Don't Miss!
- Sports
IND vs NZ 3rd T20: ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ ಮಿಂಚು; ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಪಠಾಣ್' 'ಬಾಯ್‌ಕಾಟ್' ಒಳಮರ್ಮವೇನು? ಯಾರಿದ್ದಾರೆ ಇದರ ಹಿಂದೆ?
ಶಾರುಖ್ ಖಾನ್ ನಟನೆಯ 'ಪಠಾಣ್' ಸಿನಿಮಾದ ವಿರುದ್ಧ ಬಾಯ್‌ಕಾಟ್ ಟ್ರೆಂಡ್ ಶುರುವಾಗಿದೆ. ಈ ಸಿನಿಮಾದ 'ಬೇಷರಮ್' ಹಾಡು ಇತ್ತೀಚೆಗೆ ಬಿಡುಗಡೆ ಆಗಿದ್ದು ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಧರಿಸಿದ್ದಾರೆ, ಹಾಗಾಗಿ ಈ ಸಿನಿಮಾ ಬ್ಯಾನ್ ಆಗಬೇಕು ಎಂದು ಬಾಯ್‌ಕಾಟ್ ವೀರರು ಸಾಮಾಜಿಕ ಜಾಲತಾಣದಲ್ಲಿ ಕಿರುಚಾಡುತ್ತಿದ್ದಾರೆ.
ಸಾಮಾಜಿಕ ಜಾಲತಾಣದ ಕಿರುಚಾಟಕ್ಕೆ ಪ್ರಚಾರ ಪ್ರಿಯ, ವಿವೇಚನಾಶೂನ್ಯ ಸಚಿವರೊಬ್ಬರು ಸಾಥ್ ನೀಡಿದ್ದು, ಅವರ 'ಕರೆ'ಯ ಮೇರೆಗೆ ನಾಲ್ಕೈದು ಮಂದಿ ಬೀದಿಗಿಳಿದು ಶಾರುಖ್ ಖಾನ್‌ರ ಚಿತ್ರವನ್ನು ಸುಟ್ಟಿದ್ದಾರೆ.
'ಬೇಷರಮ್' ಹಾಡಿನ ವಿರುದ್ಧ ಬೇಸರ ಹುಟ್ಟಬೇಕಿರುವುದು ನಿಜ. ಆದರೆ ದೀಪಿಕಾ ಧರಿಸಿರುವ ಕೇಸರಿ ಬಿಕನಿ ಕಾರಣಕ್ಕಲ್ಲ, ಬದಲಿಗೆ ಆ ಹಾಡನ್ನು ಕುಟುಂಬ ಒಟ್ಟಿಗೆ ಕೂತು ನೋಡದಂತೆ ತೀರ ಗ್ಲಾಮರಸ್ ಆಗಿ ಚಿತ್ರೀಕರಿಸಿರುವುದಕ್ಕೆ. ಶಾರುಖ್ ಅಂಥಹಾ ಶಾರುಖ್‌ಗೂ ಸಿನಿಮಾ ಗೆಲ್ಲಿಸಲು ಗ್ಲಾಮರ್ ಅವಶ್ಯಕತೆ ಬಂತಲ್ಲ ಎಂಬ ಕಾರಣಕ್ಕೆ. ಆದರೆ ಹಾಡಿಗೆ ವಿರೋಧ ವ್ಯಕ್ತವಾಗುತ್ತಿರುವುದು ಕೇಸರಿ ಬಿಕಿನಿಗೆ. ಸೂಕ್ಷ್ಮವಾಗಿ ನೋಡಿದರೆ ಕೇಸರಿ ಬಿಕನಿ ಎಂಬುದು ನೆಪವಷ್ಟೆ. ಬಾಯ್‌ಕಾಟ್‌ಗೆ ಒತ್ತಾಯಿಸುತ್ತಿರುವವರ ನಿಜವಾದ ಗುರಿ ಶಾರುಖ್ ಖಾನ್.

'ಕ್ರೊನೊಲಜಿ' ಗಮನಿಸಿದರೆ ಅರ್ಥವಾಗುತ್ತದೆ 'ಬಾಯ್‌ಕಾಟ್' ಉದ್ದೇಶ
ಮೊದಲಿಗೆ ಸಲ್ಮಾನ್ ಖಾನ್ ಸಿನಿಮಾಕ್ಕೆ ಬಾಯ್‌ಕಾಟ್ ಟ್ರೆಂಡ್, ಅವರದ್ದೇ ನಿರೂಪಣೆಯ 'ಬಿಗ್‌ಬಾಸ್'ಗೆ ಬಾಯ್‌ಕಾಟ್ ಟ್ರೆಂಡ್ ಬಳಿಕ ಆಮಿರ್ ಖಾನ್‌ರ 'ಲಾಲ್ ಸಿಂಗ್ ಚಡ್ಡ' ಸಿನಿಮಾಕ್ಕೆ ಬಾಯ್‌ಕಾಟ್ ಟ್ರೆಂಡ್, ಇದೀಗ ಶಾರುಖ್ ಖಾನ್ ಸಿನಿಮಾಕ್ಕೆ ಕ್ಷುಲ್ಲಕ ಕಾರಣ ಹುಡುಕಿ ಬಾಯ್‌ಕಾಟ್‌ಗೆ ಒತ್ತಾಯಿಸಲಾಗುತ್ತಿದೆ. ಈ 'ಕ್ರೊನೊಲಜಿ' ಗಮನಿಸಿದರೆ ಸಾಕು ಈ ಬಾಯ್‌ಕಾಟ್ ಬಾಯಿಬಡುಕರ ಉದ್ದೇಶ ಸ್ಪಷ್ಟವಾಗುತ್ತದೆ. ಇದು ಕೇಸರಿ ಬಣ್ಣದ ಮೇಲೆಯೊ ಅಥವಾ ಅದು ಪ್ರತಿನಿಧಿಸುವ ಧರ್ಮದ ಮೇಲೆಯೋ ಪ್ರೀತಿಯಲ್ಲ ಬದಲಿಗೆ ಖಾನ್‌ಗಳನ್ನು ಹೇಗಾದರೂ ಮಾಡಿ ಹಣಿಯಬೇಕೆನ್ನುವ ಮಾತ್ಸರ್ಯವಷ್ಟೆ. ಆಗಾಗ್ಗೆ ಅನುರಾಗ್ ಕಶ್ಯಪ್, ತಾಪ್ಸಿ ಪನ್ನು, ಕರಣ್ ಜೋಹರ್ ಅವರುಗಳ ಸಿನಿಮಾಕ್ಕೂ ಬಾಯ್‌ಕಾಟ್ ಟ್ರೆಂಡ್ ಆಗುತ್ತದೆ ಆದರೆ ಅದು ಬಹಳ ಕಡಿಮೆ. ಗಮನಿಸಬೇಕಾದ ವಿಷಯವೆಂದರೆ ಇವರುಗಳು ಬಿಜೆಪಿಗೆ ವಿರುದ್ಧವಾದ ಅಭಿಪ್ರಾಯಗಳನ್ನು ಹೊಂದಿರುವ ಕಲಾವಿದರು.

ಅಕ್ಷಯ್ ಕುಮಾರ್, ಕಂಗನಾ ವಿರುದ್ಧ ಪ್ರತಿಭಟನೆ ಏಕಿಲ್ಲ?
ಕೇಸರಿ ಬಣ್ಣದ ಉಡುಗೆ ತೊಟ್ಟು ಅದೆಷ್ಟು ನಟಿಯರು ಸಿನಿಮಾಗಳಲ್ಲಿ ಕುಣಿದಿಲ್ಲ. ಬಿಜೆಪಿ ಪಕ್ಷದ ಅತ್ಯಂತ ಪ್ರೀತಿಯ ನಟ, 'ದೇಶಪ್ರೇಮಿ' ವಿದೇಶಿಗ ಅಕ್ಷಯ್ ಕುಮಾರ್ ನಟನೆಯ ಸಿನಿಮಾ ಒಂದರಲ್ಲಿ ನಟಿ ಕತ್ರಿನಾ ಕೈಫ್ ಜೊತೆಗೆ ಮಳೆಯಲ್ಲಿ ಬಹು ರೊಮ್ಯಾಂಟಿಕ್ ಆಗಿ ಹಾಡಿ ಕುಣಿದಿದ್ದಾರೆ. ಆ ಹಾಡಿನಲ್ಲಿ ಕತ್ರಿನಾ ಧರಿಸಿರುವ ಬಟ್ಟೆಯ ಬಣ್ಣ ಕೇಸರಿಯೇ. ಅದೆಲ್ಲವೂ ಇರಲಿ, ಬಿಜೆಪಿಯ ಅಘೋಷಿತ ವಕ್ತಾರೆ, ನಟಿ ಕಂಗನಾ ರನೌತ್ ನಡೆಸಿಕೊಟ್ಟ ರಿಯಾಲಿಟಿ ಶೋ ಒಂದರಲ್ಲಿ ಖೈದಿಗಳಿಗೆ ತೊಡಿಸಿದ ಬಟ್ಟೆಯದ್ದು ಕೇಸರಿ ಬಣ್ಣ. ಆ ಶೋನ ಪೋಸ್ಟರ್‌ನಲ್ಲಿ ಕಂಗನಾ ಕೇಸರಿ ಬಣ್ಣದ ಅಂಗಿ ತೊಟ್ಟವನ ಮೇಲೆ ಕಾಲು ಊರಿ ನಿಂತಿರುತ್ತಾಳೆ. ಆದರೆ ಇವಕ್ಕೆಲ್ಲ ವಿರೋಧವೇ ಇಲ್ಲ. ಆದರೆ ಶಾರುಖ್ ಖಾನ್‌ಗೆ ಮಾತ್ರ ವಿರೋಧ.

ಸಿನಿಮಾ ನೋಡುವ, ನೋಡದೇ ಇರುವ ಹಕ್ಕು ಎಲ್ಲರಿಗೂ ಇದೆ
ಯಾವುದೇ ಸಿನಿಮಾವನ್ನು ನೋಡುವ, ನೋಡದೇ ಇರುವ ಹಕ್ಕು ಎಲ್ಲ ನಾಗರೀಕರಿಗೂ ಇದೆ. ಒಮ್ಮೆ ಸೆನ್ಸಾರ್ ಪಾಸ್ ಆದ ಸಿನಿಮಾಗಳನ್ನು ಬಾಯ್‌ಕಾಟ್ ಮಾಡುವುದು, ಕೆಲವು ರಾಜ್ಯಗಳು ಕೆಲವು ಸಿನಿಮಾಗಳನ್ನು ಬಿಡುಗಡೆ ಮಾಡಲು ಅನುಮತಿ ನೀಡದೇ ಇರುವುದು, ಸರ್ಕಾರ, ಸಿನಿಮಾ ಪ್ರದರ್ಶನವನ್ನು ರದ್ದು ಮಾಡುವುದು ಇವೆಲ್ಲವೂ ಅಸಾಂವಿಧಾನಿಕ. ಸಿನಿಮಾದಲ್ಲಿ ತೋರಿಸಲಾದ ವಿಷಯದ ಬಗ್ಗೆ ಸಮಸ್ಯೆ ಇದ್ದರೆ ಸೆನ್ಸಾರ್ ಮಂಡಳಿಗೆ ಅರ್ಜಿ ಸಲ್ಲಿಸಿ ಪುನರ್ ಪರಿಶೀಲನೆಗೆ ಕೋರಬಹುದು. ನ್ಯಾಯಾಲಯದಲ್ಲಿಯೂ ದೂರು ಸಲ್ಲಿಕೆಗೆ ಅವಕಾಶವಿದೆ. ಆದರೆ ಕೋಮು ಕಾರಣಕ್ಕೆ ಅಥವಾ ಇನ್ನಾವುದೋ ಬೇರೆ ಕಾರಣಕ್ಕೆ ಸಿನಿಮಾಗಳನ್ನು ಬಾಯ್‌ಕಾಟ್ ಮಾಡಿರೆನ್ನುವುದು ಕೆಲಸವಿಲ್ಲದವರ ಕೆಲಸವಷ್ಟೆ.

ಚಿತ್ರರಂಗದ ಬೆಳವಣಿಗೆಗೆ ತೊಡರುಗಾಲು ಹಾಕಬೇಡಿ
ಭಾರತೀಯ ಸಿನಿಮಾ ರಂಗ ವರ್ಷದಿಂದ ವರ್ಷಕ್ಕೆ ಬೃಹತ್ ಆಕಾರದಲ್ಲಿ ಬೆಳೆಯುತ್ತಿದೆ. ಭಾರತೀಯ ಚಿತ್ರರಂಗ ವಿದೇಶದಲ್ಲಿ ದೊಡ್ಡ ಮಟ್ಟದಲ್ಲಿ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡಿದೆ. ಭಾರತೀಯ ಸಿನಿಮಾಗಳಿಗೆ ವಿದೇಶಗಳಲ್ಲಿ ದೊಡ್ಡ ಮಟ್ಟದ ಬೇಡಿಕೆ ಇದೆ. ದಕ್ಷಿಣ ಭಾರತ ಸೇರಿದಂತೆ ಭಾರತದ ಹಲವು ಚಿತ್ರರಂಗಗಳು ಗುಣಮಟ್ಟದ ಸಿನಿಮಾಗಳನ್ನು ನಿರ್ಮಿಸುತ್ತಿವೆ. ಇಂಥಹಾ ಸಮಯದಲ್ಲಿ ಚಿತ್ರರಂಗಕ್ಕೆ ಬೆಂಬಲ ನೀಡುವ ಕಾರ್ಯವಾಗಬೇಕು. ಚಿತ್ರರಂಗದ ಕ್ರಿಯಾಶೀಲ, ಸೃಜನಶೀಲ ಮನಸ್ಸುಗಳ ಸುತ್ತ ಇರುವ ಗಡಿಗಳನ್ನು, ಕಟ್ಟುಪಾಡುಗಳನ್ನು ಮುರಿದು ವಿಶಾಲವಾಗಿ ಯೋಚಿಸುವಂತೆ, ಇನ್ನಷ್ಟು ಗುಣಮಟ್ಟದ ಸಿನಿಮಾಗಳನ್ನು ಮಾಡಲು ಸೂಕ್ತ ವಾತಾವರಣ ನಿರ್ಮಿಸುವ ಕೆಲಸವಾಗಬೇಕು. ಅದನ್ನು ಬಿಟ್ಟು ಕ್ಷುಲ್ಲಕ ಕಾರಣಗಳಿಗೆ ಬಾಯ್‌ಕಾಟ್ ಮಾಡುತ್ತಾ ಕೂತರೆ ಬೆಳೆಯುತ್ತಿರುವ ಚಿತ್ರರಂಗಕ್ಕೆ ತೊಡರುಗಾಲು ಹಾಕಿದಂತಾಗುತ್ತದೆ.