twitter
    For Quick Alerts
    ALLOW NOTIFICATIONS  
    For Daily Alerts

    Dubbing movies in kannada : ಕನ್ನಡಕ್ಕೆ ಡಬ್ ಮಾಡಿದರೆ ಪ್ಯಾನ್ ಇಂಡಿಯಾ ಸಿನಿಮಾಗಳು ವರ್ಕೌಟ್ ಆಗಲ್ವೇ?

    |

    ಆರ್ ಆರ್ ಆರ್ ಬಿಡುಗಡೆಗೆ ಹಿಂದಿನ ದಿನದವರೆಗೂ ಕೂಡ ಕರ್ನಾಟಕದಲ್ಲಿ ban RRR ಹೆಸರಿನಲ್ಲಿ ದೊಡ್ಡ ಟ್ವಿಟರ್ ಅಭಿಯಾನ ನಡೆಯಿತು. ಒತ್ತಡಕ್ಕೆ ಮಣಿದು ಕಾಟಾಚಾರಕ್ಕೆ ಎಂಬಂತೆ ಕನ್ನಡ ಅವತರಣಿಕೆ ಬಂದಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಯಿತು. ತೆಲುಗು ಆವೃತ್ತಿಗೆ ಸಿಕ್ಕಷ್ಟು ರೆಸ್ಪಾನ್ಸ್ ಕನ್ನಡಿಗರಿಂದ ಕನ್ನಡ ಆವೃತ್ತಿಗೆ ಸಿಕ್ಕಿಲ್ಲ. ಬಹುತೇಕ ಕನ್ನಡಿಗರು ಈಗಲೂ ಕೂಡ ತೆಲುಗು ಆವೃತ್ತಿಯನ್ನು ನೋಡುತ್ತಿದ್ದಾರೆ. ಹಾಗಾದರೆ ಕನ್ನಡದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳು ಬಿಡುಗಡೆ ಮಾಡಿದರೆ ಯಾಕೆ ನೋಡುವುದಿಲ್ಲ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈ ಪ್ರಶ್ನೆಗೆ ಹಲವಾರು ಕಾರಣಗಳಿವೆ?

    ಕರ್ನಾಟಕದಲ್ಲಿ ಬಹುತೇಕ ಸಿನಿಮಾ ಬಿಸಿನೆಸ್ ಕೇಂದ್ರ ಬೆಂಗಳೂರು. ಇಲ್ಲಿರುವ ಕನ್ನಡಿಗರಿಗೆ ಕನ್ನಡದ ಜೊತೆಗೆ ತೆಲುಗು-ತಮಿಳು-ಹಿಂದಿ -ಇಂಗ್ಲೀಷ್ ಜೊತೆಗೆ ಮಲಯಾಳಂ ಚಿತ್ರಗಳನ್ನು ಕೂಡ ಏಕಕಾಲಕ್ಕೆ ನೋಡುವ ಅವಕಾಶಗಳು ಮುಕ್ತವಾಗಿದೆ. ಬೆಂಗಳೂರು ಎಂಬುದು ಮೆಟ್ರೋಪಾಲಿಟನ್ ಕಲ್ಚರ್ ಹೊಂದಿರುವ ನಗರ. ನಮ್ಮ ಕನ್ನಡಿಗರು ಕೇವಲ ತೆಲುಗು- ತಮಿಳು ಚಿತ್ರಗಳನ್ನು ನೋಡುವುದೇ ಅಲ್ಲ ಆ ಭಾಷೆಯ ಸಿನಿಮಾಗಳ ನಟರ ಅಭಿಮಾನಿಗಳು ಕೂಡ ಆಗಿಬಿಟ್ಟಿದ್ದಾರೆ. ಹಾಗಾಗಿ ಮೂಲ ಆವೃತ್ತಿಯನ್ನು ಬಿಟ್ಟು ಕನ್ನಡದಲ್ಲಿ ನೋಡಲು ಇಷ್ಟಪಡುವುದಿಲ್ಲ. ಬೆಂಗಳೂರಿನ ಮತ್ತು ಸುತ್ತಲಿನ ಪ್ರದೇಶದ ಕನ್ನಡಿಗರು ಬಹುತೇಕ ಮೂಲ ಆವೃತ್ತಿಯಲ್ಲಿ ನೋಡಲು ಇಚ್ಚಿಸುತ್ತಾರೆ. ಕನ್ನಡಕ್ಕೆ ಡಬ್ಬಿಂಗ್ ಸಿನಿಮಾಗಳು ಬೇಕು ಎನ್ನುವವರು ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ಬಂದು ನೋಡುವುದಿಲ್ಲ. ಡಬ್ ಮಾಡಿ ನಿಮ್ಮ ಬಿಡುಗಡೆ ಮಾಡಿದರೂ ಕೂಡ ಮೂಲ ಆವೃತ್ತಿನ್ನು ನೋಡಲು ಬಯಸುವವರು ಇತ್ತ ಬರುವುದಿಲ್ಲ. ಹೀಗಾಗಿಯೇ ಚಿತ್ರದ ಡಿಸ್ಟ್ರಿಬ್ಯೂಟರ್ ಗಳು ವರ್ಜಿನಲ್ ವರ್ಷನ್ ಬಿಡುಗಡೆಗೆ ಇಲ್ಲಿ ಒತ್ತುಕೊಡುತ್ತಾರೆ ಅಥವಾ ಅದನ್ನೇ ಬಿಡುಗಡೆ ಮಾಡಲು ಒತ್ತಡ ಕೂಡ ಇರುತ್ತದೆ.

    ದುರದೃಷ್ಟವಶಾತ್ ಇದು ಸತ್ಯವಾದ ಸಂಗತಿ ಕರ್ನಾಟಕದಲ್ಲಿ ಕನ್ನಡ ಚಿತ್ರಗಳಷ್ಟೇ, ಕೆಲವೊಂದು ಸಂದರ್ಭದಲ್ಲಿ ಕನ್ನಡಕ್ಕಿಂತ ಹೆಚ್ಚು ವ್ಯವಹಾರ ಮಾಡುವುದು ತೆಲುಗು ಚಿತ್ರಗಳು. ಇದಕ್ಕೆ ಎರಡು ಕಾರಣಗಳಿವೆ ಮೊದಲನೆಯದಾಗಿ ತೆಲುಗು ಭಾಷೆ ಕನ್ನಡಕ್ಕೆ ಹತ್ತಿರವಾದ ಭಾಷೆ ಹೀಗಾಗಿ ತೆಲುಗು ಸಹಜವಾಗಿ ಬಹುತೇಕ ಕನ್ನಡಿಗರು ಅರ್ಥಮಾಡಿಕೊಳ್ಳುತ್ತಾರೆ. ಎರಡು, ಕರ್ನಾಟಕದಲ್ಲಿ ಕನ್ನಡ ಬಿಟ್ಟರೆ ಅತಿ ಹೆಚ್ಚು ಮಾತನಾಡುವ ಮತ್ತೊಂದು ಭಾಷೆ ತೆಲುಗು! ಕರ್ನಾಟಕಕ್ಕೆ ಅತಿದೊಡ್ಡ ಬಾರ್ಡರ್ ಪ್ರದೇಶವನ್ನು ಆಂಧ್ರ ಮತ್ತು ತೆಲಂಗಾಣ ಹೊಂದಿದೆ. ಈ ಗಡಿಜಿಲ್ಲೆಗಳ ಸಂಸ್ಕೃತಿ ಬಹುತೇಕ ತೆಲುಗು ಪ್ರಭಾವದಿಂದಲೇ ರೂಪಿತವಾಗಿದೆ. ಕೋಲಾರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರು,ಕೊಪ್ಪಳ, ಯಾದಗಿರಿ, ಬೀದರ್ ಇಲ್ಲೆಲ್ಲಾ ತೆಲುಗು ಪ್ರಭಾವವನ್ನು ನಾವು ಕಾಣಬಹುದಾಗಿದೆ. ಜೊತೆಗೆ ಈ ಪ್ರದೇಶಗಳಲ್ಲಿ ತೆಲುಗು ಚಿತ್ರಗಳಿಗೆ ಭಾರೀ ಡಿಮ್ಯಾಂಡ್ ಮೊದಲಿನಿಂದಲೂ ಇದೆ. ಚಿಂತಾಮಣಿ ಕೇಂದ್ರದಲ್ಲಿ ತೆಲುಗಿನ 'ಪೆದರಾಯುಡು' ಚಿತ್ರ 25 ವಾರಗಳ ಪ್ರದರ್ಶನ ಕಂಡಿದೆ. 25 ವಾರಗಳ ವಿಷಯ ಬಿಡಿ ಇಲ್ಲಿ ಕನ್ನಡದ ಒಂದೇ ಒಂದು ಚಿತ್ರ ಇಲ್ಲಿ ನೂರು ದಿನ ಪ್ರದರ್ಶನಗೊಂಡಿಲ್ಲ. ಗಡಿ ಭಾಗಗಳಲ್ಲಿ ಇಂದಿಗೂ ಕೂಡ ತೆಲುಗು ಚಿತ್ರಗಳ ಹಿಡಿತ ಜೋರಾಗಿದೆ. ಅಷ್ಟೇ ಯಾಕೆ ಹುಬ್ಬಳ್ಳಿಯಲ್ಲಿ ಕೂಡ ತೆಲುಗು ಚಿತ್ರಗಳಿಗೆ ಸಿಕ್ಕಾಪಟ್ಟೆ ಕ್ರೇಜ್ ಇದೆ

    ತಮಿಳು- ಮಲಯಾಳಂ ಚಿತ್ರಗಳಿಗೂ ಇದೆ ಡಿಮ್ಯಾಂಡ್

    ತಮಿಳು- ಮಲಯಾಳಂ ಚಿತ್ರಗಳಿಗೂ ಇದೆ ಡಿಮ್ಯಾಂಡ್

    ತಮಿಳು ಚಿತ್ರಗಳಿಗೆ ಮೊದಲಿನಿಂದಲೂ ಬೆಂಗಳೂರು ಒಂದು ದೊಡ್ಡ ಮಾರ್ಕೆಟ್. ಬೆಂಗಳೂರಿನ ಒಂದಷ್ಟು ಗಲ್ಲಿಗಳಿಗೆ ಹೋದರೆ ನೀವು ತಮಿಳುನಾಡಿನಲ್ಲಿ ಸಂಚರಿಸುವ ಅನುಭವವಾಗುತ್ತದೆ. ತಮಿಳಿನ ನಾಮಫಲಕಗಳು ಮಾತ್ರವಲ್ಲ ತಮಿಳು ಚಿತ್ರ ತಾರೆಯರ ದೊಡ್ಡದೊಡ್ಡ ಚಿತ್ರಪಟಗಳು ನಿಮಗೆ ಎದುರಾಗುತ್ತದೆ. ಬೆಂಗಳೂರಿನ ಜೊತೆಗೆ ಬೆಂಗಳೂರು ಗ್ರಾಮಾಂತರ ಕೋಲಾರದ ಕೆಜಿಎಫ್ ಪ್ರಾಂತ್ಯ ಮೈಸೂರು ಭದ್ರಾವತಿ ಇಲ್ಲೆಲ್ಲ ತಮಿಳು ಚಿತ್ರಗಳಿಗೆ ಒಳ್ಳೆ ಮಾರ್ಕೆಟ್ ಇದೆ. ಇನ್ನು ಮಲಯಾಳಂ ಚಿತ್ರಗಳಿಗೆ ಬಂದರೆ ಕರಾವಳಿ ಪ್ರಾಂತ್ಯದಲ್ಲಿ ಕೊಡಗಿನಲ್ಲಿ ತಕ್ಕಮಟ್ಟಿಗೆ ಒಳ್ಳೆ ರೆಸ್ಪಾನ್ಸ್ ಸಿಗುತ್ತದೆ. ಹಿಂದಿ ಚಿತ್ರಗಳಿಗೂ ಬೆಂಗಳೂರಿನ ಜೊತೆಜೊತೆಗೆ ಮುಂಬೈ-ಕರ್ನಾಟಕ ಅಥವಾ ಇಂದಿನ ಕಿತ್ತೂರು ಕರ್ನಾಟಕದಲ್ಲಿ ಮೊದಲಿನಿಂದಲೂ ಡಿಮ್ಯಾಂಡ್ ಇದ್ದೇ ಇದೆ. ಹೀಗಾಗಿ ಒಂದು ಅರ್ಥದಲ್ಲಿ ಕರ್ನಾಟಕದಲ್ಲಿ ಕನ್ನಡೇತರ ಚಿತ್ರಗಳನ್ನು ಜನರು ಮೊದಲಿನಿಂದಲೂ ಅದೇ ಭಾಷೆಯಲ್ಲಿ ನೋಡಿಕೊಂಡು ಬಂದಿರುವುದರಿಂದ ಅವರಿಗೆ ಡಬ್ ಮಾಡಿದರೆ ಮೂಲ ಚಿತ್ರದ ಫ್ಲೇವರ್ ಖಂಡಿತ ಸಿಗುವುದಿಲ್ಲ. ಹೀಗಾಗಿ ಈ ಭಾಷೆಗಳನ್ನು ಗೊತ್ತಿರುವ ಬಹುತೇಕ ಕನ್ನಡಿಗರು ಅದೇ ಭಾಷೆಯಲ್ಲಿ ನೋಡಲು ಯತ್ನಿಸುತ್ತಾರೆ.

    ಸಮರ್ಪಕವಾದ ಡಬ್ಬಿಂಗ್ ಕೊರತೆ

    ಸಮರ್ಪಕವಾದ ಡಬ್ಬಿಂಗ್ ಕೊರತೆ

    ಕನ್ನಡಿಗರು ಕನ್ನಡದಲ್ಲಿ ಅನ್ಯ ಭಾಷಾ ಚಿತ್ರಗಳನ್ನು ನೋಡದೇ ಇರಲು ಅತಿಮುಖ್ಯವಾದ ಮತ್ತೊಂದು ಕಾರಣವೆಂದರೆ ಡಬ್ಬಿಂಗ್. ಬಹುತೇಕ ಡಬ್ಬಿಂಗ್ ಚಿತ್ರಗಳನ್ನು ನಾವು ಗಮನಿಸಿದಾಗ ಲಿಪ್ ಸಿಂಕ್ ಎನ್ನುವುದು ಸರಿಯಾದ ರೀತಿಯಲ್ಲಿ ಆಗಿರುವುದಿಲ್ಲ. ಜೊತೆಗೆ ಡಬ್ಬಿಂಗ್ ಸಿನಿಮಾಗಳಲ್ಲಿ ಬಳಕೆ ಮಾಡುವ ಕನ್ನಡವು ಕೂಡ ತೀರಾ ಕಳಪೆ ಆಗಿರುತ್ತದೆ. 'ಬಂದ ನಮ್ಮ ಸರೈನೋಡು', 'ವೇಗ-ಉದ್ವೇಗ 8', 'ತಿರುಗೋ ಮೀಸೆ', 'ಸೆಲ್ಫಿ ಶುರುಮಾಡಿದ ಲವ್ ಸ್ಟೋರಿ' ಒಂದಷ್ಟು ಡಬ್ಬಿಂಗ್ ಚಿತ್ರಗಳ ಟೈಟಲ್ ಗಳು. ಟೈಟಲ್ ಗಳಲ್ಲೇ ಹೀಗಿರಬೇಕಾದರೆ ಇದರೊಳಗಿನ ಕನ್ನಡ ಡಬ್ಬಿಂಗ್ ಯಾವ ರೀತಿ ಇರುತ್ತದೆ ಎಂಬುದು ಬಿಡಿಸಿ ಹೇಳಬೇಕಾಗಿಲ್ಲ. ಲಿಪ್ ಸಿಂಕ್ ಮಾಡುವ ಸಾಹಸ ಕೂಡ ಒಂದು ರೀತಿಯಲ್ಲಿ ಅತ್ಯಂತ ಹಾಸ್ಯಾಸ್ಪದ ರೀತಿಯಲ್ಲಿ ಕಾಣುತ್ತದೆ. ಎಷ್ಟೋಸಲ ಇಲ್ಲಿರುವುದು ನಮ್ಮ ಕನ್ನಡ ಭಾಷೆಯಾ ಅನ್ನುವ ಭಾವನೆ ಅಲ್ಲಿ ಬಂದುಬಿಡುತ್ತೆ. ಹೀಗಾಗಿಯೇ ಟಿವಿ ಚಾನೆಲ್ ಗಳಲ್ಲಿ ಒಂದಷ್ಟು ಹೊತ್ತು ಟೈಂಪಾಸ್ ಗಾಗಿ ಈ ಸಿನಿಮಾಗಳನ್ನು ನೋಡುತ್ತಾರೆ ಹೊರತು
    ಯಾರು ಕೂಡ ಚಿತ್ರಮಂದಿರಗಳಿಗೆ ಹೋಗಿ ದುಡ್ಡು ಕೊಟ್ಟು ಟಿಕೆಟ್ ಖರೀದಿ ಮಾಡಿ ನೋಡಲು ಸಾಹಸ ಮಾಡುವುದಿಲ್ಲ.

    ಬೇರೆ ಭಾಷೆಗಳಲ್ಲಿ ವೃತ್ತಿಪರ ಡಬ್ಬಿಂಗ್ ನಡೆಯುತ್ತದೆ

    ಬೇರೆ ಭಾಷೆಗಳಲ್ಲಿ ವೃತ್ತಿಪರ ಡಬ್ಬಿಂಗ್ ನಡೆಯುತ್ತದೆ

    ನೀವು ಒಂದು ಮಲಯಾಳಂ ಚಿತ್ರವನ್ನು ತೆಲುಗಿನಲ್ಲಿ ನೋಡಿ. ಮೂಲ ಭಾಷೆ ಅರ್ಥವಾಗದೇ ಹೋದರೂ ಕೂಡ ತೆಲುಗಿನ ಭಾಷೆ ಎಷ್ಟರಮಟ್ಟಿಗೆ ಮೂಲ ಭಾಷೆಯಲ್ಲಿನ ಭಾವನೆಗಳನ್ನು ಅದೇ ದಾಟಿಯಲ್ಲಿ ದಾಟಿಸುತ್ತದೆ ಅದರಲ್ಲಿ ಗೊತ್ತಾಗುತ್ತದೆ. ಬಹುತೇಕ ತೆಲುಗು- ತಮಿಳು- ಮಲಯಾಳಂ ಚಿತ್ರಗಳನ್ನು ನಾವು ಗಮನಿಸಿದಾಗ ಡಬ್ಬಿಂಗ್ ಅತ್ಯಂತ ಪೂರಕವಾಗಿದ್ದು ಅನ್ಯಭಾಷೆಯ ಚಿತ್ರವನ್ನು ನೋಡುವ ಭಾವನೆ ಬರದಷ್ಟು ವೃತ್ತಿಪರವಾದ ಕೆಲಸದಲ್ಲಿ ಕಾಣುತ್ತದೆ. ಅರವತ್ತರ ದಶಕದ ಆರಂಭದಲ್ಲೇ ಕನ್ನಡ ಸಿನಿಮಾರಂಗದಲ್ಲಿ ಸಂಪೂರ್ಣವಾಗಿ ಡಬ್ಬಿಂಗ್ ನಿಷೇಧಿಸಿದ ಕಾರಣಕ್ಕೆ ಇಂದು ಡಬ್ಬಿಂಗ್ ಎಂಬ ಹೊಸ ಸಂಸ್ಕೃತಿ ಕನ್ನಡಕ್ಕೆ ಅಷ್ಟಾಗಿ ಹೊಂದಾಣಿಕೆ ಆಗುತ್ತಿಲ್ಲ.

    OTT ಬಂದ ಮೇಲೆ ಎಲ್ಲಾ ಬದಲಾಗಿದೆ!

    OTT ಬಂದ ಮೇಲೆ ಎಲ್ಲಾ ಬದಲಾಗಿದೆ!

    OTT ಬಂದಮೇಲೆ ಅದರಲ್ಲೂ ಕೂಡ ಕರೋನದ ಎರಡು ವರ್ಷ ಮನೆಯಲ್ಲಿ ಜನಸಾಮಾನ್ಯರು ಬಂಧನಕ್ಕೆ ಒಳಪಟ್ಟಿದ್ದ ಕಾಲದಲ್ಲಿ ಅವರಿಗೆ ಹೆಚ್ಚು ಎಂಟರ್ಟೈನ್ಮೆಂಟ್ ಸಿಕ್ಕಿದ್ದು OTT ಗಳ ಮೂಲಕವೇ! ಆ ಸಂದರ್ಭದಲ್ಲಿ ಬಹುತೇಕ ಮನೆಗಳಲ್ಲಿ ಜನ ಅತಿಹೆಚ್ಚಾಗಿ ಮಲಯಾಳಂ ಸಿನಿಮಾಗಳನ್ನು ನೋಡಿದರು. ಕರ್ನಾಟಕದಲ್ಲಿ ಮಾತ್ರವಲ್ಲ ಭಾರತದಲ್ಲಿ ಅತಿ ಹೆಚ್ಚು ಜನ ಆ ಸಮಯದಲ್ಲಿ ನೋಡಿದ್ದು ಮಲಯಾಳಂ ಚಿತ್ರಗಳನ್ನು. ಭಾಷೆ ಬರದೇ ಹೋದರೂ ಸಬ್-ಟೈಟಲ್ ಜೊತೆಯಲ್ಲಿ ಈ ಸಿನೆಮಾಗಳನ್ನು ನೋಡಿದ್ದಾರೆ. ಮುಖ್ಯವಾಗಿ ಮಲಯಾಳಂ ಸಿನೆಮಾಗಳನ್ನುನೋಡುವುದಕ್ಕೆ ಕಾರಣ ಕಥಾವಸ್ತು ಮತ್ತು ಭಾವನಾತ್ಮಕವಾಗಿ ಅದನ್ನು ತೆರೆಗೆ ಅವರು ತರುವ ರೀತಿ. ಇದೇ ಮಲಯಾಳಂ ಚಿತ್ರಗಳನ್ನು ನೀವು ಕನ್ನಡಕ್ಕೆ ಡಬ್ ಮಾಡಿದರೆ? ಖಂಡಿತವಾಗಿಯೂ ಅದೇ ಒಂದು ಇಂಪ್ಯಾಕ್ಟ್ ಕ್ರಿಯೇಟ್ ಮಾಡುವುದಿಲ್ಲ. ಎದುರಿಗೆ ಕಾಣುವ ಪಾತ್ರದ ಅಭಿನಯಕ್ಕೆ ತಕ್ಕ ದೃಶ್ಯದ ಸಂಯೋಜನೆ ಮತ್ತು ಸಂಭಾಷಣೆ ಬಹಳ ಮುಖ್ಯವಾಗುತ್ತದೆ. ಎಷ್ಟು ಸಲ ಭಾಷೆ ಬರದೇ ಹೋದರೂ ಕೂಡ ಭಾವನೆಗಳಿಂದ ಅದನ್ನು ನಾವು ಅನುಭವಿಸುತ್ತೇವೆ. ಆದರೆ ಭಾವನೆಗಳಿಗೆ ಪೂರಕವಾದ ಸಂಭಾಷಣೆಗೆ ಇಲ್ಲದೆ ಹೋದರೆ ಈ ದೃಶ್ಯ ಬಿದ್ದುಹೋಗುತ್ತದೆ. ಹೀಗಾಗಿಯೇ ಬಹುತೇಕರು ಮೂಲ ಆವೃತ್ತಿಯಲ್ಲಿ ಸಿನಿಮಾಗಳನ್ನು ನೋಡಲು ಇಷ್ಟಪಡುವುದು. ಡಬ್ಬಿಂಗ್ ಚಿತ್ರಗಳಿಗೆ ಒಂದು ಸರಿಯಾದ ಪದ್ಧತಿ ಮತ್ತು ಅದನ್ನು ಬಳಸುವ ಭಾಷೆ ಮತ್ತು ಅದಕ್ಕೆ ಬೇಕಾದ ತಂತ್ರಜ್ಞಾನವನ್ನು ಕನ್ನಡ ಸಿನಿಮಾರಂಗ ಅಳವಡಿಸಿಕೊಳ್ಳುವವರೆಗೂ ಕಂಡಿತವಾಗಿ ಕೂಡ ಜನ ಡಬ್ಬಿಂಗ್ ಚಿತ್ರಗಳ ಕಡೆಗೆ ಮುಖ ಮಾಡುವುದಿಲ್ಲ.

    English summary
    Why dubbing movies fail to see success in kannada? Kannadigas love to watch original version rather than dubbing version.
    Saturday, March 26, 2022, 13:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X