»   »  ಮಲ್ಲಿಕಾಳ ಮಾಂತ್ರಿಕ ಮೈಕಟ್ಟಿನ ದೇಹಕ್ಕೆ ವಿಮೆ!

ಮಲ್ಲಿಕಾಳ ಮಾಂತ್ರಿಕ ಮೈಕಟ್ಟಿನ ದೇಹಕ್ಕೆ ವಿಮೆ!

Subscribe to Filmibeat Kannada

ಬಾಲಿವುಡ್ ನ ಹಾಟ್ ಬೇಬಿ ಮಲ್ಲಿಕಾ ಶೇರಾವತ್ ಳ ಅಪೂರ್ವ ಆಸ್ತಿ ಯಾವುದು? ಕಣ್ಣಲ್ಲೇ ಕೊಂದು ಹಾಕುವ ಆಕೆಯ ನೋಟ? ಬಿಂದಾಸ್ ವ್ಯಕ್ತಿತ್ವ? ಮಲ್ಲಿಗೆಯಂಥ ನಗು? ಆಕೆ ನಟನೆ? ಗುರು ಚಿತ್ರದಲ್ಲಿ ಐಶ್ವರ್ಯಾಗೇ ಸವಾಲೊಡ್ಡಿದ ಮಲ್ಲಿಕಾಳ ಅದ್ಭುತ ನೃತ್ಯ? ಇದಾವುದೂ ಅಲ್ಲ. ಎಲ್ಲರಿಗೂ ತಿಳಿದಿರುವಂತೆ ಮತ್ತು ಆಕೆಯೂ ಘಂಟಾಘೋಷವಾಗಿ ಸಾರಿಕೊಳ್ಳುವಂತೆ ಹುಚ್ಚೆಬ್ಬಿಸುವ ಆಕೆಯ ಅಂಗಸೌಷ್ಟವ!

ಮಲ್ಲಿಕಾ ಶೇರಾವತ್ ಉತ್ತಮ ನಟಿ ಎನ್ನುವುದರಲ್ಲಿ ಎರಡು ಮಾತಿಲ್ಲ. ತನ್ನ ಮೊದಲ ಚಿತ್ರವಾದ ಮರ್ಡರ್ ನಲ್ಲೇ ತನ್ನ ನಟನಾ ಚಾತುರ್ಯವನ್ನು ಆಕೆ ಸಾಬೀತುಪಡಿಸಿದ್ದಾಳೆ. ಆದರೂ ಮಲ್ಲಿಕಾಗೇ ತನ್ನ ಅಪರೂಪದ ಸೌಷ್ಟವದ ದೇಹದ ಮೇಲೆಯೇ ಭಾರೀ ಪ್ರೀತಿ. ಚಾಕಿ ಚಾನ್ ಜೊತೆ ನಟಿಸಿದ ಹಾಲಿವುಡ್ ಚಿತ್ರ 'ಮಿಥ್' ಸೇರಿದಂತೆ ತನ್ನೆಲ್ಲ ಚಿತ್ರಗಳಲ್ಲಿಯೂ ಆಕೆ ತನ್ನ ದೇಹಸಿರಿಯನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿದ್ದಾಳೆ.

ಚಿತ್ರದಲ್ಲಿ ನಟಿಸುವಾಗಲಿ, ಯಾವುದೇ ಲೈವ್ ಪಾರ್ಟಿಗಳಲ್ಲಾಗಲಿ, ಸ್ಟೇಜ್ ಶೋಗಳಲ್ಲಾಗಲಿ ಮಲ್ಲಿಕಾ ಶೇರಾವತ್ ತನ್ನ ದೇಹಸೌಂದರ್ಯ ಪ್ರದರ್ಶನಕ್ಕಾಗಿ ಕಟ್ಟುವ ಬೆಲೆ ಎಲ್ಲರಿಗೂ ತಿಳಿದದ್ದೇ ಇದೆ. ಆದರೆ ಈಗ, ತನ್ನ ನಟನೆಗಿಂತ ಹೆಚ್ಚು ಅಂಕುಡೊಂಕಿನ ತನ್ನ ದೇಹವೇ ಹೆಚ್ಚು ಬೆಲೆಯುಳ್ಳದ್ದೆಂದು ನಂಬಿರುವ ಬಿಂಕದ ಮಲ್ಲಿ ತನ್ನ ದೇಹಕ್ಕೇ ಬೆಲೆಕಟ್ಟಲು ನಿರ್ಧರಿಸಿದ್ದಾಳೆ. ತರಚು ಗಾಯ ಕೂಡ ಆಗಲಾರದಂತೆ ಕಾಪಾಡಿಕೊಳ್ಳಲು ಇಡೀ ದೇಹಕ್ಕೆ ವಿಮೆ ಮಾಡಿಸಲು ಮಲ್ಲಿಕಾ ತಯಾರಾಗಿದ್ದಾಳೆ ಎಂದು ಅಪುನ್ಕಾ ಚಾಯ್ಸ್ ವೆಬ್ ಸೈಟ್ ಪ್ರಕಟಿಸಿದೆ.

ಇದರಲ್ಲಿ ತಪ್ಪೇನು ಇಲ್ಲ. ತಮ್ಮ ದೇಹದ ಬಿಡಿಬಿಡಿ ಭಾಗಗಳ ಸೌಂದರ್ಯದ ಬಗ್ಗೆ ಯಾರಿಗೆ ಹೆಮ್ಮೆಯಿರುವುದಿಲ್ಲ. ಎಂಬತ್ತರ ದಶಕದಲ್ಲಿ ಬ್ಯಾಟ್ಸ್ ಮನ್ ಗಳ ಪಾಲಿನ 'ಯಮರಾಜ'ನಂತಿದ್ದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮೆರ್ವ್ ಹ್ಯೂಸ್ ಗೆ ತನ್ನ ಗಿರಿಜಾ ಮೀಸೆಯ ಬಗ್ಗೆ ಭಾರೀ ಹೆಮ್ಮೆಯಿತ್ತು. ಅದಕ್ಕಾಗಿ ಆತ ಮೀಸೆಯ ಮೇಲೆಯೇ ವಿಮೆ ಮಾಡಿಸಿದ್ದ. ಖ್ಯಾತ ಹಾಸ್ಯ ನಟ ಬೆನ್ ಟರ್ಪಿನ್ ಮೆಳ್ಳ ಕಣ್ಣುಗಳ ಮೇಲೆ ವಿಮೆ ಮಾಡಿಸಿದ್ದ. ಹಾಲಿವುಡ್ ನಟಿ ಮರೈಯಾ ಕ್ಯಾರೆ ತನ್ನ ಸುಂದರ ಕಾಲುಗಳಿಗೇ ವಿಮೆ ಮಾಡಿಸಿದ್ದಾಳೆ. ಟಾಮ್ ಜೋನ್ಸ್ ಎಂಬ ಭೂಪ ಜೀವದ ಜೀವವೆನಿಸಿದ್ದ ಎದೆಯ ಕೂದಲಿಗೇ ವಿಮೆ ಮಾಡಿಸಿದ್ದ. ಪಟ್ಟಿ ಹೀಗೆ ಬೆಳೆಯುತ್ತದೆ.

ಮಾಂತ್ರಿಕ ಮೈಕಟ್ಟಿನ ದೇಹವನ್ನು ವಿಮೆ ಮಾಡಿಸೆಂದು ಮಲ್ಲಿಕಾಗೆ ಐಡಿಯಾ ನೀಡಿದ್ದು ಆಕೆ ಫ್ಯಾನ್ ಅಂತೆ. ಫುಟ್ ಬಾಲ್ ಆಟಗಾರ ಕ್ರಿಸ್ಟಿಯಾನೋ ರೋನಾಲ್ಡೋ, ಆಫ್ಟರಾಲ್ ತನ್ನ ಕಾಲುಗಳನ್ನೇ ವಿಮೆ ಮಾಡಿಸಿರುವಾಗ ಸುಂದರ ಸೊಬಗಿನ ಇಡೀ ಅಂಗಸೌಷ್ಟವದ ವಿಮೆ ಮಾಡಿಸೆಂದು ಆತ ಮಲ್ಲಿಕಾಳ ತಲೆಯಲ್ಲಿ ಹುಳುವನ್ನು ಬಿಟ್ಟಿದ್ದಾನೆ. ಇದನ್ನು ಆಕೆಯೇ ನೆಟ್ವರ್ಕಿಂಗ್ ವೆಬ್ ಸೈಟೊಂದರಲ್ಲಿ ಬಹಿರಂಗಪಡಿಸಿದ್ದಾಳೆ. ಸದ್ಯಕ್ಕೆ ಬಾಲಿವುಡ್ಡನ್ನು ಕಳಚಿ ಹಾಲಿವುಡ್ಡನ್ನು ಧರಿಸಿರುವ ಮಲ್ಲಿಕಾ ಹಿಸ್ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಯಾವ ವಿಮಾ ಕಂಪನಿ ಮಲ್ಲಿಕಾಳ ದೇಹದ ವಿಮೆ ಮಾಡಿಸಲು ಮುಂದೆ ಬರುವುದೋ ಕಾದುನೋಡಬೇಕು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada