twitter
    For Quick Alerts
    ALLOW NOTIFICATIONS  
    For Daily Alerts

    ವಿಷ್ಣುದಾದಾಗೆ ಲೈಫ್ ಕೊಟ್ಟ 'ನಾಗರಹಾವು' ಸಿನಿಮಾ ಬಗ್ಗೆ ನಿಮಗೆಷ್ಟು ಗೊತ್ತು?

    |

    ಸೂಪರ್ ಹಿಟ್ ಸಿನಿಮಾಗಳ ಹಿಂದೆ ಅಷ್ಟೇ ಸ್ವಾರಸ್ಯಕರ ಸಂಗತಿಗಳು ಇರುತ್ತವೆ. ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ನಾಗರಹಾವು' ಚಿತ್ರದ ವಿಚಾರದಲ್ಲೂ ಹಲವು ಅಚ್ಚರಿಯ ಸಂಗತಿಗಳಿವೆ. ಯಾರ ಕಾದಂಬರಿಗಳನ್ನು ಆಧರಿಸಿ ಪುಟ್ಟಣ್ಣ ಅದ್ಭುತ ಸಿನಿಮಾ ಕಟ್ಟಿಕೊಟ್ಟಿದ್ದರೋ ಆ ಕಾದಂಬರಿಕಾರನೇ ಸಿನಿಮಾ ನೋಡಿ "ಇದು ನಾಗರಹಾವು ಅಲ್ಲ, ಕೇರೆ ಹಾವು" ಎಂದುಬಿಟ್ಟಿದ್ದರು.

    'ನಾಗರಹಾವು' ಕಾಲೇಜಿನ ತ್ರಿಕೋನ ಪ್ರೇಮಕಥೆ. ಅದಕ್ಕೆ ಒಂದಷ್ಟು ಭಾವನಾತ್ಮಕ ವಿಷಯಗಳನ್ನ ಸೇರಿಸಿ, ಮೇಷ್ಟ್ರು ಮತ್ತು ಶಿಷ್ಯನ ಬಾಂಧವ್ಯವನ್ನು ಜೊತೆಯಾಗಿಸಿ ಪುಟ್ಟಣ್ಣ ಸಿನಿಮಾ ಕಟ್ಟಿಕೊಟ್ಟಿದ್ದರು. ತಾನು ಪ್ರೀತಿಸಿದ ಹುಡುಗಿಯನ್ನ ಪಡೆಯೋಕೆ ಕೋಪಿಷ್ಠ ರಾಮಾಚಾರಿ ಏನೆಲ್ಲಾ ಮಾಡ್ತಾನೆ ಎನ್ನುವುದನ್ನು ಸೊಗಸಾಗಿ ತೆರೆಗೆ ತರಲಾಗಿತ್ತು. ಚಿ. ಉದಯ್​ ಶಂಕರ್ ಸಂಭಾಷಣೆ ಅದಕ್ಕೆ ಮತ್ತಷ್ಟು ಬಲ ತುಂಬಿತ್ತು.

    ಕನ್ನಡ ಚಿತ್ರರಂಗದ 'ನಾಗರಹಾವು' ಹೆಡೆ ಎತ್ತಿ ಇಂದಿಗೆ 50 ವರುಷ!ಕನ್ನಡ ಚಿತ್ರರಂಗದ 'ನಾಗರಹಾವು' ಹೆಡೆ ಎತ್ತಿ ಇಂದಿಗೆ 50 ವರುಷ!

    1972 ಡಿಸೆಂಬರ್ 29ರಂದು 'ನಾಗರಹಾವು' ಸಿನಿಮಾ ತೆರೆಕಂಡಿತ್ತು. ಆದರೆ ಯಾರು ಬರೆದ ಕಾದಂಬರಿ ಆಧರಿಸಿ ಪುಟ್ಟಣ್ಣ ಸಿನಿಮಾ ಮಾಡಿದ್ದರೋ ಅದೇ ತಾ. ರಾ ಸುಬ್ಬರಾಯರು "ಇದು ನಾಗರಹಾವು ಅಲ್ಲ ಕೇರೆ ಹಾವು" ಎಂದುಬಿಟ್ಟಿದ್ದರು. ಆದರೆ ಸಿನಿಮಾ ಯಶಸ್ಸು ಸ್ವತಃ ಸುಬ್ಬರಾಯರಿಗೆ ಅಚ್ಚರಿ ತಂದಿತ್ತು. 'ಸಾಕ್ಷಾತ್ಕಾರ' ಸಿನಿಮಾ ನಂತರ ಒಂದು ತಮಿಳು, ತೆಲುಗು ಸಿನಿಮಾ ಮಾಡಿ ಬಂದ ಪುಟ್ಟಣ್ಣ, 'ನಾಗರಹಾವು' ಚಿತ್ರಕ್ಕೆ ಕೈ ಹಾಕಿದ್ದರು. ಒಬ್ಬ ಹೊಸ ನಟನನ್ನು ಚಿತ್ರರಂಗಕ್ಕೆ ಪರಿಚಯಿಸುವ ಸಾಹಸ ಮಾಡಿದ್ದರು. ಅದರಲ್ಲಿ ಅವರು ಯಶಸ್ವಿ ಆಗಿದ್ದು ಈಗ ಇತಿಹಾಸ.

    'ಶೋಲೆ' ಚಿತ್ರದಲ್ಲಿ ಬಿಗ್‌ಬಿ ಆಂಗ್ರಿ ಯಂಗ್‌ಮ್ಯಾನ್ ಆಗಿ ಅಬ್ಬರಿಸೋಕು ಮೊದ್ಲೆ 'ರಾಮಾಚಾರಿ' ಎನ್ನುವ ಬೆಂಕಿ ಚೆಂಡು ಬೆಳ್ಳಿ ಪರದೆಗೆ ತೂರಿ ಬಂದಿತ್ತು. ಅಲ್ಲಿವರೆಗೂ ಮಹಿಳಾ ಪ್ರಧಾನ ಸಿನಿಮಾಗಳನ್ನೇ ಹೆಚ್ಚು ಮಾಡಿದ್ದ ಪುಟ್ಟಣ್ಣ, ಈ ಚಿತ್ರದಲ್ಲಿ ನಾಗರಹಾವಿನಂತೆ ರೋಷ ಆವೇಶ ಇರುವ ರಾಮಾಚಾರಿ ಪಾತ್ರವನ್ನು ರೂಪಿಸಿ ಗೆದ್ದಿದ್ದರು.

    'ಕೇರೆ ಹಾವು' ಎಂದಿದ್ದ ಸುಬ್ಬರಾಯರು

    'ಕೇರೆ ಹಾವು' ಎಂದಿದ್ದ ಸುಬ್ಬರಾಯರು

    ತ. ರಾ ಸುಬ್ಬರಾಯರು ಬರೆದ ಸರ್ಪ ಮತ್ಸರ, ಒಂದು ಗಂಡು ಎರಡು ಹೆಣ್ಣು ಮತ್ತು ನಾಗರಹಾವು ಎನ್ನುವ 3 ಕಾದಂಬರಿಗಳನ್ನು ಸೇರಿಸಿ ಪುಟ್ಟಣ್ಣ 'ನಾಗರಹಾವು' ಚಿತ್ರಕ್ಕೆ ಕಥೆ ಹೆಣೆದಿದ್ದರು. ಆದರೆ ಸಿನಿಮಾ ರಿಲೀಸ್ ಆದ ಮರುದಿನವೇ ಅದೇ ಸುಬ್ಬರಾಯರು "ಇದು ನಾಗರಹಾವು ಅಲ್ಲ ಕೇರೆ ಹಾವು" ಎಂದು ಬಾಂಬ್ ಸಿಡಿಸಿದ್ದರು. ಇದನ್ನು ಕೇಳಿ ಚಿತ್ರರಂಗಕ್ಕೆ ಆಘಾತ ಕಾದಿತ್ತು. ಸಿನಿಮಾ ಭವಿಷ್ಯ ಏನಾಗುತ್ತೋ ಎಂದು ಭಯಪಟ್ಟಿದ್ದರು. ಆದರೆ ಕನ್ನಡ ಸಿನಿರಸಿಕರು ಕೈಬಿಡಲಿಲ್ಲ. ಸಿನಿಮಾ ಸೂಪರ್ ಹಿಟ್ ಆಯಿತು. ಆದರೆ ಅದೇ ಚಿತ್ರದ ಕಥೆಗಾಗಿ ಆ ವರ್ಷ ಸುಬ್ಬರಾಯರಿಗೆ ಅತ್ಯತ್ತಮ ಕಥೆ ಪ್ರಶಸ್ತಿ ಸಿಕ್ಕಿತ್ತು.

    ಮೊದಲ ಆಂಗ್ರಿಯಂಗ್‌ ಮ್ಯಾನ್ ವಿಷ್ಣು

    ಮೊದಲ ಆಂಗ್ರಿಯಂಗ್‌ ಮ್ಯಾನ್ ವಿಷ್ಣು

    ಅದಾಗಲೇ 'ವಂಶವೃಕ್ಷ' ಚಿತ್ರದಲ್ಲಿ ವಿಷ್ಣುವರ್ಧನ್ ನಟಿಸಿದ್ದರು. ಅವರ ಮೂಲ ಹೆಸರು ಸಂಪತ್ ಕುಮಾರ್. ಆ ಚಿತ್ರದ ಟೈಟಲ್‌ ಕಾರ್ಡ್‌ನಲ್ಲಿ ಕುಮಾರ್ ಎಂದು ಬರೆಯಲಾಗಿತ್ತು. ಸಂಪತ್ ಕುಮಾರ್, ವಿಷ್ಣುವರ್ಧನ್​​ ಆಗಿ 'ನಾಗರಹಾವು' ಚಿತ್ರದ ಮೂಲಕ ಚಿತ್ರರಂಗಕ್ಕೆ ಹೊಸದಾಗಿ ಪರಿಚಿತರಾಗಿದ್ದರು. ಅದು ಬೆಂಕಿ ಚೆಂಡಿನಂತಹ ಯುವಕ ರಾಮಾಚಾರಿಯ ಪಾತ್ರ. ರೋಷ ಉಕ್ಕುವ ಕಣ್ಣುಗಳು, ಗಡಸು ಮಾತು, ಇಡೀ ಸಿನಿಮಾವನ್ನು ತಮ್ಮ ಹೆಗಲಮೇಲೆ ಹೊತ್ತು ವಿಷ್ಣುವರ್ಧನ್ ಅಭಿನಯಸಿದ್ದರು. ದ್ವೇಷ ರೋಷ ಅಂದ್ರೆ ರಾಮಾಚಾರಿ ಎನ್ನುವ ಮಟ್ಟಕ್ಕೆ ಆ ಪಾತ್ರ ಚಿತ್ರರಸಿಕರಲ್ಲಿ ಮನೆ ಮಾಡಿತ್ತು. ಆಡಿಷನ್ ವೇಳೆಯೇ ಸಂಪತ್‌ಕುಮಾರ್ ಹಾವ ಭಾವ, ಬಾಡಿ‌ ಲ್ಯಾಂಗ್ವೇಜ್, ಕೂದಲು ಬಾಚುವ ರೀತಿ, ನಡೆಯುವ ಭಂಗಿ ನೋಡಿ ಪುಟ್ಟಣ್ಣ 'ನನ್ನ ರಾಮಾಚಾರಿ ಸಿಕ್ಕಿಬಿಟ್ಟ' ಎಂದಿದ್ದರು.

    3 ಚಿತ್ರಮಂದಿರಗಳಲ್ಲಿ ಶತದಿನೋತ್ಸವ

    3 ಚಿತ್ರಮಂದಿರಗಳಲ್ಲಿ ಶತದಿನೋತ್ಸವ

    'ಬೇಡರ ಕಣ್ಣಪ್ಪ' ಚಿತ್ರದಲ್ಲಿ ಅಣ್ಣಾವ್ರನ್ನು ಬಿಟ್ಟರೆ ಹೊಸ ನಟನೊಬ್ಬರ ಚಿತ್ರಕ್ಕೆ ಆ ಮಟ್ಟಿಗಿನ ಪ್ರತಿಕ್ರಿಯೆ ಸಿಕ್ಕಿದ್ದು 'ನಾಗರಹಾವು' ಚಿತ್ರದಲ್ಲಿ ವಿಷ್ಣುವರ್ಧನ್ ಅವರಿಗೆ ಮಾತ್ರ. ಸಿನಿಮಾ 3 ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಆಚರಿಸಿ ದಾಖಲೆ ಬರೆದಿತ್ತು. ಅತ್ಯುತ್ತಮ ನಟ, ನಟಿ, ಚಿತ್ರಕಥೆ ಸೇರಿದಂತೆ 8 ವಿಭಾಗಗಳಲ್ಲಿ ಆ ವರ್ಷ 'ನಾಗರಹಾವು' ಚಿತ್ರಕ್ಕೆ ರಾಜ್ಯಪ್ರಶಸ್ತಿ ಸಿಕ್ಕಿತ್ತು. 2 ಫಿಲ್ಮ್‌ಫೇರ್ ಪ್ರಶಸ್ತಿ ಕೂಡ ಅರಸಿ ಬಂದಿತ್ತು.

    ಸ್ಲೋ ಮೋಶನ್ ಕ್ಯಾಮರಾ ಬಳಕೆ

    ಸ್ಲೋ ಮೋಶನ್ ಕ್ಯಾಮರಾ ಬಳಕೆ

    'ನಾಗರಹಾವು' ಕನ್ನಡ ಚಿತ್ರರಂಗದಲ್ಲಿ ಹಲವು ಮೊದಲುಗಳಿಗೆ ಸಾಕ್ಷಿ ಆಗಿತ್ತು. ಸ್ಲೋ ಮೋಶನ್ ಕ್ಯಾಮರಾವನ್ನು ಪುಟ್ಟಣ್ಣ ಮೊದಲ ಬಾರಿಗೆ ಬಳಸಿ ಚಿತ್ರೀಕರಣ ನಡೆಸಿದ್ದರು. 'ಬಾರೇ ಬಾರೇ' ಹಾಡಿನಲ್ಲಿ ಈ ಕ್ಯಾಮರಾ ಚಮತ್ಕಾರ ನೋಡಬಹುದು. ಇನ್ನು ಅಲ್ಲಿವರೆಗೆ ಚಿತ್ರದುರ್ಗದ ಕೋಟೆಯನ್ನು ಅಷ್ಟು ಸೊಗಸಾಗಿ ಯಾರು ಚಿತ್ರಿಸಿರಲಿಲ್ಲ. ಪುಟ್ಟಣ್ಣ ತಮ್ಮ ಚಿತ್ರಕ್ಕೆ ಹೊಂದಿಕೆ ಆಗುವಂತಹ ಲೊಕೇಶನ್‌ಗಳ ಬಗ್ಗೆ ಬಹಳ ತಲೆ ಕೆಡಿಸಿಕೊಳ್ಳುತ್ತಿದ್ದರು. ನಾಗರಹಾವು ಸಿನಿಮಾ ನಂತರ ದುರ್ಗದ ಕೋಟೆಗೆ ಭೇಟಿ ಕೊಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ಕ್ಯಾಮರಾಮನ್ ಚಿಟ್ಟಿಬಾಬು ಮತ್ತು ಪುಟ್ಟಣ್ಣ ಒಂದೊಂದು ಹಾಡನ್ನು ಸೆರೆಹಿಡಿಯಲು ಒಂದೊಂದು ರೀತಿ ಪ್ರಯೋಗಳನ್ನು ಮಾಡಿದ್ದರು.

    'ನಾಗರಹಾವು' ಆಲ್ಬಮ್ ಹಿಟ್

    'ನಾಗರಹಾವು' ಆಲ್ಬಮ್ ಹಿಟ್

    ಮಾಸ್ಟರ್‌ಪೀಸ್ 'ನಾಗರಹಾವು' ಸಿನಿಮಾ ಬಗ್ಗೆ ಮಾತನಾಡುವಾಗ ಚಿತ್ರದ ಹಾಡುಗಳ ಬಗ್ಗೆ ಹೇಳಲೇಬೇಕು. ಚಿತ್ರದಲ್ಲಿ 6 ಹಾಡುಗಳಿದ್ದವು. ಎಲ್ಲವೂ ಒಂದಕ್ಕಿಂತ ಒಂದು ವಿಭಿನ್ನ. ರಾಮಾಚಾರಿಯ ಸ್ವಭಾವವನ್ನು ಪ್ರತಿಬಿಂಬಿಸುವ "ಹಾವಿನ ದ್ವೇಷ ಹನ್ನೆರಡು ವರುಷ" ಎಸ್ ಪಿ ಬಾಲಸುಬ್ರಮಣ್ಯಂ ಅವರ ಕಂಠ ಸಿರಿಯಲ್ಲಿ ಜನ ಇಂದಿಗೂ ಮರೆತ್ತಿಲ್ಲ. ಸ್ಲೋ ಮೋಷನ್ ಸಾಂಗ್ 'ಬಾರೇ ಬಾರೇ' ಪ್ರೇಮಿಗಳ ಪಾಲಿನ ಆಂಥಮ್.
    ಕನ್ನಡ ನಾಡು ನುಡಿಯ ಬಗ್ಗೆ ಪುಟ್ಟಣ್ಣನ ಸಿನಿಮಾಗಳಲ್ಲಿ ಒಂದಾದ್ರೂ ಹಾಡು ಇದ್ದೇ ಇರುತ್ತು. 'ಕನ್ನಡ ನಾಡಿನ ವೀರ ರಮಣಿಯ' ಹಾಡು ಅದಕ್ಕೆ ಉತ್ತಮ ಉದಾಹರಣೆ. ಹಾಡಿನಲ್ಲಿ ಒನಕೆ ಓಬವ್ವನಾಗಿ ಜಯಂತಿ ಪರ್ಫಾರ್ಮೆನ್ಸ್ ಅದ್ಭುತ. ವಿಜಯ ನಾರಸಿಂಹ, ಆರ್​.ಎನ್ ಜಯಗೋಪಾಲ್, ಚಿ. ಉದಯ್​ ಶಂಕರ್ ಸಾಹಿತ್ಯ ಹಾಡುಗಳಿಗೆ ಮತ್ತಷ್ಟು ಜೀವ ತುಂಬಿತ್ತು.

    English summary
    Lesser-known facts about Vishnuvardhan Starrer evergreen movie Naagarahaavu. The 1972 epic, Naagarahaavu is one film which was and will always remain Sandalwood’s most popular and most loved film. Know more.
    Thursday, December 29, 2022, 14:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X