For Quick Alerts
  ALLOW NOTIFICATIONS  
  For Daily Alerts

  ಕ್ರಿಸ್ಟೋಫರ್ ನೋಲನ್ ಎಂಬ ಮಾಂತ್ರಿಕ ನಿರ್ದೇಶಕನ ಬಗ್ಗೆ ಒಂದಿಷ್ಟು

  |

  ವಿಶ್ವದ ಅತ್ಯುತ್ತಮ ಸಿನಿಮಾ ನಿರ್ದೇಶಕರ ಪಟ್ಟಿಯಲ್ಲಿ ಕ್ಟಿಸ್ಟೋಫರ್ ನೋಲನ್ ಹೆಸರು ತಪ್ಪದೇ ಕೇಳಿ ಬರುತ್ತದೆ. ನಿರ್ದೇಶಿಸಿರುವ ಕೆಲವೇ ಸಿನಿಮಾಗಳಿಂದ ವಿಶ್ವ ಸಿನಿಮಾದ ಮೇಲೆ ಕ್ರಿಸ್ಟೋಫರ್ ಮೂಡಿಸಿರುವ ಛಾಪು ಅಚ್ಚಳಿಯದ್ದು. ಈ ಕಾಲದ ಅತ್ಯಂತ ಕ್ರಿಯಾಶೀಲ, ಕ್ರಿಯಾತ್ಮಕ ಜೊತೆಗೆ ಸಂಕೀರ್ಣ ನಿರ್ದೇಶಕ ಎಂದೇ ಹೆಸರಾಗಿದ್ದಾರೆ ಕ್ರಿಸ್ಟೋಫರ್ ನೋಲನ್.

  ಕ್ರಿಸ್ಟೋಫರ್ ನೋಲನ್ ಹುಟ್ಟುಹಬ್ಬ ಇಂದು (ಜುಲೈ 30). ವಿಶ್ವದಾದ್ಯಂತ ಬಹು ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ನಿರ್ದೇಶಕನ ಬಗ್ಗೆ ಆತನ ಸಿನಿಮಾ, ಖಾಸಗಿ ಜೀವನ, ಕೆಲಸ ಮಾಡುವ ವಿಧಾನ ಇನ್ನಿತರೆ ವಿಷಯಗಳ ಬಗ್ಗೆ ತಿಳಿಯುವ ಸಣ್ಣ ಪ್ರಯತ್ನ ಇದು.

  ಕ್ರಿಸ್ಟೋಫರ್ ನೋಲನ್, ಜುಲೈ 30, 1970 ರಲ್ಲಿ ಲಂಡನ್‌ನಲ್ಲಿ ಜನಿಸಿದರು. ಕ್ರಿಸ್ಟೋಫರ್ ನೋಲನ್ ತಂದೆ ಜಾಹೀರಾತು ನಿರ್ದೇಶಕರಾಗಿದ್ದರು. ಎಳವೆಯಲ್ಲಿಯೇ ಸಿನಿಮಾಗಳ ಬಗ್ಗೆ ಆಸಕ್ತಿ ಮೂಡಿಸಿಕೊಂಡಿದ್ದ ನೋಲನ್ ಎಂಟನೇ ವಯಸ್ಸಿನಲ್ಲಿಯೇ ತಂದೆಯ ಪುಟ್ಟ ಕ್ಯಾಮೆರಾ ಬಳಸಿ ಸಹೋದರರು, ಗೆಳೆಯರನ್ನು ಸೇರಿಸಿ ವಿಡಿಯೋ ಚಿತ್ರೀಕರಿಸುತ್ತಿದ್ದರು. 'ಸ್ಟಾರ್ ವಾರ್' ಸಿನಿಮಾದ ಅಭಿಮಾನಿ ಆಗಿದ್ದ ನೋಲನ್ ಅದರ ಮಾದರಿಯಲ್ಲಿಯೇ 'ಸ್ಪೇಸ್ ವಾರ್' ಹೆಸರಿನ ಕಿರು ಸಿನಿಮಾವನ್ನು ಚಿಕ್ಕವರಿದ್ದಾಗಲೇ ನಿರ್ಮಾಣ ಮಾಡಿದ್ದರು. ನಂತರ ಲಂಡನ್‌ನಲ್ಲಿಯೇ ಸಿನಿಮಾವನ್ನು ಪಠ್ಯವಾಗಿ ಅಭ್ಯಾಸ ಮಾಡಿ ಕೆಲವು ಸಿನಿಮಾಗಳಿಗೆ ಚಿತ್ರಕತೆ ಸಹಾಯಕ, ಕ್ಯಾಮೆರಾ ಸಹಾಕರಾಗಿಯೂ ಕೆಲಸ ಮಾಡಿದರು. 1989ರಿಂದ ವೃತ್ತಿಪರ ಸಿನಿಮಾ ನಿರ್ಮಾಣಕ್ಕೆ ತೊಡಗಿದ ನೋಲನ್ 1997ರ ವರೆಗೆ ಕಿರು ಸಿನಿಮಾಗಳನ್ನು ನಿರ್ದೇಶಿಸಿದರು, ಕೆಲವು ಸಿನಿಮಾಗಳಿಗೆ ಸಹಾಯಕರಾಗಿ ಕೆಲಸ ಮಾಡಿದರು. ಅವರ ನಿಜವಾದ ಸಿನಿಮಾ ಪಯಣ ಆರಂಭವಾಗಿದ್ದು 1998ರಿಂದ.

  ವೀಕೆಂಡ್‌ನಲ್ಲಿ ಚಿತ್ರೀಕರಣ ಮಾಡಿದ ಮೊದಲ ಸಿನಿಮಾ

  ವೀಕೆಂಡ್‌ನಲ್ಲಿ ಚಿತ್ರೀಕರಣ ಮಾಡಿದ ಮೊದಲ ಸಿನಿಮಾ

  1998ರಲ್ಲಿ ಕ್ರಿಸ್ಟೋಫರ್ ನೋಲನ್ ತಮ್ಮ ಮೊದಲ ಸಿನಿಮಾ ನಿರ್ದೇಶಿಸಿ, ನಿರ್ಮಾಣ ಮಾಡಿದರು. ಅದುವೇ 'ಫಾಲೋವಿಂಗ್'. ಈ ಸಿನಿಮಾಕ್ಕೆ ಹಣ ತೊಡಗಿಸಲು ಯಾರೂ ಮುಂದೆ ಬಂದಿರಲಿಲ್ಲ. ಕೊನೆಗೆ ತಾವೇ ಹಣ ಹೊಂದಿಸಿ ಸಿನಿಮಾ ನಿರ್ಮಾಣ ಮಾಡಿದರು. ತನ್ನ ಗೆಳೆಯರನ್ನೇ ನಟರನ್ನಾಗಿ ಸೇರಿಸಿಕೊಂಡು ವಾರಾಂತ್ಯದಲ್ಲಿ ಮಾತ್ರವೇ ಚಿತ್ರೀಕರಣ ಮಾಡಿ ಒಂದು ಗಂಟೆ ಅವಧಿಯ ಸಿನಿಮಾದ ಚಿತ್ರೀಕರಣ ಮುಗಿಸಲು ಒಂದು ವರ್ಷ ತೆಗೆದುಕೊಂಡರು. ಅವರೇ ಎಡಿಟಿಂಗ್ ಮಾಡಿ ವಿತರಣೆ ಸಹ ಮಾಡಿ ಬಿಡುಗಡೆ ಮಾಡಿದರು. ಆ ಸಿನಿಮಾ ಹಿಟ್ ಆಗುವ ಜೊತೆಗೆ ಅದ್ಭುತವಾದ ವಿಮರ್ಶೆಗೂ ಪಾತ್ರವಾಯ್ತು. ಕೇವಲ 6000 ಡಾಲರ್‌ನಲ್ಲಿ ಮಾಡಿದ ಸಿನಿಮಾ 48,482 ಡಾಲರ್ ಗಣ ಗಳಿಸಿತು. ಜೊತೆಗೆ ಹಲವು ಪ್ರಶಸ್ತಿಗಳನ್ನು ಸಹ ಗೆದ್ದು ನೋಲನ್‌ ಪ್ರತಿಭೆಯನ್ನು ಸಿನಿಮಾ ಲೋಕಕ್ಕೆ ಪರಿಚಯಿಸಿತು. 'ಫಾಲೋವಿಂಗ್' ಸಿನಿಮಾ ಯೂಟ್ಯೂಬ್‌ನಲ್ಲಿ ನೋಡಲು ಲಭ್ಯವಿದೆ.

  ನೋಲನ್ ಶಕ್ತಿ ಸಾರಿದ ಸಿನಿಮಾ 'ಮೆಮೆಂಟೊ'

  ನೋಲನ್ ಶಕ್ತಿ ಸಾರಿದ ಸಿನಿಮಾ 'ಮೆಮೆಂಟೊ'

  'ಫಾಲೋವಿಂಗ್' ಸಿನಿಮಾದ ಬಳಿಕ ಕ್ರಿಸ್ಟೋಫರ್ ನೋಲನ್ 'ಮೆಮೆಂಟೊ' ಸಿನಿಮಾ ನಿರ್ದೇಶಿಸಿದರು. ನೋಲನ್‌ರ ಮೊದಲ ಸೂಪರ್ ಹಿಟ್ ಸಿನಿಮಾ ಇದು. ಬಹಳ ಸಂಕೀರ್ಣವಾದ ಹಾಗೂ ಭಿನ್ನವಾದ ಕತೆಯನ್ನು ಈ ಸಿನಿಮಾ ಹೊಂದಿತ್ತು. ಸಿನಿಮಾದ ನಾಯಕನಿಗೆ ಯಾವುದೇ ಘಟನೆ ಹದಿನೈದು ನಿಮಿಷವಷ್ಟೆ ನೆನಪಿರುತ್ತದೆ ಹಾಗಾಗಿ ಆತ ಪೊಲೊರಾಯ್ಡ್ ಕ್ಯಾಮೆರಾ ಮೂಲಕ ಎಲ್ಲರ ಚಿತ್ರ ತೆಗೆದಿಟ್ಟುಕೊಳ್ಳುತ್ತಿರುತ್ತಾನೆ. ತಾನು ಮಾಡಬೇಕಾದ ಕೆಲಸಗಳ ಪಟ್ಟಿಯನ್ನು ಮೈಯ ಮೇಲೆ ಟ್ಯಾಟೂ ಹಾಕಿಕೊಂಡಿರುತ್ತಾನೆ. ತನ್ನ ಪತ್ನಿಯನ್ನು ಕೊಂದವರ ಮೇಲೆ ಸೇಡು ತೀರಿಸಿಕೊಳ್ಳಲು ಹೊರಟಿರುತ್ತಾನೆ. ಈ ಸಿನಿಮಾದ ವಿಶೇಷವೆಂದರೆ ಸಿನಿಮಾದ ನಾಯಕನಿಗೆ ಎಷ್ಟು ಸಮಯ ನೆನಪಿರುತ್ತದೆಯೋ (15 ನಿಮಿಷ) ಸರಿಯಾಗಿ ಅಲ್ಲಿಗೆ ತೆರೆಯ ಮೇಲಿನ ದೃಶ್ಯ ಕಟ್ ಆಗಿ ಮತ್ತೊಂದು ದೃಶ್ಯ ತೆರೆದುಕೊಳ್ಳುತ್ತದೆ. ಸಿನಿಮಾದ ನಾಯಕನಂತೆ ಪ್ರೇಕ್ಷಕ ಸಹ ದೃಶ್ಯಗಳನ್ನು ನೆನಪಿಟ್ಟುಕೊಳ್ಳಲು ಪ್ರಯಾಸ ಪಡುವಂತೆ ನಿರ್ದೇಶಕ ನೋಲನ್ ಮಾಡಿದ್ದಾರೆ. ಆದರೆ ಸಿನಿಮಾದ ಅಂತಿಮ ದೃಶ್ಯದ ಬಳಿಕ ಇಡೀಯ ಸಿನಿಮಾದ ಕತೆಯ ಬೇರೊಂದು ಮಜಲು ಪ್ರೇಕ್ಷಕನ 'ಮೆದುಳಲ್ಲಿ' ತೆರೆದುಕೊಳ್ಳುತ್ತದೆ. ಆ ವರೆಗೆ ನೋಡಿದ ಸಿನಿಮಾದ ಕತೆಗೆ ಬೇರೆಯದೇ ಅರ್ಥ ದೊರಕುತ್ತದೆ. ಇಂಥಹಾ ಒಂದು ಸಂಕೀರ್ಣವಾದ ಸಿನಿಮಾವನ್ನು ನೋಲನ್ ಕೊಟ್ಟಿದ್ದರು. ಇದು ವಿಶ್ವ ಸಿನಿಮಾ ಪ್ರೇಕ್ಷಕರಿಗೆ ಅದ್ಭುತ ಎನಿಸಿಬಿಟ್ಟಿತ್ತು. ಸಿನಿಮಾ ಸೂಪರ್ ಹಿಟ್ ಆಯಿತು. ಆಸ್ಕರ್‌ಗೆ ನಾಮನಿರ್ದೇಶನವಾಯ್ತು. ಜೊತೆಗೆ ಹಲವಾರು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ನೋಲನ್‌ಗೆ ತಂದುಕೊಟ್ಟಿತು. ಇದೇ ಸಿನಿಮಾವನ್ನು ಐದು ವರ್ಷದ ಬಳಿಕ ತಮಿಳು ನಿರ್ದೇಶಕ ಎ.ಆರ್.ಮುರುಗದಾಸ್ 'ಗಜಿನಿ' ಹೆಸರಲ್ಲಿ ತೆರೆಗೆ ತಂದರು. ಆದರೆ ಎಲ್ಲಿಯೂ ಅವರು ತಮ್ಮ ಸಿನಿಮಾ 'ಮೆಮೆಂಟೊ'ದ ರೀಮೇಕ್ ಎಂದು ಹೇಳಿಕೊಳ್ಳಲಿಲ್ಲ.

  ಬ್ಯಾಟ್‌ಮ್ಯಾನ್‌ಗೆ ಜನಪ್ರಿಯತೆ ತಂದುಕೊಟ್ಟ ನೋಲನ್

  ಬ್ಯಾಟ್‌ಮ್ಯಾನ್‌ಗೆ ಜನಪ್ರಿಯತೆ ತಂದುಕೊಟ್ಟ ನೋಲನ್

  'ಬ್ಯಾಟ್‌ಮ್ಯಾನ್ ಬಿಗಿನ್ಸ್' ಮೂಲಕ ಬ್ಯಾಟ್‌ಮ್ಯಾನ್ ಸಿನಿಮಾವನ್ನು ವಿಶ್ವಪ್ರಸಿದ್ಧ ಗೊಳಿಸಿದ ಶ್ರೇಯ ನೋಲನ್‌ಗೆ ಸಲ್ಲಬೇಕು. ಡಿಸಿ ಕಾಮಿಕ್ಸ್‌ನಲ್ಲಿ ಬಹುತೇಕ ಮೂಲೆಗುಂಪಾಗಿದ್ದ ಬ್ಯಾಟ್‌ಮ್ಯಾನ್‌ಗೆ ವಿಶ್ವದಾದ್ಯಂತ ಅಭಿಮಾನಿಗಳನ್ನು ಸೃಷ್ಟಿಸಿಕೊಟ್ಟಿದ್ದು ನೋಲನ್ ನಿರ್ದೇಶನದ 'ಬ್ಯಾಟ್‌ಮ್ಯಾನ್ ಬಿಗಿನ್ಸ್'. 2005ರಲ್ಲಿ ಈ ಸಿನಿಮಾ 373 ಮಿಲಿಯನ್ ಗಳಿಸಿತ್ತು. 'ಬ್ಯಾಟ್‌ಮ್ಯಾನ್ ಬಿಗೀನ್ಸ್‌'ಗೂ ಮುಂಚೆ 'ಇನ್‌ಸೋಮ್ನಿಯಾ' ಹೆಸರಿನ ಸೈಕಾಲಾಜಿಕಲ್ ಥ್ರಿಲ್ಲರ್ ಸಿನಿಮಾವನ್ನು ನೋಲನ್ ನಿರ್ದೇಶನ ಮಾಡಿದ್ದರು. ಈ ಸಿನಿಮಾವೂ ಸಹ ಬಹು ದೊಡ್ಡ ಹಿಟ್ ಆಯಿತು. ನಂತರ 'ದಿ ಪ್ರೆಸ್ಟೀಜ್' ಹೆಸರಿನ ಸಿನಿಮಾವೊಂದನ್ನು ನೋಲನ್ ನಿರ್ದೇಶನ ಮಾಡಿದರು. ಈ ಸಿನಿಮಾವು ಮ್ಯಾಜಿಕ್ ಕುರಿತಾಗಿ ಆಗಿತ್ತು. ಸಿನಿಮಾದ ಮೂಲಕ ಮ್ಯಾಜಿಕ್‌ನ ಅದ್ಭುತ ಪ್ರಪಂಚವೊಂದನ್ನು ನೋಲನ್ ತೆರೆದಿಟ್ಟರು.

  ವಿಶ್ವ ಮಾನ್ಯತೆ ತಂದುಕೊಟ್ಟ 'ದಿ ಡಾರ್ಕ್ ನೈಟ್'

  ವಿಶ್ವ ಮಾನ್ಯತೆ ತಂದುಕೊಟ್ಟ 'ದಿ ಡಾರ್ಕ್ ನೈಟ್'

  ಕ್ರಿಸ್ಟೋಫರ್ ನೋಲನ್‌ಗೆ ವಿಶ್ವದ ಅತ್ಯುತ್ತಮ ನಿರ್ದೇಶಕ ಎಂಬ ಖ್ಯಾತಿ ತಂದುಕೊಟ್ಟ ಸಿನಿಮಾ 2008ರಲ್ಲಿ ಬಿಡುಗಡೆ ಆದ 'ದಿ ಡಾರ್ಕ್ ನೈಟ್'. 'ಬ್ಯಾಟ್‌ಮ್ಯಾನ್ ಬಿಗಿನ್ಸ್'ನ ಮುಂದುವರೆದ ಭಾಗವಾದ ಈ ಸಿನಿಮಾ ವಿಶ್ವದ ಸಾರ್ವಕಾಲಿಕ ಅತ್ಯುತ್ತಮ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಸಿನಿಮಾದಲ್ಲಿ ಕತೆಯನ್ನು ಹೇಳಲಾಗಿರುವ ರೀತಿ ಸಂಶೋಧನಾರ್ಹ. 'ದಿ ಡಾರ್ಕ್ ನೈಟ್' ಸಿನಿಮಾದಲ್ಲಿ ಹೀರೋ-ವಿಲನ್ ನಡುವಿನ ಸಂಘರ್ಷ ಇನ್ಯಾವುದೇ ಸಿನಿಮಾದಲ್ಲಿ ಕಂಡು ಬರುವುದಿಲ್ಲ. ಸಿನಿಮಾದ ವಿಲನ್ 'ಜೋಕರ್' ಪಾತ್ರ ಇಂದಿಗೂ ವಿಶ್ವ ಸಿನಿಮಾದ ಅಪ್ರತಿಮ ವಿಲನ್. ಸಿನಿಮಾ ತರಗತಿಗಳಲ್ಲಿ 'ದಿ ಡಾರ್ಕ್ ನೈಟ್' ಸಿನಿಮಾದ ಬಗ್ಗೆ ಈಗಲೂ ಚರ್ಚೆ ನಡೆಯುತ್ತಲೇ ಇರುತ್ತದೆ. ಈ ಸಿನಿಮಾ ಹಲವು ವಿಭಾಗದಲ್ಲಿ ಆಸ್ಕರ್‌ಗೆ ನಾಮಿನೇಟ್ ಆಗಿ ಎರಡು ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿತು.

  ನೋಲನ್‌ರ ಮತ್ತೊಂದು ಮಾಸ್ಟರ್‌ಪೀಸ್‌ 'ಇನ್‌ಸೆಪ್ಷನ್'

  ನೋಲನ್‌ರ ಮತ್ತೊಂದು ಮಾಸ್ಟರ್‌ಪೀಸ್‌ 'ಇನ್‌ಸೆಪ್ಷನ್'

  ನೋಲನ್‌ರ ಮತ್ತೊಂದು ಮಾಸ್ಟರ್‌ಪೀಸ್, ಲಿಯೋನಾರ್ಡೊ ಡಿಕ್ಯಾಪ್ರಿಯೊ ನಟಿಸಿ 2010ರಲ್ಲಿ ಬಿಡುಗಡೆ ಆದ 'ಇನ್ಸೆಪ್ಷನ್'. ಈ ಸಿನಿಮಾದ ಕತೆ, ಆ ಕತೆಯನ್ನು ಪ್ರೆಸೆಂಟ್ ಮಾಡಿರುವ ರೀತಿ ಬಗ್ಗೆ ಹೇಳಲು ಪ್ರತ್ಯೇಕ ಪುಸ್ತಕವನ್ನೇ ಬರೆಯಬೇಕಾಗುತ್ತದೇನೊ. ಮನುಷ್ಯನಿಗೆ ತೀರಾ ಸಾಮಾನ್ಯವಾಗಿ ಬೀಳುವ ಕನಸಿನ ಬಗ್ಗೆ ಇಷ್ಟು ಕುತೂಹಲಕಾರಿಯಾಗಿ ಸಿನಿಮಾವನ್ನು ನೋಲನ್ ಬಿಟ್ಟರೆ ಮತ್ತಿನ್ಯಾರೂ ಮಾಡಲಾರರು. ಸಿನಿಮಾದಲ್ಲಿ ಹಲವು ಪದರಗಳಲ್ಲಿ ಕತೆ ನಡೆಯುತ್ತದೆ. ಪ್ರತಿ ಪದರವನ್ನೂ ಮುಖ್ಯ ಕತೆಯೊಂದಿಗೆ ಬ್ಲೆಂಡ್ ಮಾಡಿ ನಿರ್ದೇಶಕ ನೋಲನ್ ಪ್ರೇಕ್ಷಕರ ಮುಂದೆ ಪ್ರೆಸೆಂಟ್ ಮಾಡಿದ್ದಾರೆ. ಈ ಸಿನಿಮಾದ ಕತೆಯನ್ನು ಕ್ರಿಸ್ಟೋಫರ್ ನೋಲನ್ ಅವರೇ ಬರೆದಿದ್ದಾರೆ. ಈ ಸಿನಿಮಾ ಸಹ ವಿಶ್ವದ ಅತ್ಯುತ್ತಮ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಈ ಸಿನಿಮಾಕ್ಕೆ ಮೂರು ಆಸ್ಕರ್ ಪ್ರಶಸ್ತಿಗಳು ದೊರೆತವು. ಮೂರು ಬ್ರಿಟೀಷ್ ಆಸ್ಕರ್ ಸಹ ದೊರೆತವು. ಇದರ ನಂತರ 2012ರಲ್ಲಿ 'ಡಾರ್ಕ್ ನೈಟ್ ರೈಸಸ್' ಹೆಸರಿನ ಸಿನಿಮಾ ನಿರ್ಮಾಣ ಮಾಡಲಾಯಿತು. ಇದು ಸಹ ಸೂಪರ್ ಹಿಟ್ ಸಿನಿಮಾ ಆಗಿ ಇತಿಹಾಸದಲ್ಲಿ ದಾಖಲಾಗಿದೆ.

  'ಇಂಟರ್ಸ್ಟೆಲ್ಲರ್' ಎಂಬ ಸಂಕೀರ್ಣ ಸಿನಿಮಾ

  'ಇಂಟರ್ಸ್ಟೆಲ್ಲರ್' ಎಂಬ ಸಂಕೀರ್ಣ ಸಿನಿಮಾ

  ಆ ನಂತರ 2014 ರಲ್ಲಿ 'ಇಂಟರ್ಸ್ಟೆಲ್ಲರ್' ಎಂಬ ಸಿನಿಮಾ ನಿರ್ದೇಶನ ಮಾಡಿದರು ನೋಲನ್. ಇದು ಸಹ ಬಹಳ ಸಂಕೀರ್ಣವಾದ ಕತೆಯನ್ನು ಇನ್ನೂ ಸಂಕೀರ್ಣ ರೀತಿಯಲ್ಲಿ ಹೇಳಲಾದ ಸಿನಿಮಾ. 'ಇಂಟರ್ಸ್ಟೆಲ್ಲರ್' ಸಿನಿಮಾವನ್ನು ಒಂದೆರಡು ಬಾರಿ ನೋಡಿ ಅರ್ಥ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಅಂಥಹಾ ಸಂಕೀರ್ಣವಾದ ಸಿನಿಮಾ ಇದು. ಪ್ರತಿ ಬಾರಿ ಸಿನಿಮಾ ನೋಡಿದಾಗಲೂ ಹೊಸದೇನೋ ಅರ್ಥ ಹೊಳೆಯುತ್ತದೆ. ಸಿನಿಮಾದ ಕತೆ, ಚಿತ್ರಕತೆಯನ್ನು ನೋಲನ್ ತಮ್ಮ ಸಹೋದರನೊಂದಿಗೆ ಸೇರಿ ರಚಿಸಿದ್ದಾರೆ. ಸಿನಿಮಾದಲ್ಲಿ ಅಪ್ಪ-ಮಗಳ ಸಂಬಂಧದ ಜೊತೆಗೆ ಭೂಮಿ, ಬಾಹ್ಯಾಕಾಶದ ಬಗೆಗೆ ಹಾಗೂ ಭವಿಷ್ಯ-ಭೂತದ ಬಗ್ಗೆ, ಕಾಲದ ವಿವಿಧ ಆಯಾಮಗಳ ಬಗ್ಗೆಯೂ ತೋರಿಸಲಾಗಿದೆ. ಸಿನಿಮಾದ ಕತೆಯನ್ನು ನೇರ, ಹಿಮ್ಮುಖ ಹೀಗೆ ಹಲವು ವಿಧದಲ್ಲಿ ಹೇಳಲಾಗಿದೆ. ಈ ಸಿನಿಮಾಕ್ಕೆ ಒಂದು ಆಸ್ಕರ್ ಪ್ರಶಸ್ತಿ ದೊರಕಿತು.

  ಐತಿಹಾಸಿಕ ವಿಷಯ ಮುಟ್ಟಿದ ನೋಲನ್

  ಐತಿಹಾಸಿಕ ವಿಷಯ ಮುಟ್ಟಿದ ನೋಲನ್

  2017ರಲ್ಲಿ ನೋಲನ್ ನಿರ್ದೇಶಿಸಿದ 'ಡಂಕಿರ್ಕ್' ಸಿನಿಮಾ 'ನೋಲನ್ ಮಾದರಿ' ಬಿಟ್ಟು ನಿರ್ದೇಶಿಸಿದ ಸಿನಿಮಾ ಆಗಿತ್ತು. ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಡಂಕಿರ್ಕ್‌ ಎಂಬಲ್ಲಿ ಬ್ರಿಟೀಷ್ ಹಾಗೂ ಮಿತ್ರರಾಷ್ಟ್ರಗಳ ಸೈನಿಕರು ಎದುರಿಸಿದ ಭೀಕರ ಸನ್ನಿವೇಶ ಹಾಗೂ ಅದರಿಂದ ಪಾರಾದ ಬಗ್ಗೆ ನಿರ್ಮಿಸಲಾದ ಈ ಸಿನಿಮಾಕ್ಕೆ ಬಹಳ ಒಳ್ಳೆಯ ವಿಮರ್ಶೆಗಳು ಕೇಳಿಬಂತು. ಈ ವರೆಗೆ ಭಿನ್ನವಾದ, ಸಂಕೀರ್ಣವಾದ, ಅತಿಮಾನುಷ ರೀತಿಯ ಕತೆಗಳನ್ನು ಸಿನಿಮಾ ಮಾಡುತ್ತಿದ್ದ ನೋಲನ್ ಮೊದಲ ಬಾರಿಗೆ ಐತಿಹಾಸಿಕ ವಿಷಯವನ್ನು ಸಿನಿಮಾ ಮಾಡಿದರು ಮತ್ತು ಗೆದ್ದರು ಸಹ. ಸಿನಿಮಾದಲ್ಲಿ ಕೆಲವು ಐತಿಹಾಸಿಕ ಸತ್ಯಗಳನ್ನು ಮರೆ ಮಾಚಲಾಗಿದೆ ಎಂಬ ಆರೋಪಗಳು ಸಹ ಕೇಳಿ ಬಂತು. ಈ ಸಿನಿಮಾಕ್ಕೆ ಮೂರು ಆಸ್ಕರ್ ಪ್ರಶಸ್ತಿಗಳು ದೊರಕಿದವು. ಜೊತೆಗೆ ಇನ್ನೂ ಹಲವು ಅಂತರಾಷ್ಟ್ರೀಯ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿಗಳು ದೊರಕಿದವು.

  ಗಳಿಕೆಯಲ್ಲಿ ದಾಖಲೆ ಬರೆದ 'ಟೆನೆಟ್'

  ಗಳಿಕೆಯಲ್ಲಿ ದಾಖಲೆ ಬರೆದ 'ಟೆನೆಟ್'

  2020 ರಲ್ಲಿ ಕೊರೊನಾ ನಡುವೆಯೂ ಬಿಡುಗಡೆ ಆದ 'ಟೆನೆಟ್' ಸಿನಿಮಾದ ಮೂಲಕ ನೋಲನ್ ಮತ್ತೆ ತಮ್ಮ ಮಾದರಿಗೆ ಮರಳಿದರು. ಈ ಸಿನಿಮಾದಲ್ಲಿ ವರ್ತಮಾನ-ಭೂತ-ಭವಿಷ್ಯವನ್ನು ಒಂದು ಮಾಡಿದರು ನೋಲನ್. ಭೂಮಿಯ ಮೇಲೆ ದಾಳಿ ಮಾಡಲು ಭವಿಷ್ಯದಿಂದ ಬರುತ್ತಿರುವ ದಾಳಿಕೋರರನ್ನು ತಡೆಯುವ ಏಜೆಂಟ್ ಒಬ್ಬನ ಕತೆಯನ್ನು 'ಟೆನೆಟ್' ಹೊಂದಿದೆ. ಕೊರೊನಾ ನಡುವೆಯೂ ಈ ಸಿನಿಮಾ ಗಳಿಕೆಯಲ್ಲಿ ದಾಖಲೆಯನ್ನೇ ನಿರ್ಮಿಸಿತು. ಸಿನಿಮಾದಲ್ಲಿ ಹಲವು ದೃಶ್ಯಗಳನ್ನು ಎರಡು ಬಾರಿ ತೋರಿಸಲಾಗಿದೆ ಆದರೆ ಎರಡೂ ಬಾರಿ ಬೇರೆಯದೇ ಅರ್ಥವನ್ನು ಆ ದೃಶ್ಯಗಳು ನೀಡುತ್ತವೆ. ಈ ಸಿನಿಮಾ ಸಹ ಒಂದು ಬಾರಿಗೆ ಅರ್ಥವಾಗದ ಮಾದರಿಯ ಸಿನಿಮಾ.

  English summary
  Director Christopher Nolan's movies and his life. He is one of the best movie director of the world.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X