»   » ಚಿರನಿದ್ರೆಗೆ ಜಾರಿದ ಕಿರುತೆರೆ ಹನುಮಂತ ದಾರಾ ಸಿಂಗ್

ಚಿರನಿದ್ರೆಗೆ ಜಾರಿದ ಕಿರುತೆರೆ ಹನುಮಂತ ದಾರಾ ಸಿಂಗ್

Posted By:
Subscribe to Filmibeat Kannada
Actor Dara Singh
ಪುರಾಣಗಳ ಪ್ರಕಾರ ಸಪ್ತಚಿರಂಜೀವಿಗಳಲ್ಲಿ ಒಬ್ಬರಾದ ಹನುಮಂತನ ಪಾತ್ರವನ್ನು ದೂರದರ್ಶನದಲ್ಲಿ ಪೋಷಿಸಿ ಜನಪ್ರಿಯರಾಗಿದ್ದ ಬಾಲಿವುಡ್ ಆಕ್ಷನ್ ಹೀರೋ ದಾರಾ ಸಿಂಗ್ (84) ನಿಧನರಾಗಿದ್ದಾರೆ. ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ಬುಧವಾರ (ಜು.11) ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಗುರುವಾರ (ಜು.12) ಮುಂಜಾನೆ ಅವರು ಕೊನೆಯುಸಿರೆಳೆದಿದ್ದಾರೆ. ಮೂಲತಃ ಕುಸ್ತಿಪಟು ಆಗಿದ್ದ ಅವರು ಬಣ್ಣದ ಜಗತ್ತಿನಲ್ಲೂ ತಮ್ಮದೇ ಛಾಪನ್ನು ಮೂಡಿಸಿದ್ದರು. ಅವರ ನಿಧನಕ್ಕೆ ಬಾಲಿವುಡ್ ಚಿತ್ರರಂಗ ಕಂಬನಿ ಮಿಡಿದಿದೆ. ತನ್ನ ಶೋಕ ಸಂದೇಶದಲ್ಲಿ ಸರಕಾರ "ತುಂಬಲಾರದ ನಷ್ಟ" ಎಂಬ ಸಂದೇಶ ಬಿತ್ತರಿಸಿದೆ.

"ಭಾರತೀಯ ಚಿತ್ರರಂಗಕ್ಕೆ ಸಿಂಗ್ ಅವರು ಸಲ್ಲಿಸಿರುವ ಸೇವೆ ಅವಿಸ್ಮರಣೀಯ. ನಮ್ಮೆಲ್ಲರ ಹೃದಯದಲ್ಲಿ ಅವರು ವಿಶೇಷ ಸ್ಥಾನ ಗಿಟ್ಟಿಸಿದ್ದಾರೆ" ಎಂದು ವಾರ್ತಾ ಮತ್ತು ಮಾಹಿತಿ ಖಾತೆ ಕೇಂದ್ರ ಸಚಿವೆ ಅಂಬಿಕಾ ಸೋನಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

1928ರಲ್ಲಿ ಅಮೃತಸರದಲ್ಲಿ ಸಿಂಗ್ ಜನನ. ಮೂಲತಃ ವೃತ್ತಿಪರ ಕುಸ್ತಿಪಟು ಆಗಿದ್ದ ಇವರು 1950ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ತಮ್ಮದೇ ಆದ ಸ್ಟಂಟ್ ಗಳಿಗೆ ಹೆಸರಾಗಿದ್ದ ಇವರು ಹಲವಾರು ಬಾಲಿವುಡ್ ಚಿತ್ರಗಳಲ್ಲಿ ಅಭಿನಯಿಸಿದರು.

ಬಾಲಿವುಡ್ ನಲ್ಲಿ ಮೀಸೆ ಮಾವನಾಗಿ ಗುರುತಿಸಿಕೊಂಡಿದ್ದ ದಾರಾ ಸಿಂಗ್ ಅವರಿಗೆ ಅಪಾರ ಹೆಸರು ಕೀರ್ತಿ ತಂದುಕೊಟ್ಟಿದ್ದು ದೂರದರ್ಶನ ವಾಹಿನಿಯ 'ರಾಮಾಯಣ' ಧಾರಾವಾಹಿ. ಇದರಲ್ಲಿ ಅವರದು ಹನುಮಂತನಾಗಿ ಎಲ್ಲರ ಹೃದಯ ಗೆದ್ದಿದ್ದರು. ಅವರ ಪಾತ್ರ ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರ ಮನಗೆದ್ದಿತ್ತು.

ಕೆಲಕಾಲ ರಾಜ್ಯಸಭೆ ಸದಸ್ಯರಾಗಿ ಕೆಲಸ ಮಾಡಿದ ಇವರು 2003ರಿಂದ 2009ರವರೆಗೆ ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದರು. ಇತ್ತೀಚೆಗೆ ಅವರ ಆರೋಗ್ಯ ಕ್ಷೀಣಿಸಿತ್ತು. ಹೃದಯಾಘಾತಕ್ಕೆ ಒಳಗಾದ ಅವರನ್ನು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ತೀವ್ರ ನಿಗಾ ಘಟಕದಲ್ಲಿ ಅವರು ಮುಂಜಾನೆ 7.30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಭಾರತದ ಅತ್ಯಂತ ಜನಪ್ರಿಯ ಹನುಮಂತ ಎಂದು ಬಣ್ಣಿಸಿರುವ ಬಿಗ್ ಬಿ ಅಮಿತಾಬ್ ಬಚ್ಚನ್, ಇಡೀ ಒಂದು ಯುಗವೇ ಅವರೊಂದಿಗೆ ಕಣ್ಮರೆಯಾಗಿದೆ ಎಂದಿದ್ದಾರೆ. ಭಾರತೀಯ ಚಿತ್ರರಂದ ಸೂಪರ್ ಮ್ಯಾನ್ ಎಂದು ಶಾರುಖ್ ಖಾನ್ ಬಣ್ಣಿಸಿದ್ದಾರೆ.

ಅಖಾಡದಿಂದ ತೆರೆಯತನಕ ಅವರು ಅಪಾರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. ದಾರಾ ಸಿಂಗ್ ಅವರ ಅಂತ್ಯಕ್ರಿಯೆ ಇಂದೇ (ಜು.12) ನೆರವೇರಲಿದೆ. (ಏಜೆನ್ಸೀಸ್)

English summary
Actor Dara Singh died in the early hours of morning today. The 84-year-old veteran was admitted to Kokilaben Hospital in an emergency condition on July 7. He had suffered a cardiac arrest and since then had been in the ICU.
Please Wait while comments are loading...