»   » ಮುಂಬೈ ದಾಳಿಕೋರಅಜ್ಮಲ್ ಕಸಬ್ ಗೆ ಗಲ್ಲು ಶಿಕ್ಷೆ

ಮುಂಬೈ ದಾಳಿಕೋರಅಜ್ಮಲ್ ಕಸಬ್ ಗೆ ಗಲ್ಲು ಶಿಕ್ಷೆ

Posted By:
Subscribe to Filmibeat Kannada

ಮುಂಬೈ ದಾಳಿಕೋರ ಉಗ್ರ ಅಜ್ಮಲ್ ಕಸಬ್ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ ಆತ ತಪ್ಪಿತಸ್ಥ ಎಂದು ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಗುರುವಾರ(ಮೇ.6) ಪ್ರಕಟಿಸಲಿದೆ. ಉಗ್ರ ಕಸಬ್ ಗೆ ನ್ಯಾಯಾಲಯ ಏನು ಶಿಕ್ಷೆ ವಿಧಿಸಲಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ 26/11 ಘಟನೆ ಆಧಾರವಾಗಿ ತೆಗೆದಿರುವ ಬಾಲಿವುಡ್ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಉಗ್ರ ಕಸಬ್ ಗೆ ಗಲ್ಲು ಶಿಕ್ಷೆಯಾಗುತ್ತದೆ. ಉಗ್ರ ಪಾತಕಿ ಕಸಬ್ ನನ್ನು ನೇಣಿಗೆ ಹಾಕಲಾಗುತ್ತದೆ.

ಈ ಚಿತ್ರಕ್ಕೆ "Total 10" ಎಂದು ಹೆಸರಿಡಲಾಗಿತ್ತು. ಬಳಿಕ "Ashok Chakra - A Tribute to Real Heroes" ಎಂದು ನಾಮಕಾರಣ ಮಾಡಲಾಗಿದೆ. ಚಿತ್ರದಲ್ಲಿ ಕಸಬ್ ಪಾತ್ರವನ್ನು ರಾಜನ್ ವರ್ಮಾ ಎಂಬುವವರು ಪೋಷಿಸಿದ್ದಾರೆ. ಚಿತ್ರದಲ್ಲಿ ಕಸಬ್ ಹೇಳುವ ಡೈಲಾಗ್ ಹೀಗಿದೆ..."ತಲೆಗವಸು ಹಾಕದೇನೆ ನನ್ನನ್ನು ಗಲ್ಲಿಗೇರಿಸಿ. ನನ್ನ ದೇಶ(ಪಾಕಿಸ್ತಾನ) ನನ್ನ ಅವಸ್ಥೆಯನ್ನು ಕಂಡು ನರಳಾಡುತ್ತದೆ, ಮುಖ್ಯವಾಗಿ ಯುವಕರಿಗೆ ಇದು ತಟ್ಟಲಿದೆ"

ಈ ಬಗ್ಗೆ ಮಾತನಾಡಿರುವ ಚಿತ್ರದ ನಾಯಕ ನಟ ರಾಜನ್, ಚಿತ್ರದಲ್ಲಿ ಉಗ್ರವಾದವನ್ನು ವೈಭವೀಕರಿಸುವುದು ಅಷ್ಟು ಸರಿಯಿಲ್ಲ ಅನ್ನಿಸಿ ಚಿತ್ರದ ಶೀರ್ಷಿಕೆಯನ್ನು ಬದಲಾಯಿಸಿದ್ದೇವೆ. ಈ ಚಿತ್ರ ದೇಶಕ್ಕಾಗಿ ಪ್ರಾಣ ಕೊಟ್ಟ ದಕ್ಷ ಪೊಲೀಸ್ ಅಧಿಕಾರಿಗಳ ಪ್ರಾಮಾಣಿಕ ಪ್ರಯತ್ನದ ಕಡೆಗೆ ದೃಷ್ಟಿ ಬೀರಲಿದೆ ಎಂದಿದ್ದಾರೆ.

ಚಿತ್ರದ ಸನ್ನಿವೇಶವೊಂದರಲ್ಲಿ ರಾಜನ್ ಸಂಪೂರ್ಣ ಬೆತ್ತಲಾಗಿ ಕಾಣಿಸುತ್ತಾರೆ. ಈ ಸನ್ನಿವೇಶದ ಬಗ್ಗೆ ಮಾತನಾಡಿದ ಅವರು, ಜೀವನದ ಬಗ್ಗೆ ವಿರಕ್ತನಾಗಿ ಕಾರಾಗೃಹದಲ್ಲಿ ಜೀವನ ಸವೆಸುತ್ತಿರುವ ಕಸಬ್ ದೃಶ್ಯ ಅದಾಗಿದೆ. "ನನ್ನ ಎಲ್ಲ ಅಪರಾಧಗಳಿಗೆ ಸಾವೊಂದೇ ಶಿಕ್ಷೆ" ಎಂದು ಕಸಬ್ ಜೈಲಿನ ಗೋಡೆ ಮೇಲೆ ಬರೆಯುತ್ತಾನೆ ಎಂದು ಅವರು ವಿವರ ನೀಡಿದ್ದಾರೆ.

ಕಸಬ್ ಗೆ ಗಲ್ಲು ಶಿಕ್ಷೆ ಜಾರಿಯಾಗಬೇಕು. ಅವನಿಗೆ ಶಿಕ್ಷೆಯಾಗಲೇ ಬೇಕು ಎಂದು ರಾಜನ್ ವೈಯಕ್ತಿಕವಾಗಿ ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ಕಸಬ್ ಗೆ ಶಿಕ್ಷೆಯಾಗುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಬಾಲಿವುಡ್ ನ ಈ ಚಿತ್ರದಲ್ಲಿ ಮಾತ್ರ ಕಸಬ್ ನನ್ನು ಗಲ್ಲಿಗೇರಿಸಲಾಗುತ್ತದೆ. ಎಂತಹ ವೈಚಿತ್ರ್ಯ ಅಲ್ಲವೆ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada