»   » ಜೂನ್ 21ರಿಂದ ಗುರು ರಾಘವೇಂದ್ರ ವೈಭವ

ಜೂನ್ 21ರಿಂದ ಗುರು ರಾಘವೇಂದ್ರ ವೈಭವ

Posted By:
Subscribe to Filmibeat Kannada
ಕರ್ನಾಟಕ ಜನತೆಯ ಆರಾಧ್ಯ ಗುರು, ಮಂತ್ರಾಲಯದ ಮಹಿಮಾ ಪುರುಷ ಶ್ರೀ ರಾಘವೇಂದ್ರ ಸ್ವಾಮಿಗಳ ಜೀವನಗಾಥೆಯ ಸಂಪೂರ್ಣ ಚಿತ್ರಣ ನೀಡುವ ಧಾರಾವಾಹಿ, "ಗುರು ರಾಘವೇಂದ್ರ ವೈಭವ" ಸುವರ್ಣವಾಹಿನಿಯಲ್ಲಿ ಜೂನ್ 21ರಿಂದ ಆರಂಭವಾಗಲಿದೆ. ಪ್ರತಿಷ್ಠಿತ ಎಂ.ಎಸ್.ರಾಮಯ್ಯ ಮೀಡಿಯಾ ಎಂಡ್ ಎಂಟರ್‌ಟೈನ್‌ಮೆಂಟ್ ಪ್ರೈ.ಲಿ ಈ ಧಾರಾವಾಹಿಯ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದೆ.

ಬ.ಲ.ಸುರೇಶ್ ಅವರು ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದು, ಧಾರಾವಾಹಿಯ ಸಂಭಾಷಣೆ ಮತು ಚಿತ್ರಕಥೆಯ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದಾರೆ. ಧಾರಾವಾಹಿ ಬಗ್ಗೆ ಮಾತನಾಡಿದ ಅವರು, "ಶ್ರೀ ಗುರುಗಳ ಪೂರ್ವಾಶ್ರಮದ ಬದುಕು ಬವಣೆ ಭಾವನಾತ್ಮಕ ಹಾಗೂ ಚಾರಿತ್ರಿಕ ಘಟನೆಗಳೊಂದಿಗೆ 'ಗುರು ರಾಘವೇಂದ್ರ ವೈಭವ' ಕಥಾಹಂದರ ಬಿಚ್ಚಿಕೊಳ್ಳುತ್ತದೆ.

ಸತ್ಪುರುಷರ ಆಗಮನದ ಹಿನ್ನೆಲೆಯಲ್ಲಿ ಅವರ ಪೂರ್ವಜರು ನಿರ್ಮಿಸುವ ಭೂಮಿಕೆ ಮನೋಜ್ಞ. ಜ್ಞಾತ- ಅಜ್ಞಾತ ಸನ್ನಿವೇಶಗಳೊಂದಿಗೆ ಪಾತ್ರಗಳು ರಾಯರ ಆಗಮನಕ್ಕೆ ವೇದಿಕೆ ಸಿದ್ಧಪಡಿಸುತ್ತವೆ. ಆಳವಾದ ಅಧ್ಯಯನ ನಡೆಸಿ ಚಿತ್ರಕತೆ-ಸಂಭಾಷಣೆ ರಚಿಸಲಾಗಿದೆ.

ಇದಕ್ಕೆ ನಿರ್ಮಾಪಕರು ಪೂರ್ಣ ಸಹಕಾರ ನೀಡಿದ್ದಾರೆ. ಇದೊಂದು ವಿಶಿಷ್ಟ ಧಾರಾವಾಹಿಯಾಗಿ ಮೂಡಿ ಬರುವುದಕ್ಕೆ ಎಲ್ಲಾ ರೀತಿಯ ಗುಣಲಕ್ಷಣಗಳನ್ನೂ ಹೊಂದಿದೆ" ಎಂದರು. ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಕಾಲಘಟ್ಟವನ್ನು ಪರಿಣಾಮಕಾರಿಯಾಗಿ ಬಿಂಬಿಸುವ ನಿಟ್ಟಿನಲ್ಲಿ, 14-15 ನೇ ಶತಮಾನದ ಅರಮನೆ, ಮಠ ಇತ್ಯಾದಿಗಳ ಸೆಟ್‌ಗಳನ್ನು ಕಲಾ ನಿರ್ದೇಶಕ ಹೊಸಮನೆ ಮೂರ್ತಿ ಅದ್ದೂರಿಯಾಗಿ ನಿರ್ಮಿಸಿದ್ದಾರೆ ಎಂದು ಅವರು ಹೇಳಿದರು.

ಗುರು ಶ್ರೀ ರಾಘವೇಂದ್ರರ ಪೂರ್ವಾಶ್ರಮದ ತಾತ ಕನಕಾಚಲಾಚಾರ್ಯರು ವಿಜಯನಗರದ ಪತನದ ನಂತರ ಕುಟುಂಬ ಸಮೇತ ಆಶ್ರಯಕ್ಕಾಗಿ ಕುಂಭಕೋಣಂಗೆ ಬರುವುದರೊಡನೆ ಧಾರಾವಾಹಿ ಆರಂಭವಾಗುತ್ತದೆ. ರಾಯರ ಪೂರ್ವಾಶ್ರಮದ ರಸವತ್ತಾದ ಘಟನೆಗಳನ್ನು, ಗುರುರಾಯರ ಪವಾಡಗಳನ್ನೊಳಗೊಂಡ ಸಂಪೂರ್ಣ ಜೀವನಗಾಥೆಯನ್ನು, ಐತಿಹಾಸಿಕ ಸಂಶೋಧನೆಯ ಮೂಲಕ ಎಳೆ ಎಳೆಯಾಗಿ ಈ ದೈನಂದಿನ ಧಾರಾವಾಹಿ ಬಿಡಿಸಿಡಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸ್ಟಾರ್ ಸಮೂಹದ ದಕ್ಷಿಣ ವಿಭಾಗ ಮುಖ್ಯಸ್ಥ ಜಗದೀಶ್ ಕುಮಾರ್, ಜಾತಿ ಪಂಥಗಳ ಭೇದವಿಲ್ಲದೇ ಅಸಂಖ್ಯಾತ ಭಕ್ತರು ಇಂದಿಗೂ ರಾಘವೇಂದ್ರ ಸ್ವಾಮಿಗಳನ್ನು ಆರಾಧಿಸುತ್ತಿದ್ದಾರೆ. ಅವರೆಲ್ಲರ ಮನೆಗಳಿಗೆ ರಾಯರನ್ನು ತಲುಪಿಸೋ ಗುರಿಯನ್ನು ಸ್ಟಾರ್ ಸಮೂಹದ ಸುವರ್ಣ ವಾಹಿನಿ ಇಟ್ಟುಕೊಂಡಿದೆ ಎಂದರು.

ಸುವರ್ಣ ಬ್ಯುಸಿನೆಸ್ ಹೆಡ್ ಅನೂಪ್ ಚಂದ್ರಶೇಖರ್, "ಗುರು ರಾಘವೇಂದ್ರ ವೈಭವ ಸುವರ್ಣ ವಾಹಿನಿಯ ಗೌರವಾನ್ವಿತ ಧಾರಾವಾಹಿಯಾಗಿ ಮೂಡಿ ಬರಲಿದೆ" ಎಂಬ ವಿಶ್ವಾಸ ವ್ಯಕ್ತ ಪಡಿಸಿದರು. ರಾಯರ ಬಗ್ಗೆ ದಾಖಲಿಸಲಾದ ಹಲವು ಕೌತುಕಮಯ ಪವಾಡಗಳು, ಸನ್ನಿವೇಶಗಳು ಧಾರಾವಾಹಿಯಲ್ಲಿ ಮರು ಜೀವ ಪಡೆಯಲಿವೆ ಎಂದವರು ವಿವರಿಸಿದರು.

ಎಂ.ಎಸ್.ರಾಮಯ್ಯ ಮೀಡಿಯಾ ಎಂಡ್ ಎಂಟರ್‌ಟ್ರೈನ್‌ಮೆಂಟ್ ಪ್ರೈ.ಲಿ ನ ಮುಖ್ಯಸ್ಥರಾದ ಪಟ್ಟಾಭಿರಾಮ್ ಹಾಗೂ ಸುವರ್ಣ ವಾಹಿನಿಯ ಧಾರಾವಾಹಿ ವಿಭಾಗದ ಮುಖ್ಯಸ್ಥರಾದ ರಾಜಾರವಿ ಉಪಸ್ಥಿತರಿದ್ದರು. ಕನ್ನಡ ಬೆಳ್ಳಿತೆರೆಯ ಕಲಾವಿದರಾದ ಶ್ರೀನಿವಾಸ ಮೂರ್ತಿ, ಪವಿತ್ರಾ ಲೋಕೇಶ್, ಶಿವರಾಂ, ಉಮೇಶ್ ಸೇರಿದಂತೆ ಹಲವು ಖ್ಯಾತನಾಮರು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಇವರ ಜೊತೆಗೆ, ಹೊಸ ಪ್ರತಿಭೆಗಳಿಗೂ ಮಣೆ ಹಾಕಲಾಗಿದ್ದು ಇವೆರಡರ ಸಂಗಮದಲ್ಲಿ ಗುರು ರಾಘವೇಂದ್ರ ವೈಭವ ಮೂಡಿಬರಲಿದೆ. ಗುರು ರಾಘವೇಂದ್ರ ವೈಭವ' ಸುವರ್ಣವಾಹಿನಿಯಲ್ಲಿ ಜೂನ್ 21ರಿಂದ, ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ, ರಾತ್ರಿ 10 ಗಂಟೆಗೆ ಮೂಡಿ ಬರಲಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada