»   »  ಆಸ್ಟ್ರೇಲಿಯಾ ಕಿವಿ ಹಿಂಡಿದ ಬಾಲಿವುಡ್ ಚಿತ್ರೋದ್ಯಮ

ಆಸ್ಟ್ರೇಲಿಯಾ ಕಿವಿ ಹಿಂಡಿದ ಬಾಲಿವುಡ್ ಚಿತ್ರೋದ್ಯಮ

Subscribe to Filmibeat Kannada
Amitabh Bachchan
ಭಾರತ ಮೂಲದ ವಿದ್ಯಾರ್ಥಿಗಳನ್ನು ಹಿಗ್ಗಾಮುಗ್ಗಾ ಥಳಿಸುತ್ತಿರುವ ಆಸ್ಟ್ರೇಲಿಯಾ ವಿರುದ್ಧ ಬಾಲಿವುಡ್ ಸಿಡಿದೆದ್ದಿದೆ. ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆನಡೆಯುತ್ತಿರುವ ಜನಾಂಗೀಯ ಹಲ್ಲೆಯನ್ನು ಅಮಿತಾಬ್ ಬಚ್ಚನ್, ಅಮೀರ್ ಖಾನ್ ಖಂಡಿಸಿದ್ದರು. ಈಗ ಅವರ ಜತೆ ಬಾಲಿವುಡ್ ಚಿತ್ರ ನಿರ್ಮಾಪಕರು ಕೈಜೋಡಿಸಿದ್ದಾರೆ.

'ಪೇಜ್ 3'ಖ್ಯಾತಿಯ ಮಧುರ್ ಬಂಡಾರ್ ಕರ್ ತಮ್ಮ ಚಿತ್ರತಂಡದ ಬಗ್ಗೆ ಕಾಳಜಿ ವಹಿಸಿದ್ದಾರೆ. ಮೊದಲು ನಮ್ಮ ಹುಡುಗರ ಸುರಕ್ಷತೆ ಕಡೆಗೆ ಗಮನ ಕೊಡಬೇಕು. ಆ ಬಳಿಕವಷ್ಟೇ ಆಸ್ಟ್ರೇಲಿಯಾದಲ್ಲಿ ಚಿತ್ರೀಕರಿಸಬೇಕೆ ಬೇಡವೆ ಎಂಬುದರ ಕಡೆ ಗಮನ ಹರಿಸೋಣ. ಆಸ್ಟ್ರೇಲಿಯಾದಲ್ಲಿ ಜೀವಕ್ಕೆ ಭದ್ರತೆ ಇದೆ ಎಂಬ ಗ್ಯಾರಂಟಿ ಇಲ್ಲ. ಹಾಗಾಗಿ ಆಸ್ಟ್ರೇಲಿಯಾದಲ್ಲಿ ಚಿತ್ರೀಕರಿಸುವುದಿಲ್ಲ ಎಂದು ಹೇಳಿದ್ದಾರೆ.

ನಿರ್ದೇಶಕ ಡೇವಿಡ್ ಧವನ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ರಜಾ ದಿನಗಳನ್ನು ಕಳೆಯಲೂ ಆಸ್ಟ್ರೇಲಿಯಾ ಕಡೆ ತಲೆ ಹಾಕಲ್ಲ ಎಂದು ಶಪಥ ಮಾಡಿದ್ದಾರೆ. ಇನ್ನು ಆಸ್ಟ್ರೇಲಿಯಾ ಚಿತ್ರೀಕರಣದ ಬಗ್ಗೆ ಅವರನ್ನು ಕೇಳುವಂತೆಯೇ ಇಲ್ಲ. ಎಲ್ಲ ಜನಾಂಗೀಯ ಹಲ್ಲೆಗಳು ಆಸ್ಟ್ರೇಲಿಯಾದಲ್ಲೇ ನಡಿದಿವೆ. ಚಿತ್ರೀಕರಣಕ್ಕೆ ತಾವು ಹೋಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸುಭಾಷ್ ಘಾಯ್ ಸಹ ಇವರೊಂದಿಗೆ ಧ್ವನಿಗೂಡಿಸಿದ್ದಾರೆ. ಭಾರತೀಯ ವಿದ್ಯಾರ್ಥಿಗಳಿಗೆ ಸೂಕ್ತ ರಕ್ಷಣೆ ಕೊಡುತ್ತೇವೆ ಎಂಬ ಭರವಸೆ ಕೊಡುವವರೆಗೂ ತಾವು ಅತ್ತ್ತ ಸುಳಿಯುವುದಿಲ್ಲ ಎಂದು ಭೀಷ್ಮ ಪ್ರತಿಜ್ಞೆ ಮಾಡಿದ್ದಾರೆ. ಆಸ್ಟ್ರೇಲಿಯಾ ಒಂದು ಸುಂದರ ದೇಶ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಅಲ್ಲಿನ ಜನಕ್ಕೆ ನಿಜಕ್ಕೂ ಹೃದಯ ಸೌಂದರ್ಯ ಎಂಬುದೇ ಇಲ್ಲ ಎಂಬುದು ಬಾಲಿವುಡ್ ನ ಒಟ್ಟಾರೆ ಅಭಿಪ್ರಾಯ.

ಬಾಲಿವುಡ್ ಚಿತ್ರಗಳಿಂದ ಆಸ್ಟ್ರೇಲಿಯಾ ಪ್ರವಾಸೋದ್ಯಮಕ್ಕ್ಕೆ ಬಹಳಷ್ಟು ಹಣ ಹರಿದುಬರುತ್ತಿತ್ತು. ಈಗ ಭಾರತೀಯ ವಿದ್ಯಾರ್ಥಿಗಳ ಮೇಲೆ ಜನಾಂಗೀಯ ಹಲ್ಲೆ ನಡೆದು ಎಲ್ಲಾ ತಲೆಕೆಳಗಾಗಿದೆ. ಸರಕಾರದ ಕೈಲಿ ಮಾಡಲಾಗದ್ದನ್ನು ಬಾಲಿವುಡ್ ಚಿತ್ರೋದ್ಯಮ ಮಾಡಿದೆ. ಬಾಲಿವುಡ್ ನ ದಿಟ್ಟ ನಿರ್ಧಾರ ನಿಜಕ್ಕೂ ಸ್ತುತ್ಯರ್ಹ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada