»   » ಟಗರು ವಿಮರ್ಶೆ : ಸೂರಿಯ 'ಸುಕ್ಕ' ಕುಡಿದ ಟಗರು ತುಂಬಾ ಪೊಗರು!

ಟಗರು ವಿಮರ್ಶೆ : ಸೂರಿಯ 'ಸುಕ್ಕ' ಕುಡಿದ ಟಗರು ತುಂಬಾ ಪೊಗರು!

By ಭಾಸ್ಕರ ಬಂಗೇರ
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  Film Review : Tagaru | ಟಗರು ಮೈ ಎಲ್ಲ ಪೊಗರು | Filmibeat Kannada

  ಬೆಂಗಳೂರಿನ ಮಬ್ಬು ಗತ್ತಲಿನ ಗಲ್ಲಿಗಳು, ಎದೆಯ ಒಳಗೆ ಸೇಡುಗಳನ್ನಷ್ಟೇ ಸಾಕಿಕೊಂಡಿರುವ ಮನುಷ್ಯ ಮುಖದ ಮೃಗಗಳು, ಪಾತಕಿಗಳ ರಕ್ತ ಕುಡಿಯಲು ಕಾದು ಕುಳಿತಿರುವ ಪೋಲಿಸ್, ತೆರೆಯ ಮೇಲೆ ನೋಡಿದಾಗಲೆಲ್ಲ ಏನ್ ಎನರ್ಜಿ ಗುರು ಎನ್ನುತ್ತ ಸಿಳ್ಳೆ ಹೊಡಿಯಬೇಕು ಅನಿಸುವ ಟಗರು ಶಿವ, ರೆಸೆಲ್ ಮಾರ್ಕೆಟಿನಲ್ಲಿ ಗುಲಾಬಿ ಮಾರುವವರು ಎದುರು ಬರುವಂತೆ ನಡುನಡುವೆ ಕೆನ್ನೆ ಸವರಿ ಹೋಗುವ ಪಂಚಮಿ ಹಾಗು ಪುನರ್ವಸು, ಒಂದೇ ಗುಕ್ಕಿಗೆ ಸಿಕ್ಕದಂತೆ ಪ್ರೇಕ್ಷಕರನ್ನು ಕುಳಿತಲ್ಲೇ ಸುಡೋಕೋ ಆಡಿಸುವ ಚಿತ್ರಕತೆ... ಇದು ಸೂರಿ ಚಂದನವನಕ್ಕೆ ಬಿಟ್ಟ ಪೊಗರು ತುಂಬಿರುವ ಟಗರು!

  ನಿರ್ದೇಶಕ ಸೂರಿ ಭಿನ್ನ ವಸ್ತುಗಳ ಸಿನೆಮಾ ಮಾಡುತ್ತಲೇ ನಡುನಡುವೆ ಮಾಮೂಲಿ ಮಸಾಲೆ ಸಿನೆಮಾಗಳನ್ನು ತಬ್ಬಿಕೊಳ್ಳುವ ಕಾರ್ಯವನ್ನು ಮಾಡುತ್ತಿದ್ದರು. ಆದರೆ, ಸೂರಿ ಟಗರು ಸಿನೆಮಾದ ವಸ್ತುವನ್ನು ಪ್ರೇಕ್ಷಕನಿಗೆ ದಾಟಿಸಿರುವ ರೀತಿ ಅವರನ್ನು ಮತ್ತೆ ಸುಕ್ಕ ಸೂರಿ ಆಗಿಸಿದೆ. ಹೆಚ್ಚಿನ ಕಮರ್ಷಿಯಲ್ ಸಿನೆಮಾಗಳು ಒಂದು ಸಿದ್ದ ಸೂತ್ರಕ್ಕೆ ಅಂಟಿಕೊಂಡು ಚಿತ್ರಕತೆಯನ್ನು ಹಾಗು ಪಾತ್ರ ಪೋಷಣೆಯನ್ನು ಮಾಡಿರುತ್ತವೆ.

  ಟಗರು ವಿಮರ್ಶೆ : ಸೂರಿಯ 'ಸುಕ್ಕ' ಕುಡಿದ ಟಗರು ತುಂಬಾ ಪೊಗರು!

  ಟಗರು ಸಿನೆಮಾ ಕೂಡ ಒಂದು ಮಾಸ್ ಸಿನೆಮಾ ಆಗಿಯೂ ಮಾಮೂಲಿ ಪ್ರೇಕ್ಷಕನ ಅಂಕೆಗೆ ಸಿಕ್ಕದಂತೆ ನಿರ್ಮಾಣವಾಗಿದೆ. ಮುಖ್ಯವಾಗಿ ಮೂಲಕತೆಗೆ ಅಗತ್ಯವಿಲ್ಲದ ಅನಗತ್ಯ ಪರಿಸರದಲ್ಲಿ ಯಾವ ಸಣ್ಣ ದೃಶ್ಯಗಳನ್ನು ಕೂಡ ಸೆರೆ ಹಿಡಿದಿಲ್ಲದಿರುವುದು ಮುಖ್ಯ ವಿಚಾರ.

  ಮೊದಲಾರ್ಧದ ಸಿನೆಮಾದಲ್ಲಿ ಮೂರ್ನಾಲ್ಕು ನಿಮಿಷಗಳಷ್ಟು ದೃಶ್ಯಗಳನ್ನು ಕತ್ತರಿಸಬಹುದಿತ್ತು ಅನಿಸಿತು. ಚಿತ್ರಕತೆಯ ದ್ವಂದ್ವಶೈಲಿಯ ನಿರೂಪಣೆಯಿಂದಾಗಿ ಮಾಸ್ ದೃಶ್ಯಗಳ ನಡುವೆ ಎರಡು ಪಾತ್ರಗಳಷ್ಟೇ ತೆರೆಯ ಮೇಲೆ ತಣ್ಣಗೆ ಮಾತಿಗೆ ಕುಳಿತಾಗ ಪ್ರೇಕ್ಷಕ ಕತೆಯ ಮುಂದಿನ ತಿರುವುಗಳ ಬಗ್ಗೆಯಷ್ಟೇ ಯೋಚಿಸುವ ಅಪಾಯವಿದೆ. ಹಿಂದಿನ ದೃಶ್ಯದಲ್ಲಿ ಏನೋ ಕುತೂಹಲವನ್ನು ಉಳಿಸಿರುವುದು ಅವರನ್ನು ಅಂಥ ಅನಿವಾರ್ಯತೆಗೆ ದೂಡಿರುತ್ತದೆ.

  ಶಿವಣ್ಣ ನಟನೆಗೆ ಶಿವಣ್ಣನೆ ಸಾಟಿ

  ಮೂರು ದಶಕಗಳ ವೃತ್ತಿ ಬದುಕಿನ ನಂತರವು ಯಾವುದೇ ಹಮ್ಮುಬಿಮ್ಮಿಲ್ಲದೆ ನಿರ್ದೇಶಕರ ನಟ ಎನಿಸಿಕೊಂಡಿರುವ ಶಿವಣ್ಣ ನಟನೆ ಚಿತ್ರದ ಮುಖ್ಯ ಆಕರ್ಷಣೆ. ಖಡಕ್ ಪೋಲಿಸ್ ಅಧಿಕಾರಿಯಾಗಿ, ಅಗತ್ಯ ಬಿದ್ದಾಗ ಲಾಂಗ್ ಹಿಡಿಯುವಾಗ ಆ ಹಿಡಿತ ಹಾಗು ನಡೆಯವ ಶೈಲಿ, ನೋವಿನಲ್ಲಿದ್ದ ಜೀವವನ್ನು ಸಂತೈಸುವ ಹಿರಿಯನಾಗಿ ಶಿವಣ್ಣ ನಟನೆಗೆ ಶಿವಣ್ಣನೆ ಸಾಟಿ.

  ಡಾಲಿ ಪಾತ್ರದಲ್ಲಿ ನಟಿಸಿರುವ ಧನಂಜಯ್

  ಡಾಲಿ ಪಾತ್ರದಲ್ಲಿ ನಟಿಸಿರುವ ಧನಂಜಯ್ ಅವರಿಗೆ ಇದು ಅವರ ವೃತ್ತಿ ಬದುಕಿಗೆ ಮಹತ್ತರ ತಿರುವನ್ನು ಕೊಡಬಹುದಾದ ಪಾತ್ರ ಎನ್ನಬಹುದು. ಕ್ರೌರ್ಯವನ್ನು ಮೈ ತುಂಬೆಲ್ಲ ಹೊದ್ದು ಓಡಾಡುವ ಡಾಲಿ ಪಾತ್ರದ ಚಿತ್ರಣ ವಿಶೇಷವಾಗಿದೆ. ಚಿಟ್ಟೆಯಾಗಿ ವಸಿಷ್ಠ ಸಿಂಹ ಪಾತ್ರ ಪೋಷಣೆ ಡಾಲಿಯ ಮುಂದೆ ಸಪ್ಪೆ ಅನಿಸುತ್ತದೆ. ಕಾಕ್ರೋಚ್, ಡಾನ್ ಅಂಕಲ್, ಬೇಬಿ ಕೃಷ್ಣ ಪಾತ್ರಗಳು ಸಿನೆಮಾದ ಒಟ್ಟಾರೆ ಗುಣಮಟ್ಟದ ಹೆಚ್ಚಳಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿವೆ.

  ಟ್ವಿಟ್ಟರ್ ವಿಮರ್ಶೆ: 'ಟಗರು' ಮಾರ್ನಿಂಗ್ ಶೋ ನೋಡಿದ ಪ್ರೇಕ್ಷಕರು ಖುಷಿಯೋ ಖುಷಿ

  ಪುನರ್ವಸು ಪಾತ್ರದಲ್ಲಿ ಮಾನ್ವಿತ ಇಷ್ಟವಾಗುತ್ತಾರೆ

  ಪುನರ್ವಸು ಪಾತ್ರದಲ್ಲಿ ಮಾನ್ವಿತ ಇಷ್ಟವಾಗುತ್ತಾರೆ. ಅವರ ಸಂಭಾಷಣೆ ಒಪ್ಪಿಸುವಿಕೆ ಸ್ವಾಭಾವಿಕವಾಗಿದೆ ಹಾಗು ಅದು ಸಿನೆಮಾದಲ್ಲಿ ಅವರು ನಿರ್ವಹಿಸಿರುವ ಪಾತ್ರಕ್ಕೆ ಸರಿ ಹೊಂದುತ್ತದೆ. ಪಂಚಮಿ ಪಾತ್ರದಲ್ಲಿ ಭಾವನ ಸ್ವಲ್ಪ ಹೊತ್ತಷ್ಟೇ ತೆರೆಯ ಮೇಲಿದ್ದರು ನೆನಪಿನಲ್ಲಿ ಉಳಿಯುತ್ತಾರೆ. ಹಿರಿಯ ಕಲಾವಿದರಾದ ದೇವರಾಜ್, ಅಚ್ಯುತ್ ಕುಮಾರ್ ಹಾಗು ಸುಧಾ ಬೆಳವಾಡಿ ಪಾತ್ರಕ್ಕೆ ಅಷ್ಟೇನೂ ಪ್ರಾಮುಖ್ಯತೆ ಇಲ್ಲ.

  ಮಾಹೆನ್ ಸಿಂಹ ಗೆದ್ದಿದ್ದಾರೆ

  ಹೊಸ ಬೆಳಕಿಗೆ ಕಾದು ಓಡಾಡುವ ಚಿಗರೆಯ ಕಾಲಿಗೆ ಕ್ಯಾಮರ ಕಟ್ಟಿದಂತೆ ಚಕಚಕನೆ ಅತ್ತಿಂದಿತ್ತ ಏರಿಳಿಯುವ ಮಾಹೆನ್ ಸಿಂಹ ಕ್ಯಾಮರ ಕಾಯಕ ಭೂಗತ ಲೋಕದ ಕಥನವನ್ನು ಮತ್ತಷ್ಟು ಭಯಾನಕವಾಗಿಸುತ್ತದೆ. ಭಿನ್ನ ಸ್ವಭಾವದ ಪಾತ್ರಗಳ ಮುಖಚರ್ಯೆಯನ್ನು ಸೆರೆ ಹಿಡಿಯುವಾಗ ಕ್ಯಾಮರ ಕಣ್ಣು ತುಸು ಹೊತ್ತು ಕಾಯಬಹುದಿತ್ತು ಅನಿಸಿತು. ಆದಾಗ್ಯೂ ಮೊದಲ ಬಾರಿಗೆ ಪೂರ್ಣಪ್ರಮಾಣದ ಸಿನೆಮಾ ಛಾಯಾಗ್ರಹಣ ಮಾಡಿರುವ ಮಾಹೆನ್ ಸಿಂಹ ಗೆದ್ದಿದ್ದಾರೆ.

  ಚರಣ್ ರಾಜ್ ಸಂಗೀತ ಪೂರಕವಾಗಿದೆ.

  ಚರಣ್ ರಾಜ್ ಸಂಗೀತದಲ್ಲಿ ಇನ್ನೊಂದು ಹಂತವನ್ನು ಏರಿದ್ದಾರೆ. ಮಾಸ್ ಹಾಗು ಕ್ಲಾಸ್ ಎರಡು ರೀತಿಯ ಹಾಡುಗಳ ಜೊತೆಗೆ ಹಿನ್ನೆಲೆ ಸಂಗೀತವು ಕೂಡ ಸಿನೆಮಾ ಕತೆಗೆ ಪೂರಕವಾಗಿದೆ.

  ನಿರ್ಮಾಪಕ ಕೆ. ಪಿ. ಶ್ರೀಕಾಂತ್ ಸಿನೆಮಾದ ನಿರ್ಮಾಣದ ಯಾವ ಹಂತದಲ್ಲೂ ಗುಣಮಟ್ಟದ ವಿಚಾರದಲ್ಲಿ ರಾಜಿಯಾಗಿರದೆ ಇರುವುದು ಸಿನೆಮಾದಲ್ಲಿ ಎದ್ದು ಕಾಣಿಸುತ್ತದೆ. ನಡೆದಾಡುವ ದೇವರು ಶ್ರೀ. ಸಿದ್ಧಗಂಗಾ ಶ್ರೀಗಳು ಹಾಗು ಸಾಹಿತಿ ಜಯಂತ್ ಕಾಯ್ಕಿಣಿ ಅವರನ್ನು ತೆರೆಯ ಅರೆ ಗಳಿಗೆಯಷ್ಟೇ ಬಂದರು ಆ ಕ್ಷಣ ನಮಗೆ ಖುಷಿ ಕೊಡುತ್ತದೆ.

  ಹೊಸ ಶೈಲಿಯ ಕತೆ ಹೇಳುವಿಕೆ

  ಕ್ರೌರ್ಯ, ಅದಿಗುದಿ, ಪ್ರೀತಿ, ಮೋಸ ಎಲ್ಲದರ ಪಾಕ ಈ ಟಗರು. ಶಿವಣ್ಣ ಎಂಬ ಅದ್ಭುತ ನಟನ ಅಭಿನಯ ಹಾಗು ಎಂದು ಬತ್ತದ ತೆರೆಯ ಮೇಲಿನ ಅವರ ಉತ್ಸಾಹದ ಹಾಜರಿ, ಮಾಸ್ತಿ ಮಂಜು ಬರೆದಿರುವ ಮಾಸ್ ಹಾಗು ಚಿನಕುರಳಿ ಸಂಭಾಷಣೆ, ಸೂರಿ ಅವರ ಹೊಸ ಶೈಲಿಯ ಕತೆ ಹೇಳುವಿಕೆ ಸಿನೆಮಾವನ್ನು ಇಷ್ಟವಾಗಿಸುತ್ತದೆ.
  ಮಾಸ್ ಹೊಡೆದಾಟಗಳ ನಡುವೆ ಕೌಟುಂಬಿಕ ವಿಚಾರಗಳನ್ನು ಕೂಡ ಆಪ್ತವಾಗಿ ಚಿತ್ರಕತೆಯ ನಡುವೆ ಹೆಣೆಯಲಾಗಿದೆ. ಹಿಂಸೆಯ ಸನ್ನಿವೇಶಗಳನ್ನು ಕೂಡ ಪ್ರೇಕ್ಷಕನಿಗೆ ಹಿಂಸೆ ಅನಿಸದಂತೆ ತೋರಿಸಲಾಗಿದೆ. ಹಾಗಾಗಿ ಕುಟುಂಬ ಸಮೇತರಾಗಿ ಸಿನೆಮಾ ನೋಡಲು ಯಾವುದೇ ಅಡ್ಡಿಯಿಲ್ಲ.

  English summary
  Tagaru starring Shivarajkumar, Dhananjay Kumar, Vasishta Simha, directed Duniya Soori. Film review by reader Bhaskar Bangera

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more