For Quick Alerts
  ALLOW NOTIFICATIONS  
  For Daily Alerts

  ಮಧುರ ಕಂಠದ ಗಾಯಕ ಸೋನು ನಿಗಮ್ ಸವೆಸಿದ ಸಂಗೀತದ ಹಾದಿ

  |

  ಭಾರತ ಸಿನಿಮೋದ್ಯಮ ಕಂಡ ಯಶಸ್ವೀ ಹಿನ್ನೆಲೆ ಗಾಯಕ ಸೋನು ನಿಗಮ್ ಹುಟ್ಟುಹಬ್ಬ ಇಂದು (ಜುಲೈ 30). ಹಿಂದಿ, ಕನ್ನಡ, ತೆಲುಗು, ತಮಿಳು, ಮಲಯಾಳಂ, ಗುಜರಾತಿ, ಅಸ್ಸಾಮಿ, ಬೆಂಗಾಲಿ, ಮರಾಠಿ, ತುಳು, ಒರಿಯಾ, ನೇಪಾಳಿ, ಮೈಥಿಲಿ, ಇಂಗ್ಲೀಷ್ ಇನ್ನೂ ಕೆಲವು ಭಾಷೆಗಳಲ್ಲಿ ಹಿನ್ನೆಲೆ ಗಾಯನ ಮಾಡಿರುವ ಸೋನು ನಿಗಮ್ ಸಂಗೀತ ಪಯಣ ಸುಲಭವಾದದ್ದೇನೂ ಆಗಿರಲಿಲ್ಲ.

  ಸೋನು ನಿಗಮ್, ಹರಿಯಾಣದ ಫರೀದಾಬಾದ್‌ನಲ್ಲಿ ಜುಲೈ 30, 1973ರಲ್ಲಿ ಜನಿಸಿದರು. ಸೋನು ನಿಗಮ್ ತಂದೆ ಹೆಸರು ಅಗಮ್ ಕುಮಾರ್ ನಿಗಂ, ತಾಯಿ ಹೆಸರು ತೀಶಾ ನಿಗಮ್. ತಂದೆ ತಾಯಿ ಇಬ್ಬರೂ ಹಾಡುಗಾರರು. ಮದುವೆಗಳಲ್ಲಿ, ಆರ್ಕೆಸ್ಟ್ರಾಗಳಲ್ಲಿ ಹಾಡುತ್ತಿದ್ದರು. ಎಳವೆಯಿಂದಲೇ ಅಪ್ಪ-ಅಮ್ಮನ ಹಾಡು ಕೇಳಿ ಸಂಗೀತದ ಬಗ್ಗೆ ಆಸಕ್ತಿ ಬೆಳೆಸಿಕೊಂಡರು ಸೋನು ನಿಗಮ್.

  ವಯಸ್ಸು ಇನ್ನೂ ಮೂರಿದ್ದಾಗಲೇ ವೇದಿಕೆ ಏರಿ ಹಾಡು ಹಾಡಲು ಆರಂಭಿಸಿದರು ಸೋನು ನಿಗಮ್. ಅದರಲ್ಲಿಯೂ ಮೊಹಮ್ಮದ್ ರಫಿ ಹಾಡುಗಳೆಂದರೆ ಸೋನು ನಿಗಮ್‌ಗೆ ಬಹಳ ಅಚ್ಚು-ಮೆಚ್ಚು. ಅಪ್ಪ-ಅಮ್ಮನ ಜೊತೆ ಆರ್ಕೆಸ್ಟ್ರಾಗಳಲ್ಲಿ ಹಾಡಲು ಆರಂಭಿಸಿದರು. ಬಹುಬೇಗ ಜನಪ್ರಿಯರೂ ಆದರು. ಜೊತೆಗೆ ಅದೇ ವೇಳೆಯಲ್ಲಿ ತಾವೊಬ್ಬ ಗಾಯಕನಾಗಲೇ ಬೇಕು ಎಂದು ನಿಶ್ಚಯಿಸಿದರು ಸಹ. ಉಸ್ತಾದ್ ಗುಲಾಂ ಮುಸ್ತಾಫಾ ಖಾನ್ ಅವರ ಬಳಿ ಸಂಗೀತವನ್ನು ಅಭ್ಯಾಸ ಮಾಡಿದರು. ಮನೆಯಲ್ಲಿ ಅಪ್ಪ-ಅಮ್ಮನ ಜೊತೆ ಸೇರಿ ರಿಯಾಜ್ ನಡೆಯುತ್ತಲೇ ಇತ್ತು. ತಾವೊಬ್ಬ ಒಳ್ಳೆಯ ಸಂಗೀತಗಾರನಾಗಿ ರೂಪುಗೊಳ್ಳಲು ನನ್ನ ತಾಯಿಯ ಶ್ರಮ ಹೆಚ್ಚಿದೆ ಎಂದು ಸೋನು ನಿಗಮ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

  ಬಾಲನಟನಾಗಿ ಕೆಲವು ಸಿನಿಮಾಗಳಲ್ಲಿ ನಟನೆ

  ಬಾಲನಟನಾಗಿ ಕೆಲವು ಸಿನಿಮಾಗಳಲ್ಲಿ ನಟನೆ

  ಸಣ್ಣ ವಯಸ್ಸಿನಲ್ಲಿಯೇ ವೇದಿಕೆ ಏರಿದ್ದ ಸೋನು ನಿಗಮ್ ಹಲವರ ಗಮನ ಸೆಳೆದಿದ್ದರು ಹಾಗಾಗಿ ಆಗಲೇ ನಿಗಮ್‌ಗೆ ಹಲವು ಸಿನಿಮಾ ಅವಕಾಶಗಳು ಸಹ ದೊರೆತಿದ್ದವು. 1980ರ ಸಮಯದಲ್ಲಿ ಹಲವು ಸಿನಿಮಾಗಳಲ್ಲಿ ಬಾಲನಟನಾಗಿ ಸೋನು ನಿಗಮ್ ಕಾಣಿಸಿಕೊಂಡರು. ಆದರೆ ಸೋನು ನಿಗಮ್‌ಗೆ ಚಿತ್ರೀಕರಣದ ಸೆಟ್‌ ಇಷ್ಟವೇ ಆಗುತ್ತಿರಲಿಲ್ಲವಂತೆ. ಮೇಕಪ್ ಹಾಕಿಕೊಳ್ಳುವುದು, ಬಿಸಿಲಿನಲ್ಲಿ ಶಾಟ್‌ಗಾಗಿ ಕಾಯುವುದು, ಸಂಭಾಷಣೆ ಉರು ಹೊಡೆಯುವುದು, ಸರಿಯಾಗಿ ನಟಿಸದಿದ್ದರೆ ಬೈಗುಳ ಇವೆಲ್ಲವೂ ಬಹಳ ಬೇಸರ ತರುತ್ತಿತ್ತಂತೆ. ಆದರೂ ಪೋಷಕರ ಒತ್ತಾಯದಿಂದ ಕೆಲ ವರ್ಷ ಬಾಲನಟನಾಗಿ ಸೋನು ನಿಗಮ್ ನಟಿಸಿದರು.

  ಅಳುತ್ತಾ ಸ್ಟುಡಿಯೋಗಳಿಂದ ಹೊರಬರುತ್ತಿದ್ದರು

  ಅಳುತ್ತಾ ಸ್ಟುಡಿಯೋಗಳಿಂದ ಹೊರಬರುತ್ತಿದ್ದರು

  ಬೆಳೆಯುತ್ತ-ಬೆಳೆಯುತ್ತ ಸೋನು ನಿಗಮ್‌, ತಾವು ಹಿನ್ನೆಲೆ ಗಾಯಕನೇ ಆಗಬೇಕು ಎಂದು ಬಲವಾಗಿ ನಿಶ್ಚಯಿಸಿ ಬಿಟ್ಟಿದ್ದರು. ಇದಕ್ಕೆ ಪೋಷಕರ ಬೆಂಬಲವೂ ದೊಡ್ಡ ಮಟ್ಟದಲ್ಲಿಯೇ ದೊರಕಿತು. ಮುಂಬೈನಲ್ಲಿ ಅವಕಾಶಕ್ಕಾಗಿ ಅಲೆದಾಡಲು ಆರಂಭಿಸಿದಾಗ ಆರಂಭದ ಸಮಯದಲ್ಲಿ ಸ್ಟುಡಿಯೋಗಳಿಂದ ಕಣ್ಣೀರು ಹಾಕಿಕೊಂಡ ಹೊರಗೆ ಬಂದ ಸಂದರ್ಭಗಳನ್ನು ಸೋನು ನಿಗಮ್ ಹಿಂದೊಮ್ಮೆ ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಿದ್ದರು. ಸೋನು ನಿಗಮ್ ಹಾಡಿದ ಹಾಡುಗಳನ್ನು ಸಂಗೀತ ನಿರ್ದೇಶಕರು ಬೇರೊಬ್ಬ ಗಾಯಕನಿಂದ ಹಾಡಿಸಿಬಿಡುತ್ತಿದ್ದರಂತೆ. ಹಣ ಪಡೆಯದೆ ಹಾಡುತ್ತೇನೆ ಎಂದು ಸಹ ಸೋನು ನಿಗಮ್ ಕೇಳಿಕೊಳ್ಳುತ್ತಿದ್ದರಂತೆ. ಹಲವು ಬಾರಿ ಟ್ರ್ಯಾಕ್ ಹಾಡುಗಳನ್ನು ಹಣ ಪಡೆಯದೇ ಹಾಡಿ ಬಂದಿದ್ದರು. ದೊಡ್ಡ ಸಂಗೀತ ನಿರ್ದೇಶಕರೊಬ್ಬರು ಬಹಳ ಕೆಟ್ಟದಾಗಿ ಬೈದಿದ್ದನ್ನೂ ಇನ್ನೂ ನೆನಪಿಟ್ಟುಕೊಂಡಿದ್ದಾರೆ ಸೋನು ನಿಗಮ್.

  ಮೊದಲ ಸಿನಿಮಾ ಬಿಡುಗಡೆ ಆಗಲೇ ಇಲ್ಲ

  ಮೊದಲ ಸಿನಿಮಾ ಬಿಡುಗಡೆ ಆಗಲೇ ಇಲ್ಲ

  1992 ರಲ್ಲಿ ಸೋನು ನಿಗಮ್‌ಗೆ 'ಜಾನಮ್' ಎಂಬ ಸಿನಿಮಾದಲ್ಲಿ ಹಾಡುವ ಅವಕಾಶ ದೊರೆಯಿತು. ಹಾಡು ರೆಕಾರ್ಡ್ ಸಹ ಆಯಿತು ಆದರೆ ಅವರ ದುರಾದೃಷ್ಟಕ್ಕೆ 'ಜಾನಮ್' ಸಿನಿಮಾ ಬಿಡುಗಡೆ ಆಗಲೇ ಇಲ್ಲ. ಆ ನಂತರ 1993ರಲ್ಲಿ 'ಆಜಾ ಮೇರಿ ಜಾನ್' ಸಿನಿಮಾದ 'ಓ ಆಸ್ಮಾನ್ ವಾಲೆ' ಹಾಡು ಸೋನು ನಿಗಮ್ ಹಾಡಿದರು ಆ ಸಿನಿಮಾ ಬಿಡುಗಡೆ ಆಯ್ತು. ಆ ನಂತರ ಆಗಿನ (ಈಗಲೂ) ನಂಬರ್ ಒನ್ ಸಂಗೀತ ಸಂಸ್ಥೆಯಾಗಿದ್ದ ಟಿ-ಸೀರೀಸ್‌ನ ಸಂಸ್ಥಾಪಕ ಗುಲ್ಷನ್ ಕುಮಾರ್‌ ಅವರಿಗೆ ಸೋನು ನಿಗಮ್ ಧ್ವನಿ ಬಹಳ ಹಿಡಿಸಿತ್ತು. ಸೋನು ನಿಗಮ್‌ ರಿಂದ ಕೆಲವು ಕ್ಯಾಸೆಟ್‌ಗಳಿಗೆ ಗುಲ್ಷನ್ ಕುಮಾರ್ ಹಾಡಿಸಿದರು. ಆ ಕ್ಯಾಸೆಟ್‌ಗಳು ಬಹಳ ಹಿಟ್ ಆದವು. ಸೋನು ನಿಗಮ್‌ಗೆ ಒಳ್ಳೆಯ ಗುರುತು ಹಾಗೂ ಹಣ ಎರಡೂ ತಂದುಕೊಟ್ಟವು.

  'ಸಾರೆಗಮಪ' ದಿಂದ ಬಹುದೊಡ್ಡ ಖ್ಯಾತಿ

  'ಸಾರೆಗಮಪ' ದಿಂದ ಬಹುದೊಡ್ಡ ಖ್ಯಾತಿ

  ಆ ನಂತರ ಮೊದಲ ಬಾರಿಗೆ 'ಸಾರೆಗಮಪ' ಹೆಸರಿನ ಶೋ ಅನ್ನು ಜೀ ನಲ್ಲಿ ಸೋನು ನಿಗಮ್ ಪ್ರಾರಂಭಿಸಿದರು. ಆ ಶೋ ಅನ್ನು ಅವರೇ ನಿರೂಪಣೆ ಮಾಡಿದರು. ಶೋಗೆ ಆಗಿನ ಕಾಲದ ಬಹುದೊಡ್ಡ ಸಂಗೀತಗಾರರು ಅತಿಥಿಗಳಾಗಿ ಆಗಮಿಸುತ್ತಿದ್ದರು. ಅದೇ ಶೋನಿಂದಲೇ ಈಗಿನ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಬೆಳಕಿಗೆ ಬಂದದ್ದು, ಕನ್ನಡದ ಖ್ಯಾತ ಗಾಯಕ ವಿಜಯಪ್ರಕಾಶ್ ಸಹ ಅದೇ ಶೋನಲ್ಲಿ ಹಾಡಿ ಗಮನ ಸೆಳೆದಿದ್ದರು. ಆ ಶೋನಿಂದಾಗಿ ಭಾರತದಾದ್ಯಂತ ಸೋನು ನಿಗಮ್ ಹೆಸರು ಮನೆ ಮಾತಾಯಿತು. ಆ ನಂತರ ಕೇವಲ ಯಶಸ್ಸನ್ನಷ್ಟೆ ಸೋನು ನಿಗಮ್ ನೋಡಿದರು. ಸತತ ಮೂರು ದಶಕಗಳ ಕಾಲ ಸೋನು ನಿಗಮ್ ಭಾರತದ ನಂಬರ್ 1 ಹಿನ್ನೆಲೆ ಗಾಯಕರಾಗಿ ಗುರುತಿಸಿಕೊಂಡರು. ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಶಾರುಖ್, ಸಲ್ಮಾನ್, ಅಮೀರ್ ಖಾನ್, ಸನ್ನಿ ಡಿಯೋಲ್, ಶಮ್ಮಿ ಕಪೂರ್ ಅವರಿಗೂ ಹಿನ್ನೆಲೆ ಗಾಯನ ಮಾಡಿದರು ಸೋನು ನಿಗಮ್.

  ಕನ್ನಡದಲ್ಲಿ ಮೊದಲ ಹಾಡು

  ಕನ್ನಡದಲ್ಲಿ ಮೊದಲ ಹಾಡು

  ಸೋನು ನಿಗಮ್ ಕನ್ನಡದಲ್ಲಿ ಮೊದಲ ಹಾಡು ಹಾಡಿದ್ದು 1996ರಲ್ಲಿ ವಿಷ್ಣುವರ್ಧನ್ ನಟಿಸಿರುವ 'ಜೀವನದಿ' ಸಿನಿಮಾಕ್ಕಾಗಿ. ಆ ಸಿನಿಮಾದಲ್ಲಿನ ದುಖಃದ ಹಾಡು, ''ಎಲ್ಲೊ ಯಾರೊ ಹೇಗೋ'' ಹಾಡನ್ನು ಸೋನು ನಿಗಮ್ ಹಾಡಿದ್ದರು. ಆ ನಂತರ ಕನ್ನಡಕ್ಕೂ ಸೋನು ನಿಗಮ್‌ಗೂ ಗಟ್ಟಿ ಬಂಧವೇ ಏರ್ಪಟ್ಟಿತು. 'ಮಜ್ನು' ಸಿನಿಮಾದ 'ಚೆಲುವೆ ಏಕೆ ಬಂದೆ, ನನ್ನ ಕಣ್ಣ ಮುಂದೆ', 'ಸ್ನೇಹಲೋಕ' ಸಿನಿಮಾದ, 'ಟೈಟಾನಿಕ್ ಹೀರೋಯಿನ್ ನನ್ನ ಚೆಲುವೆ', 'ಗಟ್ಟಿಮೇಳ' ಸಿನಿಮಾದ 'ಹಂಸವೇ ಹಂಸವೇ ಹಾಡು ಬಾ' ಹೀಗೆ ಲೆಕ್ಕಸಿಗದಷ್ಟು ಹಿಟ್ ಹಾಡುಗಳನ್ನು 'ಮುಂಗಾರು ಮಳೆ' ಸಿನಿಮಾಕ್ಕೆ ಮುನ್ನವೇ ಸೋನು ನಿಗಮ್ ಕನ್ನಡಕ್ಕೆ ನೀಡಿದ್ದರು. 'ಮುಂಗಾರು ಮಳೆ' ಸಿನಿಮಾದ ಬಳಿಕವಂತೂ ಸೋನು ನಿಗಮ್ ಕನ್ನಡದ್ದೇ ಗಾಯಕರಾಗಿ ಬದಲಾಗಿಬಿಡುವಷ್ಟು ಹಾಡುಗಳನ್ನು ಕನ್ನಡಕ್ಕಾಗಿ ಹಾಡಿದರು.

  ಕನ್ನಡದ ಬಗ್ಗೆ ಸೋನು ನಿಗಮ್‌ಗೆ ವಿಶೇಷ ಪ್ರೀತಿ

  ಕನ್ನಡದ ಬಗ್ಗೆ ಸೋನು ನಿಗಮ್‌ಗೆ ವಿಶೇಷ ಪ್ರೀತಿ

  ಕನ್ನಡದ ಬಗ್ಗೆ ವಿಶೇಷ ಪ್ರೇಮವನ್ನು ಹೊಂದಿರುವ ಸೋನು ನಿಗಮ್ ಹಲವು ಸಂದರ್ಶನಗಳಲ್ಲಿ ಕನ್ನಡ ಹಾಡುಗಳ ಬಗ್ಗೆ, ಇಲ್ಲಿನ ಜನರ ಪ್ರೀತಿಯ ಬಗ್ಗೆ ಗೌರವದ ಮಾತುಗಳನ್ನಾಡಿದ್ದಾರೆ. ''ಬೆಂಗಳೂರು ನನ್ನ ಎರಡನೇಯ ಮನೆ'' ಎಂದಿರುವ ಸೋನು ನಿಗಮ್. ''ಹಿಂದಿನ ಜನ್ಮದಲ್ಲಿ ಕನ್ನಡಿಗನಾಗಿ ಹುಟ್ಟಿದ್ದೆ ಎನಿಸುತ್ತದೆ, ಮುಂದಿನ ಜನ್ಮದಲ್ಲಿ ಕನ್ನಡಿಗನಾಗಿ ಹುಟ್ಟಬೇಕೆಂದು ಕೋರಿಕೊಳ್ಳುತ್ತೇನೆ'' ಎಂದು ತಮ್ಮ ಕನ್ನಡ ಪ್ರೀತಿ ಮೆರೆದಿದ್ದರು. ವಿಶ್ವದ ಹಲವು ದೇಶಗಳಲ್ಲಿ ಸಂಗೀತ ಶೋಗಳನ್ನು ನೀಡಿರುವ ಸೋನು ನಿಗಮ್ ಎಲ್ಲಿಯೇ ಹೋದರು ಕನ್ನಡ ಹಾಡು ಹಾಡುವುದು ಮರೆಯುವುದಿಲ್ಲ.

  ನಾಯಕ ನಟರಾಗಿಯೂ ಅಭಿನಯ

  ನಾಯಕ ನಟರಾಗಿಯೂ ಅಭಿನಯ

  ಸೋನು ನಿಗಮ್ ಹಿನ್ನೆಲೆ ಗಾಯಕರಾಗಿ ಮಾತ್ರವೇ ಅಲ್ಲ ಸಂಗೀತ ನಿರ್ದೇಶಕರಾಗಿಯೂ ಕೆಲವು ಸಿನಿಮಾಗಳಿಗೆ ಕೆಲಸ ಮಾಡಿದರು. ಆದರೆ ಸಂಗೀತ ನಿರ್ದೇಶನ ಅವರ ಕೈ ಹಿಡಿಯಲಿಲ್ಲ. ಕೇವಲ ನಾಲ್ಕು ಸಿನಿಮಾಗಳಿಗಷ್ಟೆ ಅವರು ಸಂಗೀತ ನಿರ್ದೇಶನ ಮಾಡಿದರು. ಬಾಲನಟನಾಗಿ ಮಿಂಚಿದ್ದ ಸೋನು ನಿಗಮ್ ನಾಯಕ ನಟನಾಗಿಯೂ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಆದರೆ ಅಲ್ಲಿಯೂ ಅವರಿಗೆ ಅದೃಷ್ಟ ಕೈಹಿಡಿಯಲಿಲ್ಲ ಕೇವಲ ಐದು ಸಿನಿಮಾಗಳಲ್ಲಿ ಮಾತ್ರವೇ ನಾಯಕ ನಟನಾಗಿ ಸೋನು ನಿಗಮ್ ನಟಿಸಿದರು.

  ಇತ್ತೀಚೆಗೆ ಅವಕಾಶಗಳು ತುಸು ಕಡಿಮೆ ಆಗಿವೆ

  ಇತ್ತೀಚೆಗೆ ಅವಕಾಶಗಳು ತುಸು ಕಡಿಮೆ ಆಗಿವೆ

  ಹಲವು ಹೊಸ ಗಾಯಕರು ಉದ್ಯಮಕ್ಕೆ ಕಾಲಿಟ್ಟಿರುವ ಈ ಪ್ರಸ್ತುತ ಸಂದರ್ಭದಲ್ಲಿ ಸೋನು ನಿಗಮ್‌ಗೆ ಮುಂಚೆಗೆ ಹೋಲಿಸಿದರೆ ಈಗ ಸ್ವಲ್ಪ ಅವಕಾಶ ಕಡಿಮೆ ಆಗಿದೆ ಹಾಗೆಂದು ಅವರು ಕೆಲಸವಿಲ್ಲದೆ ಇಲ್ಲ ಈಗಲೂ ಹಾಡುಗಳನ್ನು ರೆಕಾರ್ಡ್ ಮಾಡುತ್ತಲೇ ಇದ್ದಾರೆ. ಆದರೆ ಇತ್ತೀಚೆಗೆ ತುಸು ವಿವಾದಗಳಿಂದಲೂ ಸೋನು ನಿಗಮ್ ಸುದ್ದಿಯಾಗುತ್ತಿದ್ದಾರೆ. ವಿವಾದವೂ ನಿಗಮ್‌ಗೆ ಹೊಸತೇನೂ ಅಲ್ಲ ಆಗಾಗ್ಗೆ ಸಹ ಗಾಯಕರೊಡನೆ ಕಿತ್ತಾಟದಿಂದಲೂ ಸೋನು ನಿಗಮ್‌ ಮುಂಚೆಯೂ ಸುದ್ದಿಯಾಗುತ್ತಿದ್ದರು.

  ವಿವಾದಗಳೂ ಸಹ ಅಂಟಿಕೊಂಡಿವೆ

  ವಿವಾದಗಳೂ ಸಹ ಅಂಟಿಕೊಂಡಿವೆ

  ಆಜಾನ್ ಕುರಿತ ಅವರ ಸರಣಿ ಟ್ವೀಟ್‌ಗಳು ಬಹಳ ವಿವಾದಕ್ಕೆ ಕಾರಣವಾಗಿದ್ದವು, ಸೋನು ನಿಗಮ್ ತಲೆ ಬೋಳಿಸಿದವರಿಗೆ ಬಹುಮಾನ ನೀಡುವುದಾಗಿ ಮೌಲ್ವಿಯೊಬ್ಬರು ಘೋಷಿಸಿದರು. ಅದಕ್ಕೆ ಪ್ರತಿಕ್ರಿಯೆಯಾಗಿ ಸೋನು ನಿಗಮ್ ತಾವೇ ಹೋಗಿ ಮುಸ್ಲಿಂ ವ್ಯಕ್ತಿಯೊಬ್ಬರಿಂದಲೇ ತಲೆ ಬೋಳಿಸಿಕೊಂಡು ಬಂದಿದ್ದರು. ಸುಶಾಂತ್ ಸಿಂಗ್ ರಜಪೂತ್ ನಿಧನವಾದ ಬಳಿಕ ಸಂಗೀತ ಉದ್ಯಮದಲ್ಲಿಯೂ ಸ್ವಜನಪಕ್ಷಪಾತ ಇದೆ ಎಂದು, ಮ್ಯೂಸಿಕ್ ಮಾಫಿಯಾ ಇದೆ ಎಂದು ಹೇಳಿದ್ದರು. ಆ ನಂತರ ಟಿ-ಸೀರೀಸ್‌ನ ಈಗಿನ ಮಾಲೀಕ ಭೂಷಣ್ ಕುಮಾರ್ ವಿರುದ್ಧವೂ ಸರಣಿ ಆರೋಪಗಳನ್ನು ಮಾಡಿದ್ದರು. ಪ್ರಸ್ತುತ ತಮ್ಮ ಬಹು ಸಮಯವನ್ನು ದುಬೈನಲ್ಲಿ ಕಳೆಯುವ ಸೋನು ನಿಗಮ್ ತಮ್ಮ ಕುಟುಂಬದ ವಾಸ್ತ್ಯವನ್ನು ಅಲ್ಲಿಗೆ ಬದಲಾಯಿಸಿದ್ದಾರೆ.

  English summary
  Singer Sonu Nigam's childhood, struggle, fame, controversy, life and many other information.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X