ಬಾಲಿವುಡ್‌ನ ಹಿರಿಯ ಗೀತರಚನೆಕಾರ ಯೋಗೇಶ್ ಗೌರ್ ನಿಧನ
ಹಿಂದಿ ಚಿತ್ರರಂಗದ ಹಿರಿಯ ಖ್ಯಾತ ಚಿತ್ರ ಸಾಹಿತಿ ಯೋಗೇಶ್ ಗೌರ್ (77) ಶುಕ್ರವಾರ ನಿಧನರಾದರು. 'ಕಹಿನ್ ದೂರ್ ಜಬ್ ದಿನ್ ಧಲ್ ಜಾಯೆ', 'ಜಿಂದಗಿ ಕೈಸೆ ಹೈ ಪಹೇಲಿ', 'ರಜಿನಿಗಂಧ ಫೂಲ್ ತುಮ್ಹಾರೆ', 'ಮೈನೆ ಕಹಾ ಫೋಲೊನ್ ಸೆ' ಮುಂತಾದ ಜನಪ್ರಿಯ ಹಾಡುಗಳನ್ನು ನೀಡಿದ್ದ ಅವರ ಸಾವಿಗೆ ಚಿತ್ರರಂಗ ಶೋಕ ವ್ಯಕ್ತಪಡಿಸಿದೆ.
Recommended Video
ಆನಂದ್, ಮಿಲಿ, ರಜನಿಗಂಧ, ಛೋಟಿ ಸಿ ಬಾತ್, ಬಾತೋಂ ಬಾತೋನ್ ಮೆ, ಮಂಜಿಲ್ ಮುಂತಾದ ಚಿತ್ರಗಳಲ್ಲಿ ಅವರು ಸದಾ ಕಾಲ ಗುನುಗುವಂತಹ ಸಾರ್ವತ್ರಿಕ ಹಿಟ್ ಹಾಡುಗಳಿಂದ ಹೆಸರಾಗಿದ್ದರು. 2017ರಲ್ಲಿ ಬಿಡುಗಡೆಯಾದ 'ಅಂಗ್ರೇಜಿ ಮೇನ್ ಕೆಹ್ತಾ ಹೈ' ಚಿತ್ರಕ್ಕೆ ಅವರು ಕೊನೆಯದಾಗಿ ಸಾಹಿತ್ಯ ಬರೆದಿದ್ದರು.
ಲಕ್ನೋದಲ್ಲಿ ಜನಿಸಿದ್ದ ಯೋಗೇಶ್ ಗೌರ್, ತಮ್ಮ 16ನೇ ವಯಸ್ಸಿನಲ್ಲಿ ಮುಂಬೈಗೆ ಬಂದಿದ್ದರು. ಚಿತ್ರಕಥೆ ರಚನೆಯಲ್ಲಿ ಗುರುತಿಸಿಕೊಂಡಿದ್ದ ಸಂಬಂಧಿ ಯೋಗೇಂದ್ರ ಗೌರ್ ಅವರ ಸಹಾಯದಿಂದ ಚಿತ್ರರಂಗದಲ್ಲಿ ಅವಕಾಶ ಪಡೆದುಕೊಂಡರು.

ಎಲ್‌ಬಿ ಲಚ್‌ಮನ್ ಅವರ ಚಿತ್ರಕ್ಕೆ ಸಾಹಿತ್ಯ ಬರೆಯುತ್ತಿದ್ದರು. ಆ ಸಂದರ್ಭದಲ್ಲಿ ಅವರ 'ಕಹಿನ್ ದೂರ್ ಜಬ್ ದಿನ್ ದಲ್ ಜಾಯೆ' ಕವಿತೆಯ ಕುರಿತು ತಿಳಿದುಕೊಂಡ ಖ್ಯಾತ ನಿರ್ದೇಶಕ ಹೃಷಿಕೇಶ್ ಮುಖರ್ಜಿ, ತಮ್ಮ ಆನಂದ್ ಚಿತ್ರಕ್ಕೆ ಆ ಹಾಡನ್ನು ಬಳಸಿಕೊಂಡರು. ಸಾಹಿತ್ಯದಲ್ಲಿ ಪ್ರಯೋಗಗಳನ್ನು ನಡೆಸಲು ಸಂಗೀತ ನಿರ್ದೇಶಕ ಸಲೀಲ್ ಚೌಧರಿ ಉತ್ತೇಜನ ನೀಡಿದರು.
ಯೋಗೇಶ್ ಅವರ ಸಾಹಿತ್ಯವಿರುವ ಅನೇಕ ಗೀತೆಗಳಿಗೆ ಧ್ವನಿಯಾಗಿದ್ದ ಲತಾ ಮಂಗೇಶ್ಕರ್, ಅವರ ಅಗಲುವಿಕೆಗೆ ಕಂಬನಿ ಮಿಡಿದಿದ್ದಾರೆ. 'ಅನೇಕ ಹೃದಯಸ್ಪರ್ಶಿ ಹಾಡುಗಳನ್ನು ಬರೆದಿರುವ ಯೋಗೇಶ್ ಜಿ ಅವರ ನಿಧನದ ಸುದ್ದಿ ತಿಳಿಯಿತು. ಅವರು ಬರೆದ ಅನೇಕ ಹಾಡುಗಳನ್ನು ನಾನು ಹಾಡಿದ್ದೇನೆ. ಅವರು ಬಹಳ ಶಾಂತ ಮತ್ತು ಸಂಯೋಜಿತರಾಗಿದ್ದವರು. ಅವರಿಗೆ ನನ್ನ ಗೌರವಗಳನ್ನು ಸಲ್ಲಿಸುತ್ತೇನೆ' ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.


Click it and Unblock the Notifications










