಯಾ ವಿಜಯ್ ನಟನೆ ಎಂದಿನಂತಿದೆ. ನಿಕಿತಾ ಕನ್ನಡವನ್ನ ಇನ್ನೂ ಸ್ಪಷ್ಟವಾಗಿ ಮಾತನಾಡಬಹುದಿತ್ತು. ನೀತು, ಪಟ್ರೆ ಅಜಿತ್, ಅವಿನಾಶ್, ಮಾಳವಿಕಾ ಅವಿನಾಶ್, ಚಿತ್ರಾ ಶೆಣೈ ಕೊಟ್ಟ ಪಾತ್ರವನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.


ಸ್ಟಾರ್ ಅಟ್ರ್ಯಾಕ್ಷನ್

ಶ್ರೀನಗರ ಕಿಟ್ಟಿ, ಸಂಜನಾ, ಲವ್ಲಿ ಸ್ಟಾರ್ ಪ್ರೇಮ್ 'ರಿಂಗ್ ರೋಡ್' ಸಿನಿಮಾದ ಸ್ಟಾರ್ ಅಟ್ರ್ಯಾಕ್ಷನ್. ಹೀಗೆ ಬಂದು ಹಾಗೆ ಹೋಗುವ ಪಾತ್ರಗಳಾದರೂ, 'ರಿಂಗ್ ರೋಡ್'ನಲ್ಲಿ ಎಲ್ಲರೂ ನೆನಪಲ್ಲಿ ಉಳಿಯುತ್ತಾರೆ.


ನಿಧಾನ ಗತಿ ಸಾಗುವ 'ರಿಂಗ್ ರೋಡ್' ಪಯಣ

ಆರಂಭದಿಂದ ಹಿಡಿದು ಕೊನೆಯವರೆಗೂ 'ರಿಂಗ್ ರೋಡ್' ಪಯಣ ಸ್ವಲ್ಪ ಸ್ಲೋ. ಸಂಕಲನ ಕೆಲಸ ಸ್ವಲ್ಪ ಚುರುಕಾಗಿದ್ದಿದ್ದರೆ, 'ರಿಂಗ್ ರೋಡ್' ಹೆಚ್ಚು ರೋಮಾಂಚನಕಾರಿಯಾಗಿರುತ್ತಿತ್ತೇನೋ.


ಎಲ್ಲಾ ಇದ್ದೂ ಇಲ್ಲದಂತೆ.!

'ರಿಂಗ್ ರೋಡ್' ಸಿನಿಮಾದಲ್ಲಿ ಪ್ರೀತಿಯ ಜೊತೆಗೆ ಕ್ರೈಂ ಕಥೆ ಇದೆ. ಹೀಗಿದ್ದರೂ, ಸಿನಿಮಾದಲ್ಲಿ ಹೆಚ್ಚು ಥ್ರಿಲ್ಲಿಂಗ್ ಅಂಶಗಳು ಇಲ್ಲ. ಬಹುಶಃ ಹೆಣ್ಣೊಬ್ಬಳ ಮಾನಸಿಕ ಜಂಜಾಟದ ಸುತ್ತ ಕಥೆ ಸಾಗಿರುವುದಿಂದ ಎಲ್ಲವೂ ಇದ್ದೂ, ಇಲ್ಲದಂತೆ ಭಾಸವಾಗುತ್ತೆ.


ಹೆಣ್ಮಕ್ಕಳೇ ಮಾಡಿದರೂ ಗಂಡ್ಮಕ್ಳಿಗೆ ಮೋಸ ಇಲ್ಲ.!

ನಿರ್ದೇಶನ, ನಿರ್ಮಾಣ, ಛಾಯಾಗ್ರಹಣ, ಸಂಕಲನ ಸೇರಿದಂತೆ ಚಿತ್ರ ನಿರ್ಮಾಣದ ಪ್ರತಿ ಹಂತದಲ್ಲೂ ಹುಡುಗಿಯರೇ ಸೇರಿ ಮಾಡಿರುವ ಸಿನಿಮಾ 'ರಿಂಗ್ ರೋಡ್'. ಹಾಗಂದ ಮಾತ್ರಕ್ಕೆ ಇದು ಫೀಮೇಲ್ ಓರಿಯೆಂಟೆಡ್ ಸಿನಿಮಾ. ಇಲ್ಲಿ ಗೆಲ್ಲೋದು ನಾಯಕಿಯೇ ಅಂತ ಭಾವಿಸಬೇಕಿಲ್ಲ. ಹಂತಕಿಯೊಬ್ಬಳ ಕಥೆಯನ್ನ ತೆರೆಮೇಲೆ ವಿಭಿನ್ನವಾಗಿ ಯಾವುದೂ 'ಅತಿ' ಎನಿಸದಂತೆ ಚಿತ್ರೀಕರಿಸಿರುವ ನಿರ್ದೇಶಕಿ ಪ್ರಿಯಾ ಬೆಳ್ಳಿಯಪ್ಪ ಜಾಣ್ಮೆಗೆ ಮೆಚ್ಚಬೇಕು.


ಫೈನಲ್ ಸ್ಟೇಟ್ಮೆಂಟ್

ಮೊದಲ ಬಾರಿಗೆ ಹೆಣ್ಮಕ್ಕಳೆಲ್ಲಾ ಕೂಡಿ ಮಾಡಿರುವ 'ರಿಂಗ್ ರೋಡ್' ಸಿನಿಮಾ ಖಂಡಿತವಾಗಿಯೂ ಉತ್ತಮ ಪ್ರಯತ್ನ. ಅಲ್ಲಲ್ಲಿ ಅಂಕುಡೊಂಕು, ಉಬ್ಬು ತಗ್ಗು ಬಿಟ್ಟರೆ 'ರಿಂಗ್ ರೋಡ್' ಪಯಣ ಸುಗಮ. ಹೀಗಾಗಿ 'ರಿಂಗ್ ರೋಡ್' ಸಿನಿಮಾ ಒಮ್ಮೆ ನೋಡೋಕಂತೂ ಅಡ್ಡಿ ಇಲ್ಲ.


English summary
Priya Belliappa directorial Kannada Movie 'Ring Road' has hit the screens today (October 22nd). Read the movie review here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada