ಕಥಕ್ ನೃತ್ಯ ಪಾರಂಗತ ಬಿರ್ಜು ಮಹಾರಾಜ್ ನಿಧನ: ಬಾಲಿವುಡ್ಡಿಗರ ಸಂತಾಪ
'ವಿಶ್ವರೂಪಂ', 'ದಿಲ್ ತೋ ಪಾಗಲ್ ಹೇ', 'ದೇವ್‌ದಾಸ್' ಭಾಜಿರಾವ್ ಮಸ್ತಾನಿ' ಇನ್ನೂ ಹಲವು ಸಿನಿಮಾಗಳ ಐಕಾನಿಕ್ ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಿದ್ದ ಕಥಕ್ ನೃತ್ಯ ಸಾಮ್ರಾಟ ಪಂಡಿತ್ ಬಿರ್ಜು ಮಹಾರಾಜ್ ಭಾನುವಾರ ದೆಹಲಿಯ ತಮ್ಮ ನಿವಾಸದಲ್ಲಿ ಕೊನೆ ಉಸಿರೆಳೆದಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.
ಬಿರ್ಜು ಮಹಾರಾಜ್ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದು ಈ ಖೇದಕರ ವಿಷಯವನ್ನು ಬಿರ್ಜು ಮಹಾರಾಜರ ಮೊಮ್ಮಗ ಸ್ವರಾಂಶ ಮಿಶ್ರಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಕಮಲ್ ಹಾಸನ್ ನಟಿಸಿದ್ದ 'ವಿಶ್ವರೂಂಪಂ' ಸಿನಿಮಾದ 'ಉನ್ನ ಕಾಣಾದೆ' ಹಾಡಿಗೆ ಮಾಡಿದ ಅದ್ಭುತ ನೃತ್ಯ ಸಂಯೋಜನೆಗೆ ಬಿರ್ಜು ಮಹಾರಾಜ್ ಅವರಿಗೆ ರಾಷ್ಟ್ರಪ್ರಶಸ್ತಿ ಸಂದಿದೆ. ಅದು ಮಾತ್ರವೇ ಅಲ್ಲದೆ ಎರಡನೇ ಅತ್ಯುತ್ತಮ ನಾಗರೀಕ ಪ್ರಶಸ್ತಿಯಾದ ಪದ್ಮ ವಿಭೂಷಣ ಪ್ರಶಸ್ತಿ 1986ರಲ್ಲಿಯೇ ಅವರಿಗೆ ಸಂದಿದೆ.

'ದೇವ್‌ದಾಸ್' ಸಿನಿಮಾದ 'ಕಾಹೆ ಚೇಡೆ ಮೋಹೆ' ಹಾಡನ್ನು ಹಾಡಿರುವುದಲ್ಲದೆ ಹಾಡಿಗೆ ನೃತ್ಯ ಸಂಯೋಜನೆ ಸಹ ಮಾಡಿದ್ದಾರೆ. ಬಾಲಿವುಡ್‌ನ ಅತ್ಯುತ್ತಮ ಹಾಡುಗಳಲ್ಲಿ ಇದು ಸಹ ಒಂದು. ಖ್ಯಾತ ನಿರ್ದೇಶಕ ಸತ್ಯಜಿತ್ ರೇ ಅವರೊಟ್ಟಿಗೂ ಬಿರ್ಜು ಮಹಾರಾಜ್ ಕೆಲಸ ಮಾಡಿದ್ದಾರೆ. 'ಡೇಡ್ ಇಷ್ಕಿಯಾ', 'ದಿಲ್ ತೋ ಪಾಗಲ್ ಹೇ', ಭಾಜಿರಾವ್ ಮಸ್ತಾನಿ' ಇನ್ನೂ ಹಲವು ಬಾಲಿವುಡ್ ಸಿನಿಮಾಗಳಲ್ಲಿ ಬಿರ್ಜು ಮಹಾರಾಜ್ ಕೆಲಸ ಮಾಡಿದ್ದಾರೆ.
ಬಿರ್ಜು ಮಹಾರಾಜ್ ನಿಧನಕ್ಕೆ ಬಾಲಿವುಡ್‌ನ ಹಲವು ಖ್ಯಾತ ನಾಮರು ಸಂತಾಪ ವ್ಯಕ್ತಪಡಿಸಿದ್ದಾರೆ.


Click it and Unblock the Notifications











