For Quick Alerts
  ALLOW NOTIFICATIONS  
  For Daily Alerts

  ಗಡ್ಡ-ಮೀಸೆ ಬಗ್ಗೆ ಜೋಕ್ ಮಾಡಿದ್ದಕ್ಕೆ ನಟಿಯ ವಿರುದ್ಧ ಎಫ್‌ಐಆರ್

  |

  ಗಡ್ಡ-ಮೀಸೆ ಬಗ್ಗೆ ತಮಾಷೆ ಮಾಡಿದ್ದಕ್ಕೆ ಕಮಿಡಿಯನ್, ನಟಿ ಭಾರತಿ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಧಾರ್ಮಿಕ ನಂಬಿಕೆಗೆ ಧಕ್ಕೆ ತಂದಿರುವ ಆರೋಪವನ್ನು ಭಾರತಿ ಸಿಂಗ್ ವಿರುದ್ಧ ಹೊರಿಸಲಾಗಿದೆ.

  ಕಮಿಡಿಯನ್ ಆಗಿರುವ ಭಾರತಿ ಸಿಂಗ್ ಹಲವು ಹಾಸ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ ಜೊತೆಗೆ ಹಾಸ್ಯದ ರಿಯಾಲಿಟಿ ಶೋ ಗಳಲ್ಲಿ ಭಾಗವಹಿಸುತ್ತಲೇ ಇರುತ್ತಾರೆ. ಹಿಂದಿ ಟಿವಿರಂಗದ ಪ್ರಖ್ಯಾತ ಕಮಿಡಿಯನ್‌ಗಳಲ್ಲಿ ಒಬ್ಬರಾಗಿರುವ ಭಾರತಿ ಸಿಂಗ್ ಅವರು ಬಹು ಹಿಂದೆ ಹೇಳಿದ್ದ ಜೋಕ್‌ ಒಂದರ ಕಾರಣಕ್ಕೆ ಈ ದೂರು ನೀಡಲಾಗಿದೆ.

  ಸಿಖ್ ಸಮುದಾಯದ ವ್ಯಕ್ತಿಯೊಬ್ಬರು ಭಾರತಿ ಸಿಂಗ್ ವಿರುದ್ಧ ದೂರು ನೀಡಿದ್ದು, ಅದರನ್ವಯ ಸೆಕ್ಷನ್ 295-ಎ ಅಡಿಯಲ್ಲಿ ಪಂಜಾಬ್‌ನ ಜಲಂಧರ್‌ನ ಅಧಮ್‌ಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

  ಹಿಂದೊಮ್ಮೆ ಟಿವಿಯ ಹಾಸ್ಯ ಕಾರ್ಯಕ್ರಮದಲ್ಲಿ ನಟಿಸಿದ್ದ ಭಾರತಿ ಸಿಂಗ್, ''ಗಡ್ಡ-ಮೀಸೆ ಇದ್ದರೆ ಒಳ್ಳೆಯದು. ಇದರ ಉಪಯೋಗಗಳು ಸಾಕಷ್ಟಿವೆ. ಹಾಲು ಕುಡಿದು ಗಡ್ಡವನ್ನು ಬಾಯಿಯಲ್ಲಿ ಇಟ್ಟುಕೊಂಡರೆ ಸೇವಿಯಾ (ಉತ್ತರ ಭಾರತದ ಖಾದ್ಯ) ತಿಂದಂತೆ ಆಗುತ್ತದೆ. ಒಳ್ಳೆಯ ರುಚಿಯಾಗಿಯೂ ಇರುತ್ತದೆ. ನನ್ನ ಹಲವು ಗೆಳೆಯರು ಮದುವೆಯಾಗಿದ್ದಾರೆ ಅವರೆಲ್ಲ ಖಾಲಿ ಇರುವಾಗ ತಮ್ಮ ತಮ್ಮ ಗಡ್ಡದಲ್ಲಿ ಹೇನು ಹುಡುಕಿ ತೆಗೆಯುತ್ತಾ ಕಾಲ ಕಳೆಯುತ್ತಾರೆ'' ಎಂದಿದ್ದರು. ಇದೇ ಜೋಕ್‌ನ ವಿರುದ್ಧ ಈಗ ದೂರು ಸಲ್ಲಿಕೆಯಾಗಿದೆ.

  ಭಾರತಿ ಸಿಂಗ್ ಈ ಜೋಕ್ ಹೇಳಿದಾಗ ಸಿಖ್ ವ್ಯಕ್ತಿಯ ರೀತಿ ಉಡುಗೆ ತೊಟ್ಟಿದ್ದರು. ಟರ್ಬನ್ ಕಟ್ಟಿಕೊಂಡು, ದಾಡಿ, ಮೀಸೆ ಇಟ್ಟುಕೊಂಡಿದ್ದರು. ಸಿಖ್ ವ್ಯಕ್ತಿಯ ವೇಷ ತೊಟ್ಟು, ಸಿಖ್ಖರು ಬಿಡುವ ಗಡ್ಡ ಮೀಸೆಗಳನ್ನು ಅಪಮಾನಿಸಿರುವ ಕಾರಣ ಭಾರತಿ ವಿರುದ್ಧ ಸಿಖ್ ಸಮುದಾಯವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  ರವಿದಾಸ್ ಟೈಗರ್ ಫೋರ್ಸ್ ಸಂಘಟನೆಯ ಮುಖ್ಯಸ್ಥ ರವಿದಾಸ್ ಎಂಬಾತ ಭಾರತಿ ಸಿಂಗ್ ವಿರುದ್ಧ ದೂರು ದಾಖಲಿಸಿದ್ದಾನೆ. ಅಲ್ಲದೆ ಭಾರತಿ ಸಿಂಗ್ ವಿರುದ್ಧ ಪ್ರತಿಭಟನೆಯನ್ನೂ ಮಾಡಲಾಗಿದೆ.

  ದೂರು ದಾಖಲಾಗುತ್ತಿದ್ದಂತೆ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಅಪ್‌ಲೋಡ್ ಮಾಡಿರುವ ಭಾರತಿ ಸಿಂಗ್, ಕೈಮುಗಿದು ಸಿಖ್ ಸಮುದಾಯದ ಕ್ಷಮೆ ಕೋರಿದ್ದಾರೆ. ವಿಡಿಯೋದಲ್ಲಿ ಪಂಜಾಬಿ ಭಾಷೆಯಲ್ಲಿ ಮಾತನಾಡಿರುವ ಭಾರತಿ ಸಿಂಗ್, ''ಈಗ ವಿವಾದಕ್ಕೆ ಕಾರಣವಾಗಿರುವ ಆ ಹಳೆಯ ವಿಡಿಯೋದಲ್ಲಿ ನಾನು ಯಾವುದೇ ಧರ್ಮದ ಅಥವಾ ಜಾತಿಯ ಹೆಸರು ಬಳಸಿಲ್ಲ. ನಾನೂ ಸಹ ಪಂಜಾಬಿನವಳೆ, ಅಮೃತ್‌ಸರದಲ್ಲಿಯೇ ಜನಿಸಿರುವವಳು. ನಾನು ಸದಾ ಪಂಜಾಬ್‌ನ ಗೌರವದ ಪರವಾಗಿ ಇದ್ದೇನೆ. ನಾನೊಬ್ಬ ಹೆಮ್ಮೆಯ ಪಂಜಾಬಿನ ಮಗಳು'' ಎಂದಿದ್ದಾರೆ.

  ''ನಾನು ಹಾಸ್ಯ ಮಾಡುವುದು ಜನರನ್ನು ನಗಿಸಲಿಕ್ಕೆ, ಯಾರಿಗೂ ಬೇಸರ ಮಾಡಲು, ಯಾರ ಭಾವನೆಗಳಿಗೂ ಧಕ್ಕೆ ತರಲು ಅಲ್ಲ. ಯಾರಿಗಾದರೂ ನನ್ನ ಮಾತುಗಳಿಂದ ನೋವಾಗಿದ್ದರೆ ನನ್ನನ್ನು ಕ್ಷಮಿಸಿ'' ಎಂದಿದ್ದಾರೆ ಭಾರತಿ.

  ಭಾರತಿ ಸಿಂಗ್, ಕಪಿಲ್ ಶರ್ಮಾ ಶೋನಲ್ಲಿ ಪಾತ್ರವೊಂದನ್ನು ನಿರ್ವಹಿಸುತ್ತಾರೆ. ಇದಕ್ಕೂ ಮುನ್ನಾ ಹಲವಾರು ಹಾಸ್ಯ ಸಂಬಂಧಿ ಕಾರ್ಯಕ್ರಮಗಳಲ್ಲಿ ಭಾರತಿ ಪಾಲ್ಗೊಂಡಿದ್ದಾರೆ. ಕನ್ನಡದ 'ರಂಗನ್ ಸ್ಟೈಲ್' ಸಿನಿಮಾದಲ್ಲಿ ಐಟಂ ಹಾಡೊಂದಕ್ಕೆ ಡ್ಯಾನ್ಸ್ ಸಹ ಮಾಡಿದ್ದಾರೆ ಭಾರತಿ. ಕೆಲವು ಬಾಲಿವುಡ್ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

  English summary
  FIR filed against comedian Bharthi Singh for making fun of beards and Mustaches. Sikh community people gave complaint against Bharthi Singh.
  Wednesday, May 18, 2022, 10:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X