»   » ರೀಮೇಕ್‌ ಒಂದು ಕಲೆ ಅನ್ನೋದನ್ನ ರವಿ ಮತ್ತೆ ಸಾಬೀತು

ರೀಮೇಕ್‌ ಒಂದು ಕಲೆ ಅನ್ನೋದನ್ನ ರವಿ ಮತ್ತೆ ಸಾಬೀತು

Posted By: Staff
Subscribe to Filmibeat Kannada

ರವಿಚಂದ್ರನ್‌ ನಿರ್ದೇಶಿಸಿದ ಈ ಚಿತ್ರ ಬಿಡುಗಡೆಯಾಗಿ ಮೂರು ವರ್ಷಗಳ ನಂತರ ಅವರದೇ ನಿರ್ದೇಶನದ ಓ ನನ್ನ ನಲ್ಲೆ ತೆರೆಗೆ ಬಂದಿದೆ. ಮತ್ತೊಮ್ಮೆ ರವಿಚಂದ್ರನ್‌ ತಾವೊಬ್ಬ ಅತ್ಯುತ್ತಮ ತಂತ್ರಜ್ಞ ಅನ್ನುವುದನ್ನು , ಅದಕ್ಕಿಂತ ದೊಡ್ಡ ಕನಸುಗಾರ ಎನ್ನುವುದನ್ನು ಇಲ್ಲಿ ಸಾಧಿಸಿ ತೋರಿಸಿದ್ದಾರೆ.

ತೀರಾ ಸರಳವಾದ ಕತೆಯಾಂದನ್ನು ಅಚ್ಚುಕಟ್ಟಾಗಿ ನಿರೂಪಿಸುವುದು ದೃಶ್ಯ ಮಾಧ್ಯಮದ ಶಕ್ತಿ ಅನ್ನುವುದನ್ನು ಮೊದಲು ತೋರಿಸಿಕೊಟ್ಟಿದ್ದು ತಮಿಳು ಚಿತ್ರರಂಗ. ಓ ನನ್ನ ನಲ್ಲೆ ತಮಿಳು ಚಿತ್ರವೊಂದರ ರಿಮೇಕ್‌. ಆದರೆ ರಿಮೇಕ್‌ ಅನ್ನುವುದು ಮಕ್ಕಿ ಕಾ ಮಕ್ಕಿಯಲ್ಲ , ಮರುಸೃಷ್ಟಿ ಎಂದು ನಂಬಿದವರು ರವಿಚಂದ್ರನ್‌. ಆ ನಂಬಿಕೆಯನ್ನು ಅವರು ಉಳಿಸಿಕೊಂಡಿದ್ದಾರೆ ಅನ್ನುವುದು ಈ ಚಿತ್ರದ ವಿಶೇಷ.

ನಾಯಕ ಹಾಡುಗಾರ. ನಾಯಕಿ ಆ ಹಾಡಿನ ಅಭಿಮಾನಿ. ಆದರೆ ಹಾಡುಗಾರನನ್ನು ನಾಯಕಿ ಮುಖತಃ ನೋಡಿಲ್ಲ . ಅಥವಾ ಆಕೆ ನೋಡುವ ಹೊತ್ತಿಗೆಲ್ಲ ನಾಯಕ ಹಾಡುತ್ತಿರುವುದಿಲ್ಲ , ಹೊಡೆದಾಡುತ್ತಿರುತ್ತಾನೆ. ಹೊಡೆದಾಡುವವನೂ ಹಾಡುವವನೂ ಒಬ್ಬನೇ ಅನ್ನುವುದು ಆಕೆಗೆ ಗೊತ್ತಿಲ್ಲ ! ಇಷ್ಟೇ ಕತೆ.

ಮುಂದೊಂದು ದಿನ ಆಕೆ ನಾಯಕನನ್ನು ನೋಡುವ ಹೊತ್ತಿಗೆ, ಆಕೆ ಕುರುಡಿಯಾಗಿರುತ್ತಾಳೆ. ಅದಕ್ಕೂ ನಾಯಕನೇ ಕಾರಣ. ಇಬ್ಬರೂ ಒಂದೇ ಮನೆಯಲ್ಲಿ ವಾಸಿಸುವ ಪ್ರಸಂಗವೂ ಬರುತ್ತದೆ. ಈ ನಡುವೆ ನಾಯಕ ಆಕೆಗೆ ಮರಳಿ ಕಣ್ಣು ಬರುವಂತೆ ಮಾಡುವುದು, ಕಣ್ಣು ಬಂದ ನಂತರ ಆಕೆ ಮತ್ತೆ ಆತನನ್ನು ಗುರುತಿಸಿ ಸಿಟ್ಟಾಗುವುದು - ಹೀಗೆ ಹೃದಯಸ್ಪರ್ಶಿ ಸನ್ನಿವೇಶಗಳನ್ನೂ ನಾಟಕೀಯ ತಿರುವುಗಳನ್ನೂ ಚಿತ್ರ ಕಾಣುತ್ತದೆ.

ಸಂಗೀತ, ಸಾಹಿತ್ಯ, ಸಂಭಾಷಣೆ, ಚಿತ್ರಕತೆ, ನಿರ್ದೇಶನ, ನಾಯಕ ಹೀಗೆ ಆರು ವಿಭಾಗಗಳನ್ನು ರವಿಚಂದ್ರನ್‌ ತಮ್ಮ ಹತೋಟಿಗೆ ತೆಗೆದುಕೊಂಡಿದ್ದಾರೆ. ಯಾವುದೇ ವಿಭಾಗಕ್ಕೆ ಅವರು ಅನ್ಯಾಯ ಮಾಡಿಲ್ಲ ಅನ್ನುವುದೇ ಅವರ ಹೆಗ್ಗಳಿಕೆ. ಸುಮಾರಾಗಿರುವ ಹಾಡುಗಳೂ, ಅತ್ಯದ್ಭುತವಾದ ಸಂಭಾಷಣೆಯೂ ಇಲ್ಲಿದೆ. ಸಂಗೀತ ಸುಧಾರಿಸಿದೆ. ಅಭಿನಯದ ಮಟ್ಟಿಗೆ ಮಾತನಾಡುವುದೇ ಬೇಕಿಲ್ಲ .

ಎಲ್ಲಕ್ಕಿಂತ ಹೆಚ್ಚಾಗಿ ಮನೆಮಂದಿಯೆಲ್ಲ ಕುಳಿತು ನೋಡುವಂಥ ನೀಟ್‌ ಚಿತ್ರವೊಂದನ್ನು ರವಿ ನೀಡಿದ್ದಾರೆ. ನಡು ನಡುವೆ ನಗಿಸುವುದಕ್ಕೆ ಶ್ರೀನಿವಾಸಮೂರ್ತಿ ಇದ್ದಾರೆ. ಸಾಧು ಕೋಕಿಲ ಕೂಡ ಹೊಸ ಇಮೇಜ್‌ನಿಂದ ಕಂಗೊಳಿಸುತ್ತಾರೆ.

ಈ ಚಿತ್ರಕ್ಕಾಗಿ ರವಿಚಂದ್ರನ್‌ ವಿಶೇಷವಾದ ನಗರಿಯಾಂದನ್ನೇ ಐವತ್ತು ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದರು. ಹೀಗಾಗಿ ಇಡೀ ಚಿತ್ರ ನಿಮಗೆ ಹೊಸ ಅನುಭವ ನೀಡುತ್ತದೆ. ಎಲ್ಲೋ ಕಂಡ ನೆನಪೂ ಆಗದಂಥ ಪರಿಸರದಲ್ಲಿ ಎಲ್ಲೋ ಕೇಳಿದಂಥ ನೆನಪೂ ಆಗದ ಕತೆಯಾಂದನ್ನು ಮತ್ತೆ ಮತ್ತೆ ಕಾಣಬೇಕು ಎನ್ನಿಸುವಂತೆ ಹೇಳಿದ್ದಾರೆ ರವಿ.

ಹಾಗೆ ನೋಡಿದರೆ, ಈ ಚಿತ್ರದ ಮೈನಸ್‌ ಪಾಯಿಂಟ್‌ ನಾಯಕಿ ಇಷಾ ಕೊಪ್ಪೀಕರ್‌ ಎನ್ನಬಹುದು. ಆಕೆಯ ಬದಲು ಇನ್ನಷ್ಟು ಗ್ಲಾಮರಸ್‌ ಹಾಗೂ ಭಾವನಾತ್ಮಕ ನಾಯಕಿಯನ್ನು ಆರಿಸಿಕೊಂಡಿದ್ದರೆ ಚೆನ್ನಾಗಿತ್ತು ಅಂತ ನಿಮಗೆ ಅನ್ನಿಸುತ್ತದೆ. ಯಾಕೆಂದರೆ, ಅವರ ಅನೇಕ ಚಿತ್ರಗಳ ಗೆಲುವಿಗೂ ಅದೇ ಕಾರಣ.

ರೀಮೇಕ್‌ ಮಾಡೋದು ಒಂದು ಕಲೆ- ಎಂದಿದ್ದರು ರವಿ. ಅದನ್ನವರು ಇಲ್ಲಿ ನಿಜ ಮಾಡಿದ್ದಾರೆ. ಇದು ಎಸ್‌. ನಾರಾಯಣ್‌ ಮುಂತಾದ ರೀಮೇಕ್‌ ಪ್ರಿಯರಿಗೆ ಒಂದು ಪಾಠವಾಗಲಿ ಎಂಬುದು ನಮ್ಮ ಆಸೆ. ಕನಸುಗಾರರ ಕನಸಿನರಮನೆಗೆ ಬನ್ನಿ, ಕಳೆದು ಹೋದ ಕನಸುಗಳನ್ನು ಹುಡುಕಿಕೊಳ್ಳಿ.

English summary
Ravichandran is the master of remake
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada