For Quick Alerts
  ALLOW NOTIFICATIONS  
  For Daily Alerts

  ಸಿನಿಮಾ ಪರದೆ ದಾಟಿ ಬಂತು 'ಸ್ಟಾರ್ ನಟರ ರೌಡಿಸಂ'

  By ಫಿಲ್ಮೀಬೀಟ್
  |

  ಚಿತ್ರರಂಗದಲ್ಲಿ 'ರೌಡಿಸಂ ಸಂಸ್ಕೃತಿ' ಹೆಚ್ಚುತ್ತಿದೆ, ಇದನ್ನು ಇಲ್ಲಿಗೆ ಮಟ್ಟಹಾಕದಿದ್ದರೆ 'ಅವರು' ತಮಗೆ ತಾವೇ ಶಕ್ತಿವಂತರು ಎಂದುಕೊಂಡು ನಾಳೆ ಮತ್ತೊಬ್ಬ ನಟನ ಮೇಲೆ ಗಲಾಟೆಗೆ ಹೋಗುವ ಸಾಧ್ಯತೆ ಇದೆ' ಎಂದು ಆತಂಕ ವ್ಯಕ್ತಪಡಿಸಿದ್ದಾರೆ ನಟ ಜಗ್ಗೇಶ್.

  ನಟ ಜಗ್ಗೇಶ್ 40 ವರ್ಷಗಳಿಂದಲೂ ಕನ್ನಡ ಚಿತ್ರರಂಗದಲ್ಲಿದ್ದಾರೆ. ಈಗಲೂ ಅವರೊಬ್ಬ ಸಕ್ರಿಯ ಸಿನಿಮಾ ನಟ. ಜೊತೆಗೆ, ಸಿನಿಮಾ ರಂಗದಲ್ಲಿ ಹಲವಾರು ಗೆಳೆಯರನ್ನು ಹೊಂದಿದ್ದಾರೆ. ಅವರಿಗೆ ಸಿನಿಮಾ ರಂಗದ ಆಗು-ಹೋಗುಗಳು, ಒಳಕತೆಗಳು ಚೆನ್ನಾಗಿ ಗೊತ್ತಿವೆ. ಅಂಥಹಾ ನಟ ಜಗ್ಗೇಶ್ 'ಸಿನಿಮಾರಂಗದಲ್ಲಿ ರೌಡಿಸಂ ಸಂಸ್ಕೃತಿ'ಯ ಮಾತನ್ನಾಡಿದ್ದಾರೆ ಎಂದರೆ ಅದೊಂದು ಗುರಿ ಇಲ್ಲದ ಹೇಳಿಕೆ ಖಂಡಿತ ಅಲ್ಲ. ಗಂಭೀರವಾಗಿ ಚರ್ಚಿಸಬೇಕಾದ ವಿಷಯವೇ ಅದು.

  ಜಗ್ಗೇಶ್-ದರ್ಶನ್ ಅಭಿಮಾನಿಗಳ ವಿವಾದಕ್ಕೆ ಅವರೊಬ್ಬರಿಂದಲೇ ಪರಿಹಾರ ಸಾಧ್ಯ!

  ಸಿನಿಮಾ ಪರದೆ ಮೇಲೆ ನಟರು ರೌಡಿಗಳಾಗಿ ಮಚ್ಚು ಝಳಪಿಸುವುದು, ದರ್ಪ ತೋರುವುದು, ಹೊಡೆಯುವುದು-ಬಡಿಯುವುದು ಸಾಮಾನ್ಯ ಸಂಗತಿಯಂತಾಗಿದೆ. ಸಿನಿಮಾದ ಹೊರಗೂ ಅದೇ ವರ್ತನೆಯನ್ನು ಮುಂದುವರೆಸಿದ್ದಾರೆಯೇ ಎಂಬ ಅನುಮಾನ ಮೂಡುವಂತೆ ಮಾಡಿವೆ ಕೆಲವು ಘಟನೆಗಳು.

  ನಟ ಯಶ್ ಕಾರಿನ ಮೇಲೆ ದಾಳಿ ನಡೆದಿತ್ತು

  ನಟ ಯಶ್ ಕಾರಿನ ಮೇಲೆ ದಾಳಿ ನಡೆದಿತ್ತು

  ನಟ ಯಶ್ ಬಹುವೇಗವಾಗಿ ಸಿನಿಮಾ ರಂಗದಲ್ಲಿ ಎತ್ತರಕ್ಕೆ ಏರಿದ ನಟ. ಸಾಲು-ಸಾಲು ಹಿಟ್ ನೀಡಿ ಸಿನಿಮಾಗಳಲ್ಲಿ ಮಾಸ್ ಹೀರೋ ಆಗಿ ಮೇಲ್ಬರುವ ಪ್ರಯತ್ನ ಮಾಡುತ್ತಿರುವ ಸಂದರ್ಭದಲ್ಲಿಯೇ ಅವರ ಕಾರಿನ ಮೇಲೆ ಗುಂಪೊಂದು ದಾಳಿ ಮಾಡಿತ್ತು. ಶೇಷಾದ್ರಿಪುರಂ ಬಳಿ ಯಶ್ ಅವರ ಕಾರನ್ನು ಅಡ್ಡಗಟ್ಟಿದ ಪುಂಡರ ಗುಂಪು ಕಾರಿನ ಗಾಜು ಒಡೆದು ಕಾರಿನಲ್ಲಿದ್ದ ಯಶ್ ಗೆಳೆಯರಿಗೆ ಧಮ್ಕಿ ಹಾಕಿ ಪರಾರಿಯಾದರು. ಅಂದು ಯಶ್ ಕಾರಿನಲ್ಲಿ ಇರಲಿಲ್ಲವಾದ್ದರಿಂದ ಬಚಾವಾದರು. ಆ ನಂತರ ಆ ಕೃತ್ಯಕ್ಕೆ ಕಾರಣವಾದವರಾರು ಯಾರು ಎಂಬುದು ಪತ್ತೆಯಾಗಲಿಲ್ಲ. ಆದರೆ ಬಹುತೇಕರಿಗೆ ಗೊತ್ತಿತ್ತು ಆ ಕೆಲಸದ ಹಿಂದೆ ಉದ್ಯಮದವರದ್ದೇ ಕೈವಾಡವಿತ್ತೆಂದು.

  ಗಣೇಶ್ ಬಗ್ಗೆ ಆಡಲಾಗಿತ್ತು ಲಘುವಾದ ಮಾತು

  ಗಣೇಶ್ ಬಗ್ಗೆ ಆಡಲಾಗಿತ್ತು ಲಘುವಾದ ಮಾತು

  'ಮುಂಗಾರು ಮಳೆ' ಕನ್ನಡ ಸಿನಿಮಾ ಉದ್ಯಮ ಹೊಸ ತಿರುವು ಕೊಟ್ಟ ಸಿನಿಮಾ. ಆ ಸಿನಿಮಾ ಮೂಲಕ ಗಣೇಶ್ ಸ್ಟಾರ್ ನಟರಾಗಿ ಬೆಳಕಿಗೆ ಬಂದರು. ಸಿನಿಮಾ ಸೂಪರ್-ಡೂಪರ್ ಹಿಟ್ ಆದ ಬಳಿಕ ಗಣೇಶ್ ತಮ್ಮದೇ ಉದ್ಯಮದ ಕೆಲವರಿಂದ ಅನುಭವಿಸಿದ ಕಷ್ಟ ಅವರಿಗೇ ಗೊತ್ತು. ಒಬ್ಬ ದೊಡ್ಡ ನಟರಂತು ಮಾಧ್ಯಮದ ಮುಂದೆ ಕೂತು 'ಮೂರಡಿ ಇಲ್ಲ ಅವನು, ಅವನ್ನು ದರ್ಶನ್‌ಗೆ ಹೋಲಿಸುತ್ತೀರಾ?' ಎಂದಿದ್ದರು. ದೊಡ್ಡ ನಟರೇ ಬಹಿರಂಗವಾಗಿ ಹೀಗೆ ಹೇಳಿದ ಮೇಲೆ ಅವರ ಅಭಿಮಾನಿಗಳು ಗಣೇಶ್ ಮೇಲೆ ದ್ವೇಷ ಬೆಳಸಿಕೊಳ್ಳಲಿಕ್ಕೆ ಎಷ್ಟು ಸಮಯ ಬೇಕು?. 'ನಾನೊಬ್ಬನೇ 'ಹೀರೋ' ಆಗಿರಬೇಕು' ಎಂಬ ಭಾವವಿಲ್ಲದೆ ಇಂಥಹಾ ಮಾತುಗಳು ಹೊರಬರಲು ಸಾಧ್ಯವೇ?

  ನಿಮ್ಮ ಮುಖದಲ್ಲಿ ನೋವಿನ ನೆರಳು ನೋಡಿ ತುಂಬಾ ದುಃಖವಾಯಿತು: ಜಗ್ಗೇಶ್ ಬಗ್ಗೆ ಶಶಿಕುಮಾರ್ ಮಾತು

  ಈ ಘಟನೆ ಯಾರಿಗೆ ನೆನಪಿಲ್ಲ?

  ಈ ಘಟನೆ ಯಾರಿಗೆ ನೆನಪಿಲ್ಲ?

  ಸೌಹಾರ್ದ ಕ್ರಿಕೆಟ್ ಪಂದ್ಯದ ವೇಳೆ ನಡೆದ ಘಟನೆ ಯಾರಿಗೆ ನೆನಪಿಲ್ಲ ಹೇಳಿ? ಹಿರಿಯ ನಾಯಕ ನಟರೊಬ್ಬರ ಬಲಗೈ ಭಂಟ, ಮತ್ತೊಬ್ಬ ಸ್ಟಾರ್ ನಟನ ಮೇಲೆ ಹಲ್ಲೆಗೆ ಯತ್ನಿಸಿದ್ದ. ಅಲ್ಲಿಯೇ ಮೈದಾನದಲ್ಲಿ ನಿಂತು ಆ ಸ್ಟಾರ್ ನಟ ಮೈಕ್‌ ಮೂಲಕ ಸೂಕ್ತವಾಗಿಯೇ ಉತ್ತರ ನೀಡಿದರು. ರಾಘವೇಂದ್ರ ರಾಜ್‌ಕುಮಾರ್ ಮಧ್ಯ ಪ್ರವೇಶಿಸಿ ಕ್ಷಮೆ ಕೇಳಿ ದೊಡ್ಡತನ ಮೆರೆದರು. ನಂತರ ಎಲ್ಲವೂ ಸರಿಯಾಯಿತು. ಆದರೆ ಹಾಗೆ ಹಲ್ಲೆಗೆ ಮುಂದಾಗಲು ಕಾರಣವೇನು? ಪರಸ್ಪರರ ಅಹಂ ಅಥವಾ 'ನಾನು ನಿನಗಿಂತಲೂ ದೊಡ್ಡವನು' ಎಂದು ತೋರಿಸುವ ಪ್ರಯತ್ನವೇ ತಾನೆ? ಜಗ್ಗೇಶ್ ಹೇಳಿರುವುದು ಸಹ ಇದನ್ನೇ. ಪರಸ್ಪರ ಹೊಡೆದಾದರೂ 'ನನ್ನದೇ ಹವಾ' ಎಂದು ತೋರಿಸಿಕೊಳ್ಳುವ ಪ್ರಯತ್ನ ನಮ್ಮ ನಟರದ್ದು.

  ಸಿನಿಮಾ ರಂಗದವರ ರೌಡಿಸಂ ಗೆ ಉದಾಹರಣೆ ಅಲ್ಲವೇ ಇದು?

  ಸಿನಿಮಾ ರಂಗದವರ ರೌಡಿಸಂ ಗೆ ಉದಾಹರಣೆ ಅಲ್ಲವೇ ಇದು?

  ಖ್ಯಾತ ಆಕ್ಷನ್ ಹೀರೋ ಹಾಗೂ ಜಿಮ್ ಮಾಲೀಕನ ನಡುವೆ ನಡೆದ ಗಲಾಟೆ ಜಗಜ್ಜಾಹೀರು. ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಈ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿದರೆ ಗೊತ್ತಾಗುತ್ತದೆ, ಸಿನಿಮಾ ಪರದೆಯ ಹೊರಗೂ ತಮ್ಮನ್ನು 'ಹೀರೋ' (ನೆಗೆಟಿವ್ ಹೀರೋ) ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ಸ್ಪಷ್ಟವಾಗಿ ಕಾಣುತ್ತದೆ. ತಮ್ಮನ್ನು ತಾವು ಅತಿಮಾನುಷರು, ಕಾನೂನಿಗಿಂತಲೂ ಮೇಲಿರುವವರು, ದರ್ಪ ತೋರಿದರಷ್ಟೆ ಗೌರವ ಎಂದು ತಿಳಿದುಕೊಂಡವರಷ್ಟೆ ಹೀಗೆಲ್ಲಾ ವರ್ತಿಸಲು ಸಾಧ್ಯ. ಜಗ್ಗೇಶ್ ಹೇಳಿದ 'ಸಿನಿಮಾ ರಂಗದವರ ರೌಡಿಸಂ'ಗೆ ಇದು ಉದಾಹರಣೆ ಅಲ್ಲವೆ?

  ಎಲ್ಲಾ ತಂದಿಟ್ಟು ಆಟ ನೋಡುತ್ತಿರುವ ಆ ನಿರ್ಮಾಪಕ ಎಲ್ಲಿದ್ದಾನೆ?

  ನೂರಾರು ಘಟನೆಗಳು ಸಿಗುತ್ತವೆ

  ನೂರಾರು ಘಟನೆಗಳು ಸಿಗುತ್ತವೆ

  ಹೆಕ್ಕುತ್ತಾ ಸಾಗಿದರೆ ಇಂಥಹಾ ಘಟನೆಗಳು ನೂರಾರು ಸಿಕ್ಕಿಬಿಡುತ್ತವೆ. 'ನಟರ ಅಭಿಮಾನಿಗಳು, ನಟರ ಗೆಳೆಯರು ಮಾಡಿದ ತಪ್ಪಿಗೆ ನಟನನ್ನೇಕೆ ದೂಷಿಸಬೇಕು?' ಎಂಬ ವಾದವೂ ಇದೆ. ಆದರೆ ಘಟನೆ ನಡೆದಾಗ ಅದರ ಬಗ್ಗೆ ಪ್ರತಿಕ್ರಿಯಿಸದೆ, ಕ್ಷಮೆ ಕೇಳದೆ ಸುಮ್ಮನಿರುವುದು ಕೃತ್ಯಕ್ಕೆ ನೀಡುವ ಬೆಂಬಲವೇ ಆಗಿರುತ್ತದೆ. 'ಮೌನಂ ಸಮ್ಮತಿ ಲಕ್ಷಣಂ'.

  ನಮ್ಮ 'ನಾಯಕರು' ನಾಯಕರಾಗಿ ಉಳಿದಿಲ್ಲ

  ನಮ್ಮ 'ನಾಯಕರು' ನಾಯಕರಾಗಿ ಉಳಿದಿಲ್ಲ

  ನಮ್ಮ 'ನಾಯಕ'ರು ನಿಜವಾದ ನಾಯಕರಾಗಿ ಉಳಿದಿಲ್ಲ. ಸಿನಿಮಾ ಪರದೆಯ ಮೇಲೂ ಅಷ್ಟೆ ನಿಜಜೀವನದಲ್ಲೂ ಅಷ್ಟೆ. ದೀನರಿಗೆ ಸಹಾಯ ಮಾಡುವ, ಅನ್ಯಾಯವನ್ನು ಖಂಡಿಸುವವ, ಮಹಿಳೆಯನ್ನು ಗೌರವಿಸುವವನ್ನು ನಾಯಕ ಎನ್ನಲಾಗುತ್ತಿತ್ತು. ಆದರೆ ಈಗ ಕತ್ತಿ ಹಿಡಿದು ತಲೆ ಕಡಿಯುವುದು, ಮಹಿಳೆಯನ್ನು ಪೀಡಿಸುವುದು, ಅವಾಚ್ಯ ಶಬ್ದಗಳನ್ನು ಬಳಸುವುದು 'ಹೀರೋಯಿಸಂ' ಎಂದಾಗಿದೆ. 'ಹೀರೋ' ಪದದ ಅರ್ಥವನ್ನು ನಮ್ಮ ಸಿನಿಮಾಗಳು ತಿರುಚಿಬಿಟ್ಟಿವೆ. ನಮ್ಮ ನಟರು ಪರದೆಯ ಹೊರಗೂ ಜನಬಲ, ಹಣಬಲ ಪ್ರದರ್ಶಿಸಿ 'ಹವಾ' ಎಬ್ಬಿಸಲು ಹೊರಟಿದ್ದಾರೆ.

  ಶಿವರಾಜ್ ಕುಮಾರ್ ಹೇಳಿದ ಮಾತು ಸತ್ಯ

  ಶಿವರಾಜ್ ಕುಮಾರ್ ಹೇಳಿದ ಮಾತು ಸತ್ಯ

  ಶಿವರಾಜ್ ಕುಮಾರ್ ಅವರು ಸಿನಿಮಾ ರಂಗಕ್ಕೆ ಬಂದು 35 ವರ್ಷವಾದ ಸಂದರ್ಭದಲ್ಲಿ ಅವರು ಮಾಧ್ಯಮಗಳಿಗೆ ಮಾತೊಂದನ್ನು ಹೇಳಿದರು, 'ನಟ ಹೇಗೆ ವರ್ತಿಸುತ್ತಾನೋ ಅವನ ಅಭಿಮಾನಿಗಳು ಹಾಗೆಯೇ ವರ್ತಿಸುತ್ತಾರೆ' ಎಂದು, ಅದು ನಿಜವೆ. ಅಭಿಮಾನಿಗಳು ನಟನನ್ನು ಆದರ್ಶವಾಗಿಟ್ಟುಕೊಂಡಿರುತ್ತಾರೆ, ನಟನನ್ನೇ ಅನುಸರಿಸುತ್ತಾರೆ. ತಮ್ಮ ಅಭಿಮಾನಿಗಳಿಗೆ ಉತ್ತಮ ಮೇಲ್ಪಂಕ್ತಿ ಹಾಕಿಕೊಡಬೇಕಾದ ನಟರು ಅಭಿಮಾನಿಗಳನ್ನೇ ಬಳಸಿಕೊಂಡು 'ಹವಾ' ಮಾಡಲು ಹೋಗುತ್ತಿರುವುದು ಅಕ್ಷಮ್ಯ.

  English summary
  Stardom and Rowdyism in Kannada movie industry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X