twitter
    For Quick Alerts
    ALLOW NOTIFICATIONS  
    For Daily Alerts

    Exclusive: ಸರ್ಕಾರದಿಂದ ಚಿತ್ರರಂಗಕ್ಕೆ ಬೇಕಾಗಿರುವುದೇನು?

    |

    ಚಿತ್ರರಂಗಕ್ಕೆ, ಅದರಲ್ಲಿಯೂ ದಕ್ಷಿಣ ಭಾರತದ ಚಿತ್ರರಂಗಕ್ಕೆ ಇದು ಪರ್ವ ಕಾಲ. ದಕ್ಷಿಣ ಭಾರತದ ಸಿನಿಮಾಗಳು ಹೊಸ ಎತ್ತರಗಳನ್ನು ಮುಟ್ಟುತ್ತಿವೆ. ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಚಿತ್ರರಂಗಗಳ ನಡುವೆ ಆರೋಗ್ಯಕರ ಸ್ಪರ್ಧೆಯೂ ಏರ್ಪಟ್ಟಿದ್ದು, ಒಳ್ಳೆಯ ಸಿನಿಮಾ ನಿರ್ಮಾಣದಲ್ಲಿ ಪೈಪೋಟಿಗೆ ಬಿದ್ದಿವೆ.

    ಕನ್ನಡ ಚಿತ್ರರಂಗ ಇತ್ತೀಚಿನ ಕೆಲವು ವರ್ಷಗಳಲ್ಲಿ ತಾಂತ್ರಿಕವಾಗಿ ರಿಚ್‌ ಆಗಿರುವ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಆದರೆ ಸಿನಿಮಾ ನಿರ್ಮಾಣ ಮಾಡಲು ಕನ್ನಡ ಸಿನಿಮಾಕರ್ಮಿಗಳು ಪರಭಾಷೆಯ ಸ್ಟುಡಿಯೋಗಳ ಮೊರೆ ಹೋಗಬೇಕಾಗಿರುವುದು ವಿಪರ್ಯಾಸ.

    ಕನ್ನಡ ಸಿನಿಮಾಗಳ ಬಹುತೇಕ ಸ್ಟುಡಿಯೋ ಕೆಲಸಗಳು ಆಗುವುದು ಹೈದರಾಬಾದ್ ಅಥವಾ ಚೆನ್ನೈನಲ್ಲಿ ಎನ್ನಲಾಗುತ್ತದೆ. ಕೆಜಿಎಫ್, ವಿಕ್ರಾಂತ್ ರೋಣ, 777 ಚಾರ್ಲಿ ಇನ್ನೂ ಅನೇಕ ಸಿನಿಮಾಗಳ ಪೋಸ್ಟ್ ಪ್ರೊಡಕ್ಷನ್ ಹಾಗೂ ಚಿತ್ರೀಕರಣಗಳು ನಡೆದಿರುವುದು ನೆರೆ ರಾಜ್ಯಗಳಲ್ಲಿ. ಕನ್ನಡ ಚಿತ್ರರಂಗಕ್ಕೆ ಗುಣಮಟ್ಟದ ಸಿನಿಮಾ ನಿರ್ಮಾಣಕ್ಕೆ ಬೇಕಾದ ಮೂಲಸೌಕರ್ಯವನ್ನು ಒದಗಿಸುವಲ್ಲಿ ಸರ್ಕಾರ ಮುಂದಾಗಿಯೇ ಇಲ್ಲ. ಈ ಬಗ್ಗೆ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್‌ವಿ ರಾಜೇಂದ್ರ ಸಿಂಗ್ ಬಾಬು, ಟಿ.ಎಸ್.ನಾಗಾಭರಣ ಹಾಗೂ ಇನ್ನೂ ಕೆಲವರು ಗೃಹ ಮಂತ್ರಿಗಳು ಹಾಗೂ ಇತರ ಪ್ರಮುಖರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ತಾವಿಟ್ಟಿರುವ ಬೇಡಿಕೆ, ಕನ್ನಡ ಚಿತ್ರರಂಗಕ್ಕೆ ಸರ್ಕಾರದಿಂದ ಆಗಬೇಕಾಗಿರುವುದು ಏನು? ಇತರೆ ಮಾಹಿತಿಗಳನ್ನು ರಾಜೇಂದ್ರ ಸಿಂಗ್ ಬಾಬು ಅವರು 'ಫಿಲ್ಮಿಬೀಟ್ ಕನ್ನಡ'ದ ಜೊತೆ ಹಂಚಿಕೊಂಡಿದ್ದಾರೆ.

    ಸರ್ಕಾರ ನೀಡಬೇಕಾದ ಸವಲತ್ತುಗಳ ಬಗ್ಗೆ ರಾಜೇಂದ್ರ ಸಿಂಗ್ ಬಾಬು ಮಾತು

    ಸರ್ಕಾರ ನೀಡಬೇಕಾದ ಸವಲತ್ತುಗಳ ಬಗ್ಗೆ ರಾಜೇಂದ್ರ ಸಿಂಗ್ ಬಾಬು ಮಾತು

    ''ಬೇರೆ ರಾಜ್ಯಗಳಲ್ಲಿ ದೊಡ್ಡ ಮಟ್ಟದ ಸವತಲತ್ತುಗಳನ್ನು, ಮೂಲಸೌಕರ್ಯಗಳನ್ನು ಚಿತ್ರರಂಗಕ್ಕೆ ಆಯಾ ರಾಜ್ಯದ ಸರ್ಕಾರಗಳು ಒದಗಿಸುತ್ತಿವೆ. ಆದರೆ ನಮ್ಮ ರಾಜ್ಯದಲ್ಲಿ ಆ ವ್ಯವಸ್ಥೆ ಇಲ್ಲ. ಚಿತ್ರರಂಗಕ್ಕೆ ಅಗತ್ಯವಾದ ಮೂಲಭೂತ ಸೌಕರ್ಯಗಳು, ಬೇಕಾಗಿರುವ ಬದಲಾವಣೆಗಳು, ಆಗಬೇಕಾದ ಕಾಯಕಲ್ಪಗಳ ಬಗ್ಗೆ 2017 ರಲ್ಲಿಯೇ ಆಗಿನ ಸಿಎಂ ಅವರಿಗೆ ರೂಪುರೇಷೆಗಳ ಪಟ್ಟಿ ಮಾಡಿ ಹೊಸ ನೀತಿ ಮಾಡಿ ಎಂದು ಕೇಳಿದ್ದೆವು. ಆದರೆ ಆಗಿನ ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹಾಗಾಗಿ ಈಗಿನ ಕಾಲಘಟ್ಟಕ್ಕೆ ತಕ್ಕಂತೆ ಇನ್ನೂ ಕೆಲವು ಬೇಡಿಕೆಗಳನ್ನು, ಬದಲಾವಣೆಗಳನ್ನು ಸೂಚಿಸಿ ಮನವಿ ಮಾಡಿದ್ದೇವೆ. ಸಿಎಂ, ಗೃಹ ಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ'' ಎಂದಿದ್ದಾರೆ ರಾಜೇಂದ್ರ ಸಿಂಗ್ ಬಾಬು.

    ನಮ್ಮ ಸುಸಜ್ಜಿತ ಸಿನಿಮಾ ಸ್ಟುಡಿಯೋ ಇಲ್ಲ

    ನಮ್ಮ ಸುಸಜ್ಜಿತ ಸಿನಿಮಾ ಸ್ಟುಡಿಯೋ ಇಲ್ಲ

    ''ಆಂಧ್ರಪ್ರದೇಶದಲ್ಲಿ 9 ಸುಸಜ್ಜಿತ ಸ್ಟುಡಿಯೋ ಇವೆ, ಚೆನ್ನೈನಲ್ಲಿ 10 ಇದೆ, ಮುಂಬೈನಲ್ಲಿ ಸರ್ಕಾರವೇ ಎರಡು ಸ್ಟುಡಿಯೋಗಳನ್ನು ನಿರ್ಮಿಸಿಕೊಟ್ಟಿದೆ. ಗುಜರಾತ್‌ನಲ್ಲಿ ಸ್ಟುಡಿಯೋ ಆಗುತ್ತಿದೆ. ತೆಲಂಗಾಣದಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಭಾರಿ ಅದ್ಧೂರಿಯಾಗಿ, ಹೊಸ ತಂತ್ರಜ್ಞಾನದ ಎರಡು ಸ್ಟುಡಿಯೋ ನಿರ್ಮಾಣ ಆಗುತ್ತಿದೆ. ಉತ್ತರ ಪ್ರದೇಶದಲ್ಲಿ ಸ್ಟುಡಿಯೋ ನಿರ್ಮಾಣಕ್ಕೆ 5 ಕೋಟಿ ಸಬ್ಸಿಡಿ ನೀಡಲಾಗುತ್ತಿದೆ, ಮಧ್ಯ ಪ್ರದೇಶದಲ್ಲಿ 10 ಕೋಟಿ ಸಬ್ಸಿಡಿ ನೀಡಲಾಗುತ್ತಿದೆ. 1970 ನೇ ಇಸವಿಯಿಂದಲೂ ಚಿತ್ರನಗರಿ ಮಾಡುವ ಭರವಸೆ ಕೊಡುತ್ತಲೇ ಬಂದಿವೆ ಸರ್ಕಾರಗಳು. ಆದರೆ ಅದು ಇಂದಿಗೂ ಆಗಿಲ್ಲ. ಈಗಲೂ ನಾವು ಸ್ಟುಡಿಯೋಗಳಿಗಾಗಿ ಹೈದರಾಬಾದ್, ಚೆನ್ನೈಗಳಿಗೆ ಹೋಗಬೇಕಾಗಿದೆ. ಸುಸಜ್ಜಿತ ಸ್ಟುಡಿಯೋ ಇರುವ ಕಾರಣ 'ಪೊನ್ನಿಯಿನ್ ಸೆಲ್ವನ್' ಅಂಥಹಾ ಸಿನಿಮಾಗಳನ್ನು ಅವರು ನಿರ್ಮಿಸಿದ್ದಾರೆ. ಸೌಕರ್ಯಗಳಿಲ್ಲದೆ ನಾವು ಅವರೊಟ್ಟಿಗೆ ಸ್ಪರ್ಧೆ ಮಾಡುವುದಾದರೂ ಹೇಗೆ? ಎಂದು ರಾಜೇಂದ್ರ ಸಿಂಗ್ ಬಾಬು ಪ್ರಶ್ನಿಸಿದರು.

    ಜನತಾ ಚಿತ್ರಮಂದಿರ ಅವಶ್ಯಕತೆ ಹೆಚ್ಚಿದೆ

    ಜನತಾ ಚಿತ್ರಮಂದಿರ ಅವಶ್ಯಕತೆ ಹೆಚ್ಚಿದೆ

    ಇನ್ನೊಂದು ಪ್ರಮುಖ ಅಂಶವೆಂದರೆ, ಕರ್ನಾಟಕದಲ್ಲಿ ಚಿತ್ರಮಂದಿರಗಳ ಕೊರತೆ ಇದೆ. ನಮ್ಮಲ್ಲಿ ಇರುವುದೇ 400 ಚಿತ್ರಮಂದಿರಗಳು. ಹಾಗಾಗಿ ಮಿನಿ ಚಿತ್ರಮಂದಿರಗಳು ಅಥವಾ ಜನತಾ ಚಿತ್ರಮಂದಿರ ನಿರ್ಮಾಣವಾಗಬೇಕು. ಸರ್ಕಾರವೇ ಜನತಾ ಚಿತ್ರಮಂದಿರಗಳನ್ನು ಪಟ್ಟಣ, ಗ್ರಾಮಾಂತರ ಪ್ರದೇಶದಲ್ಲಿ ನಿರ್ಮಿಸಿದರೆ ಜನರಿಗೆ ಹತ್ತಿರದಲ್ಲಿ, ಕಡಿಮೆ ದರದಲ್ಲಿ ಸಿನಿಮಾ ನೀಡಿದಂತಾಗುತ್ತದೆ. ಕನ್ನಡ ಚಿತ್ರಗಳನ್ನು ಪ್ರದರ್ಶಿಸಲು ನಿಗದಿತ ಚಿತ್ರಮಂದಿರಗಳು ದೊರೆತಂತಾಗುತ್ತದೆ. ಪರಭಾಷೆಯ ದೊಡ್ಡ ಬಜೆಟ್‌ ಸಿನಿಮಾಗಾಗಿ ನಮ್ಮ ಚಿತ್ರಗಳನ್ನು ತೆಗೆದುಹಾಕುವ ಸಮಸ್ಯೆ ನಿರ್ಮೂಲನೆ ಆಗುತ್ತದೆ. ಅಲ್ಲದೆ, ಜನತಾ ಚಿತ್ರಮಂದಿರದಿಂದ ಸ್ಥಳೀಯವಾಗಿ ಹೋಟೆಲ್, ಶಾಪಿಂಗ್‌ ಮಳಿಗೆಗಳು ಹೆಚ್ಚಾಗಿ ಮಾರುಕಟ್ಟೆಯೂ ನಿರ್ಮಾಣವಾಗುತ್ತದೆ. ಹೆಚ್ಚು ಜನರಿಗೆ ಕೆಲಸ ಸಿಗುತ್ತದೆ ಎಂದು ಸಲಹೆ ನೀಡಿದರು ರಾಜೇಂದ್ರ ಸಿಂಗ್ ಬಾಬು.

    ''ಬುಕ್‌ ಮೈ ಶೋ ಏಕಮೇವಾಧಿಪತ್ಯ ಅಂತ್ಯ ಮಾಡಬೇಕು''

    ''ಬುಕ್‌ ಮೈ ಶೋ ಏಕಮೇವಾಧಿಪತ್ಯ ಅಂತ್ಯ ಮಾಡಬೇಕು''

    ಆನ್‌ಲೈನ್ ಸಿನಿಮಾ ಟಿಕೆಟ್ ಬುಕಿಂಗ್ ವ್ಯವಸ್ಥೆ ಸರ್ಕಾರದಿಂದಲೇ ಆಗಬೇಕು. ಬುಕ್‌ ಮೈ ಶೋ ಏಕಮೇವಾಧಿಪತ್ಯ ಸಾಧಿಸಿದೆ. 500 ರುಪಾಯಿಗೆ ಟಿಕೆಟ್ ಬುಕ್ ಮಾಡಿದರೆ ವಿನಾಕಾರಣ 75 ರುಪಾಯಿ ಹೆಚ್ಚುವರಿ ಹಣ ತೆಗೆದುಕೊಳ್ಳುತ್ತಾರೆ. ಅದರಲ್ಲಿ ಸಿನಿಮಾದವರಿಗೆ ಶೇರ್ ಇರೊದಿಲ್ಲ. ಚಿತ್ರಮಂದಿರದ ಒಳಗೆ ಟಿಕೆಟ್ ಮಾರಾಟ ಮಾಡಬೇಕು ಎಂಬ ನಿಯಮ ಇದೆ. ಇಲ್ಲವಾದರೆ ಅದು ಬ್ಲಾಕ್ ಟಿಕೆಟ್ ಎಂದಾಗುತ್ತದೆ. ಆದರೆ ಈ ಅಪ್ಲಿಕೇಶನ್‌ ಅವರುಗಳು ಅಧಿಕೃತವಾಗಿ ಬ್ಲಾಕ್‌ನಲ್ಲಿ ಟಿಕೆಟ್‌ನಲ್ಲಿ ಮಾರಾಟ ಮಾಡುತ್ತಿದ್ದಾರೆ. ಚಿತ್ರಮಂದಿರಗಳಲ್ಲಿ ಟಿಕೆಟ್ ಸಿಗೊಲ್ಲ, ಆನ್‌ಲೈನ್‌ನಲ್ಲಿಯೇ ಟಿಕೆಟ್ ಖರೀದಿ ಮಾಡಬೇಕು ಎಂಬ ಭಾವನೆಯನ್ನು ಇವರು ಬಿತ್ತುತ್ತಿದ್ದಾರೆ. ಕಡಿಮೆ ದರಕ್ಕೆ ಸಿನಿಮಾವನ್ನು ಪ್ರೇಕ್ಷಕರಿಗೆ ನೀಡಬೇಕೆಂಬುದು ನಮ್ಮ ಆಶಯ ಆದರೆ ಬುಕ್‌ಮೈಶೋನಿಂದ ಇದು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

    ಚಿತ್ರಮಂದಿರ ನಿರ್ಮಾಣಕ್ಕೆ ಹಲವು ಅಡ್ಡಿ

    ಚಿತ್ರಮಂದಿರ ನಿರ್ಮಾಣಕ್ಕೆ ಹಲವು ಅಡ್ಡಿ

    ಕರ್ನಾಟಕದಲ್ಲಿ ಚಿತ್ರಮಂದಿರ ನಿರ್ಮಾಣಕ್ಕೆ ಹಲವು ಅಡ್ಡಿಗಳಿವೆ. ಹಳೆ ಕಾಲದಲ್ಲಿ ಮಾಡಿರುವ ನಿಯಮಗಳು ಇಂದಿಗೂ ಜಾರಿಯಲ್ಲಿವೆ. ಆಗೆಲ್ಲ ಪ್ರೊಜೆಕ್ಟರ್‌ಗಳು ಇದ್ದಿದ್ದರಿಂದ ಬೆಂಕಿ ಬರುತ್ತೆ, ನೀರು, ಮರಳು ಇಟ್ಟಿರಬೇಕು ಎಂದಿತ್ತು. ಆದರೆ ಈಗ ಎಲ್ಲವೂ ಡಿಜಿಟಲೈಸ್ ಆಗಿದೆ. ಈಗ ಚಿತ್ರಮಂದಿರ ಕಟ್ಟಬೇಕೆಂದರೆ ಪರವಾನಗಿ ತೆಗೆದುಕೊಳ್ಳಲು ಕನಿಷ್ಟ 27 ಇಲಾಖೆಗೆ ಓಡಾಡಬೇಕು. ಆದರೆ ತೆಲಂಗಾಣದಲ್ಲಿ 15 ದಿನದಲ್ಲಿ ಲೈಸೆನ್ಸ್, ಸಬ್ಸಿಡಿ ಕೊಡುತ್ತಾರೆ. ಚಿತ್ರರಂಗದಲ್ಲಿ ಸಾಕಷ್ಟು ಬದಲಾವಣೆ ಆಗಬೇಕು. ಸರ್ಕಾರವೇ ಈ ಬದಲಾವಣೆಗಳನ್ನು ಜಾರಿಗೆ ತರಬೇಕು. ಸರ್ಕಾರ ನಮಗೆ ಸಕ್ರಿಯವಾಗಿ ಸ್ಪಂದಿಸಿದೆ ಎಂದಿದ್ದಾರೆ.

    English summary
    Director Rajendra Singh Babu talks about what Sandalwood need from state government. He met top ministers from the government and requested them give needful fecilities.
    Friday, October 14, 2022, 17:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X