twitter
    For Quick Alerts
    ALLOW NOTIFICATIONS  
    For Daily Alerts

    ಸುವರ್ಣಯುಗದ ಕಡೆಗೆ ಭಾರತೀಯ ಸಿನಿಮಾ ಪಯಣ

    |

    ಮೊದಲ ವಿಶ್ವ ಯುದ್ಧ ಅಂತ್ಯವಾದ ಬಳಿಕ ವಿಶ್ವದೆಲ್ಲೆಡೆ ಸಿನಿಮಾ ಬಹುಬೇಗ ವ್ಯಾಪಿಸಲು ಆರಂಭಿಸಿತು. ಆದರೆ ಈ ಕ್ರಾಂತಿ ಭಾರತವನ್ನು ತಲುಪಲು ತುಸು ತಡವೇ ಆಯಿತು. ಭಾರತದಲ್ಲಿ ಸಿನಿಮಾಗಳು ಗೇರ್ ಬದಲಿಸಿದ್ದು 1930ರ ನಂತರ.

    1930ರ ವರೆಗೆ ಕೇವಲ ಪೌರಾಣಿಕ ಕತೆಗಳಷ್ಟೆ ಸಿನಿಮಾಗಳಾಗುತ್ತಿದ್ದವು ಆದರೆ ಅದಾದ ಬಳಿಕ ಸಾಮಾಜಿಕ ಕತೆಗಳತ್ತ ಭಾರತೀಯ ಸಿನಿಮಾಗಳು ಹೊರಳಿದವು ಮತ್ತು ಸಾಮಾಜಿಕ ಸಿನಿಮಾಗಳು ಬಹುದೊಡ್ಡ ಯಶಸನ್ನು ಗಳಿಸಿದವು. 1940ರಿಂದ ಭಾರತೀಯ ಸಿನಿಮಾದ ಸುವರ್ಣಯುಗ ಆರಂಭವಾಯಿತು ಎಂದು ಇತಿಹಾಸಕಾರರು ಗುರುತಿಸುತ್ತಾರೆ. ಆದರೆ ಸುವರ್ಣಯುಗದೆಡೆಗೆ ಸವೆಸಿದ ಹಾದಿಯೂ ಸುಂದರವಾದುದ್ದೆ.

    ಆಗಿನ ಕಾಲಕ್ಕೆ ಉಚ್ರಾಯದಲ್ಲಿದ್ದ ಸ್ವಾತಂತ್ರ್ಯ ಚಳವಳಿಗೆ ಪೂರಕವಾಗಿಯೂ ಹಲವು ಸಿನಿಮಾಗಳು ಬಂದವು. ಜೊತೆಗೆ ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ ಜಾತೀವಾದದ ವಿರುದ್ಧ, ಮಹಿಳಾ ಪೀಡನೆ ವಿರುದ್ಧ ಸಿನಿಮಾಗಳು ತಯಾರಾಗ ತೊಡಗಿದವು. ಜೊತೆಗೆ ದೇಶಪ್ರೇಮದ ಬಗ್ಗೆಯೂ ಈ ಅವಧಿಯಲ್ಲಿ ಹಲವು ಸಿನಿಮಾಗಳು ಬಂದವು.

    ಸಾಮಾನ್ಯ ಜನರ ಕುರಿತು ಕತೆಗಳು ಸಿನಿಮಾ ಆಗಲು ಆರಂಭವಾದವು

    ಸಾಮಾನ್ಯ ಜನರ ಕುರಿತು ಕತೆಗಳು ಸಿನಿಮಾ ಆಗಲು ಆರಂಭವಾದವು

    ಮದನ್ ಥಿಯೇಟರ್ಸ್, ಬಾಂಬೆ ಟಾಕೀಸ್, ಇಂಡಿಯನ್ ಫಿಲಂ ಕಂಪೆನಿ ಇನ್ನೂ ಹಲವಾರು ಸಿನಿಮಾ ನಿರ್ಮಾಣ ಸಂಸ್ಥೆಗಳು ಸಕ್ರಿಯವಾಗಿ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿದ್ದವು. ಕತೆಗಳು ಸಹ ಪೌರಾಣಿಕದಿಂದ ಸಾಮಾಜಿಕ ದತ್ತ ಹೊರಳುವುದು ಮಾತ್ರವೇ ಅಲ್ಲದೆ ಆ ಹಂತದಲ್ಲಿ ಬಹುಸಂಖ್ಯಾತರಾಗಿದ್ದ ಹಳ್ಳಿಯ ಜನ, ಬಡಜನರನ್ನು ನಾಯಕರನ್ನಾಗಿ ಚಿತ್ರಿಸಿಯೇ ಸಿನಿಮಾಗಳನ್ನು ನಿರ್ಮಾಣ ಮಾಡಲಾಗುತ್ತಿತ್ತು, ಹೀಗಾಗಿ ಸಾಮಾಜಿಕ ಕತೆಯುಳ್ಳ ಸಿನಿಮಾಗಳು ಬಹುಬೇಗನೇ ಜನಪ್ರಿಯಗೊಂಡವು. ಭಾರತದಲ್ಲಿ ಸಿನಿಮಾದ ಸುವರ್ಣಯುಗಕ್ಕೆ ಇವು ಮುನ್ನುಡಿ ಬರೆದವು.

    ಹಲವು ನಟರು ಜನಪ್ರಿಯರಾದರು

    ಹಲವು ನಟರು ಜನಪ್ರಿಯರಾದರು

    1930ರ ದಶಕದಲ್ಲಿ ಭಾರತದ ಮೊದಲ ಸ್ಟಾರ್ ಅಶೋಕ್ ಕುಮಾರ್ ಸಿನಿಮಾರಂಗಕ್ಕೆ ಪ್ರವೇಶ ಪಡೆದುಕೊಂಡರು. ಖ್ಯಾತ ನಟಿ ದೇವಿಕಾ ರಾಣಿ ಜನಪ್ರಿಯ ನಟಿಯಾಗಿದ್ದು ಸಹ ಇದೇ ಅವಧಿಯಲ್ಲಿ. ಹಿಮಾಂಶು ರಾಯ್, ದಾದಾ ಸಾಹೇಬ್ ಫಾಲ್ಕೆ, ಕನ್ನಡದ ಸುಬ್ಬಯ್ಯ ನಾಯ್ಡು, ತಮಿಳಿನ ಎಂಜಿಆರ್ ಇನ್ನೂ ಹಲವರು ಖ್ಯಾತ ನಾಮರು ತಮ್ಮ ನಟನೆ ಮೂಲಕ ಜನರ ಮನ ಗೆದ್ದದ್ದು ಇದೇ ದಶಕದಲ್ಲಿ ಇವರೆಲ್ಲ ಮುಂದೆ ಭಾರತೀಯ ಸಿನಿಮಾ ರಂಗದ ದಂತಕತೆಗಳೆನಿಸಿಕೊಂಡರು.

    ಕನ್ನಡದಲ್ಲಿ ಮೊದಲ ಸಿನಿಮಾ ತಯಾರಾಯ್ತು

    ಕನ್ನಡದಲ್ಲಿ ಮೊದಲ ಸಿನಿಮಾ ತಯಾರಾಯ್ತು

    1930ರ ದಶದಲ್ಲಿ ಹಿಂದಿಯಲ್ಲಿ ಮಾತ್ರವೇ ಅಲ್ಲದೆ ದಕ್ಷಿಣ ಭಾರತದಲ್ಲಿಯೂ ಹಲವು ಸಿನಿಮಾಗಳು ತಯಾರಾದವು. ತಮಿಳಿನಲ್ಲಿ 1916ರಲ್ಲಿಯೇ ಮೊದಲ ಸಿನಿಮಾ ನಿರ್ಮಾಣವಾಗಿತ್ತು. 1920ರ ವೇಳೆಗೆ ತೆಲುಗು, ಮಲಯಾಳಂಗಳಲ್ಲಿಯೂ ಸಿನಿಮಾ ನಿರ್ಮಾಣವಾಯಿತು. ಆದರೆ ಕನ್ನಡದಲ್ಲಿ ಮೊದಲ ಸಿನಿಮಾ ನಿರ್ಮಾಣವಾಗಿದ್ದು 1934ರಲ್ಲಿ. ಅದೇ ಸಮಯದಲ್ಲಿ ತಮಿಳಿನಲ್ಲಿ ಹಲವು ಸಿನಿಮಾಗಳು ಒಂದರ ಹಿಂದೊಂದರಂತೆ ತೆರೆಗೆ ಬರಲು ಆರಂಭವಾಗಿದ್ದವು. ತಮಿಳಿನ ಖ್ಯಾತ ನಟ ಎಂಜಿಆರ್ ಮೊದಲ ಸಿನಿಮಾದಲ್ಲಿ ನಟಿಸಿದ್ದು 1936ರಲ್ಲಿ ಅಲ್ಲಿಂದ ಅವರು ತಮಿಳು ಸಿನಿ ಪ್ರೇಮಿಗಳ ಆರಾಧ್ಯ ದೈವವಾಗಿ ಬೆಳೆದರು. ಅದೇ ಅವಧಿಯಲ್ಲಿ ತಮಿಳಿನಲ್ಲಿ ಟಿ.ಎಸ್.ಬಾಲಯ್ಯ ಸಹ ಹಲವಾರು ಸಿನಿಮಾಗಳಲ್ಲಿ ನಟಿಸಿದರು. ಆದರೆ 30ರ ದಶಕದಲ್ಲಿ ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಪೌರಾಣಿಕ ಕತೆಗಳೇ ಸಿನಿಮಾಗಳಾಗುತ್ತಿದ್ದವು. ಅಲ್ಲೊಂದು-ಇಲ್ಲೊಂದು ಸಾಮಾಜಿಕ ಸಿನಿಮಾಗಳಾಗುತ್ತಿದ್ದವು.

    ಹಲವು ಮೊದಲುಗಳಿಗೆ ಕಾರಣವಾದ ದಶಕ

    ಹಲವು ಮೊದಲುಗಳಿಗೆ ಕಾರಣವಾದ ದಶಕ

    1930ರ ನಂತರ ತಂತ್ರಜ್ಞಾನವೂ ಹೆಚ್ಚು ಸುಧಾರಿಸಿದ ಕಾರಣ ಗುಣಮಟ್ಟದ ಸಿನಿಮಾಗಳು ತಯಾರಾಗಲು ಆರಂಭವಾದವು. ಚಿತ್ರೀಕರಣ ಸೆಟ್‌ನಲ್ಲಿಯೇ ವಾಯ್ಸ್ ರೆಕಾರ್ಡ್‌ ಆಗುತ್ತಿದ್ದುದ್ದು ಇಲ್ಲವಾಗಿ ಸ್ಟುಡಿಯೋನಲ್ಲಿ ಹಾಡುಗಳ ರೆಕಾರ್ಡಿಂಗ್ ಆರಂಭವಾಯ್ತು. 1931ರಲ್ಲಿ ಭಾರತದ ಮೊದಲ ಟಾಕಿ ಸಿನಿಮಾ 'ಆಲಂ ಆರ' ನಿರ್ಮಾಣವಾಯ್ತು. 1935ರಲ್ಲಿ 'ದೂಪ್ ಚಾಹೋ' ಎಂಬ ಸಿನಿಮಾಕ್ಕೆ ಮೊದಲ ಬಾರಿಗೆ ಹಾಡುಗಳನ್ನು ರೆಕಾರ್ಡ್ ಮಾಡಿ ಸಿನಿಮಾಕ್ಕೆ ಹಿನ್ನೆಲೆಯಾಗಿ ಸೇರಿಸಲಾಯ್ತು. 1937ರಲ್ಲಿ ಭಾರತ ಮೊದಲ ಕಲರ್ ಸಿನಿಮಾ 'ಕೃಷ್ಣ ಕನಯ್ಯ' ನಿರ್ಮಾಣವಾಯ್ತು.

    ಚುಂಬನದ ದೃಶ್ಯ ಸಹ ತೆರೆಯ ಮೇಲೆ ಚಿತ್ರಿಸಲಾಯ್ತು

    ಚುಂಬನದ ದೃಶ್ಯ ಸಹ ತೆರೆಯ ಮೇಲೆ ಚಿತ್ರಿಸಲಾಯ್ತು

    1931ರಲ್ಲಿ ಮೊದಲ ಬಾರಿಗೆ ಕೃತಕ ಲೈಟಿಂಗ್ ಬಳಸಿ 'ಅಪರಾಧಿ' ಎಂಬ ಸಿನಿಮಾ ಚಿತ್ರೀಕರಿಸಲಾಯ್ತು. ಈ ಅವಧಿಯಲ್ಲಿ ಸಾಕಷ್ಟು ಪ್ರಯೋಗಗಳು ಸಹ ನಡೆದವು. ಕನಸಿನ ದೃಶ್ಯಗಳು, ಫ್ಲ್ಯಾಷ್‌ ಬ್ಯಾಕ್ ದೃಶ್ಯಗಳನ್ನು ಸಹ ಚಿತ್ರೀಕರಿಸಲಾಯ್ತು. 1933ರಲ್ಲಿ ಬಿಡುಗಡೆ ಆದ ಮಲಯಾಳಂ ಸಿನಿಮಾ 'ಮಾರ್ತಾಂಡ ವರ್ಮಾ' ಸಿನಿಮಾದಲ್ಲಿ ಮೊದಲ ಬಾರಿಗೆ ಚುಂಬನದ ದೃಶ್ಯ ಪ್ರದರ್ಶಿಸಲಾಯ್ತು. ನಂತರದ ವರ್ಷದಲ್ಲಿ ಬಿಡುಗಡೆ ಆದ ಹಿಂದಿಯ 'ಕರ್ಮ' ಸಿನಿಮಾದಲ್ಲಿ ದೇವಿಕಾ ರಾಣಿ ಹಾಗೂ ಹಿಮಾಂಶು ರೈ ನಡುವೆ ನಾಲ್ಕು ನಿಮಿಷದ ದೀರ್ಘ ಚುಂಬನದ ದೃಶ್ಯ ಇಡಲಾಗಿತ್ತು. 1934ರಲ್ಲಿ ಬಿಡುಗಡೆ ಆದ 'ಸೀತಾ' ವಿದೇಶದಲ್ಲಿ ಪ್ರಶಸ್ತಿ ಪಡೆದ ಮೊದಲ ಭಾರತೀಯ ಸಿನಿಮಾ ಎನಿಸಿಕೊಂಡಿತು. 1937ರ 'ನೌಜವಾನ್' ಸಿನಿಮಾ ಹಾಡುಗಳೇ ಇಲ್ಲದೆ ಬಿಡುಗಡೆ ಆಯ್ತು. 1939ರಲ್ಲಿ ಮೊದಲ ಬಾರಿಗೆ ಸಂಪೂರ್ಣ ಹಾಸ್ಯ ಸಿನಿಮಾ ಒಂದು ಬಿಡುಗಡೆ ಆಯ್ತು.

    English summary
    Indian Cinema History Part 09: How Indian cinema changed in 1930 to 1940. movies see many changes in this decade.
    Tuesday, July 27, 2021, 20:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X