»   » ಮೈಸೂರು ಲಲಿತ ಮಹಲ್‌ನಲ್ಲಿ ಚಿ.ಸೌ.ಸಾವಿತ್ರಿ ಮದುವೆ !

ಮೈಸೂರು ಲಲಿತ ಮಹಲ್‌ನಲ್ಲಿ ಚಿ.ಸೌ.ಸಾವಿತ್ರಿ ಮದುವೆ !

Posted By:
Subscribe to Filmibeat Kannada

ಜೀ ಕನ್ನಡ ವಾಹಿನಿಯ ಯಶಸ್ವಿ ಧಾರಾವಾಹಿ ಚಿ.ಸೌ.ಸಾವಿತ್ರಿ ಕನ್ನಡ ಕಿರುತೆರೆಯಲ್ಲಿ ಹೊಸ ಇತಿಹಾಸ ಬರೆದಿದೆ. ಇದುವರೆಗೂ ದೊಡ್ಡ ಬಜೆಟ್‌ನ ಸಿನಿಮಾಗಳ ಚಿತ್ರೀಕರಣ ಮಾತ್ರ ನಡೆಯುತ್ತಿದ್ದ ಮೈಸೂರಿನ ಲಲಿತ ಮಹಲ್ ಅರಮನೆಯಲ್ಲಿ, ಚಿ.ಸೌ.ಸಾವಿತ್ರಿ ಧಾರಾವಾಹಿಗಾಗಿ ದುಬಾರಿ ವೆಚ್ಚದಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಅದು ಸಾವಿತ್ರಿಯ ಮದುವೆ ಮಹೋತ್ಸವದ ಚಿತ್ರೀಕರಣ. ಇದನ್ನು ಸಾಧ್ಯವಾಗಿಸಿದ ಹೆಗ್ಗಳಿಕೆ ನಿರ್ದೇಶಕಿ ಶ್ರುತಿ ನಾಯ್ಡು, ರಮೇಶ್ ಇಂದಿರಾ ಹಾಗೂ ತಂಡದವರದು. ಚಿತ್ರೀಕರಣದಲ್ಲಿ ನೂರಕ್ಕೂ ಹೆಚ್ಚು ಕಲಾವಿದರು ಪಾಲ್ಗೊಂಡಿದ್ದು ಮತ್ತೊಂದು ವಿಶೇಷ.

ದಿಗ್ಗಜರು, ಪಾಂಡವರು ಸೇರಿದಂತೆ ಅನೇಕ ಕನ್ನಡ, ತಮಿಳು ಚಿತ್ರಗಳ ಚಿತ್ರೀಕರಣ ನಡೆದಿರುವ ಐತಿಹಾಸಿಕ ಲಲಿತಮಹಲ್, ಬ್ರಿಟಿಷ್ ವೈಸರಾಯ್‌ಗಳು ಹಾಗೂ ವಿಶೇಷ ಅತಿಥಿಗಳಿಗಾಗಿ ಮೈಸೂರು ಮಹಾರಾಜರಿಂದ 1931ರಲ್ಲಿ ಕಟ್ಟಲ್ಪಟ್ಟಿದ್ದು.

ಈಗ ಸರಕಾರಿ ಪಂಚತಾರಾ ಹೋಟೇಲ್ ಆಗಿ ಪರಿವರ್ತನೆಯಾಗಿದೆ. ಕಳೆದ 25 ವರ್ಷಗಳಿಂದ ಇಲ್ಲಿ ಚಿತ್ರೀಕರಣಕ್ಕೆ ಅವಕಾಶ ನೀಡಲಾಗುತ್ತಿದೆ. ಸೂಪರ್ ಸ್ಟಾರ್ ರಜನೀಕಾಂತ್, ವಿಷ್ಣುವರ್ಧನ್, ಅಂಬರೀಷ್ ಸೇರಿದಂತೆ ಅನೇಕರ ಕನ್ನಡ, ತಮಿಳು, ತೆಲುಗು, ಹಿಂದಿ ಚಿತ್ರಗಳು ಇಲ್ಲಿ ಚಿತ್ರೀಕರಣಗೊಂಡಿವೆ.

ಈ ಮದುವೆ ಯಾಕೆ ಮಹತ್ವದ್ದು?
ಮನೆ ಕೆಲಸದ ಹುಡುಗಿ ಸಾವಿತ್ರಿ, ಮನೆಯೊಡತಿಯೇ ಆಗ್ತಾಳಾ? ಎಂಬ ಪ್ರಶ್ನೆಗೆ ಉತ್ತರ ಈ ಮದುವೆಯಲ್ಲಿ ದೊರೆಯಲಿದೆ. ಸಾಧನೆ, ಸಂಸ್ಕಾರದಿಂದ ಸಾಮಾನ್ಯರೂ ಬಹಳ ಎತ್ತರಕ್ಕೆ ಏರಬಹುದು ಎನ್ನುವುದಕ್ಕೆ ಸಾವಿತ್ರಿ ದಿಕ್ಸೂಚಿಯಾಗುತ್ತಿದ್ದಾಳೆ.

ಇಲ್ಲಿ ಇಬ್ಬರು ವರ, ಒಬ್ಬಳೇ ವಧು ! ಮೊದಲನೇ ವರ ಸಾವಿತ್ರಿಯ ಬಾಲ್ಯದ ಗೆಳೆಯ ವಿಶ್ವ. ಇನ್ನೊಬ್ಬ ವರ ರಾಜ್ಯದ ಮುಂದಿನ ಮುಖ್ಯಮಂತ್ರಿ ನರಸಿಂಹರಾವ್! ಅವರು ಸಾವಿತ್ರಿಗಿಂತ 30 ವರ್ಷ ದೊಡ್ಡವರು. ಸಾವಿತ್ರಿಯ ವರ ಎಂಎಲ್‌ಎ ನರಸಿಂಹರಾವ್ ಆಗ್ತಾರಾ, ಗೆಳೆಯ ವಿಶ್ವನೇ ಆಗ್ತಾನಾ ಅಥವಾ ಇನ್ನೇನೋ ಬೇರೆಯದೇ ನಡೆಯುತ್ತಾ ಎನ್ನುವುದು ಸದ್ಯದ ಕುತೂಹಲ. ಅದೇನೇ ಇದ್ದರೂ ಈ ಮದುವೆಯಲ್ಲಿ ಸತ್ಯ ಅನಾವರಣಗೊಳ್ಳಲಿದೆ!

ಜೀ ಕನ್ನಡದಲ್ಲಿ ಅಕ್ಟೋಬರ್ 22 ರಿಂದ ಸಂಜೆ 7 ಗಂಟೆಗೆ ಸಾವಿತ್ರಿ ಮಹಾ ಮದುವೆಯ ವಿಶೇಷ ಸಂಚಿಕೆಗಳು ಪ್ರಸಾರವಾಗುತ್ತವೆ. ಶ್ರುತಿನಾಯ್ಡು ನಿರ್ದೇಶನದಲ್ಲಿ ಜೈಜಗದೀಶ್, ಗೌತಮಿ, ಬಿ.ವಿ. ರಾಧಾ, ಮಂಡ್ಯ ರಮೇಶ್, ಸುಂದರ್, ನಂದಿನಿ ಪಟವರ್ಧನ್, ಶಿವಾಜಿರಾವ್ ಜಾಧವ್, ವೀಣಾ ರಾವ್, ಕಾವ್ಯ ಕಣ್ಣನ್ ಮೊದಲಾದ ಕಲಾವಿದರು ನಟಿಸುತ್ತಿದ್ದಾರೆ.

ಈ ಯುಗದ ಹೊಸ ಸಾವಿತ್ರಿಯ ಕುಂಕುಮ ಸೌಭಾಗ್ಯದ ಕತೆ ಚಿ.ಸೌ.ಸಾವಿತ್ರಿ. ಕಳೆದ ಜುಲೈ 26ರಿಂದ ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ಪ್ರಸಾರಗೊಳ್ಳುತ್ತಿದೆ. ಈಗಾಗಲೇ ಯಶಸ್ವಿ 100 ಸಂಚಿಕೆಯ ಸನಿಹದಲ್ಲಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada