For Quick Alerts
  ALLOW NOTIFICATIONS  
  For Daily Alerts

  ಯಡಿಯೂರಪ್ಪನವರು ಮತ್ತು ಅವರ ಸಿನೆಮಾ ಪ್ರೇಮ

  By Prasad
  |

  ಅಧಿಕಾರದಲ್ಲಿ ಇರಲಿ ಬಿಡಲಿ, ಅಧಿಕಾರಕ್ಕಾಗಿ ಕಚ್ಚಾಟ ನಡೆದಿರಲಿ ಇಲ್ಲದಿರಲಿ, ಸಮಯ ಸಿಕ್ಕಾಗಲೆಲ್ಲ ಕುಟುಂಬ ಸಮೇತರಾಗಿ ಸದಭಿರುಚಿಯ ಚಿತ್ರಗಳನ್ನು ನೋಡಿಕೊಂಡು ಬರುವ ವಾಡಿಕೆಯನ್ನು ಇಟ್ಟುಕೊಟ್ಟಂತಹ ಏಕೈಕ ಮಾಜಿ ಮುಖ್ಯಮಂತ್ರಿಯೆಂದರೆ ಸನ್ಮಾನ್ಯ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪನವರು. ಕನ್ನಡ ಚಿತ್ರವೇ ಆಗಬೇಕೆಂದೆನೂ ಇಲ್ಲ, ಚಿತ್ರ ಯಾವುದಾದರೂ ಸರಿ, ಕುಟುಂಬ ಸಮೇತರಾಗಿ ನೋಡುವಂತಿರಬೇಕು.

  ಪಬ್ಲಿಕ್ ಟಿವಿ ನಡೆಸಿದ ಸಂದರ್ಶನದಲ್ಲಿ ಕನ್ನಡ ಚಿತ್ರಗಳ ಬಗ್ಗೆ ತಮಗಿರುವ ಪ್ರೇಮವನ್ನು ಯಡಿಯೂರಪ್ಪನವರು ರೀಲಿನಂತೆ ತೆರೆದಿಟ್ಟಿದ್ದಾರೆ. ಅವರ ಸಿನೆಮಾ ನೋಡುವ ಹುಚ್ಚು ಇಂದು ನಿನ್ನೆಯದಲ್ಲ. ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ದಿನಕ್ಕೆರಡು ಸಿನೆಮಾಗಳನ್ನು ನೋಡುತ್ತಿದ್ದರಂತೆ. ವಿರೋಧ ಪಕ್ಷದ ನಾಯಕರಾಗಿದ್ದಾಗ, ನಂತರ ಮುಖ್ಯಮಂತ್ರಿಯಾಗಿದ್ದಾಗ ಅಷ್ಟು ಸಮಯ ಸಿಗುತ್ತಿರಲಿಲ್ಲ. ಈಗ ಬಿಡುವಾಗಿರುವುದರಿಂದ ಆಗಾಗ ನೋಡುತ್ತಿರುತ್ತಾರೆ. ಆದರೆ, ಸದ್ಯಕ್ಕೆ ಅವರ ಜೀವನೇ ಒಂದು ಸಿನೆಮಾ ಆದರೂ ಆಶ್ಚರ್ಯವಿಲ್ಲ!

  ಸ್ನೇಹಿತರ ದಿನ ಕೂಡ ಅವರು ಬರಗೂರು ರಾಮಚಂದ್ರಪ್ಪ ಅವರು ನಿರ್ದೇಶಿಸಿರುವ, ತಾರಾ ಮತ್ತು ಭಾವನಾ ಅವರ ಭಾವನಾತ್ಮಕ ಅಭಿನಯದ, ಬೆಂಗಳೂರಿನ ಥಿಯೇಟರಲ್ಲಿ ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವ 'ಭಾಗೀರತಿ' ಚಿತ್ರವನ್ನು ಸ್ನೇಹಿತರ ದಿನಾಚರಣೆಯಂದೇ ನೋಡಿಬಂದಿದ್ದಾರೆ. ಅದೂ ಯಾರ ಜೊತೆಗೆ? ಬದ್ಧ ರಾಜಕೀಯ ವೈರಿ ಎಂದೇ ಬಿಂಬಿತರಾಗಿರುವ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರ ಜೊತೆ! ಸ್ನೇಹಿತರ ದಿನಾಚರಣೆಯ ದಿನ ಬದ್ಧ ವೈರಿಯ ಜೊತೆ ಚಿತ್ರ ವೀಕ್ಷಣೆ!

  ವೈರತ್ವ ಏನಿದ್ದರೂ ರಾಜಕೀಯದಲ್ಲಿ ಮಾತ್ರ ಅನ್ನುವ ಯಡಿಯೂರಪ್ಪನವರು ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಸದಾನಂದ ಗೌಡರು ಬಿಜೆಪಿ ರಾಜ್ಯಾಧ್ಯಕ್ಷರಾಗಲು ನಾಲಾಯಕ್ ಎಂದು ಜರಿದಿದ್ದಾರೆ. ದ್ವೇಷ ಏನಿದ್ದರೂ ರಾಜಕೀಯದಲ್ಲಿ ಅನ್ನುವುದು ನಿಜವಾದರೆ, ಸ್ನೇಹ ಏನಿದ್ದರೂ ಥಿಯೇಟರಲ್ಲಿ ಮಾತ್ರ ಎಂದು ವ್ಯಾಖ್ಯಾನಿಸಬಹುದೆ? ಸ್ನೇಹ, ದ್ವೇಷದ ಬಗ್ಗೆ ಅವರ ಅಭಿಪ್ರಾಯ ಏನೇ ಇರಲಿ, ಭಾಗೀರತಿ ಚಿತ್ರವನ್ನು ಯಡಿಯೂರಪ್ಪ ಅವರು ವಾಚಾಮಗೋಚರವಾಗಿ ಹೊಗಳಿದ್ದಾರೆ. ಕನ್ನಡಿಗರೆಲ್ಲರೂ ಖಂಡಿತವಾಗಿ ನೋಡಲೇಬೇಕಾದ ಚಿತ್ರ ಎಂದು ಶಿಫಾರಸು ಮಾಡಿದ್ದಾರೆ.

  ಇಲ್ಲಿಯವರೆಗೆ ನೋಡಿರುವ ಚಿತ್ರಗಳಲ್ಲಿ ಯಾವುದು ಅತ್ಯುತ್ತಮ ಚಿತ್ರ ಎಂದು ಪಬ್ಲಿಕ್ ಟಿವಿಯ ಎಚ್ಆರ್ ರಂಗನಾಥ್ ಅವರು ಕೇಳಿದಾಗ, ಒಂದು ಚಿತ್ರದ ಬಗ್ಗೆ ಹೇಳಿದರೆ ಇನ್ನೊಬ್ಬರಿಗೆ ಬೇಜಾರಾಗಬಹುದು ಎಂದು ಯಡಿಯೂರಪ್ಪನವರು ಎಲ್ಲ ನಿರ್ಮಾಪಕರಿಗೆ, ನಿರ್ದೇಶಕರಿಗೆ ಸಾಮಾಜಿಕ ನ್ಯಾಯ ಒದಗಿಸಿದ್ದಾರೆ. ನಾನು ನೋಡಿದ ಎಲ್ಲ ಚಿತ್ರಗಳೂ ಚೆನ್ನಾಗಿದ್ದವು, ಚೆನ್ನಾಗಿದ್ದಕ್ಕೆ ಚಿತ್ರ ನೋಡಿದ್ದು ಎಂದು ಅವರು ಜಾರಿಕೊಂಡರು.

  ಕಳೆದ ಮಾರ್ಚ್ 24ರಂದು ಕುಟುಂಬ ಸಮೇತರಾಗಿ ಯಡಿಯೂರಪ್ಪನವರು ಮಲ್ಲೇಶ್ವರದಲ್ಲಿರುವ ಮಂತ್ರಿ ಮಾಲ್‌ನಲ್ಲಿ ಹಿಂದಿ ಚಿತ್ರ 'ಕಹಾನಿ' ನೋಡಿದ್ದರು. ಅದರ ಹಿಂದಿನ ವಾರ ಅರ್ಜುನ್ ಸರ್ಜಾ ಅವರ 'ಪ್ರಸಾದ್' ಚಿತ್ರ ವೀಕ್ಷಿಸಿದ್ದರು. ಕಳೆದ ವರ್ಷ ಅದೇ ತಾನೆ ಮುಖ್ಯಮಂತ್ರಿ ಪಟ್ಟ ಕಳೆದುಕೊಂಡಿದ್ದ ಯಡಿಯೂರಪ್ಪನವರು ಸೆಪ್ಟೆಂಬರ್ ತಿಂಗಳಲ್ಲಿ ಕೌಟುಂಬಿಕರಾಗಿ ಬಂದು 'ಲೈಫು ಇಷ್ಟೇನೆ' ಚಿತ್ರ ಎಂಜಾಯ್ ಮಾಡಿದ್ದರು. ಅಮಿತಾಬ್ ಬಚ್ಚನ್ ಅವರ ಬಿಗ್ ಫ್ಯಾನ್ ಆಗಿರುವ ಅವರು 'ಪಾ' ಚಿತ್ರವನ್ನೂ ನೋಡಿದ್ದರು. ಇನ್ನೂ ಹರೆಯದಲ್ಲಿ ಯಾವ್ಯಾವ ಚಿತ್ರಗಳನ್ನು ನೋಡಿದ್ದರೋ ಪಟ್ಟಿ ಲಭ್ಯವಿಲ್ಲ.

  English summary
  In an interview to Public TV former chief minister of Karnataka B.S. Yeddyurappa has again expresses his love for Kannada movies. Whether he is in power or not he does not miss a chance to see movie with his family. Recently he watched Bhagirathi with his bete noire D.V. Sadananda Gowda on Friendship Day!

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X