For Quick Alerts
  ALLOW NOTIFICATIONS  
  For Daily Alerts

  ಎನ್‌ಸಿಬಿ ವಿಚಾರಣೆಗೆ ಹಾಜರಾದ ಅನನ್ಯಾ ಪಾಂಡೆ: ಸಂಕಷ್ಟ ಶುರು

  |

  ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅನ್ನು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿರುವ ಎನ್‌ಸಿಬಿ ಇದೀಗ ಅದೇ ಪ್ರಕರಣ ಚುಂಗು ಹಿಡಿದು ಜನಪ್ರಿಯ ನಟಿ ಅನನ್ಯಾ ಪಾಂಡೆ ಮೇಲೆ ದಾಳಿ ನಡೆಸಿದೆ.

  ಅನನ್ಯಾ ಪಾಂಡೆ ಮನೆ ಮೇಲೆ ದಾಳಿ ನಡೆಸಿ ನಟಿಯ ಮೊಬೈಲ್, ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡಿರುವ ಎನ್‌ಸಿಬಿ ಮಧ್ಯಾಹ್ನ ಎರಡು ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಹೇಳಿತ್ತು. ಅಂತೆಯೇ ನಟಿ ಅನನ್ಯಾ ಪಾಂಡೆ ಎನ್‌ಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ. ಅನನ್ಯಾ ಜೊತೆಗೆ ಅವರ ತಂದೆ ಚಂಕಿ ಪಾಂಡೆ ಸಹ ವಿಚಾರಣೆಗೆ ಹಾಜರಾಗಿದ್ದಾರೆ.

  ಆರ್ಯನ್ ಖಾನ್ ಬಂಧನದ ಬಳಿಕ ಎನ್‌ಸಿಬಿ ನಡೆಸಿದ ತನಿಖೆಯಲ್ಲಿ ಅನನ್ಯಾ ಪಾಂಡೆ ಹೆಸರು ಕೇಳಿ ಬಂದ ಕಾರಣ ಎನ್‌ಸಿಬಿ ನಟಿಯ ಮನೆಯ ಮೇಲೆ ದಾಳಿ ಮಾಡಿದೆ.

  ಆರ್ಯನ್ ಖಾನ್ ಹಾಗೂ ಅನನ್ಯಾ ಪಾಂಡೆ ಆತ್ಮೀಯ ಸ್ನೇಹಿತರು. ಆರ್ಯನ್ ಖಾನ್‌ರ ಅಕ್ಕ ಸುಹಾನಾ ಖಾನ್ ಸಹ ಅನನ್ಯಾ ಪಾಂಡೆಗೆ ಸ್ನೇಹಿತೆ. ಆರ್ಯನ್ ಖಾನ್ ಜೊತೆಗೆ ಇದೇ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಅರ್ಬಾಜ್ ಸೇಠ್ ಮರ್ಚೆಂಟ್ ಸಹ ಅನನ್ಯಾಗೆ ಸ್ನೇಹಿತ. ಆರ್ಯನ್ ಖಾನ್ ಮೊಬೈಲ್ ವಾಟ್ಸ್‌ಅಪ್‌ ಚಾಟ್‌ ತನಿಖೆ ನಡೆಸಿದಾಗ ಅನನ್ಯಾ ಪಾಂಡೆ ಮೇಲೆ ಅನುಮಾನಗೊಂಡ ಎನ್‌ಸಿಬಿ ಇದೀಗ ನಟಿಯನ್ನು ವಿಚಾರಣೆಗೆ ಕರೆದಿದೆ.

  ಶಾರುಖ್ ಖಾನ್ ಕುಟುಂಬದೊಂದಿಗೆ ಅನನ್ಯಾ ಪಾಂಡೆಗೆ ಆಪ್ತ ನಂಟಿದೆ. ಹಿರಿಯ ನಟ ಚಂಕಿ ಪಾಂಡೆ ಮಗಳಾಗಿರುವ ಅನನ್ಯಾ ಪಾಂಡೆ, ''ಶಾರುಖ್ ಖಾನ್ ನನ್ನ ಎರಡನೇ ಅಪ್ಪನಿದ್ದಂತೆ'' ಎಂದೊಮ್ಮೆ ಹೇಳಿದ್ದರು.

  ನಟಿ ಅನನ್ಯಾ ಪಾಂಡೆ ಈವರೆಗೆ ಮೂರು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಂದು ಸಿನಿಮಾದಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದಾರೆ. ಇದೀಗ ತೆಲುಗಿನ 'ಲೈಗರ್' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ನಾಯಕ. ವೃತ್ತಿಯ ಆರಂಭದಲ್ಲಿಯೇ ಡ್ರಗ್ಸ್ ಕಂಟಕ ಅನನ್ಯಾಗೆ ಎದುರಾಗಿದೆ.

  ಇಂದು ಬೆಳಿಗ್ಗೆ ಎನ್‌ಸಿಬಿಯು ಅನನ್ಯಾ ಪಾಂಡೆ ಮನೆ ಮೇಲೆ ದಾಳಿ ನಡೆಸಿದಾಗಲೇ ಶಾರುಖ್ ಖಾನ್ ಮನೆಗೂ ಭೇಟಿ ನೀಡಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಎನ್‌ಸಿಬಿ, ''ನಾವು ಶಾರುಖ್ ಖಾನ್ ಮನೆ ಮೇಲೆ ದಾಳಿ ನಡೆಸಿರಲಿಲ್ಲ ಬದಲಿಗೆ ಆರ್ಯನ್ ಖಾನ್‌ಗೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಸಂಗ್ರಹಿಸಲು ಹೋಗಿದ್ದೆವು'' ಎಂದು ಹೇಳಿದ್ದಾರೆ.

  ಇಂದು ಬೆಳಿಗ್ಗೆಯಷ್ಟೆ ನಟ ಶಾರುಖ್ ಖಾನ್, ಮುಂಬೈನ ಆರ್ಥರ್ ರಸ್ತೆಯ ಜೈಲಿಗೆ ಭೇಟಿ ನೀಡಿ ಮಗ ಆರ್ಯನ್ ಖಾನ್ ಅನ್ನು ಭೇಟಿಯಾಗಿದ್ದರು. ಅದಾದ ಕೆಲವೇ ಹೊತ್ತಿನಲ್ಲಿ ಎನ್‌ಸಿಬಿ ಅಧಿಕಾರಿಗಳು ಶಾರುಖ್ ಖಾನ್ ಮನೆಗೆ ಭೇಟಿ ನೀಡಿದ್ದರು. ಎನ್‌ಸಿಬಿ ಅಧಿಕಾರಿಗಳು ಶಾರುಖ್ ಖಾನ್ ನಿವಾಸದ ಮೇಲೆ ದಾಳಿ ಮಾಡಿದ್ದಾರೆ ಎಂದು ಸುದ್ದಿ ಹರಡಿತ್ತು, ಅದಕ್ಕೆ ಈಗ ಎನ್‌ಸಿಬಿ ಸ್ಪಷ್ಟನೆ ನೀಡಿದೆ.

  ಮುಂಬೈನ ಕೋರ್ಡೆಲಿಯಾ ಕ್ರೂಸ್‌ನಲ್ಲಿ ನಡೆಯುತ್ತಿದ್ದ ಪಾರ್ಟಿ ಮೇಲೆ ದಾಳಿ ನಡೆಸಿದ್ದ ಎನ್‌ಸಿಬಿ (ನಾರ್ಕೊಟಿಕ್ ಕಂಟ್ರೋಲ್ ಬ್ಯೂರೊ) ಆರ್ಯನ್ ಖಾನ್ ಸೇರಿ ಒಂಬತ್ತು ಮಂದಿಯನ್ನು ವಶಕ್ಕೆ ಪಡೆದಿದ್ದರು. ಆರ್ಯನ್ ಖಾನ್ ಸ್ನೇಹಿತನೊಬ್ಬನಿಂದ ಡ್ರಗ್ಸ್ ಅನ್ನು ಸಹ ವಶಪಡಿಸಿಕೊಂಡಿದ್ದರು. ನಂತರ ಅಕ್ಟೋಬರ್ 03 ರಂದು ಆರ್ಯನ್ ಖಾನ್, ಅರ್ಬಾಜ್ ಸೇಠ್ ಮರ್ಚೆಂಟ್ ಹಾಗೂ ಮುನ್‌ಮುನ್ ಧಮೇಚಾ ಅವರುಗಳನ್ನು ಬಂಧಿಸಲಾಯ್ತು. ಆ ನಂತರ ಕ್ರೂಸ್‌ನಲ್ಲಿ ಪಾರ್ಟಿ ಆಯೋಜಿಸಿದ್ದ ಸಂಸ್ಥೆಯ ನೌಕರರನ್ನು ಸಹ ಬಂಧಿಸಲಾಗಿದ್ದು, ಒಟ್ಟು ಒಂಬತ್ತು ಮಂದಿಯು ನ್ಯಾಯಾಂಗ ಬಂಧನದಲ್ಲಿದ್ದಾರೆ.

  English summary
  Actress Ananya Panday attends NCB query in Mumbai office regarding drug case. Aryan Khan and Ananya Panday were close friends.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X