»   » ಸುವರ್ಣ ಟಿವಿಯಲ್ಲಿ 'ಗುರು ರಾಘವೇಂದ್ರ ವೈಭವ'

ಸುವರ್ಣ ಟಿವಿಯಲ್ಲಿ 'ಗುರು ರಾಘವೇಂದ್ರ ವೈಭವ'

Posted By:
Subscribe to Filmibeat Kannada
ಕರ್ನಾಟಕದ ಜನತೆಯ ಆರಾಧ್ಯ ಗುರು ಶ್ರೀ ರಾಘವೇಂದ್ರರ ಕುರಿತಾಗಿ ಎಂ.ಎಸ್.ರಾಮಯ್ಯ ಮೀಡಿಯಾ ಎಂಡ್ ಎಂಟರ್‌ಟ್ರೈನ್‌ಮೆಂಟ್ ಪ್ರೈ.ಲಿ ಅವರು ಅದ್ಧೂರಿ ಧಾರಾವಾಹಿ 'ಗುರು ರಾಘವೇಂದ್ರ ವೈಭವ'ದ ಚಿತ್ರ್ರೀಕರಣ ಪ್ರಾರಂಭಿಸಿದ್ದಾರೆ. ಈ ಧಾರಾವಾಹಿಯು ಗುರು ಶ್ರೀ ರಾಘವೇಂದ್ರರ ಪೂರ್ವಾಶ್ರಮದ ತಾತ ಕನಕಾಚಲಾಚಾರ್ಯರಿಂದ ಪ್ರಾರಂಭವಾಗಿ ಶ್ರೀ ಗುರುರಾಯರ ಪವಾಡಗಳನ್ನೊಳಗೊಂಡ ಸಂಪೂರ್ಣ ಜೀವನಗಾಥೆಯನ್ನು, ಐತಿಹಾಸಿಕ ಸಂಶೋಧನೆಯ ಮೂಲಕ ಹೆಣೆದು ಕಿರುತೆರೆಯ ವೀಕ್ಷಕರಿಗೆ ನೀಡುತ್ತಿದೆ.

ಇದು ಕನ್ನಡ ಕಿರುತೆರೆಯಲ್ಲಿ ಪೌರಾಣಿಕ ಧಾರಾವಾಹಿಗೆ ಹೊಸ ಭಾಷ್ಯ ಬರೆಯಲಿದೆ. ಗುರುಗಳ ಪೂರ್ವಾಶ್ರಮದ ಕುರಿತಾಗಿ ತಿಳಿಸುವ ಯಾವುದೇ ಸಿನೆಮಾ, ಧಾರಾವಾಹಿಗಳು ಈವರೆಗೆ ಬಂದಿಲ್ಲವಾಗಿದ್ದು, ಈ ಧಾರಾವಾಹಿಯಲ್ಲಿ ವ್ಯಾಸರಾಜರ ಅವತಾರದ ಪೌರಾಣಿಕ ಹಿನ್ನೆಲೆ, ಪೂರ್ವಾಶ್ರಮದ ಕಥೆ, ವಿಜಯನಗರದ ಐತಿಹಾಸಿಕ ಹಿನ್ನೆಲೆ, ಹಾಗೂ ಆ ಪರಂಪರೆಯ ಸುರೇಂದ್ರ ಗುರುಗಳು, ವಿಜಯೇಂದ್ರ ಗುರುಗಳು, ಸುಧೀಂದ್ರ ಗುರುಗಳು ಇವರೆಲ್ಲರ ಹಿನ್ನೆಲೆಯಲ್ಲಿ ಕಥೆ ತೆರೆದುಕೊಳ್ಳಲಿದೆ.

ಈ ಧಾರಾವಾಹಿಗಾಗಿ ಸುಮಾರು 45ಕ್ಕೂ ಹೆಚ್ಚು ದಾಸರ ಪದಗಳನ್ನು ಆಯ್ಕೆ ಮಾಡಲಾಗಿದ್ದು, ಅವುಗಳನ್ನು ಕಥಾಹಂದರದಲ್ಲಿ ಸೂಕ್ತವಾಗಿ ಬಳಸಿಕೊಳ್ಳಲಾಗುತ್ತಿದೆ. ಈವರೆಗಿನ ಎಲ್ಲ ಕಿರುತೆರೆ ಐತಿಹಾಸಿಕ ಹಾಗೂ ಪೌರಾಣಿಕ ಧಾರಾವಾಹಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಈ ಧಾರಾವಾಹಿ ನಿಲ್ಲಲಿದೆ ಎಂಬ ಅಭಿಪ್ರಾಯವನ್ನು ಎಂ.ಎಸ್.ರಾಮಯ್ಯ ಮಿಡಿಯಾ ಎಂಡ್ ಎಂಟರ್‌ಟೈನ್‌ಮೆಂಟ್ ಪ್ರೈ.ಲಿ. ತಂಡವು ವ್ಯಕ್ತಪಡಿಸುತ್ತದೆ.

ಸಂಸ್ಥೆಯ ಅನಿತಾ ಪಟ್ಟಾಭಿರಾಮ್ ನಿರ್ಮಾಪಕರಾಗಿದ್ದು, ಈ ಧಾರಾವಾಹಿಯ ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಹೊಣೆಯನ್ನು ಖ್ಯಾತ ಕಿರುತೆರೆ ಬರಹಗಾರ, ನಿರ್ದೇಶಕ ಬ.ಲ.ಸುರೇಶ್ ಅವರು ನಿರ್ವಹಿಸುತ್ತಿದ್ದಾರೆ. ಉಳಿದ ತಾಂತ್ರಿಕ ತಂಡದಲ್ಲಿ ಸಂಚಿಕೆ ನಿರ್ದೇಶಕರಾಗಿ ಆದರ್ಶ ಹೆಗಡೆ, ನಿರ್ಮಾಣ ಸಹಯೋಗ ರಘುನಂದನ್, ಸಹನಿರ್ದೇಶನ ಹಲಗೂರು ವೆಂಕಟೇಶ್, ಸಂಶೋಧನೆ ರವಿಶಂಕರ್ ಮಿರ್ಲೆ, ಛಾಯಾಗ್ರಾಹಕರಾಗಿ ಆರ್.ಮಂಜುನಾಥ, ಸಂಗೀತ-ಹೇಮಂತ್ ಕುಮಾರ್ ಮತ್ತು ಕಲಾ ನಿರ್ದೇಶಕರಾಗಿ ಹೊಸಮನೆ ಮೂರ್ತಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಗುರು ರಾಘವೇಂದ್ರ ವೈಭವ"ದ ಚಿತ್ರೀಕರಣ ಪ್ರಾರಂಭವಾಗಿದ್ದು, ಶೀಘ್ರದಲ್ಲಿಯೇ ಕನ್ನಡಿಗರ ನೆಚ್ಚಿನ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada