»   » ಕಿರುತೆರೆಯಲ್ಲಿ ಮಿಲನ ಪ್ರಕಾಶ್ ಲಕುಮಿ ಪಯಣ

ಕಿರುತೆರೆಯಲ್ಲಿ ಮಿಲನ ಪ್ರಕಾಶ್ ಲಕುಮಿ ಪಯಣ

Posted By:
Subscribe to Filmibeat Kannada

ಪೆಣ್ಣು ಪೆಣ್ಣೆಂದೇಕೆ ಬೀಳುಗಳೆವಿರಿ, ಕಣ್ಣು ಕಾಣದ ಗಾವಿಲರೇ ಎಂದು ಕವಯತ್ರಿಯೊಬ್ಬಳು ಶತಮಾನಗಳ ಹಿಂದೆ ಹೇಳಿದ್ದರೂ, ನಮ್ಮ ಹಳ್ಳಿಗಳ ಹೆಣ್ಣುಮಕ್ಕಳು, ಗೊತ್ತಿದ್ದೋ ಗೊತ್ತಿಲ್ಲದೆಯೋ ಸಂಪ್ರದಾಯಗಳ, ಗೊಡ್ಡು ಕಂದಾಚಾರಗಳ ಸುಳಿಯೊಳಗೆ ನರಳುತ್ತಿದ್ದಾರೆ. ತಂತ್ರಜ್ಞಾನದ ತುದಿ, ಆಗಸ ಮುಟ್ಟಿದ್ದರೂ, ಹಳ್ಳಿ ಮನೆಯಂಗಳದ ಹುಡುಗಿ, ಕತ್ತಲ ಬದುಕು ಬಾಳುತ್ತಿದ್ದಾಳೆ. ಅಂತಹ ಹೆಣ್ಣೊಬ್ಬಳ ಬದುಕಿನ ಕಥೆಯೇ, ಸುವರ್ಣ ವಾಹಿನಿಯಲ್ಲಿನ ಹೊಸ ಧಾರಾವಾಹಿ,"ಲಕುಮಿ" ಯ ವಸ್ತು.

ಲಕುಮಿ, ಇನ್ನೂ ಎಳೆವಯಸ್ಸಿನಲ್ಲಿರುವ, ಜಗತ್ತನ್ನು ತನ್ನ ಪರಿಶುದ್ಧ ಮನಸ್ಸಿನಿಂದ, ಮುಗ್ಧ ಕಣ್ಣುಗಳಿಂದ ನೋಡುತ್ತಿರುವ 14ರ ಹುಡುಗಿ. ಆಕೆಗೆ ಅವಳ ಹಳ್ಳಿಯೇ ಪ್ರಪಂಚ, ತಂದೆ ತಾಯಿಯರೇ ಸರ್ವಸ್ವ. ಪುಟ್ಟ ತಮ್ಮನೆಂದರೆ ಲಕುಮಿಗೆ ಪಂಚಪ್ರಾಣ. ಊರಿನ ಜನರು, ಅಲ್ಲಿನ ಬದುಕೇ ಅವಳಿಗೆ ಮಾದರಿ. ಅವಳ ಕನಸುಗಳ ತುಂಬ ಇರೋದು ಊರಿನ ಹಸಿರು, ಅಮ್ಮನ ಉಸಿರು. ಹಳ್ಳಿ, ಹೆತ್ತವರು ಬಿಟ್ಟರೆ ಬೇರಾರೂ ತಿಳಿಯದ ಲಕುಮಿಗೆ ನೋವನ್ನು ನುಂಗಿ , ನಗೋ ಗುಣವೇ ಶ್ರೀ ರಕ್ಷೆ.

ಕುಡುಕ ಅಪ್ಪನ ಚುಚ್ಚುಮಾತುಗಳನ್ನ ಸಹಿಸಿಕೊಂಡು, ಅಮ್ಮನ ಸೆರಗ ಹಾಸಿನಲ್ಲೇ ಮಲಗಿ ನೆಮ್ಮದಿ ಕಂಡುಕೊಳ್ಳುತ್ತಿದ್ದ ಲಕುಮಿ, ಒಮ್ಮಿಂದೊಮ್ಮೆಗೇ ಹೊಸ ಸಂತಸವೊಂದಕ್ಕೆ ತನ್ನನ್ನು ಅನಿವಾರ್ಯವಾಗಿ ತೆರೆದುಕೊಳ್ಳಬೇಕಾಗುತ್ತದೆ. ಆದರೆ, ಸಂತಸವೆಂದು ಆಕೆ ಅಂದುಕೊಂಡದ್ದು ಉಳಿದಿದ್ದು ಕ್ಷಣ ಮಾತ್ರ. ಅಲ್ಲಿಂದ ಮುಂದೆ, ಲಕುಮಿಗೆಯೆದುರಿಗೆ ತೆರೆದುಕೊಳ್ಳುವುದು ಆಕೆ ಇಲ್ಲಿಯವರೆಗೆ ನೋಡದ ಹೊಸದೊಂದು ಜಗತ್ತು. ಆಕೆಗೆ ತಿಳಿಯದ ಈ ವಿಶ್ವ. ಲಕುಮಿಯನ್ನು ಹೇಗೆ ಸ್ವಾಗತಿಸುತ್ತದೆ ಅನ್ನುವುದು ಲಕುಮಿಯ ಕಥೆಗೆi ಮುನ್ನುಡಿ.

"ಲಕುಮಿ" ಧಾರಾವಾಹಿಯ ಬೆನ್ನಿಗಿರುವುದು, ಕನ್ನಡ ಚಲನಚಿತ್ರ ಜಗತ್ತಿನ ಯಶಸ್ವೀ ನಿರ್ಮಾಪಕ-ನಿರ್ದೇಶಕ ಪ್ರಕಾಶ್. ರಿಶಿ, ವಂಶಿ, ಮಿಲನದಂತಹ ಹಲವು ಸುಂದರ- ಸೂಪರ್ ಹಿಟ್ ಚಿತ್ರಗಳನ್ನಿತ್ತ ಪ್ರಕಾಶ್, ಮೊದಲ ಬಾರಿಗೆ, "ಲಕುಮಿ" ಮೂಲಕ ಕಿರುತೆರೆಗೆ ಪ್ರವೇಶಿಸುತ್ತಿದ್ದಾರೆ. ಪ್ರಕಾಶ್ ಅವರೇ ಧಾರಾವಾಹಿಗೆ ಚಿತ್ರಕಥೆ ರಚಿಸಿದ್ದಾರೆ. ಕನ್ನಡ ಚಲಚಿತ್ರಗಳಲ್ಲಿ ತಮ್ಮ ಭಿನ್ನ ರೀತಿಯ ನಿರ್ದೇಶನದಿಂದ ಹೆಸರಾಗಿರೋ ಪ್ರಕಾಶ್, ಧಾರಾವಾಹಿ ವೀಕ್ಷಕರಿಗೆ ಹೊಸ ಅನುಭವ ನೀಡಲು ಸಜ್ಜಾಗಿದ್ದಾರೆ.

ಅನುಭವೀ ಕಲಾವಿದರ ಜೊತೆಗೆ ಹೊಸ ಪ್ರತಿಭೆಗಳಿಗೂ ಲಕುಮಿಯಲ್ಲಿ ಅವಕಾಶ ನೀಡಲಾಗಿದೆ. ಚನ್ನಪಟ್ಟಣ ಸಮೀಪದ ಸುಂದರ ಹಳ್ಳಿಯಲ್ಲಿ ಚಿತ್ರೀಕರಣ ಭರದಿಂದ ಸಾಗಿದೆ. ಕಣ್ವಾ ಅಣೆಕಟ್ಟಿನ ಹಿನ್ನೀರಿನ ರಮಣೀಯ ಪರಿಸರವನ್ನೂ ಧಾರಾವಾಹಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ. ಪ್ರಕಾಶ್ ಅವರ ಚಲನಚಿತ್ರಗಳಲ್ಲಿ ಜೊತೆಗಿರುವ ತಂತ್ರಜ್ಞರ ತಂಡವೇ ಈ ಧಾರಾವಾಹಿಯಲ್ಲೂ ಅವರ ಜೊತೆಗಿದೆ. ಹೀಗಾಗಿ ತಾಂತ್ರಿಕವಾಗಿ ಸಹ ಲಕುಮಿ ಶ್ರೀಮಂತವಾಗಿ ಮೂಡಿಬರಲಿದೆ.

ಸುವರ್ಣ ವಾಹಿನಿಯಲ್ಲಿ, ಮೇ.17ರಿಂದ ಪ್ರತೀ ಸೋಮವಾರದಿಂದ ಶುಕ್ರವಾರ ರಾತ್ರಿ 9.30ಕ್ಕೆ ಲಕುಮಿ ತನ್ನ ಪಯಣ ಆರಂಭಿಸಲಿದ್ದಾಳೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada