»   » ಶತಕಗಳತ್ತ ಜೀ ಕನ್ನಡದ ಧಾರಾವಾಹಿಗಳು

ಶತಕಗಳತ್ತ ಜೀ ಕನ್ನಡದ ಧಾರಾವಾಹಿಗಳು

Posted By:
Subscribe to Filmibeat Kannada

ಟಿವಿ ಧಾರಾವಾಹಿಗಳ ಸಾಂಪ್ರದಾಯಕ ಜಾಡಿನಿಂದ ಹೊರಳಿರುವ ಜೀ ಕನ್ನಡ ಕನ್ನಡ ಕಿರುತೆರೆಯಲ್ಲಿ ಹೊಸತನ ಮೂಡಿಸುವಲ್ಲಿ ಯಶಸ್ವಿಯಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಜೀ ಕನ್ನಡದ ಧಾರಾವಾಹಿಗಳು ಶತಕಗಳನ್ನು ದಾಟಿ ಮುನ್ನಡೆಯುತ್ತಿವೆ.

ಜೀ ಕನ್ನಡದ ಪ್ರಮುಖ ಅವಧಿಯಲ್ಲಿ ಪ್ರಸಾರವಾಗುತ್ತಿರುವ 'ಜೋಗುಳ' ಧಾರಾವಾಹಿ ಇದೇ ಜೂನ್ 14ಕ್ಕೆ 400 ಕಂತುಗಳನ್ನು ಪೂರೈಸಲಿದ್ದು ಹಾಸ್ಯ ಧಾರಾವಾಹಿ 'ಪಾರ್ವತಿ ಪರಮೇಶ್ವರ' ಜೂನ್ 13ಕ್ಕೆ 300 ಸಂಚಿಕೆಗಳನ್ನು ಪೂರೈಸಿ ಮುನ್ನಡೆಯಲಿದೆ. ಅಂತೆಯೆ ಮತ್ತೊಂದು ಪ್ರಮುಖ ಧಾರಾವಾಹಿ 'ನಮ್ಮಮ್ಮ ಶಾರದೆ' ಈಗಾಗಲೇ 200 ಸಂಚಿಕೆಗಳನ್ನು ಪೂರೈಸಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ.

'ಜೋಗುಳ' ಬಾಡಿಗೆ ಗರ್ಭದ ಮೂಲಕ ಸಂತಾನ ಪಡೆಯುವ ಕಥೆ ಹೊಂದಿದೆ. ಹೆಣ್ಣೊಂದು ಗರ್ಭ ಹೊರುವ ಸಾಮರ್ಥ್ಯವಿಲ್ಲದಿದ್ದರೆ ಬೇರೆ ಹೆಣ್ಣಿನ ಗರ್ಭವನ್ನು ಬಾಡಿಗೆ ಪಡೆದು ತನ್ನ ವಂಶದ ಕುಡಿ ಪಡೆಯಬಹುದು. ಆದರೆ ಈ ವೈದ್ಯಕೀಯ ತಂತ್ರಜ್ಞಾನ ವಿವೇಚನೆಯಿಂದ ಬಳಸದಿದ್ದರೆ ಏನಾಗುತ್ತದೆ ಎಂಬುದು ಧಾರಾವಾಹಿಯ ಕಥಾ ಎಳೆ.

ಪರಮೇಶ್ ಗುಂಡ್ಕಲ್ ಕಥೆಯನ್ನು ಚಿತ್ರಕಥೆಗೆ ಅಳವಡಿಸಿ ಸತ್ಯಮೂರ್ತಿ ಆನಂದೂರು ಸಂಭಾಷಣೆ ಬರೆಯುತ್ತಿದ್ದಾರೆ. ವಿನು ಬಳಂಜ ನಿರ್ದೇಶನದಲ್ಲಿ ನಂದಿನಿ ಆರ್ಯ, ಜ್ಯೋತಿ ರೈ, ಸುರೇಶ್ ರೈ, ಮಧು ಹೆಗಡೆ, ಗ್ರೀಷ್ಮಾ, ಸುಂದರಶ್ರೀ, ಸಿದ್ಧರಾಜು ಕಲ್ಯಾಣಕರ್, ಅಪರ್ಣ, ಮಂಜುನಾಥ ಹೆಗಡೆ, ವಿದ್ಯಾ ಮೂರ್ತಿ, ಸೀತಾ ಕೋಟೆ, ಗಜೇಂದ್ರ, ನಿಶ್ಚಿತಾ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

'ನಮ್ಮಮ್ಮ ಶಾರದೆ' ಹೆಣ್ಣು ಮಗುವಿನ ಸಮಸ್ಯೆಯ ಕಥೆ. ವಿದ್ಯಾವಂತರಲ್ಲೂ ಬೇರೂರಿರುವ ಗಂಡು ಸಂತಾನದ ಹಂಬಲ, ಹೆಣ್ಣು ಮಗು ಬಗ್ಗೆ ಅಸಡ್ಡೆ, ಶಾಲೆಗಳಲ್ಲಿ ಹೆಣ್ಣು ಮಗು ಅನುಭವಿಸುವ ದೌರ್ಜನ್ಯ ಈ ಧಾರಾವಾಹಿಯ ಮೂಲ ಎಳೆ. ನಚಿಕೇತ ಅವರ ಕಥೆಗೆ ಗೀರ್ವಾಣಿ ಹಾಗೂ ಚಿತ್ರಾಂಗದಾ ಸಂಭಾಷಣೆ ರಚಿಸುತ್ತಿದ್ದಾರೆ. ರಮೇಶ್ ಇಂದಿರಾ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಧಾರಾವಾಹಿಯಲ್ಲಿ ಶ್ರುತಿ ನಾಯ್ಡು, ಸಿಹಿಕಹಿ ಚಂದ್ರು, ಭವಾನಿ, ಧರ್ಮೇಂದ್ರ ಅರಸ್, ಅನೂಷಾ, ಕೃಷ್ಣ ಅಡಿಗ, ಶೋಭಾ ರಾಘವೇಂದ್ರ, ನಿತಿನ್, ಬೇಬಿ ಸಾನಿಯಾ ಮುಂತಾದವರಿದ್ದಾರೆ.

'ಪಾರ್ವತಿ ಪರಮೇಶ್ವರ' ಹಾಸ್ಯ ಧಾರಾವಾಹಿಯಾಗಿದ್ದು ದಿನಕ್ಕೊಂದು ಕಥೆ ಆಧರಿಸಿ ಚಿತ್ರಿಸಲಾಗುತ್ತಿದೆ. ನವಿರು, ಸಭ್ಯ ಹಾಸ್ಯ, ಕಚಗುಳಿಯಿಡುವ ಎಂ.ಎಸ್. ನರಸಿಂಹಮೂರ್ತಿ ಸಂಭಾಷಣೆ ಇದರ ಜೀವಾಳ. ಸಿಹಿಕಹಿ ಚಂದ್ರು ಪ್ರಧಾನ ನಿರ್ದೇಶನ, ಪೃಥ್ವಿರಾಜ ಕುಲಕರ್ಣಿ ನಿರ್ದೇಶನವಿರುವ ಈ ಧಾರಾವಾಹಿಯ ಕಲಾವಿದರು ಅರವಿಂದ್, ಲೋಕೇಶ್ ಬಸವಟ್ಟಿ, ಸುರಭಿ, ಬಸವರಾಜ್ ಕಟ್ಟಿ, ನಿರ್ಮಲಾ ಸತ್ಯ, ಜಯಶೀಲಾ, ಆರಾಧ್ಯ, ಡಾಲಿ ಮುಂತಾದವರು.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X