ಸಿಡಿದ್ದೆದ್ದ ಹಿಂದೂ ಸಂಘಟನೆ: ಕರ್ನಾಟಕದಲ್ಲಿ ಬ್ಯಾನ್ ಆಗುತ್ತಾ 'ಥ್ಯಾಂಕ್ ಗಾಡ್'..?
ಇತ್ತೀಚಿನ ದಿನಗಳಲ್ಲಿ ಕೆಲ ಚಿತ್ರಗಳು ಬಿಡುಗಡೆಗೂ ಮುನ್ನವೇ ಭಾರೀ ವಿವಾದಗಳ ಸುಳಿಯಲ್ಲಿ ಸಿಲುಕುತ್ತಿವೆ. ಅದು ಚಿತ್ರದ ಪ್ರಮುಖ ಪಾತ್ರಗಳ ವರ್ತನೆಯಿಂದಲೂ ಇರಬಹುದು ಅಥವಾ ಚಿತ್ರ ಕಥಾ ವಸ್ತುವಿನಂದಲೂ ಇರಬಹುದು. ಇದೀಗ ಇತಂಹ ವಿವಾದಿತ ಚಿತ್ರಗಳ ಸಾಲಿಗೆ ಬಾಲಿವುಡ್ ನಟ ಅಜಯ್ ದೇವಗನ್ ನಟನೆಯ 'ಥ್ಯಾಂಕ್ ಗಾಡ್' ಚಿತ್ರ ಕೂಡ ಸೇರಿದೆ.
ಅಜಯ್ ದೇವಗನ್ ನಟನೆಯ 'ಥ್ಯಾಂಕ್ ಗಾಡ್' ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರ ವಿವಾದದ ಸುಳಿಯಲ್ಲಿ ಸಿಲುಕಿಕೊಂಡಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಮೇಲೆ ಚಿತ್ರದ ವಿರುದ್ಧ ದೂರು ದಾಖಲಾಗಿದೆ.
ಮಲ್ಟಿ ಸ್ಟಾರ್ ನಟನೆಯ 'ಥ್ಯಾಂಕ್ ಗಾಡ್' ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಟ್ರೈಲರ್ನಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಸನ್ನಿವೇಶವಿದೆ. ಹೀಗಾಗಿ ಈ ಚಿತ್ರವನ್ನು ಕರ್ನಾಟಕದಲ್ಲಿ ನಿಷೇಧಿಸಬೇಕು ಎನ್ನುವ ಒತ್ತಾಯ ಕೇಳಿಬಂದಿದೆ. ಟ್ರೈಲರ್ನಲ್ಲಿ ಚಿತ್ರಗುಪ್ತ ಪಾತ್ರವನ್ನು ಆಧುನಿಕ ವೇಶಭೂಷಣದಲ್ಲಿ ಚಿತ್ರಿಸಲಾಗಿದ್ದು, ಇದರಿಂದ ಹಿಂದೂಗಳ ಭಾವನೆಗೆ ಧಕ್ಕೆ ಉಂಟಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಆರೋಪಿಸಿದ್ದು, ಈ ಚಿತ್ರ ಕರ್ನಾಟಕದಲ್ಲಿ ತೆರೆ ಕಾಣಬಾರದು ಎಂದು ಆಗ್ರಹಿಸಿದ್ದಾರೆ.

ಈ ಬಗ್ಗೆ ಹಿಂದೂ ಜನಜಾಗೃತಿ ಸಮಿತಿ ವಕ್ತಾರ ಮೋಹನ್ ಗೌಡ ಮಾತನಾಡಿದ್ದು, ಥ್ಯಾಂಕ್ ಗಾಡ್ ಚಿತ್ರದ ಟ್ರೈಲರ್ನಲ್ಲಿ ಹಿಂದೂ ದೇವರನ್ನು ಅಪಹಾಸ್ಯ ಮಾಡುತ್ತಿರುವುದು ಕಂಡುಬಂದಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂ ಧರ್ಮದ ದೇವರು ಚಿತ್ರಗುಪ್ತ ಹಾಗೂ ಯಮನನ್ನು ಅಪಹಾಸ್ಯ ಮಾಡುವುದನ್ನು ನಾವು ಸಹಿಸುವುದಿಲ್ಲ. ಈ ಟ್ರೈಲರ್ ಬಿಡುಗಡೆಯಾಗುವರೆಗೂ ಸೆನ್ಸಾರ್ ಮಂಡಳಿ ನಿದ್ದೆ ಮಾಡುತ್ತಿದ್ದೆಯೇ..? ಎಂದು ಪ್ರಶ್ನಿಸಿದ್ದಾರೆ.
ಹಿಂದೂ ಧಾರ್ಮಿಕ ಪರಿಕಲ್ಪನೆ ಹಾಗೂ ದೇವತೆಗಳನ್ನು ಲೇವಡಿ ಮಾಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ 'ಥ್ಯಾಂಕ್ ಗಾಡ್' ಚಿತ್ರವನ್ನು ರಾಜ್ಯ ಮತ್ತು ಕೇಂದ್ರ ಗೃಹ ಸಚಿವಾಲಯಗಳು ನಿಷೇಧಿಸಬೇಕು. ಇಲ್ಲವಾದರೆ ಬೀದಿಗಿಳಿದು ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು ಥ್ಯಾಂಕ್ ಗಾಡ್ ಚಿತ್ರದ ಟ್ರೈಲರ್ ವೈರಲ್ ಆಗುತ್ತಿದ್ದಂತೆ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಆರೋಪದ ಮೇಲೆ ಉತ್ತರ ಪ್ರದೇಶದಲ್ಲಿ ಚಿತ್ರದ ನಟ ಅಜಯ್ ದೇವಗನ್, ಸಿದ್ದಾರ್ಥ ಮಲ್ಹೋತ್ರಾ ಹಾಗೂ ನಿರ್ದೇಶಕ ಇಂದ್ರ ಕುಮಾರ್ ವಿರುದ್ಧ ದೂರು ದಾಖಲಾಗಿದೆ.


Click it and Unblock the Notifications











