twitter
    For Quick Alerts
    ALLOW NOTIFICATIONS  
    For Daily Alerts

    ಸಿನಿಮಾಟೋಗ್ರಫಿ ಕಾಯ್ದೆ ಎಂದರೇನು? ಒಳಗೊಂಡಿರುವ ಅಂಶಗಳಾವುವು? ತಿದ್ದುಪಡಿಗೆ ವಿರೋಧ ಏಕೆ?

    |

    'ಸಿನಿಮಾಟೋಗ್ರಫಿ ಕಾಯ್ದೆಗೆ ತಿದ್ದುಪಡಿ' ಕೆಲವು ದಿನಗಳಿಂದ ಸದ್ದು ಮಾಡುತ್ತಿರುವ ವಿಷಯ. ಕರ್ನಾಟಕದಲ್ಲಿ ಹೆಚ್ಚಿನ ಸಿನಿಕರ್ಮಿಗಳು ಈ ಬಗ್ಗೆ ಮಾತನಾಡಿರದೇ ಇದ್ದರೂ ನೆರೆಯ ತಮಿಳುನಾಡು, ಮಲಯಾಳಂ ಹಾಗೂ ಹಿಂದಿ ಸಿನಿಮಾಕ್ಕೆ ಸಂಬಂಧಿಸಿದ ಹೆಸರಾಂತ ನಿರ್ದೇಶಕ, ನಟರು ಉದ್ದೇಶಿತ ಸಿನಿಮಾಟೋಗ್ರಫಿ ಕಾಯ್ದೆ ತಿದ್ದುಪಡಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

    ಹಾಗಿದ್ದರೆ, ಸಿನಿಮಾಟೋಗ್ರಫಿ ಕಾಯ್ದೆ (1952) ಏನು? ಕಾಯ್ದೆ ತರಲು ಕಾರಣವೇನು? ಈಗ ಮಾಡಲು ಉದ್ದೇಶಿಸಲಾಗಿರುವ ತಿದ್ದುಪಡಿಯಲ್ಲಿ ಏನಿದೆ? ತಿದ್ದುಪಡಿಗೆ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗಲು ಕಾರಣವೇನು? ತಿಳಿಯೋಣ.

    ಭಾರತದಲ್ಲಿ ಮೊದಲ ಸಿನಿಮಾ ಪ್ರದರ್ಶನಗೊಂಡಿದ್ದು 1887ರಲ್ಲಿ. ಆದರೆ ಮೊದಲ ಭಾರತೀಯ ಸಿನಿಮಾ ನಿರ್ಮಾಣವಾಗಿದ್ದು 1913ರಲ್ಲಿ. ಮೊದಲ ಭಾರತೀಯ ಸಿನಿಮಾಟೋಗ್ರಫಿ ಕಾಯ್ದೆ ಬಂದಿದ್ದು 1920ರಲ್ಲಿ ಆದರೆ ಆಗ ಪೊಲೀಸ್ ಮುಖ್ಯಸ್ಥರುಗಳೇ ಸಿನಿಮಾಗಳ ಪರಿಶೀಲನೆ ಮಾಡಿ ಪ್ರದರ್ಶನಕ್ಕೆ ಅನುಮತಿ ನೀಡುತ್ತಿದ್ದರು. ಅವು ಮದ್ರಾಸು (ಚೆನ್ನೈ), ಕೊಲ್ಕತ್ತ, ಮುಂಬೈ, ಲಾಹೋರ್ (ಈಗ ಪಾಕಿಸ್ತಾನದಲ್ಲಿದೆ), ರಂಗೂನ್ (ಯಂಗೂನ್ ಹೆಸರಲ್ಲಿ ಈಗ ಮಯನ್ಮಾರ್‌ಗೆ ಸೇರಿಕೊಂಡಿದೆ)ಗಳಲ್ಲಿ ಪ್ರದರ್ಶಿತವಾಗುತ್ತಿದ್ದವು.

    1952ರಲ್ಲಿ ಸಿಬಿಎಫ್‌ಸಿ ಅಸ್ಥಿತ್ವಕ್ಕೆ ಬಂತು

    1952ರಲ್ಲಿ ಸಿಬಿಎಫ್‌ಸಿ ಅಸ್ಥಿತ್ವಕ್ಕೆ ಬಂತು

    1940ರ ದಶಕದಲ್ಲಿ ಸಿನಿಮಾಗಳು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣ ಹಾಗೂ ಪ್ರದರ್ಶನಗೊಳ್ಳಲು ಆರಂಭವಾದವು. ಸಿನಿಮಾಗಳು ದೊಡ್ಡ ಮಟ್ಟದ ಜನಪ್ರಿಯತೆಯನ್ನು ಭಾರತದಲ್ಲಿ ಗಳಿಸಲಾರಂಭಿಸಿದ ಕಾಲವದು. ಜನಾಭಿಪ್ರಾಯ ರೂಪಿಸಲು, ಸಾಮಾಜಿಕ ಬದಲಾವಣೆ ತರಲು ಕಾರಣವಾಗುವುಷ್ಟು ಪ್ರಭಾವಶಾಲಿ ಮಾಧ್ಯಮವಾಗಿ ಸಿನಿಮಾ ಬದಲಾಯಿತು. ಹಾಗಾಗಿಯೇ ಸ್ವಾತಂತ್ರ್ಯಾನಂತರ, ಪ್ರಬಲ ಮಾಧ್ಯಮವಾದ ಸಿನಿಮಾಕ್ಕೆ ಅಂಕುಶ ಹಾಕಿ, ಭಾರತದ ಸಾರ್ವಭೌಮತೆಗೆ, ಸಮಗ್ರತೆಗೆ ಧಕ್ಕೆ ಆಗದ ರೀತಿಯಲ್ಲಿ, ಸಮೂಹಕ್ಕೆ ತಪ್ಪು ಸಂದೇಶ ಹೋಗದ ರೀತಿಯ ಸಿನಿಮಾಗಳನ್ನಷ್ಟೆ ಪ್ರದರ್ಶಿಸಲೆಂದು 1952ರಲ್ಲಿ ಸಿನಿಮಾಟೋಗ್ರಫಿ ಕಾಯ್ದೆ ಜಾರಿಗೆ ತರಲಾಯಿತು. ಅದಕ್ಕೂ ಮುಂಚೆ ಇದ್ದ ಬಾಂಬೆ ಬೋರ್ಡ್ ಆಫ್ ಸೆನ್ಸಾರ್ ಅನ್ನು ಹಲವು ಬದಲಾವಣೆಗಳೊಂದಿಗೆ ಸಿಬಿಎಫ್‌ಸಿ (ಸೆಂಟ್ರಲ್ ಬೋರ್ಡ್ ಆಫ್ ಫಿಲಂ ಸೆನ್ಸಾರ್) ಎಂದು ಬದಲಿಸಲಾಯಿತು.

    ಸಿನಿಮಾಟೋಗ್ರಫಿ ಕಾಯ್ದೆ 1952ಯಲ್ಲಿ ಏನಿದೆ?

    ಸಿನಿಮಾಟೋಗ್ರಫಿ ಕಾಯ್ದೆ 1952ಯಲ್ಲಿ ಏನಿದೆ?

    ಸಿನಿಮಾಟೋಗ್ರಫಿ ಕಾಯ್ದೆ 1952ಯಲ್ಲಿ 'ಬೋರ್ಡ್' ಎಂದರೇನು, 'ಸರ್ಟಿಫಿಕೇಶನ್' ಎಂದರೇನು? ಸಿಬಿಎಫ್‌ಸಿ ಸದಸ್ಯರ ಆಯ್ಕೆ, ಕರ್ತವ್ಯ, ಅಧಿಕಾರ, ಜವಾಬ್ದಾರಿಗಳು, ಸಿನಿಮಾವನ್ನು ಪ್ರಮಾಣೀಕರಿಸುವುದು ಹೇಗೆ? ಪ್ರಮಾಣೀಕೃತ ಸಿನಿಮಾಗಳನ್ನು ಪ್ರದರ್ಶನಕ್ಕೆ ನೀಡುವ ಬಗೆ ಅಥವಾ ಸರ್ಟಿಫಿಕೇಶನ್, ಟ್ರಿಬ್ಯುನಲ್‌ಗೆ ಅಪೀಲ್ ಹೋಗುವುದು, ಸಿನಿಮಾ ರದ್ದು ಮಾಡುವುದು, ಸಿಬಿಎಫ್‌ಸಿ ಮೇಲೆ ಕೇಂದ್ರ ಸರ್ಕಾರಕ್ಕಿರುವ ಅಧಿಕಾರಗಳು, ಸಿನಿಮಾ ವಿತರಕರು, ಪ್ರದರ್ಶಕರಿಗೆ ಸಿನಿಮಾ ನಿರ್ಮಾಣ ಸಂಸ್ಥೆ ಅಥವಾ ವ್ಯಕ್ತಿ ನೀಡಬೇಕಾದ ಮಾಹಿತಿಗಳು, ಸರ್ಟಿಫಿಕೇಶನ್ ಆಗದ ಸಿನಿಮಾ ಪ್ರದರ್ಶಿಸಿದರೆ ಕೊಡಬಹುದಾದ ಶಿಕ್ಷೆ, ಸಿನಿಮಾ ಪ್ರದರ್ಶಕರಿಗೆ ಇರಬೇಕಾದ ಪರವಾನಗಿ ಇನ್ನೂ ಹಲವು ವಿಷಯಗಳನ್ನು ಸಿನಿಮಾಟೋಗ್ರಫಿ ಕಾಯ್ದೆ 1952 ಒಳಗೊಂಡಿದೆ.

    ಟ್ರಿಬ್ಯುನಲ್‌ಗೆ ಅಪೀಲು ಹೋಗುವ ಅವಕಾಶ ಇತ್ತು

    ಟ್ರಿಬ್ಯುನಲ್‌ಗೆ ಅಪೀಲು ಹೋಗುವ ಅವಕಾಶ ಇತ್ತು

    ಸಿನಿಮಾಟೋಗ್ರಫಿ ಕಾಯ್ದೆ 1952ರ ಅನ್ವಯವೇ ಸಿಬಿಎಫ್‌ಸಿಯು ಸಿನಿಮಾಗಳನ್ನು ಪ್ರಮಾಣೀಕರಣಗೊಳಿಸಿ ಸಿನಿಮಾಕ್ಕೆ ಪ್ರಮಾಣ ಪತ್ರ ನೀಡುತ್ತಿದೆ. ಸಿನಿಮಾಗಳನ್ನು ಪ್ರಮಾಣೀಕೃತಗೊಳಿಸುವ ಹಾಗೂ ಪ್ರದರ್ಶನದ ವಿಷಯದಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪವನ್ನು ಸುಪ್ರೀಂಕೋರ್ಟ್ ನಿರಾಕರಿಸಿದೆ. ಒಂದೊಮ್ಮೆ ಸಿಬಿಎಫ್‌ಸಿಯು ಯಾವುದೇ ಸಿನಿಮಾವನ್ನು ಸೂಕ್ತವಾಗಿ ಪ್ರಮಾಣೀಕೃತಗೊಳಿಸಿಲ್ಲ ಎನಿಸಿದಲ್ಲಿ ಚಿತ್ರತಂಡವು ಟ್ರಿಬ್ಯುನಲ್‌ (ಎಫ್‌ಸಿಎಟಿ)ಗೆ ಅಪೀಲು ಹೋಗಬಹುದಿತ್ತು. ಅಥವಾ ನ್ಯಾಯಾಲಯದ ಮೆಟ್ಟಿಲು ಹತ್ತಬಹುದಿತ್ತು.

    ಟ್ರಿಬ್ಯುನಲ್ ರದ್ದು ಮಾಡಿದ ಕೇಂದ್ರ ಸರ್ಕಾರ

    ಟ್ರಿಬ್ಯುನಲ್ ರದ್ದು ಮಾಡಿದ ಕೇಂದ್ರ ಸರ್ಕಾರ

    ಆದರೆ ಸಿನಿಮಾಟೋಗ್ರಫಿ ಕಾಯ್ದೆಗೆ ತರಲಾಗುತ್ತಿರುವ ತಿದ್ದುಪಡಿ ಅನ್ವಯ, ಸಿಬಿಎಫ್‌ಸಿಯು ಪರಿಶೀಲಿಸಿ ಪ್ರಮಾಣೀಕೃತಗೊಳಿಸಿದ ಸಿನಿಮಾವನ್ನು ಕೇಂದ್ರ ಸರ್ಕಾರವು ಪುನಃ ಪ್ರಮಾಣೀಕೃತಗೊಳಿಸಲು ಸಿಬಿಎಫ್‌ಸಿಗೆ ಸೂಚಿಸಬಹುದು ಅಥವಾ ಸ್ವತಃ ಸರ್ಕಾರ ಪ್ರಮಾಣೀಕರಣ (ಸರ್ಟಿಫಿಕೇಟ್) ನೀಡಬಹುದಾಗಿದೆ. ಅಥವಾ ಸಿನಿಮಾದ ಪ್ರದರ್ಶನವನ್ನು ತಡೆಹಿಡಿಯಬಹುದಾಗಿದೆ. ತಿದ್ದುಪಡಿಯಲ್ಲಿರುವ ಈ ಅಂಶವೇ ಸಿನಿಮಾ ಕರ್ಮಿಗಳ ವಿರೋಧಕ್ಕೆ ಕಾರಣವಾಗಿದೆ. ಇದು ಮಾತ್ರವೇ ಅಲ್ಲದೆ ಟ್ರಿಬ್ಯುನಲ್ ಅನ್ನು ಕೇಂದ್ರ ಸರ್ಕಾರವು ಕಳೆದ ಏಪ್ರಿಲ್‌ನಲ್ಲಿ ರದ್ದು ಮಾಡಿದ್ದು, ಸಿಬಿಎಫ್‌ಸಿ ನೀಡಿದ ಪ್ರಮಾಣ ಪತ್ರಕ್ಕೆ ವಿರೋಧವುಳ್ಳ ಸಿನಿಮಾ ನಿರ್ದೇಶಕರು, ನಿರ್ಮಾಪಕರು ನೇರವಾಗಿ ನ್ಯಾಯಾಲಯಕ್ಕೆ ಅಪೀಲು ಹೋಗಬೇಕಾಗುತ್ತದೆ. ಇದು ಸಹ ಸಿನಿಮಾ ರಂಗದ ಜನರ ತೀವ್ರ ವಿರೋಧಕ್ಕೆ ಕಾರಣವಾಗಿದೆ.

    ಸರ್ಟಿಫಿಕೇಟ್ ವಿತರಣೆಯಲ್ಲಿ ಬದಲಾವಣೆ

    ಸರ್ಟಿಫಿಕೇಟ್ ವಿತರಣೆಯಲ್ಲಿ ಬದಲಾವಣೆ

    ತಿದ್ದುಪಡಿಯಲ್ಲಿ ಇನ್ನೂ ಸಾಕಷ್ಟು ಅಂಶಗಳಿವೆ, ಈ ಹಿಂದೆ, ಸಿನಿಮಾಗಳಿಗೆ ಯು, ಯು/ಎ, ಎ, ಎಸ್ ಎಂದು ಪ್ರಮಾಣಪತ್ರಗಳನ್ನು ನೀಡಲಾಗುತ್ತಿತ್ತು. ಆದರೆ ತಿದ್ದುಪಡಿಯಲ್ಲಿ, ಯು/ಎ ಅನ್ನು, ನಾಲ್ಕು ಭಾಗಗಳನ್ನಾಗಿ ಮಾಡಿ, ಯು/ಎ 7+, ಯು/ಎ 13+, ಯು/ಎ 16+ ಎಂದು ಪ್ರಮಾಣ ಪತ್ರ ನೀಡಲಾಗುತ್ತದೆ. ಇದೇ ಮಾದರಿಯು ಒಟಿಟಿಗಳಿಗೂ ಅನ್ವಯವಾಗುತ್ತದೆ. ತಿದ್ದುಪಡಿಯ ಪ್ರಕಾರ, ಸಿನಿಮಾ ಅಥವಾ ಯಾವುದೇ ಪ್ರಮಾಣೀಕೃತ ವಿಡಿಯೋದ ಪೈರಸಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬಹುದಾಗಿದೆ. ಸಿನಿಮಾವೊಂದು ಸಿಬಿಎಫ್‌ಸಿಯಿಂದ ಪಡೆವ ಪ್ರಮಾಣ ಪತ್ರವು ಹತ್ತು ವರ್ಷವಷ್ಟೆ ಚಾಲ್ತಿಯಲ್ಲಿರುತ್ತದೆ. ತಿದ್ದುಪಡಿಯು ಹತ್ತು ವರ್ಷ ನಿಯಮವನ್ನು ತೆಗೆದುಹಾಕಲಿದೆ.

    ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಎನ್ನುತ್ತಿರುವ ಸಿನಿ ಕರ್ಮಿಗಳು

    ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಎನ್ನುತ್ತಿರುವ ಸಿನಿ ಕರ್ಮಿಗಳು

    ತಿದ್ದುಪಡಿಯ ಬಗ್ಗೆ ಹಲವು ಆತಂಕಗಳು ಸಿನಿಮಾಕರ್ಮಿಗಳಿಗೆ ಇದೆ. ಸರ್ಕಾರವು ಸಿನಿಮಾಗಳ ಸೆನ್ಸಾರ್‌ಶಿಪ್‌ನಲ್ಲಿ ತಲೆ ಹಾಕುವುದು ಸೂಕ್ತವಲ್ಲ ಎಂದು ಈ ಹಿಂದೆ ಸುಪ್ರೀಂಕೋರ್ಟ್‌ ಹೇಳಿತ್ತು. ಅದಾಗ್ಯೂ ಸಹ ಕೇಂದ್ರವು ಸಿನಿಮಾ ಸೆನ್ಸಾರ್‌ಶಿಪ್‌ನಲ್ಲಿ ನೇರವಾಗಿ ತಲೆಹಾಕಲು ತಿದ್ದುಪಡಿ ಅನುವು ಮಾಡಿಕೊಡುತ್ತಿದೆ. ಇದು ಸುಪ್ರೀಂಕೋರ್ಟ್‌ಗೆ ಮಾಡುತ್ತಿರುವ ಅಗೌರವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಎಂದು ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.

    ಹತ್ತಿಕ್ಕುವುದು ಸುಲಭವಾಗುತ್ತದೆ

    ಹತ್ತಿಕ್ಕುವುದು ಸುಲಭವಾಗುತ್ತದೆ

    ಸರ್ಕಾರವು ಸಿನಿಮಾಗಳನ್ನು ಪ್ರಮಾಣೀಕರಿಸಲು ಆರಂಭಿಸಿದರೆ ಸಿನಿಮಾಗಳ ಮೂಲಕ ಸರ್ಕಾರವನ್ನು, ವ್ಯವಸ್ಥೆಯನ್ನು ಟೀಕಿಸುವ ಸಿನಿಮಾಗಳು ಸಮಸ್ಯೆಗೆ ಸಿಲುಕಲಿವೆ. ಅಧಿಕಾರದಲ್ಲಿರುವ ಪಕ್ಷದ ಸಿದ್ಧಾಂತ, ಆದರ್ಶಗಳಿಗೆ ವಿರುದ್ಧವಾಗಿರುವ ಭಿನ್ನ ದನಿಯ ಸಿನಿಮಾಗಳನ್ನು ಹತ್ತಿಕ್ಕುವುದು, ಆ ಮೂಲಕ ಸರ್ಕಾರದ ಪರವಾದ ಜನಾಭಿಪ್ರಾಯ ಮೂಡಿಸುವುದು ಸರ್ಕಾರಕ್ಕೆ ಸುಲಭವಾಗುತ್ತದೆ. ಸರ್ಕಾರದ ಅಥವಾ ಅಧಿಕಾರದಲ್ಲಿರುವ ಪಕ್ಷದ ಅಭಿಪ್ರಾಯಕ್ಕೆ ಭಿನ್ನವಾದ ಅಭಿಪ್ರಾಯವುಳ್ಳ ಸಿನಿಮಾ ಕರ್ಮಿಗಳನ್ನು ಹತ್ತಿಕ್ಕುವುದಕ್ಕೆ ಸಹ ಕಾಯ್ದೆಯನ್ನು ಬಳಸಿಕೊಳ್ಳುವ ಅಪಾಯವೂ ಇದೆ.

    ಕಾಯ್ದೆ ಜಾರಿಯಾಗುವುದು ಕಷ್ಟವೇನಲ್ಲ

    ಕಾಯ್ದೆ ಜಾರಿಯಾಗುವುದು ಕಷ್ಟವೇನಲ್ಲ

    ತಿದ್ದಪಡಿಯಿಂದ ಉಂಟಾಗಬಹುದಾದ ಮತ್ತೊಂದು ದೊಡ್ಡ ಸಮಸ್ಯೆಯೆಂದರೆ, ಸಿಬಿಎಫ್‌ಸಿಯಿಂದ ಸರ್ಟಿಫಿಕೇಟ್ ಪಡೆದ ಬಳಿಕ ಮತ್ತೆ ಸರ್ಕಾರವೂ ಪರಿಶೀಲನೆಗೆ ಮುಂದಾಗಿ ಪ್ರಮಾಣ ಪತ್ರ ನೀಡುವುದು ಬಹಳಷ್ಟು ಸಮಯ ತೆಗೆದುಕೊಳ್ಳಲಿದೆ. ಇದು ಸಿನಿಮಾಕ್ಕೆ ಬಂಡವಾಳ ಹೂಡಿದ ನಿರ್ಮಾಪಕರಿಗೆ ದೊಡ್ಡ ನಷ್ಟ ತಂದೊಡ್ಡುವ ಸಾಧ್ಯತೆ ಇದೆ. ತಿದ್ದುಪಡಿಯೂ ಇನ್ನೂ ಸಾರ್ವಜನಿಕ ಚರ್ಚೆಯ ಹಂತದಲ್ಲಿದ್ದು, ಮಸೂದೆಯಾಗಿ ಚರ್ಚೆಗೊಂಡು ಕಾಯ್ದೆಯಾಗಿ ಅಂಗೀಕಾರವಾಗಬೇಕಿದೆ. ಆದರೆ ಲೋಕಸಭೆಯಲ್ಲಿ ಪ್ರಬಲವಾಗಿರುವ ಆಡಳಿತದಲ್ಲಿರುವ ಪಕ್ಷಕ್ಕೆ ಉದ್ದೇಶಿತ ತಿದ್ದುಪಡಿಯನ್ನು ಕಾಯ್ದೆಯನ್ನಾಗಿ ಅಂಗೀಕಾರ ಮಾಡುವುದು ಕಷ್ಟದ ಕೆಲಸವೇನೂ ಅಲ್ಲ.

    English summary
    What is Cinematography act 1952, Why movie industry people opposing it. What is in the amendment.
    Friday, July 9, 2021, 9:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X