»   » ದಾಂಪತ್ಯ ಜೀವನಕ್ಕೆ ತುಳುನಾಡ ಕನ್ಯೆ ಶಿಲ್ಪಾ ಶೆಟ್ಟಿ

ದಾಂಪತ್ಯ ಜೀವನಕ್ಕೆ ತುಳುನಾಡ ಕನ್ಯೆ ಶಿಲ್ಪಾ ಶೆಟ್ಟಿ

Posted By:
Subscribe to Filmibeat Kannada

ಬಾಲಿವುಡ್ ನಟಿ, ತುಳುನಾಡ ಕನ್ಯೆ ಶಿಲ್ಪಾ ಶೆಟ್ಟಿ ನವೆಂಬರ್ 22ರ ಭಾನುವಾರ ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು. ಶಿಲ್ಪಾ ಶೆಟ್ಟಿ ಅದ್ದೂರಿ ಮದುವೆ ಸಮಾರಂಭ ಆಕೆಯ ಆಪ್ತ ಗೆಳತಿ ಕಿರಣ್ ಬಾವಾ ಅವರ ಬಂಗಲೆಯಲ್ಲಿ ಮುಂಬೈ ಖಾಂಡಲಾದಲ್ಲಿ ನಡೆಯಿತು.

ಮಂಗಳೂರು ಶೈಲಿಯ ವಿವಾಹ ಸಮಾರಂಭಕ್ಕೆ ಬಂಧುಗಳು ಮತ್ತು ಕುಟುಂಬಿಕರು ಉಪಸ್ಥಿತರಿದ್ದರು. ಬಾಲಿವುಡ್ ತಾರೆಗಳಾದ ಸನ್ನಿ ಡಿಯೋಲ್, ಸುನಿಲ್ ಶೆಟ್ಟಿ, ಜಾಕಿ ಭಗವಾನಿ ಮತ್ತು ವಾಸು ಭಗವಾನಿ ಭಾಗವಹಿಸಿದ್ದರು. ತರುಣ್ ತಾಹಿಲ್ಯಾನಿ ವಿನ್ಯಾಸಗೊಳಿಸಿದ ಕಸೂತಿ ಹಾಕಿದ ಕೆಂಬಣ್ಣದ ಸೀರೆ ಧರಿಸಿ ಕಂಗೊಳಿಸುತ್ತಿದ್ದರು ಮುವ್ವತ್ತ ನಾಲ್ಕರ ಹರೆಯದ ಶಿಲ್ಪಾ.

ಮುವ್ವತ್ತ ಮೂರರ ಹರೆಯದ ಮದುಮಗ ರಾಜ್ ಕುಂದ್ರಾ ಅವರು ಅಲಂಕೃತ ಕುದುರೆ ಗಾಡಿಯಲ್ಲಿ ಮೆರೆವಣಿಗೆ ಬಂದರು. ಕೆಂಪು ಮಿಶ್ರಿತ ಬಂಗಾರ ವರ್ಣದ ಶೆರ್ವಾಣಿಯಲ್ಲಿ ಕುಂದ್ರಾ ಕಂಗೊಳಿಸುತ್ತಿದ್ದರು. ಅಕ್ಕನ ಮದುವೆಗಾಗಿ ಶಮಿತಾ ಶೆಟ್ಟಿ ಬಿಗ್ ಬಾಸ್ ರಿಯಾಲಿಟಿ ಶೋ ಕಾರ್ಯಕ್ರಮವನ್ನೇ ತೊರೆದು ಬಂದಿದ್ದರು.

ಮದುವೆಯ ವಿಧಿ ವಿಧಾನಗಳು ಮಂಗಳೂರು ಮತ್ತು ಪಂಜಾಬಿ ಶೈಲಿಯಲ್ಲಿ ನಡೆದರೆ ವಿವಾಹ ಪೂರ್ವ ವಿಧಿಗಳಾದ ಮೆಹಂದಿ ಮತ್ತು ಸಂಗೀತ ಕಾರ್ಯಕ್ರಮಗಳು ಪಂಜಾಬಿ ಸಂಪ್ರದಾಯದ ಪ್ರಕಾರ ನಡೆದವು. ಶಿಲ್ಪಾ ಶೆಟ್ಟಿಗೆ ಇದು ಮೊದಲ ಮದುವೆಯಾದರೆ ಕುಂದ್ರಾ ಅವರಿಗೆ ಈಗಾಗಲೇ ಮದುವೆಯಾಗಿದ್ದು ಸಣ್ಣ ಮಗಳು ಇದ್ದಾಳೆ.

ಶಿಲ್ಪಾ ಮತ್ತು ಕುಂದ್ರಾ ಕೇವಲ ಜೀವನ ಸಂಗಾತಿಗಳು ಮಾತ್ರವಲ್ಲ, ವ್ಯವಹಾರ ಪಾಲುದಾರರು ಸಹ. ಇಂಡಿಯನ್ ಪ್ರೀಮಿಯರ್ ಲೀಗ್ ನ ರಾಜಸ್ತಾನ್ ರಾಯಲ್ಸ್ ತಂಡ ಹಾಗೂ ಇಂಗ್ಲೆಂಡ್ ನ ಫುಡ್ ಚೈನ್ ಒಂದು ಈ ದಂಪತಿಯ ಸಹ ಪಾಲುದಾರಿಕೆಯಲ್ಲಿದೆ. ನವ ದಂಪತಿಗಳು ನ.24ರಂದು ಮುಂಬೈನಲ್ಲಿ ಅದ್ದ್ದೂರಿ ಔತಣಕೂಟವನ್ನು ಆಯೋಜಿಸಿದ್ದಾರೆ.

ಪ್ಯಾರಡೈಸ್ ದ್ವೀಪದಲ್ಲಿ ಮೊದಲ ರಾತ್ರಿ!
ಕುಂದ್ರಾ ಈಗಾಗಲೇ ಹನಿಮೂನ್ ಗಾಗಿ ಪ್ಯಾರಡೈಸ್ ದ್ವೀಪದ ಅಟ್ಲಾಂಟಿಸ್ ನ ರೆಸಾರ್ಟ್ ವೊಂದನ್ನು ಬುಕ್ ಮಾಡಿದ್ದಾರೆ! ಈ ಬಗ್ಗೆ ಶಿಲ್ಪಾರನ್ನು ಕೇಳಿದ್ದಕ್ಕೆ ರಾಜ್ ಎಲ್ಲಾ ಅರೇಂಜ್ ಮಾಡಿದ್ದಾನೆ ಎಂದು ಹೇಳಿ ಕೇಳಿದವರ ಬಾಯಿ ಮುಚ್ಚಿಸಿದ್ದಾರೆ. ಒಟ್ಟಿನಲ್ಲಿ ಶಿಲ್ಪಾ ಮತ್ತು ಕುಂದ್ರಾ ಅವರ ದಾಂಪತ್ಯ ಜೀವನ ಸುಖಮಯವಾಗಿರಲಿ ಎಂದು ಹಾರೈಸೋಣ. ಚೆಲುವೆ ಶಿಲ್ಪ ಶೆಟ್ಟಿ ಮದುವೆ ಆಲ್ಬಂ.

ವಿಡಿಯೋದಲ್ಲಿ ಶಿಲ್ಪಾ ಶೆಟ್ಟಿ ಮದುವೆ ಸಂಭ್ರಮ

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada