»   » ಡೆಡ್ಲಿ ಹೆಡ್ಲಿಯೊಂದಿಗೆ ಬಾಲಿವುಡ್ ತಾರೆಗಳ ನಂಟು!

ಡೆಡ್ಲಿ ಹೆಡ್ಲಿಯೊಂದಿಗೆ ಬಾಲಿವುಡ್ ತಾರೆಗಳ ನಂಟು!

Posted By:
Subscribe to Filmibeat Kannada

ಮುಂಬೈನ ತಾಜ್ ಹೋಟೆಲ್ ಮೇಲಿನ ದಾಳಿಯ (26/11) ಪ್ರಮುಖ ರೂವಾರಿ ಎನ್ನಲಾಗಿರುವ ಡೇವಿಡ್ ಹೆಡ್ಲಿಗೆ ಬಾಲಿವುಡ್ ನ ಹಲವು ನಟ, ನಟಿಯರೊಂದಿಗೆ ಸಂಪರ್ಕ ಇದೆ ಎಂಬುದು ಇದೀಗ ಬೆಳಕಿಗೆ ಬಂದಿದೆ. ಪಾಕಿಸ್ತಾನದ ಉಗ್ರ ಸಂಘಟನೆ ಲಷ್ಕರ್ ಇ ತೋಯ್ಬಾ ಸದಸ್ಯನಾಗಿರುವ ಹೆಡ್ಲಿ ಭಾರತಕ್ಕೆ ಇದುವರೆಗೂ ಒಂಭತ್ತು ಬಾರಿ ಭೇಟಿ ನೀಡಿದ್ದಾನೆಂದು ತನಿಖಾ ವರದಿಗಳು ದೃಢಪಡಿಸುತ್ತಿವೆ.

ಹೆಡ್ಲಿ ಜತೆ ಬಾಲಿವುಡ್ ನಟಿ ಕಂಗನಾ ರಾಣಾವತ್ ಕೂಡ ಔತಣ ಕೂಟದಲ್ಲಿ ಭಾಗವಹಿಸಿರುವುದು ಬಹಿರಂಗಗೊಂಡಿದೆ. ಮುಂಬೈನ ಬ್ರೀಚ್ ಕ್ಯಾಂಡಿಯಲ್ಲಿರುವ ಮೋಕ್ಷ ಫಿಟ್ ನೆಸ್ ಸೆಂಟರ್ ನಲ್ಲಿ ಬಾಲಿವುಡ್ ನ ಹಲವು ನಟ, ನಟಿಯರು ಹೆಡ್ಲಿಯನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ.

ಇಲ್ಲಿಗೆ ವ್ಯಾಯಾಮಕ್ಕಾಗಿ ಬರುತ್ತಿದ್ದ ಹಲವು ನಟ, ನಟಿಯರಿಗೆ ಹೆಡ್ಲಿ ಪರಿಚಯವಾಗಿದ್ದು ರಾಹುಲ್ ಭಟ್(ಮಹೇಶ್ ಭಟ್ ಮಗ) ಮೂಲಕ. ಹಾಗೆ ಯೇ ಹೆಡ್ಲಿಗೆ ಕಂಗನಾ ಸಹ ಪರಿಚಯವಾಗಿದ್ದಾರೆ. ಆಕೆ ಹೆಡ್ಲಿಯೊಂದಿಗೆ ಸಲುಗೆಯಿಂದಲೇ ಇದ್ದರು ಎನ್ನಲಾಗಿದ್ದು ಇಬ್ಬರೂ ಕೆಲವು ಬಾರಿ ಒಟ್ಟಿಗೆ ಭೋಜನ ಕೂಡ ಮಾಡಿದ್ದಾರೆ.

ಇಮ್ರಾನ್ ಹಸ್ಮಿ ಮತ್ತು ಆರತಿ ಛಾಬ್ರಿಯಾ ಸಹ ಹೆಡ್ಲಿಯೊಂದಿಗೆ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಈ ಕುರಿತು ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಹೆಚ್ಚಿನ ಮಾಹಿತಿ ಪಡೆಯುವ ನಿರೀಕ್ಷೆ ಇದೆ. ರಿಯಲ್ ಸ್ಟಾರ್ ಉಪೇಂದ್ರ ಜತೆ ಆರತಿ ಛಾಬ್ರಿಯಾ 'ರಜನಿ' ಚಿತ್ರದಲ್ಲಿ ನಟಿಸಿದ್ದಾರೆ. ಶಿವರಾಜ್ ಕುಮಾರ್ ಜತೆ 'ಸಂತ' ಹಾಗೂ ರವಿಚಂದ್ರನ್ ಅವರ 'ಅಹಂ ಪ್ರೇಮಾಸ್ಮಿ' ಚಿತ್ರಗಳಲ್ಲೂ ಆರತಿ ನಟಿಸಿದ್ದಾರೆ.

ಇದೀಗ ಎಫ್ ಬಿಐ ಬಂಧನದಲ್ಲಿರುವ ಹೆಡ್ಲಿ, ಬಾಲಿವುಡ್ ಚಿತ್ರ ನಿರ್ಮಾಪಕ ಮಹೇಶ್ ಭಟ್ ಅವರ ಮಗ ರಾಹುಲ್ ಭಟ್ ಅವರೊಂದಿಗೂ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. 2006 ಮತ್ತು 09ರ ನಡುವೆ ಹೆಡ್ಲಿ ಮುಂಬೈಗೆ ಭೇಟಿ ನೀಡಿದ್ದಾಗ ರಾಹುಲ್ ಅವನ ಸಂಪರ್ಕಕ್ಕೆ ಬಂದಿದ್ದ. ರಾಹುಲ್ ಪ್ರಮುಖ ಸಾಕ್ಷಿ ಎಂದು ಮುಂಬೈನ ಜಂಟಿ ಪೊಲೀಸ್ ಆಯುಕ್ತ ರಾಕೇಶ್ ಮಾರಿಯಾ ಹೇಳಿದ್ದಾರೆ.

ಆದರೆ ಹೆಡ್ಲಿಯೊಂದಿಗೆ ಸಂಪರ್ಕ ಇತ್ತು ಎಂಬ ಸುದ್ದಿಯನ್ನು ಕಂಗನಾ ರಾಣಾವತ್ ಹಾಗೂ ಆರತಿಛಾಬ್ರಿಯಾ ನಿರಾಕರಿಸಿದ್ದಾರೆ. ಟಿಆರ್ ಪಿ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಮಾಧ್ಯಮಗಳು ಇಲ್ಲದಸಲ್ಲದ ವರದಿಗಳನ್ನು ಬಿತ್ತರಿಸುತ್ತಿವೆ ಎಂದು ಎಂದು ಕಂಗನಾ ತನ್ನ ಬ್ಲಾಗ್ ನಲ್ಲಿ ಮಾಧ್ಯಮಗಳ ಮೇಲೆ ಹರಿಹಾಯ್ದಿದ್ದಾರೆ. ಒಟ್ಟಿನಲ್ಲಿ ಉಗ್ರರಿಗೆ ಬಾಲಿವುಡ್ ನಂಟಿರುವುದು ಮತ್ತೊಮ್ಮೆ ಸಾಬೀತಾಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada