ಸಲ್ಮಾನ್ ಖಾನ್ ಗೆ ಹತ್ತು ವರ್ಷ ಜೈಲು ಶಿಕ್ಷೆ ಸಾಧ್ಯತೆ
ಹನ್ನೆರಡು ವರ್ಷಗಳ ಹಿಂದೆ ನಡೆದಂತಹ ಘಟನೆ ಇದು. ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ನೆತ್ತಿ ಮೇಲೆ ತೂಗುಕತ್ತಿಯಾಗಿ ನೇತಾಡುತ್ತಲೇ ಇದೆ. ಅದು 2002 ಸೆಪ್ಟೆಂಬರ್ 28ರ ಬೆಳಗಿನ ಜಾವ. ಮುಂಬೈನ ಬಾಂದ್ರಾದ ಬೇಕರಿ ಹೊರಗೆ ಸುಖ ನಿದ್ರೆಯಲ್ಲಿದ್ದವರ ಮೇಲೆ ಸಲ್ಮಾನ್ ಕಾರು ಏಕಾಏಕಿ ಹರಿದು ಒಬ್ಬರ ಸಾವಿಗೆ ಹಾಗೂ ನಾಲ್ಕು ಮಂದಿ ಗಾಯಗೊಳ್ಳಲು ಕಾರಣವಾಗಿತ್ತು.
ಇದೀಗ ಮತ್ತೆ ಈ ಕೇಸಿನ ವಿಚಾರಣೆ ನಡೆಯುತ್ತಿದೆ. ಇಬ್ಬರು ಸಾಕ್ಷಿಗಳು ಸಲ್ಮಾನ್ ಖಾನ್ ಅವರನ್ನು ಗುರುತಿಸಿದ್ದಾರೆ. ಘಟನೆ ನಡೆದ ದಿನ ಸ್ವತಃ ಸಲ್ಮಾನ್ ಖಾನ್ ಅವರು ಕಾರು ಚಲಾಯಿಸುತ್ತಿದ್ದರು ಎಂದು ಮೊದಲ ಸಾಕ್ಷಿ ಹೇಳಿಕೆ ನೀಡಿದ್ದಾರೆ. [ಸಲ್ಲುಗೆ ಶರ್ಟ್ ಬಿಚ್ಚಿಸಲಿದ್ದಾರೆ ಯೋಗರಾಜ್ ಭಟ್!]

ಮುಂಬೈನ ಸುಬರ್ಬನ್ ಪ್ರದೇಶದ ಬಾಂದ್ರಾದಲ್ಲಿನ ಬೇಕರಿಯೊಂದರ ಬಳಿ ಈ ಘಟನೆ ನಡೆದಿತ್ತು. ಸೆಪ್ಟೆಂಬರ್ 2, 2005ರಲ್ಲಿ ಕೇಸಿನ ವಿಚಾರಣೆ ಆರಂಭಿಸಲಾಯಿತು. 2006ರಲ್ಲಿ 39 ಮಂದಿ ಸಾಕ್ಷಿಗಳನ್ನು ವಿಚಾರಣೆ ಮಾಡಿದ ನ್ಯಾಯಾಲಯ, ಅಕ್ಟೋಬರ್ 6, 2006ರಲ್ಲಿ ಸಲ್ಮಾನ್ ಮೇಲೆ ಬಾಂದ್ರಾ ಕೋರ್ಟ್ ಹತ್ತು ಅಪರಾಧಗಳನ್ನು ನಮೂದಿಸಿದೆ.
ಸಲ್ಮಾನ್ ಖಾನ್ ಅವರು ಶಿಕ್ಷಾರ್ಹ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂದು 2013 ಜುಲೈ 24ರಂದು ಮುಂಬೈ ನ್ಯಾಯಾಲಯ ನಿರ್ಧರಿಸಿತ್ತು. ಬಾಂದ್ರಾ ಕೋರ್ಟ್ ನಿರ್ಣಯದ ಪ್ರಕಾರ ಐಪಿಸಿ 304 (ಎ) ಪ್ರಕಾರ ಸಲ್ಮಾನ್ ಗೆ ಎರಡು ವರ್ಷಗಳ ಶಿಕ್ಷೆಗೆ ಅರ್ಹರಾಗುತ್ತಾರೆ ಎಂದು ನಿರ್ಧರಿಸಿದ್ದರು. ಆದರೆ ಬಾಂದ್ರಾ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಮುಂಬೈ ಕೋರ್ಟ್ ಮೆಟ್ಟಿಲೇರಿದ್ದರು ಸಲ್ಮಾನ್.
ಮುಂಬೈ ಕೋರ್ಟ್ ಅಪರಾಧಗಳನ್ನು ದಾಖಲಿಸಿದ ಬಳಿಕ ತಾನು ಆ ತಪ್ಪು ಮಾಡಿಲ್ಲ ಎಂದು ನ್ಯಾಯಾಧೀಶರ ಗಮನಕ್ಕೆ ತರುವ ಮೂಲಕ ಡಿಸೆಂಬರ್ 5ರಂದು ಈ ಕೇಸನ್ನು ಸಂಪೂರ್ಣವಾಗಿ ಪುನರ್ವಿಚಾರಣೆ ಮಾಡಬೇಕೆಂದು ಮುಂಬೈ ಕೋರ್ಟ್ ಆದೇಶಿಸಿತು.
ಈ ಕೇಸಿನ ಸಾಕ್ಷ್ಯಾಧಾರಗಳು ಕಾಣೆಯಾದ ಕಾರಣ ವಿಚಾರಣೆಯನ್ನು ಜುಲೈನಲ್ಲಿ ತಾತ್ಕಾಲಿಕವಾಗಿ ನಿಲ್ಲಿಸಲಾಯಿತು. ಸೆಪ್ಟೆಂಬರ್ ನಲ್ಲಿ ಮತ್ತೆ ಸಾಕ್ಷ್ಯಾಧಾರಗಳು ಲಭಿಸಿದ ಕಾರಣ ವಿಚಾರಣೆಯನ್ನು ಪುನಃ ಪ್ರಾರಂಭಿಸಲಾಯಿತು. ವಿಚಾರಣೆಯಲ್ಲಿ ಸಲ್ಮಾನ್ ಅವರನ್ನು ಸಾಕ್ಷಿಗಳು ಗುರುತಿಸಿದ್ದಾರೆ. ಒಂದು ವೇಳೆ ಅವರು ಅಪರಾಧಿ ಎಂದು ಸಾಬೀತಾದರೆ ಸುಮಾರು ಹತ್ತು ವರ್ಷಗಳ ಜೈಲು ಶಿಕ್ಷೆ ಸಾಧ್ಯತೆ ಇದೆ.


Click it and Unblock the Notifications











