»   »  ಅರ್ಧ ಶತಕ ಬಾರಿಸಿದ ಇಲ್ಲಿರುವುದು ಸುಮ್ಮನೆ

ಅರ್ಧ ಶತಕ ಬಾರಿಸಿದ ಇಲ್ಲಿರುವುದು ಸುಮ್ಮನೆ

Posted By: Staff
Subscribe to Filmibeat Kannada
Illiruvudu Summane complets 50 episodes
ಓದು, ನೌಕರಿ ಎಂದು ಯುವಜನಾಂಗ ಹಳ್ಳಿಯಿಂದ ಗುಳೇ ಎದ್ದು ಪಟ್ಟಣ ಸೇರುತ್ತಿದೆ. ಇವರ ಬೇರುಗಳು ಊರಿನಲ್ಲಿಯೇ ಇವೆ. ಹೆತ್ತವರಿಗೆ ತಮ್ಮ ಹುಟ್ಟಿದ ಮನೆ, ತೋಟ, ಜಮೀನು, ಕೃಷಿ ಬಿಟ್ಟು ಪಟ್ಟಣ ಸೇರಲು ಮನಸಿಲ್ಲ. ಪಟ್ಟಣದ ಗೌಜು, ಗದ್ದಲ, ಟ್ರಾಫಿಕ್ಕು, ಯಾಂತ್ರಿಕ ಜೀವನ ಇವರಿಗೆ ಗಂಟಲಲ್ಲಿ ಇಳಿಯದ ಮೃಷ್ಟಾನ್ನ.

ನೌಕರಿ, ಬಿಸಿನೆಸ್ಸು, ಫ್ಲ್ಯಾಟು, ಕಾರು, ಸಾಲ, ಮದುವೆ, ಮಕ್ಕಳು, ಕಮಿಟ್‌ಮೆಂಟು ಹೀಗೆ ಚಕ್ರವ್ಯೂಹದಲ್ಲಿ ಸಿಕ್ಕಿ ಹೊರಬರಲಾರದೇ ತೊಳಲಾಡುವ ಇವರು ತಮ್ಮ ಊರಿಗೆ ಹೋಗಿ ಹೆತ್ತವರಿಗೆ ಮುಖ ತೋರಿಸಿ ಬರುವುದು ಆಗೊಮ್ಮೆ ಈಗೊಮ್ಮೆ.

ಊರು ಬಿಟ್ಟು ಪಟ್ಟಣ ಸೇರಿದ ಮಕ್ಕಳ ತಳಮಳ, ಇತ್ತ ಪಟ್ಟಣ ಸೇರಲಾರದೇ ಹಳ್ಳಿಯಲ್ಲಿ ಉಳಿದುಹೋದ ಮತ್ತು ಒಲ್ಲದ ಮನಸಿನಿಂದ ಪಟ್ಟಣ ಸೇರಿದ ಹಿರಿಯ ಮನಸುಗಳ ತುಮುಲಗಳನ್ನು ನಿರ್ದೇಶಕ ಪ್ರಕಾಶ ಬೆಳವಾಡಿ ಪರಿಣಾಮಕಾರಿಯಾಗಿ 'ಇಲ್ಲಿರುವುದು ಸುಮ್ಮನೆ' ಧಾರಾವಾಹಿಯಲ್ಲಿ ನಿರೂಪಿಸಿದ್ದಾರೆ. ಇಲ್ಲಿರುವುದು ಸುಮ್ಮನೆ ಮೆಗಾ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ರಾತ್ರಿ 8 ರಿಂದ 8.30 ರವರೆಗೆ ಪ್ರಸಾರವಾಗುತ್ತಿದೆ.

ಹಿರಿಯಣ್ಣ, ಪೋಸ್ಟ್ ಇಲಾಖೆಯಲ್ಲಿ ದುಡಿದು ನಿವೃತ್ತರಾಗಿ, ಅಗ್ರಹಾರದಲ್ಲಿ ತೋಟ, ಕೃಷಿ ನೋಡಿಕೊಂಡಿದ್ದವರು. ಇಳಿವಯಸ್ಸಿನಲ್ಲಿ ಹೆಂಡತಿ ಬಾಗು ಕಣ್ಮುಚ್ಚುತ್ತಾಳೆ. ಹೆಂಡತಿಯ ಅಗಲಿಕೆಯ ನಂತರ ಅವಳ ಅಗತ್ಯತೆ, ಅನಿವಾರ್ಯತೆಯ ಅರಿವು ಆಗತೊಡಗುತ್ತದೆ. ಇವರಿಗೆ ಮೂರು ಜನ ಗಂಡು ಮಕ್ಕಳು. ಹಿರಿಯ ಮಗ ಸದಾನಂದ ಬೆಂಗಳೂರಿನಲ್ಲಿ ಮ್ಯಾನೇಜ್‌ಮೆಂಟ್ ಕನ್ಸಲ್ಟಂಟ್, ಹೆಂಡತಿ ನೌಕರಿ ಮಾಡುತ್ತಾಳೆ. ಸದಾನಂದನಿಗೆ ಇಬ್ಬರು ಮಕ್ಕಳು, ಹಿರಿಯ ಮಗಳು ಸಾಕ್ಷಿ ಇಂಜನಿಯರಿಂಗ್ ಓದುತ್ತಿದ್ದಾಳೆ, ಕಿರಿಯ ಮಗಳು ಶಿಲ್ಪಾ ಎಂಟನೆಯ ತರಗತಿ ಓದುತ್ತಿರುವ ವಿದ್ಯಾರ್ಥಿನಿ.

ಎರಡನೆಯ ಮಗ ಹರ್ಷ, ಹೆಂಡತಿ ಪೂರ್ಣಿಮಾ, ಇಬ್ಬರೂ ಡಾಕ್ಟರು. ಮೂರನೆಯ ಮಗ ಸಂತೋಷ, ಬಿಬಿಎಂ ವ್ಯಾಸಾಂಗವನ್ನು ಅರ್ಧಕ್ಕೆ ನಿಲ್ಲಿಸಿ ಅಗ್ರಹಾರದ ಭಾವನಾ ಬಳಿ ಸಂಗೀತಾಭ್ಯಾಸ ಮಾಡುತ್ತಿರುತ್ತಾನೆ. ಇದೇ ಕಾರಣಕ್ಕೆ ಅಣ್ಣಂದಿರ ಮತ್ತು ತಂದೆಯ ಕೆಂಗಣ್ಣಿಗೆ ಗುರಿಯಾಗಿ ಮುಂದೆ ಪಟ್ಟಣ ಸೇರಿ ನೌಕರಿಗೆ ಸೇರಬೇಕಾಗುತ್ತದೆ.

ಸಂತೋಷನ ಸಂಗೀತದ ಗುರು, ಭಾವನಾಳ ಗಂಡ ಯುದ್ಧದಲ್ಲಿ ದೇಶಕ್ಕೆ ತಮ್ಮ ಪ್ರಾಣವನ್ನು ಅರ್ಪಿಸಿದ ಯೋಧ. ಗಂಡನನ್ನು ಕಳೆದುಕೊಂಡ ನಂತರ ಸಂಗೀತವನ್ನೇ ತನ್ನುಸಿರಾಗಿಸಿಕೊಂಡು ಬದುಕುತ್ತಿದ್ದ ಭಾವನಾಳಿಗೆ ಅವಳ ಬಾಳಿನಲ್ಲಿ ಪುಟ್ಟನ ಪ್ರವೇಶ ಹೊಸ ದಿನಗಳನ್ನು ತರುತ್ತವೆಯೇ ಎಂಬ ಕುತೂಹಲವನ್ನು ನಿರ್ದೇಶಕರು ಸಂಚಿಕೆಯಿಂದ ಸಂಚಿಕೆಗೆ ಕಾಪಾಡಿಕೊಂಡು ಹೋಗುತ್ತಿದ್ದಾರೆ.

ಈ ಹಂತದಲ್ಲಿಯೇ ಹಿರಿಯಣ್ಣ ಮಕ್ಕಳ ಒತ್ತಾಯಕ್ಕೆ ಮಣಿದು ಒಲ್ಲದ ಮನಸಿನಿಂದ ಬೆಂಗಳೂರಿಗೆ ಬರುತ್ತಾರೆ. ಮಕ್ಕಳ ಮನೆಯಲ್ಲಿ ಹೊಂದಿಕೊಳ್ಳಲು ಅವರು ಪಡುವ ಪಡಿಪಾಟಲು, ಮಕ್ಕಳು, ಮೊಮ್ಮಕ್ಕಳೊಂದಿಗಿದ್ದರೂ ಕಿತ್ತು ತಿನ್ನುವ ಒಂಟಿತನ, ಪದೇ ಪದೇ ನೆನಪಾಗುವ ಅಗ್ರಹಾರ ಮತ್ತು ಬಾಗು ಇವೆಲ್ಲ ಹಿರಿಯಣ್ಣರನ್ನು ಮತ್ತೆ ಅಗ್ರಹಾರದತ್ತ ಮುಖ ಮಾಡುವಂತೆ ಮಾಡುವವೆ?

ಸದಾನಂದ, ಹರ್ಷರಿಗೆ ಬೆಂಗಳೂರಿನಿಂದ ಅಗ್ರಹಾರಕ್ಕೆ ಮರಳುವ ಮನಸಿಲ್ಲ ಹಾಗಂತ ಬೆಂಗಳೂರಿನ ಜೀವನಕ್ಕೆ ಹೊಂದಿಕೊಳ್ಳಲಾಗದೇ ಹೊಂದುಕೊಂಡು ಬದುಕುವ ಅನಿವಾರ್ಯತೆ. ವೃತ್ತಿ ಜೀವನ ಹಾಗೂ ಖಾಸಗಿ ಜೀವನದಲ್ಲಿ ಸಾಕಷ್ಟು ಏರುಪೇರುಗಳನ್ನು ಅನುಭವಿಸುವ ಇವರು ಮತ್ತೆ ಅಗ್ರಹಾರದತ್ತ ತೆರಳುವರೇ ಅಥವಾ ಬೆಂಗಳೂರಿನಲ್ಲಯೇ ಜೀವನ ಮುಂದುವರೆಸುವರೇ?

ಇತ್ತ ಸಂತೋಷನ ಮನಸ್ಥಿತಿಯೂ ಮನೆಯವರಿಗಿಂತ ಭಿನ್ನವೇನಲ್ಲ. ಒಂದಿಷ್ಟು ಹಣ ಸಂಪಾದಿಸಿ ಅವನೂ ಅಗ್ರಹಾರಕ್ಕೆ ಮರಳುವ ಯೋಜನೆಯನ್ನು ಮಾಡುತ್ತಾನೆ. ಅಣ್ಣನ ಕಂಪನಿಯಲ್ಲಿಯೇ ಕೆಲಸಕ್ಕೆ ಸೇರುವ ಸಂತೋಷ ಮುಂದೊಂದು ದಿವಸ ಅಲ್ಲಿಂದ ಹೊರಬಂದು ಪದ್ಮರಾಜ್ ಎನ್ನುವವರ ಬಳಿ ಎಕ್ಸಿಕ್ಯೂಟಿವ್ ಅಸಿಸ್ಟಂಟ್ ಆಗಿ ಕೆಲಸಕ್ಕೆ ಸೇರುತ್ತಾನೆ.

ಇಲ್ಲಿರುವುದು ಸುಮ್ಮನೆ ಧಾರಾವಾಹಿಯ ಇನ್ನೊಂದು ಪ್ಲಸ್ ಪಾಯಿಂಟ್ ಅದರ ಸಂಭಾಷಣೆಗಳು. ಸ್ಯಂಪಲ್ಲುಗಳು ನಿಮಗಾಗಿ-

''ಯಾರನ್ನಾದರೂ ಕೇಳಿ, ತಮ್ಮ ಊರು ಬೇರೇನೆ ಅಂತ ಹೇಳ್ತಾರೆ. ಯಾರೂ ಬೆಂಗಳೂರು ತಮ್ಮ ಊರು ಅಂತಾ ಹೇಳೋದೇ ಇಲ್ಲ ''

''ನನ್ನ ಸ್ನೇಹಿತ ಕಳೆದುಹೋಗಿದ್ದಾನೆ ಬೆಂಗಳೂರಿನಲ್ಲಿ ಎಲ್ಲರೂ ಕಳೆದುಹೋಗಿದ್ದಾರೆ''

''ಶೀಘ್ರದಲ್ಲಿಯೇ ಕರ್ನಾಟಕದಲ್ಲಿ ಮರುಭೂಮಿಯೊಂದು ನಿರ್ಮಾಣವಾಗುತ್ತದೆ ''

''ಸಮಾಜಶಾಸ್ತ್ರ ಪಾಸು ಸಮಾಜ ಫೇಲು''

ನಿರ್ದೇಶಕ ಪ್ರಕಾಶ ಬೆಳವಾಡಿಯವರ ಬತ್ತಳಿಕೆಯಿಂದ ಪ್ರತೀಸಂಚಿಕೆಯಲ್ಲೂ ಇಂಥ ಅರ್ಥಪೂರ್ಣ, ಚಾಟಿ ಏಟಿನಂಥ ಸಂಭಾಷಣೆಗಳು ಸಂಚಿಕೆಗೆ ಕಳೆಕಟ್ಟುತ್ತವೆ. ಪ್ರಸ್ತುತ ಟ್ರಾಫಿಕ್ ಸಮಸ್ಯೆ, ಆಂಗ್ಲಭಾಷೆಯ ಬಳಕೆ, ನಗರೀಕರಣ, ಮಕ್ಕಳ ಮೇಲೆ ಹೆಚ್ಚುತ್ತಿರುವ ಪಾಲಕರ ಒತ್ತಡ, ಪರ್ಸನಲ್ ಮತ್ತು ಪ್ರೊಫೆಶನಲ್ ಜೀವನವನ್ನು ಸಮವಾಗಿ ತೂಗಿಸಿಕೊಂಡು ಹೋಗಲು ಹೆಣಗುವುದನ್ನು ಮತ್ತು ಇನ್ನೂ ಹಲವಾರು ವಿಷಯಗಳನ್ನು ಮನಮುಟ್ಟುವಂತೆ ನಿರ್ದೇಶಕರು ನಿರೂಪಿಸಿದ್ದಾರೆ.

ಕೆ ಎಸ್ ಎಲ್ ಸ್ವಾಮಿ, ಬಿ.ವಿ.ರಾಧಾ, ನಂದಕುಮಾರ, ಹರೀಶ್, ವೀಣಾ ಅಪ್ಪಯ್ಯ, ಸುಮೇರು, ಪ್ರಕಾಶ್ ಅಯ್ಯಂಗಾರ್, ಸ್ಮಿತಾ ಚಕ್ರವರ್ತಿ, ಸಿಹಿಕಹಿ ಚಂದ್ರು ಮುಂತಾದವರು ತಾರಾಗಣದಲ್ಲಿದ್ದಾರೆ.

ಚರ್ವಿತ ಚವರ್ಣವಾಗಿರುವ ಸಿದ್ಧಸೂತ್ರಗಳನ್ನು ಬಳಸಿ ಕಥೆ ಹೆಣೆದು ಅಬ್ಬರದ ಹಿನ್ನಲೆ ಸಂಗೀತ ಬಳಸಿದ ಧಾರಾವಾಹಿಗಳನ್ನು ನೋಡಿ ಬೇಸತ್ತವರಿಗೆ ಇಲ್ಲಿರುವುದು ಸುಮ್ಮನೆ ಧಾರಾವಾಹಿ ಖಂಡಿತ ಖುಷಿಕೊಡುತ್ತದೆ. ನೈಜ ದೃಶ್ಯ ನಿರೂಪಣೆ, ಸನ್ನಿವೇಶಗಳು, ಅಭಿನಯ, ಪರಿಣಾಮಕಾರಿ ಸಂಭಾಷಣೆಗಳು ಮತ್ತು ಇನ್ನೂ ಹತ್ತು ಹಲವು ವಿಶೇಷಗಳಿಂದ ಇಲ್ಲಿರುವುದು ಸುಮ್ಮನೆ ವೀಕ್ಷಕರ ಅಚ್ಚುಮೆಚ್ಚಿನ ಧಾರಾವಾಹಿಯಾಗಿ ಯಶಸ್ವೀ 50 ಕಂತುಗಳನ್ನು ಪೂರೈಸಿ ಮುನ್ನಡೆದಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada