For Quick Alerts
  ALLOW NOTIFICATIONS  
  For Daily Alerts

  ನಮ್ಮ ತಾತ ಕರ್ನಾಟಕದ ಈ ಊರಿನಲ್ಲಿದ್ದರು, ನಾನು ಬಾಲ್ಯವನ್ನು ಅಲ್ಲೇ ಕಳೆದೆ: ಶಾರುಖ್ ಖಾನ್

  |

  ಮಂಗಳೂರಿಗೂ ಪರಾಭಾಷಾ ಚಿತ್ರಗಳಿಗೂ ಅವಿನಾಭಾವ ಸಂಬಂಧವಿದೆ. ಸದ್ಯ ಟಾಲಿವುಡ್‌ನಲ್ಲಿ ರೂಲ್ ಮಾಡುತ್ತಿರುವ ಅನುಷ್ಕಾ ಶೆಟ್ಟಿ, ಕೃತಿ ಶೆಟ್ಟಿ, ಬಾಲಿವುಡ್‌ ಆಳಿದ ಚೆಲುವೆಯರಾದ ದೀಪಿಕಾ ಪಡುಕೋಣೆ ಹಾಗೂ ಐಶ್ವರ್ಯ ರೈ ಇವರೆಲ್ಲರೂ ಸಹ ಮೂಲ ಮಂಗಳೂರಿಗರೇ. ಹೀಗೆ ವಿವಿಧ ಚಿತ್ರರಂಗಗಳ ಜತೆ ನಂಟನ್ನು ಹೊಂದಿರುವ ಮಂಗಳೂರಿಗೂ ಬಾಲಿವುಡ್ ಕಿಂಗ್ ಎಂದೇ ಖ್ಯಾತಿಯನ್ನು ಹೊಂದಿರುವ ಶಾರುಖ್ ಖಾನ್‌ಗೂ ನಂಟಿತ್ತು ಎಂಬುದು ಹಲವರಿಗೆ ತಿಳಿದಿಲ್ಲ.

  ಹೌದು, ನಟ ಶಾರುಖ್ ಖಾನ್‌ ತಮ್ಮ ಬಾಲ್ಯದ ಐದು ವರ್ಷಗಳನ್ನು ಮಂಗಳೂರಿನಲ್ಲಿ ಕಳೆದಿದ್ದರು. ಈ ವಿಷಯವನ್ನು ಸ್ವತಃ ಶಾರುಖ್ ಅವರೇ ಕರ್ನಾಟಕಕ್ಕೆ ವಿವಿಧ ಕಾರ್ಯಕ್ರಮಗಳ ಸಲುವಾಗಿ ಆಗಮಿಸಿದ್ದ ಸಂದರ್ಭದಲ್ಲಿ ತಿಳಿಸಿದ್ದರು. ಶಾರುಖ್ ಖಾನ್ ಅವರ ತಾಯಿಯ ತಂದೆ ಇಫ್ತಿಖರ್ ಅಹ್ಮದ್ 1960ರ ದಶಕದಲ್ಲಿ ಮಂಗಳೂರಿನಲ್ಲಿ ಮುಖ್ಯ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸಿದ್ದರು. 1965ರ ನವೆಂಬರ್ 2ರಂದು ದೆಹಲಿಯಲ್ಲಿ ಜನಿಸಿದ್ದ ಶಾರುಖ್ ಖಾನ್ ಅವರನ್ನು ಅವರ ತಾಯಿ ಮಂಗಳೂರಿಗೆ ಕರೆತಂದಿದ್ದರು. ಆ ಸಮಯದಲ್ಲಿ ಸುಮಾರು ಐದು ವರ್ಷಗಳ ಕಾಲ ಮಂಗಳೂರಿನಲ್ಲಿಯೇ ಶಾರುಖ್ ಖಾನ್ ತಮ್ಮ ಬಾಲ್ಯವನ್ನು ಕಳೆದಿದ್ದರು.

  ಸದ್ಯ ಬಾಲಿವುಡ್‌ನ ದೊಡ್ಡ ಸ್ಟಾರ್ ನಟನಾಗಿ ಮಿಂಚಿರುವ ಶಾರುಖ್ ಖಾನ್ ಮಂಗಳೂರಿನ ಜತೆಗೆ ಕರ್ನಾಟಕದ ಪ್ರಮುಖ ನಗರವಾದ ಬೆಂಗಳೂರಿನ ಬಗ್ಗೆಯೂ ಸಹ ಹಲವು ಬಾರಿ ಮಾತನಾಡಿದ್ದಾರೆ. ಹೀಗೆ ಶಾರುಖ್ ಖಾನ್ ಯಾವ ಸಂದರ್ಭಗಳಲ್ಲಿ ಮಂಗಳೂರು ಹಾಗೂ ಬೆಂಗಳೂರಿನ ಬಗ್ಗೆ ಮಾತನಾಡಿದ್ದರು ಎಂಬ ಮಾಹಿತಿ ಈ ಕೆಳಕಂಡಂತಿದೆ.

  ನನ್ನ ಬಾಲ್ಯದ ಫೋಟೊಗಳೆಲ್ಲಾ ಮಂಗಳೂರಿನದ್ದೇ

  ನನ್ನ ಬಾಲ್ಯದ ಫೋಟೊಗಳೆಲ್ಲಾ ಮಂಗಳೂರಿನದ್ದೇ

  ನನ್ನ ತಾತ ಮಂಗಳೂರಿನಲ್ಲಿದ್ದರು, ನಾನು ಮಂಗಳೂರಿನಲ್ಲಿ ನನ್ನ ಬಾಲ್ಯ ಕಳೆದೆ ಎಂದು ಹಲವಾರು ಬಾರಿ ಹೇಳಿರುವ ಶಾರುಖ್ ಖಾನ್ ಹಿಂದೊಮ್ಮೆ ತಮ್ಮ ಬಾಲ್ಯದ ಚಿತ್ರಗಳು ಯಾವ ಊರಿನದ್ದು ಎಂಬ ಚರ್ಚೆ ಹೆಚ್ಚಾಗಿ ನಡೆದಾಗ ತಾವೇ ಟ್ವೀಟ್ ಮಾಡಿ ಅದು ಮಂಗಳೂರಿನಲ್ಲಿ ತೆಗೆದಿದ್ದ ಚಿತ್ರಗಳು ಎಂಬುದನ್ನು ತಿಳಿಸಿದ್ದರು. ನಮ್ಮ ತಾತ ಮಂಗಳೂರು ಪೋರ್ಟ್‌ನ ಎಂಜಿನಿಯರ್ ಆಗಿದ್ದರು, ಹಾಗಾಗಿ ನಾನು ಬೆಳೆದದ್ದೆಲ್ಲಾ ಮಂಗಳೂರಿನಲ್ಲೇ, ನನ್ನ ಬಾಲ್ಯದ ಫೋಟೊಗಳೆಲ್ಲಾ ಮಂಗಳೂರಿನಲ್ಲಿ ತೆಗೆದ ಫೋಟೊಗಳೇ ಎಂದು ಶಾರುಖ್ ಖಾನ್ 2010ರ ಮೇ 23ರಂದು ಟ್ವೀಟ್ ಮಾಡಿದ್ದರು.

  ಬೆಂಗಳೂರಿನ ಈ ಸ್ಥಳಗಳ ನೆನಪಿದೆ

  ಬೆಂಗಳೂರಿನ ಈ ಸ್ಥಳಗಳ ನೆನಪಿದೆ

  ಬಾಲ್ಯದಲ್ಲಿ ಬೆಂಗಳೂರಿಗೂ ಭೇಟಿ ನೀಡಿದ್ದೆ, ಬೆಂಗಳೂರಿನ ನಂದಿದುರ್ಗ ರೋಡ್, ಜಯಮಹಲ್ ಬಡಾವಣೆ ಹಾಗೂ ಪ್ಯಾಲೇಸ್ ರೋಡ್ ಸದಾ ನೆನಪಿನಲ್ಲಿರುವಂತ ಸ್ಥಳಗಳು. ಬಾಲ್ಯದಲ್ಲೇ ನಟನಾಗಬೇಕು ಎಂಬ ಕನಸು ಹೊತ್ತಿದ್ದ ನಾನು ಮುಂಬೈಗೆ ಕಳುಹಿಸಿದ್ದ ಮೊದಲ ಫೋಟೊ ಬೆಂಗಳೂರಿನಲ್ಲೇ ತೆಗೆಸಿದ್ದು ಎಂದು ಶಾರುಖ್ ಖಾನ್ ಹೇಳಿಕೆ ನೀಡಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ 2011ರಲ್ಲಿ ವರದಿ ಮಾಡಿತ್ತು.

  ಮಂಗಳೂರಿನಲ್ಲಿ ಬಾಲ್ಯ ಕಳೆದಿದ್ರೂ ಕನ್ನಡ ಯಾಕೆ ಬರಲ್ಲ?

  ಮಂಗಳೂರಿನಲ್ಲಿ ಬಾಲ್ಯ ಕಳೆದಿದ್ರೂ ಕನ್ನಡ ಯಾಕೆ ಬರಲ್ಲ?

  ಇನ್ನು ಬಾಲ್ಯದ ಐದು ವರ್ಷವನ್ನು ಮಂಗಳೂರಿನಲ್ಲಿ ಕಳೆದಿದ್ದರೂ ಸಹ ಶಾರುಖ್ ಖಾನ್‌ಗೆ ಕನ್ನಡ ಬರಲ್ವ ಎಂದು ಹಲವರು ನಟ ಟ್ವೀಟ್ ಮಾಡಿದ್ದಾಗ ಪ್ರಶ್ನಿಸಿದ್ದರು. ಆದರೆ ಶಾರುಖ್ ಈ ಯಾವ ಟ್ವೀಟ್‌ಗೂ ಉತ್ತರಿಸಿರಲಿಲ್ಲ. ಆದರೆ ಹ್ಯಾಪಿ ನ್ಯೂ ಇಯರ್ ಚಿತ್ರದ ಪ್ರಚಾರಕ್ಕೆಂದು ಬೆಂಗಳೂರಿಗೆ ಬಂದಿದ್ದಾಗ ಖಾಸಗಿ ಸುದ್ದಿ ವಾಹಿನಿ ಜತೆ ಮಾತನಾಡಿದ್ದ ಶಾರುಖ್ ಖಾನ್ ನಂಗೆ ಕನ್ನಡ ಬರಲ್ಲ ಏಕೆಂದರೆ ಬಾಲ್ಯ ಕಳೆದ ಕೂಡಲೇ ನನ್ನನ್ನು ದೆಹಲಿಗೆ ಕರೆದುಕೊಂಡು ಹೋದರು ಹೀಗಾಗಿ ಕನ್ನಡ ಕಲಿಯಲಾಗಲಿಲ್ಲ, ನನ್ನ ತಾಯಿ ಚೆನ್ನಾಗಿ ಕನ್ನಡ ಮಾತಾಡ್ತಾರೆ ಎಂದು ತಿಳಿಸಿದ್ದರು.

  English summary
  I was bought up in Karnataka's Mangalore says Shah Rukh Khan. Take a look
  Wednesday, November 2, 2022, 16:34
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X