»   » ಸುವರ್ಣ ವಾಹಿನಿಯಲ್ಲಿ ಓಲ್ಡ್ ಈಸ್ ಗೋಲ್ಡ್

ಸುವರ್ಣ ವಾಹಿನಿಯಲ್ಲಿ ಓಲ್ಡ್ ಈಸ್ ಗೋಲ್ಡ್

Posted By:
Subscribe to Filmibeat Kannada
Melody Queen P. Susheela
ಹಳೆಯ ಸುಮಧುರ ಹಾಡುಗಳನ್ನು ಕೇಳುವುದೆಂದರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ. ಅದರಲ್ಲೂ ತಮ್ಮ ಸುಮಧುರ ಕಂಠದಿಂದ ಕಳೆದ ನಾಲ್ಕು ದಶಕಗಳಲ್ಲಿ ಕೇಳುಗರ ಮನತಣಿಸಿದ ನಾಲ್ಕು ಮಂದಿ ಖ್ಯಾತ ಹಿನ್ನೆಲೆ ಗಾಯಕಿಯರನ್ನು ಒಂದೇ ವೇದಿಕೆಗೆ ಕರೆತರುವುದು ಎಂದರೆ. ಕೇಳುಗರಿಗೆ ಇದಕ್ಕಿಂತಲೂ ಸೌಭಾಗ್ಯ ಬೇಕೆ. 'ಓಲ್ಡ್ ಈಸ್ ಗೋಲ್ಡ್' ಕಾರ್ಯಕ್ರಮದ ಮೂಲಕ ಈ ವಿಶಿಷ್ಟ ಪ್ರಯತ್ನವನ್ನು ಸುವರ್ಣ ವಾಹಿನಿ ಮಾಡಿದೆ.

ಗಾಯಕಿಯರಾದ ಪಿ ಸುಶೀಲ, ಎಲ್ ಆರ್ ಈಶ್ವರಿ, ಮಂಜುಳಾ ಗುರುರಾಜ್ ಮತ್ತು ರತ್ನಮಾಲಾ ಪ್ರಕಾಶ್ ಅವರನ್ನು ಒಂದೇ ವೇದಿಕೆಗೆ ಕರೆತರುತ್ತಿದೆ. ಎಪ್ಪತ್ತು, ಎಂಬತ್ತರ ದಶಕದಲ್ಲಿ ಕನ್ನಡ ಚಿತ್ರಗಳಿಗೆ ತಮ್ಮ ಸುಮಧುರ ಕಂಠದಿಂದ ರಂಗು ತುಂಬಿದ ಗಾಯಕಿಯರ ಹಾಡುಗಳನ್ನು ಮತ್ತೊಮ್ಮೆ ಕೇಳುವ ಅವಕಾಶ ಒದಗಿಬಂದಿದೆ.

ಪಿ ಸುಶೀಲ ಹಾಡಿದ ಬಾಳ ಬಂಗಾರ ನೀನು(ಬಂಗಾರದ ಮನುಷ್ಯ), ಕರ್ಪೂರದ ಗೊಂಬೆ ನಾನು (ನಾಗರಹಾವು), ಎಲ್ಲೇ ಇರು ಹೇಗೇ ಇರು (ಕಸ್ತೂರಿ ನಿವಾಸ). ಎಲ್ ಆರ್ ಈಶ್ವರಿ ಕಂಠದಿಂದ ಹೊರಹೊಮ್ಮಿದ ಜೋಕೆ ನಾನು ಬಳ್ಳಿಯ ಮಿಂಚು (ಸಂಶಯ ಫಲ), ರಸಿಕಾ ರಸಿಕಾ (ಭಲೆ ಭಾಸ್ಕರ). ರತ್ನಮಾಲಾ ಪ್ರಕಾಶ್ ಹಾಡಿದ ಗೆದಿಯ ಬೇಕು ಮಗಳ (ನಾಗಮಂಡಲ), ಸಂತಸ ಅರಳುವ ಸಮಯ (ಏಳು ಸುತ್ತಿನ ಕೋಟೆ). ಮಂಜುಳಾ ಗುರುರಾಜ್ ಹಾಡಿದ ಒಳಗೆ ಸೇರಿದರೆ ಗುಂಡು (ನಂಜುಂಡಿ ಕಲ್ಯಾಣ), ಪ್ರೀತಿಯಲ್ಲಿ ಇರೋ ಸುಖ (ಅಂಜದ ಗಂಡು) ಹಾಡುಗಳು ಮತ್ತೆ ಜೀವ ಪಡೆಯಲಿವೆ.

ಓಲ್ಡ್ ಈಸ್ ಗೋಲ್ಡ್ ಕಾರ್ಯಕ್ರಮ ಬೆಂಗಳೂರು ಜ್ಞಾನಜ್ಯೋತಿ ಸಭಾಂಗಣದಲ್ಲಿ ಕಳೆದ ವಾರ ನಡೆದಿತ್ತು. ನಟಿ ವಿನಯಾ ಪ್ರಸಾದ್ ನಿರೂಪಿಸಿದ ಈ ಕಾರ್ಯಕ್ರಮ ಏಪ್ರಿಲ್ 3 ಮತ್ತು 4 ರಂದು ಸುವರ್ಣ ವಾಹಿನಿಯಲ್ಲಿ ರಾತ್ರಿ 8ಕ್ಕೆ ಪ್ರಸಾರವಾಗಲಿದೆ. ಸಮಾರಂಭದಲ್ಲಿ ಹಿರಿ ಕಿರಿಯ ಕಲಾವಿದರು ಭಾಗವಹಿಸಿದ್ದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada