twitter
    For Quick Alerts
    ALLOW NOTIFICATIONS  
    For Daily Alerts

    ಸೇತುರಾಂ ಅವರ ಹೊಸ ಧಾರಾವಾಹಿ ದಿಬ್ಬಣ

    By Staff
    |

    Deepu in Zee Kannadas Dibbana
    'ಮಂಥನ' ದ ಮೂಲಕ ಕಿರುತೆರೆಯ ಧಾರಾವಾಹಿ ಲೋಕದಲ್ಲಿ ಒಂದು ಹೊಸ ಟ್ರೆಂಡ್ ಹುಟ್ಟುಹಾಕಿದವರು ಎಸ್.ಎನ್.ಸೇತುರಾಂ. ಅದು ಶುರುವಾದಾಗ ಅದರಲ್ಲಿನ ಹರಿತವಾದ ಸಂಭಾಷಣೆಗೆ ಬೆರಗಾಗದವರಿರಲಿಲ್ಲ ; ಪಾತ್ರಚಿತ್ರಣ, ನಿರೂಪಣೆಯಲ್ಲಿಯೂ ಆಗಲೇ ಪ್ರಸಾರವಾಗುತ್ತಿದ್ದ ಧಾರಾವಾಹಿಗಳಿಗಿಂತ ಭಿನ್ನವಾಗಿದ್ದು, ತನ್ನದೇ ಆದ ಒಂದು ದೊಡ್ಡ ವೀಕ್ಷಕ ವರ್ಗವನ್ನೇ ಸೃಷ್ಟಿಸಿಕೊಂಡಿದ್ದ ಧಾರಾವಾಹಿಯದು. ಈಗ ಮತ್ತೆ ಹಲವು ತಿಂಗಳುಗಳ ನಂತರ ಸೇತುರಾಂ ಮತ್ತೊಂದು ಧಾರಾವಾಹಿ ದಿಬ್ಬಣದೊಂದಿಗೆ ಹೊರಟಿದ್ದಾರೆ. ಇದು ಜೀ ಕನ್ನಡ ವಾಹಿನಿಯಲ್ಲಿ ಇದೇ ಫೆಬ್ರವರಿ 16 ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ರಾತ್ರಿ ಒಂಭತ್ತು ಗಂಟೆಗೆ ಪ್ರಸಾರವಾಗುತ್ತಿದೆ.

    ವಿಶ್ವಾಸ್ ಬೀಡಿ ವರ್ಕ್ಸ್ ಎನ್ನುವ ಬೀಡಿ ಇಂಡಸ್ಟ್ರಿಯೊಂದರ ಪಾಪಪ್ರಜ್ಞೆ ಕಥೆಯ ಕೇಂದ್ರ ; ವಿಷವನ್ನು ಹಂಚಿ ಬದುಕುತ್ತಿದ್ದೀವಿ ಎನ್ನುವ ಅಪರಾಧೀ ಪ್ರಜ್ಞೆ ಅದಕ್ಕೆ ಸಂಬಂಧಪಟ್ಟ ಪ್ರತಿಯೊಬ್ಬರನ್ನೂ ಒಂದಲ್ಲಾ ಒಂದು ರೀತಿಯಲ್ಲಿ ಕಾಡುತ್ತಿರುತ್ತದೆ ; ಹೀಗಾಗಿ ದುಡ್ಡಿದ್ದರೂ ಸುಖವಿಲ್ಲ, ನಿಲ್ಲಿಸಲು ಮನಸ್ಸಿಲ್ಲ, ಬಂದ ಲಾಭದಲ್ಲಿ ಸ್ವಲ್ಪ ಹಂಚಿ ಮನಸ್ಸಿಗೆ ಸಮಾಧಾನ ಕಂಡುಕೊಳ್ಳುವ, ಸಮರ್ಥನೆ ಕೊಟ್ಟುಕೊಳ್ಳುವ ಪ್ರಯತ್ನ, ಅದರಲ್ಲಿ ಭಿನ್ನಾಭಿಪ್ರಾಯ . . .ಮನಸ್ತಾಪ . . .ಅಧಿಕಾರಕ್ಕಾಗಿ ಹಪಹಪಿಸುವಿಕೆ . . . ನೋಡುತ್ತಾ ನೋಡುತ್ತಾ ಮನುಷ್ಯ ಸ್ವಭಾವದ ಸೂಕ್ಷ್ಮ ಒಳನೋಟಗಳ ದರ್ಶನ, ಹೀಗೂ ಇರುತ್ತಾ ಎನ್ನುವ ಆಶ್ಚರ್ಯದ ಭಾವ . . .ಕೆಲವೊಮ್ಮೆ ಬೆಚ್ಚಿಬೀಳಿಸಬಹುದು ಕೂಡಾ.

    ಸೇತುರಾಂ ಹೇಳುವಂತೆ ಮಂಥನ ಧಾರಾವಾಹಿ ಒಂದು ವೈಯಕ್ತಿಕ ನೆಲೆಗಟ್ಟಿನಲ್ಲಿ ಮೂಡಿ ಬಂದಂಥಹದ್ದಾಗಿತ್ತು. ಮುಖ್ಯವಾಗಿ ಸುಖ-ದುಃಖ, ನೋವು-ನಲಿವು, ತೃಪ್ತಿ-ಅತೃಪ್ತಿ, ಎಲ್ಲಾ ಭಾವನಾತ್ಮಕ ನೆಲೆಗಟ್ಟಿನಲ್ಲಿ ಉಂಟಾಗುವುದು ಮತ್ತು ಅವುಗಳ ಇತಿ-ಮಿತಿ ಕೂಡಾ ಮನಸ್ಸಿನ ಭಾವನೆಗಳಿಗೆ ಸೀಮಿತವಾದದ್ದು, ಈ ನಂಬಿಕೆಯಲ್ಲಿ ನಡೆಸಿದ ಪ್ರಯತ್ನವಾಗಿತ್ತು. ದಿಬ್ಬಣ ಈ ವೈಯಕ್ತಿಕ ನೆಲೆಗಟ್ಟನ್ನು ಮೀರಿ ಒಂದು ಸಾಮಾಜಿಕ ನೆಲೆಗಟ್ಟಿನಲ್ಲಿ ಅದೇ ಸುಖ-ದುಃಖ ನೋವು-ನಲಿವು, ತೃಪ್ತಿ-ಅತೃಪ್ತಿ, ಇವುಗಳನ್ನು ಹುಡುಕುವ ಬದುಕಿನ ಚಿತ್ರಣದ ಪ್ರಯತ್ನವಾಗಿದೆ.

    ಸ್ವಂತಕ್ಕೆ, ವೈಯಕ್ತಿಕ ಸ್ತರದಲ್ಲಿ ಸುಖವಿಲ್ಲದಿದ್ದರೂ ಸಮಾಜದ ದೃಷ್ಟಿಯಲ್ಲಿ ಪ್ರದರ್ಶನದ ಮೂಲಕ ಪರಮಸುಖಿಗಳು ಎಂಬ ಭಾವವನ್ನು ಬಿಂಬಿಸುತ್ತಾ, ದಿನನಿತ್ಯ ಅಸುಖಿಗಳಾಗಿ ನರಳುವ ಬದುಕಿನ ಅನಾವರಣ ದಿಬ್ಬಣ. ದಿನದಿಂದ ದಿನಕ್ಕೆ ಹೆಚ್ಚೆಚ್ಚು ವಸ್ತುಗಳನ್ನು ಸ್ವಂತವಾಗಿಸಿಕೊಳ್ಳುತ್ತಾ, ಅನುಭವಿಸುವುದಕ್ಕೆ ಸಮಯವೇ ಇಲ್ಲದ ಪರಿಸ್ಥಿತಿಯನ್ನು ಮುಟ್ಟಿ, ನನಗಿದೆ ಮಿಕ್ಕವರಿಗಿಲ್ಲ, ಈ ಭಾವದಲ್ಲೇ ಸುಖವನ್ನು ಹುಡುಕುತ್ತಾ ಬದುಕು ಸವೆಸುವ ಮನಸ್ಥಿತಿಯ ದುರಂತವನ್ನು ಇಲ್ಲಿ ಕಟ್ಟಿಕೊಟ್ಟಿರುವ ಪರಿ ಅನನ್ಯ.

    ಮಂಥನ ನೋಡಿದವರಿಗೆ ಸೇತುರಾಂ ರವರ ಮೊನಚಾದ ಸಂಭಾಷಣೆಯ ಪರಿಚಯ ಇದ್ದೇ ಇದೆ, ನೋಡಿರದವರಿಗೆ ಇಲ್ಲಿವೆ ಕೆಲವು ಸ್ಯಾಂಪಲ್ಲುಗಳು

    *ಗಂಡಸರ ಬುದ್ಧಿ, ಆರು ತಿಂಗಳಲ್ಲ ವರ್ಷ ಸುತ್ತು, ಅರ್ಥ ಆಗಲ್ಲ. ಮದುವೆಗೆ ಮುಂಚೆ ನಿನಗೆ ಹ್ಯಾಗೆ ಬೇಕೋ ಹಾಗಿರ್ತಾರೆ, ನಂತರ ಅವರಿಗೆ ಹೇಗೆ ಬೇಕೋ ಹಾಗೇ ಆಡ್ತಾರೆ, ಮತ್ತೆ ನೇರ ಆಗೋದು ಮೆತ್ತಗಾದ ಮೇಲೇನೆ.

    *ವಯಸ್ಸಲ್ಲಿ ಕೈ ಹಿಡಿದು ಕುಣಿಸ್ತಾರೆ, ವಯಸ್ಸಾಕ್ತಿದ್ದ ಹಾಗೆ ಹೆಗಲಿಡಿದು ತೆವಳ್ತಾರೆ, ಮಧ್ಯದ್ದು ಬದುಕು ಅಲ್ಲಿ ನರಳುಸ್ತಾರೆ.

    *ನಿಮಗೆ ವಯಸ್ಸು ಹೋಗದೆ ನಮಗೆ ವಯಸ್ಸು ಬರಬಾರದು ; ಬೆತ್ತಲೆ ತಿರುಗಿದರೂ ಮಗಳು ಮಗಳೇ, ಅಮ್ಮ ಅಮ್ಮಾನೆ. ಅಲ್ಲಲ್ವಾ ಗಂಡಸು ಮನುಷ್ಯ ಆಗೋದು.

    *ಗಂಡನ್ನ ಕೇಳಿದೆ, ಯೋಗ್ಯತೆ ಇಲ್ಲದ ಮೇಲೆ ಮದುವೆ ಯಾಕಾದ್ರಿ ಅಂಥ, ತಪ್ಪಾಯ್ತು ಅಂದ. ಅತ್ತೆ-ಮಾವನ್ನ ಕೇಳಿದೆ, ಮದುವೆ ಆದ ಮೇಲೆ ಸರಿಹೋಕ್ತಾನೆ ಅಂದ್ಕೊಂಡಿದ್ವಿ, ಸರಿ ಹೋಗಲಿಲ್ಲ, ತಪ್ಪಾಯ್ತು ಅಂದ್ರು. ಈಗ ನೀನೂ ಅಂತಿದೀಯ ತಪ್ಪಾಯ್ತು, ನಾನೀಗ ಆ ಮಗುವಿಗೆ ಹೇಳ್ಲಾ? ನಿನ್ನನ್ನು ಈ ಭೂಮಿಗೆ ತಂದದ್ದು ತಪ್ಪಾಯ್ತು ಕಣೆ, ಮದುವೆಯಾಗಿ ಮೈ ಮರೆತಿದ್ದು ಯಾರದೋ ಪರಕೀಯನ ತೆಕ್ಕೆಯಲ್ಲಲ್ಲ, ಸ್ವಂತ ಗಂಡ, ಮುಂದಿಂದು ಸ್ವಾಭಾವಿಕ ಪ್ರಕೃತಿ ನಿಯಮ ಅಂಥ.

    ಚಿತ್ರಕಥೆ, ಸಂಭಾಷಣೆ, ಎಸ್.ಎನ್.ಸೇತುರಾಂ, ನಿರ್ದೇಶನ ರಮೇಶ್ ಇಂದಿರಾ. ತಾರಾಗಣ; ವೀಣಾ ಸುಂದರ್, ಶೃತಿನಾಯ್ಡು, ಅರುಣಾ ಬಾಲ್‌ರಾಜ್, ಪ್ರೀತಿ ಚಂದ್ರಶೇಖರ್, ನಂದಿನಿ ಪಟವರ್ಧನ್, ದೀಪು, ನಂಜುಂಡ, ರಘು ಸಮರ್ಥ, ಶಿವಾಜಿರಾವ್ ಜಾಧವ್, ಹರಿಕೃಷ್ಣ, ನಿತಿನ್ ಮುಂತಾದವರು.

    (ದಟ್ಸ್ ಕನ್ನಡ ಚಿತ್ರವಾರ್ತೆ)

    ಬೆಂಗಳೂರಿನ ನರಸಿಂಹಮೂರ್ತಿ ಡ್ಯಾಡಿ ನಂ.1

    Wednesday, February 18, 2009, 18:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X