»   »  ಅನಾಥ ಮಕ್ಕಳಿಗೆ ತಾಯಿಯಾದ ಪ್ರೀತಿ ಜಿಂಟಾ

ಅನಾಥ ಮಕ್ಕಳಿಗೆ ತಾಯಿಯಾದ ಪ್ರೀತಿ ಜಿಂಟಾ

Subscribe to Filmibeat Kannada

ಬಾಲಿವುಡ್ ನಟಿ ಪ್ರೀತಿ ಜಿಂಟಾ ಹೃಷಿಕೇಶ್ ನ ಒಂದು ಅನಾಥಾಶ್ರಮಕ್ಕೆ ಸೇರಿದ 34 ಮಂದಿ ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಂಡಿದ್ದಾರೆ. ಇನ್ನು ಮುಂದೆ ಈ ಮಕ್ಕಳ ಲಾಲನೆ ಪಾಲನೆಯ ಖರ್ಚು ವೆಚ್ಚಗಳನ್ನು ಅವರೇ ಭರಿಸಲಿದ್ದಾರೆ.

ಈ ಕುರಿತು ಪ್ರೀತಿ ಜಿಂಟಾ ಮಾತನಾಡುತ್ತಾ, ಇನ್ನು ಮುಂದೆ ಅವರೆಲ್ಲಾ ನನ್ನ ಮಕ್ಕಳು. ನನ್ನೊಂದಿಗೆ ಅವರು ಕಲೆತು ಇರದಿದ್ದರೂ...ಅವರ ಊಟೋಪಚಾರ, ಬಟ್ಟೆ, ಶಿಕ್ಷಣ ಎಲ್ಲವನ್ನೂ ನಾನೇ ನಿಭಾಯಿಸುತ್ತೇನೆ. ವರ್ಷದಲ್ಲಿ ಎರಡು ಬಾರಿಯಾದರೂ ಅವರನ್ನು ಭೇಟಿ ಮಾಡಿ ಕಷ್ಟಸುಖಗಳನ್ನು ಹಂಚಿಕೊಳ್ಳುತ್ತೇನೆ ಎಂದು ಹೇಳಿದರು.

''ಸದ್ಯಕ್ಕೆ ಈ 34 ಮಂದಿ ಮಕ್ಕಳ ಜವಾಬ್ದಾರಿ ನನ್ನದು. ಮುಂಬರುವ ದಿನಗಳಲ್ಲಿ ಮತ್ತಷ್ಟು ಅನಾಥ ಮಕ್ಕಳನ್ನು ದತ್ತು ತೆಗೆದುಕೊಳ್ಳುತ್ತೇನೆ. ಅವರ ಬಾಳಿನಲ್ಲಿ ಬೆಳಕು ತರುತ್ತೇನೆ. ಒಬ್ಬರಿಗೆ ಸಹಾಯ ಮಾಡುವುದರಲ್ಲಿ ಸಿಗುವ ಸುಖ ಇನ್ಯಾವುದರಲ್ಲೂ ಸಿಗದು. ಅದಕ್ಕಾಗಿಯೇ ಯಾರೂ ಇಲ್ಲದವರಿಗೆ ಆಸರೆಯಾಗಬೇಕೆಂದಿದ್ದೇನೆ'' ಎನ್ನುತ್ತಾರೆ ಪ್ರೀತಿ ಜಿಂಟಾ.

ಈ ಮಕ್ಕ್ಕಳೊಂದಿಗೆ ಮಾತನಾಡುತ್ತಿದ್ದರೆ ಮನಸ್ಸಿನಲ್ಲಿ ಶಾಂತ ಮನೋಭಾವ ಮೂಡುತ್ತದೆ. ನಿಜಕ್ಕೂ ನನಗೆ ಖುಷಿಯಾಗಿದೆ ಎನ್ನುವ ಪ್ರೀತಿ ಜಿಂಟಾ ಮಾತುಗಳನ್ನು ಇತರರು ಪಾಲಿಸಿದರೆ ಎಷ್ಟು ಚೆಂದ ಅಲ್ಲವೆ! ಪ್ರೀತಿ ಜಿಂಟಾ ವಯಸ್ಸು ಸಹ 34 ವರ್ಷ. ಈ ಕಾರಣಕ್ಕೆ ಇರಬೇಕು 34 ಮಕ್ಕಳನ್ನು ದತ್ತು ತೆಗೆದುಕೊಂಡಿದ್ದಾರೆ. ಸದ್ಯಕ್ಕೆ ಜಾಹ್ನು ಬಾರುವಾ ನಿರ್ದೇಶನದ 'ಹರ್ ಪಲ್' ಚಿತ್ರದಲ್ಲಿ ಪ್ರೀತಿ ಜಿಂಟಾ ನಟಿಸುತ್ತಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada