Don't Miss!
- Automobiles
ದ್ವಿಚಕ್ರ ವಾಹನ ಖರೀದಿಸುತ್ತಿದ್ದೀರಾ? ಇದೇ ತಿಂಗಳ ಪ್ರಮುಖ ಬಿಡುಗಡೆಗಳನ್ನು ಒಮ್ಮೆ ಪರಿಶೀಲಿಸಿ
- News
Budget 2023; ಮೋದಿ ಸರ್ಕಾರದಿಂದ ಸಾವಯವ ಕೃಷಿಗೆ ಒತ್ತು: ಸಂಸದ ಈರಣ್ಣ ಕಡಾಡಿ
- Sports
IND vs NZ 3rd T20: ಸರಣಿ ನಿರ್ಣಾಯಕ 3ನೇ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ & ಲೈವ್ ಸ್ಕೋರ್
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
2021ರ ಹೆಚ್ಚು ಹುಡುಕಲ್ಪಟ್ಟ ಸಿನಿಮಾ: ಬಾಲಿವುಡ್ ಅನ್ನು ಹಿಂದಿಕ್ಕಿದ ದಕ್ಷಿಣ ಭಾರತದ ಸಿನಿಮಾ
ಡಿಸೆಂಬರ್ ಬಂದಿದೆ, ವರ್ಷದ ಕೊನೆಯಲ್ಲಿದ್ದೇವೆ. ಈ ವರ್ಷ ಏನೇನಾಯಿತು ಎಂಬುದನ್ನು ತಿರುಗಿ ನೋಡುವ ಸಮಯ ಇದು. ಸಿನಿಮಾ ರಂಗಕ್ಕಂತೂ ಇದು ಬಹಳ ಅವಶ್ಯಕ. ನಡೆದು ಬಂದ ಹಾದಿಯ ನೆನಪು, ಅನುಭವ ಜೊತೆಯಾಗಿಸಿಕೊಂಡು ಮುಂದೆ ಇಡುವುದು ಪ್ರಯಾಣಕ್ಕೆ ಒಳಿತು.
ವರ್ಷಾಂತ್ಯದಲ್ಲಿ ನಿಂತು ಈ ವರ್ಷ ಅತಿ ಹೆಚ್ಚು ಜನರ ಕುತೂಹಲಕ್ಕೆ ಕಾರಣವಾದ ಸಿನಿಮಾ ಯಾವುದೆಂದು ಹುಡುಕಿದರೆ ಕಾಣುವುದು ಬಾಲಿವುಡ್ ಸಿನಿಮಾ ಅಲ್ಲ ಅಥವಾ ಹಾಲಿವುಡ್, ಚೈನೀಸ್ ಸಿನಿಮಾ ಅಲ್ಲ ಬದಲಿಗೆ ದಕ್ಷಿಣ ಭಾರತದ, ದಕ್ಷಿಣ ಭಾರತದ ಬುಡಕಟ್ಟು ಜನಾಂಗದ ಕತೆಯುಳ್ಳ ಸಿನಿಮಾ.
ಹೌದು, 2021 ರಲ್ಲಿ ಭಾರತೀಯರು ಅತಿ ಹೆಚ್ಚು ಯಾವ ಸಿನಿಮಾ ಬಗ್ಗೆ ಹುಡುಕಾಡಿದ್ದಾರೆ, ಯಾವ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ತಡಕಾಡಿದ್ದಾರೆ ಎಂಬ ಮಾಹಿತಿಯನ್ನು ಗೂಗಲ್ ಬಿಡುಗಡೆ ಮಾಡಿದ್ದು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ದಕ್ಷಿಣ ಭಾರತದ ಸಿನಿಮಾ.

ಹತ್ತನೇ ಸ್ಥಾನದಲ್ಲಿರುವ ಸಿನಿಮಾ
ಅತಿ ಹೆಚ್ಚು ಹುಡುಕಲ್ಪಟ್ಟ ಸಿನಿಮಾಗಳ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿರುವುದು ಅಜಯ್ ದೇವಗನ್ ನಟನೆಯ 'ಭುಜ್; ದಿ ಪ್ರೈಡ್ ಆಫ್ ಇಂಡಿಯಾ'. ಇದು ಸಹ ನಿಜ ಘಟನೆಯನ್ನು ಆಧರಿಸಿದ ಸಿನಿಮಾ. ಭಿಜ್ ಏರ್‌ಪೋರ್ಸ್ ಇನ್‌ಚಾರ್ಜ್ ಆಗಿದ್ದ ವಿಜಯ್ ಕಾರ್ಣಿಕ್ ಜೀವನ ಆಧರಿಸಿದ ಸಿನಿಮಾ ಇದಾಗಿತ್ತು. ಸಿನಿಮಾದಲ್ಲಿ ದೊಡ್ಡ ಪಾತ್ರವರ್ಗವೇ ಇತ್ತು. ಸಂಜಯ್ ದತ್, ನೋರಾ ಫತೇಹಿ, ಸೊನಾಕ್ಷಿ ಸಿನ್ಹಾ, ಶರದ್ ಕೇಲ್ಕರ್, ಕನ್ನಡತಿ ಪ್ರಣಿತಾ ಸುಭಾಷ್ ಇನ್ನೂ ಹಲವರಿದ್ದರು. ಸಿನಿಮಾ ಅಷ್ಟಾಗಿ ಗಮನ ಸೆಳೆಯಲಿಲ್ಲ.

ಒಂಬತ್ತನೇ ಸ್ಥಾನದಲ್ಲಿ ಮಲಯಾಳಂ ಸಿನಿಮಾ
ಪಟ್ಟಿಯಲ್ಲಿನ ಏಕೈಕ ಮಲಯಾಳಂ ಸಿನಿಮಾ 'ದೃಶ್ಯಂ 2'. ಮೋಹನ್‌ಲಾಲ್ ನಟನೆಯ ಈ ಸಿನಿಮಾ ಘೋಷಣೆ ಆದಾಗಿನಿಂದಲೂ ಸಿನಿಮಾದ ಬಗ್ಗೆ ತೀವ್ರ ಕುತೂಹಲ ಇತ್ತು. ಮೊದಲ ಭಾಗದ ಮುಂದುವರೆದ ಭಾಗವೇ ಇದಾಗಿರಲಿದೆ ಎಂದು ಚಿತ್ರತಂಡ ಘೋಷಿಸಿದ್ದರಿಂದ ಕತೆ ಏನಾಗಬಹುದು ಎಂಬ ಕುತೂಹಲ ಇತ್ತು. ಈ ಸಿನಿಮಾ ಸಹ ನೇರವಾಗಿ ಒಟಿಟಿಗೆ ಬಿಡುಗಡೆ ಆಗಿ ಹಿಟ್ ಆಯಿತು.

ಎಂಟನೇ ಸ್ಥಾನದಲ್ಲಿ ಹಾಲಿವುಡ್ ಸಿನಿಮಾ
ಎಂಟನೇ ಸ್ಥಾನದಲ್ಲಿ ಮತ್ತೊಂದು ಹಾಲಿವುಡ್ ಸಿನಿಮಾ 'ಗಾಡ್ಜಿಲ್ಲಾ v/s ಕಿಂಗ್' ಇದೆ. ಈ ಸಿನಿಮಾ ಬಗ್ಗೆ ವಿಶ್ವದಾದ್ಯಂತ ಸಾಕಷ್ಟು ಕುತೂಹಲ ಇತ್ತು. ಆದರೆ ಈ ಸಿನಿಮಾ ನಿರೀಕ್ಷಿತ ಮಟ್ಟಕ್ಕೆ ಪ್ರೇಕ್ಷಕರನ್ನು ರಂಜಿಸಲಿಲ್ಲ. ಸಿನಿಮಾದ ಕತೆಯನ್ನು ವ್ಯಂಗ್ಯ ಮಾಡಿ ಸಾಕಷ್ಟು ಮೀಮ್‌ಗಳು ಸಹ ಮಾಡಲಾಯಿತು.

ಅಕ್ಷಯ್ ಕುಮಾರ್ ನಟನೆಯ ಸಿನಿಮಾ
ಏಳನೇ ಸ್ಥಾನದಲ್ಲಿ ಮತ್ತೊಂದು ಅಕ್ಷಯ್ ಕುಮಾರ್ ನಟನೆಯ ಸಿನಿಮಾ 'ಸೂರ್ಯವಂಶಿ' ಇದೆ. ಮೂರು ವರ್ಷಗಳ ಹಿಂದೆಯೇ ಬಿಡುಗಡೆಗೆ ತಯಾರಾಗಿದ್ದ ಸಿನಿಮಾ ಕೊರೊನಾ ಕಾರಣಕ್ಕೆ ಬಿಡುಗಡೆ ಮುಂದೂಡುತ್ತಾ ಬಂದು ಕೊನೆಗೆ ಕೆಲವು ದಿನಗಳ ಹಿಂದೆ ನವೆಂಬರ್ 05ರಂದು ಬಿಡುಗಡೆ ಆಯಿತು. ರೋಹಿತ್ ಶೆಟ್ಟಿ ನಿರ್ದೇಶನದ ಈ ಆಕ್ಷನ್ ಸಿನಿಮಾ ಸೂಪರ್ ಹಿಟ್.

ವರ್ಷಪೂರ್ತಿ ಕುತೂಹಲ ಉಳಿಸಿಕೊಂಡ ಸಿನಿಮಾ
ಟಾಪ್ ಟೆನ್ ಪಟ್ಟಿಯಲ್ಲಿ ಮತ್ತೊಂದು ದಕ್ಷಿಣ ಭಾರತದ ಸಿನಿಮಾ ದಳಪತಿ ವಿಜಯ್ ನಟನೆಯ 'ಮಾಸ್ಟರ್'. ಈ ಸಿನಿಮಾವು ಇದೇ ವರ್ಷದ ಆರಂಭದಲ್ಲಿ ಬಿಡುಗಡೆ ಆಗಿತ್ತು. ಹಾಗಿದ್ದರೂ ವರ್ಷದ ಅಂತ್ಯದ ವರೆಗೆ ಕುತೂಹಲ ಉಳಿಸಿಕೊಂಡಿದೆ. ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ದಳಪತಿ ವಿಜಯ್ ಹಾಗೂ ವಿಜಯ್ ಸೇತುಪತಿ ನಟಿಸಿದ್ದ ಈ ಸಿನಿಮಾ ಸೂಪರ್-ಡೂಪರ್ ಹಿಟ್ ಆಗಿತ್ತು. ಗಳಿಕೆಯಲ್ಲಿಯೂ ದಾಖಲೆ ಬರೆದಿತ್ತು.

ವಿಶ್ವದೆಲ್ಲೆಡೆ ಸಿನಿಮಾ ಬಗ್ಗೆ ಕುತೂಹಲ
ಐದನೇ ಸ್ಥಾನದಲ್ಲಿ ಹಾಲಿವುಡ್ ಸಿನಿಮಾ 'ಎಟರ್ನಲ್ಸ್' ಇದೆ. ಮಾರ್ವೆಲ್ ಸ್ಟುಡಿಯೋಸ್‌ನವರು ನಿರ್ಮಾಣ ಮಾಡಿದ ಈ ಸಿನಿಮಾ ಅಕ್ಟೋಬರ್ 18 ರಂದು ಕೆಲವು ದೇಶಗಳಲ್ಲಿ, ನವೆಂಬರ್ 05 ರಂದು ಕೆಲವು ದೇಶಗಳಲ್ಲಿ ಬಿಡುಗಡೆ ಆಗಿದೆ. ಈ ಸಿನಿಮಾದ ಪಾತ್ರಗಳ ಬಗ್ಗೆ ಜನರಿಗೆ ತೀವ್ರ ಕುತೂಹಲ ಇತ್ತು. ಹಾಗಾಗಿ ಈ ಸಿನಿಮಾ ಬಗ್ಗೆ ವಿಶ್ವದಾದ್ಯಂತ ಹೆಚ್ಚು ಹುಡುಕಾಟ ಮಾಡಲಾಗಿದೆ.

ಅಕ್ಷಯ್ ಕುಮಾರ್ ನಟನೆಯ 'ಬೆಲ್ ಬಾಟಮ್'
ನಾಲ್ಕನೇ ಸ್ಥಾನದಲ್ಲಿ ಅಕ್ಷಯ್ ಕುಮಾರ್ ನಟನೆಯ 'ಬೆಲ್ ಬಾಟಮ್' ಸಿನಿಮಾ ಇದೆ. ಈ ಸಿನಿಮಾ ನಿಜ ಘಟನೆಯಿಂದ ಪ್ರೇರಣೆ ಹೊಂದಿದ ಕಮರ್ಷಿಯಲ್ ಸಿನಿಮಾ ಆಗಿದೆ. ಆಗಸ್ಟ್ 19ರಂದು ಈ ಸಿನಿಮಾ ಬಿಡುಗಡೆ ಆಗಿತ್ತು. ಸಿನಿಮಾ ಅಮೆಜಾನ್ ಪ್ರೈಂನಲ್ಲಿ ವೀಕ್ಷಣೆಗೆ ಲಭ್ಯವಿದೆ.

ಮೂರನೇ ಸ್ಥಾನದಲ್ಲಿ ಪ್ರಭಾಸ್ ಸಿನಿಮಾ
ಮೂರನೇ ಸ್ಥಾನದಲ್ಲಿ ಮತ್ತೊಂದು ದಕ್ಷಿಣ ಭಾರತದ ಸಿನಿಮಾ 'ರಾಧೆ-ಶ್ಯಾಮ್' ಇದೆ. ಪ್ರಭಾಸ್ ನಟನೆಯ ಈ ಸಿನಿಮಾದ ಬಗ್ಗೆಯೂ ಜನರು ಹೆಚ್ಚು ಕುತೂಹಲಿಗಳಾಗಿದ್ದಾರೆ. ಈ ಸಿನಿಮಾ ಜನವರಿ 14ಕ್ಕೆ ಬಿಡುಗಡೆ ಆಗಲಿದ್ದು, ಅಪ್ಪಟ ಪ್ರೇಮಕತೆಯುಳ್ಳ ಸಿನಿಮಾ ಇದಾಗಿದೆ. ಜೊತೆಗೆ ಟೈಮ್ ಟ್ರಾವೆಲ್ ಹಾಗೂ ಜ್ಯೋತಿಷ್ಯ ಶಾಸ್ತ್ರದ ಅಂಶಗಳನ್ನು ಸಹ ಒಳಗೊಂಡಿರಲಿದೆ. ಸಿನಿಮಾದಲ್ಲಿ ಪ್ರಭಾಸ್ ಎದುರು ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ.

ನಿಜ ಘಟನೆ ಆಧರಿಸಿದ ಸಿನಿಮಾ
ಎರಡನೇ ಸ್ಥಾನದಲ್ಲಿಯೂ ನಿಜ ಘಟನೆ ಆಧರಿತ ಸಿನಿಮಾ ಶೇರ್ಷಾ ಇದೆ. ಸಿದ್ಧಾರ್ಥ್ ಮಲ್ಹೋತ್ರಾ ನಟನೆಯ ಈ ಸಿನಿಮಾವು ಪರಮವೀರ ಚಕ್ರ ಗೌರವಾನ್ವಿತ ಕ್ಯಾಪ್ಟನ್ ವಿಕ್ರಂ ಬಾತ್ರಾ ಜೀವನ ಆಧರಿಸಿದೆ. ಸಿನಿಮಾವನ್ನು ತಮಿಳಿನ ವಿಷ್ಣುವರ್ಧನ್ ನಿರ್ದೇಶನ ಮಾಡಿದ್ದರು. ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾವು ಸಹ ನೇರವಾಗಿ ಒಟಿಟಿಗೆ ಬಿಡುಗಡೆ ಆಗಿತ್ತು.

ಮೊದಲ ಸ್ಥಾನದಲ್ಲಿ 'ಜೈ ಭೀಮ್'
ಬುಡಕಟ್ಟು ಜನಾಂಗದ ಮೇಲಾಗುತ್ತಿರುವ ಅನ್ಯಾಯ ಹಾಗೂ ಅದರ ವಿರುದ್ಧ ಹೋರಾಡುವ ನೈಜ ಕತೆಯನ್ನು ಹೊಂದಿದ ಸಿನಿಮಾ 'ಜೈ ಭೀಮ್' ಸಿನಿಮಾಕ್ಕೆ ಬಂಡವಾಳ ಹೂಡುವ ಜೊತೆಗೆ ಮುಖ್ಯ ಪಾತ್ರದಲ್ಲಿ ನಟ ಸೂರ್ಯ ನಟಿಸಿದ್ದರು. ಈ ಸಿನಿಮಾ ಬಗ್ಗೆ ದೇಶದ ಜನ ಈ ವರ್ಷ ಅತಿ ಹೆಚ್ಚು ಹುಡುಕಾಡಿದ್ದಾರೆ. 'ಜೈ ಭೀಮ್' ಸಿನಿಮಾವು ನವೆಂಬರ್ 02ರಂದು ನೇರವಾಗಿ ಒಟಿಟಿಗೆ ಬಿಡುಗಡೆ ಆಗಿತ್ತು.