twitter
    For Quick Alerts
    ALLOW NOTIFICATIONS  
    For Daily Alerts

    2021 ರಲ್ಲಿ ಸದ್ದು ಮಾಡಿದ ಸ್ಯಾಂಡಲ್‌ವುಡ್‌ನ ವಿವಾದಗಳಿವು

    |

    ಯಾವದೇ ಚಿತ್ರರಂಗವಾಗಲಿ ವಿವಾದಗಳಿಂದ ಹೊರತಲ್ಲ, ನಮ್ಮ ಸ್ಯಾಂಡಲ್‌ವುಡ್ ಸಹ. ಇತರೆ ಕೆಲವು ಚಿತ್ರರಂಗಗಳಿಗೆ ಹೋಲಿಸಿದರೆ ನಮ್ಮಲ್ಲಿ ವಿವಾದ ಕಡಿಮೆ ಎನ್ನಬಹುದು. ಆದರೆ ವಿವಾದಗಳಿಂದ ಹೊರತಂತೂ ಖಂಡಿತ ಅಲ್ಲ.

    ಪ್ರತಿ ವರ್ಷವೂ ಒಂದಲ್ಲ ಒಂದು ವಿವಾದ ಚಿತ್ರರಂಗದಲ್ಲಿ ಸದ್ದು ಮಾಡುತ್ತದೆ, ಸುದ್ದಿ ಮಾಡುತ್ತದೆ. 2020 ರಲ್ಲಿ ಸಾಕಷ್ಟು ವಿವಾದಗಳು ಚಿತ್ರರಂಗವನ್ನು ಕಾಡಿದ್ದವು. ಅಂತೆಯೇ ಈ ವರ್ಷವೂ (2021) ಹಲವು ವಿವಾದಗಳು ಚಿತ್ರರಂಗದಲ್ಲಿ ಉಲ್ಬಣಗೊಂಡವು.

    ಕೆಲವು ವಿವಾದಗಳು ತೀವ್ರ ಸ್ವರೂಪ ಪಡೆದುಕೊಂಡು ಚಿತ್ರರಂಗದಲ್ಲಿ ವೈಮನಸ್ಯವನ್ನೇ ಉಂಟು ಮಾಡಿದವು. ಕೆಲವು ವಿವಾದಗಳು ಕೆಲ ದಿನ ಉರಿದು ನಂತರ ಸುಖಾಂತ್ಯ ಕಂಡವು. ದೊಡ್ಡ ದೊಡ್ಡ ನಟರೇ ಈ ವರ್ಷ ವಿವಾದದಲ್ಲಿ ಸಿಲುಕಿದರು. ಕೆಲವರ ವೈಯಕ್ತಿಕ ಜೀವನ ವಿವಾದಕ್ಕೆ ಕಾರಣವಾದರೆ, ಕೆಲವರ ಹೇಳಿಕೆಗಳು, ಕೆಲವು ಸಿನಿಮಾಗಳು ವಿವಾದಕ್ಕೆ ಈಡಾದವು. 2021ರಲ್ಲಿ ಚಿತ್ರರಂಗವನ್ನು ಕಾಡಿದ ವಿವಾದಗಳ ಪಟ್ಟಿ ಇಲ್ಲಿದೆ ನೋಡಿ.

    ಜಗ್ಗೇಶ್‌ಗೆ ಮುತ್ತಿಗೆ ಹಾಕಿದ ದರ್ಶನ್ ಅಭಿಮಾನಿಗಳು

    ಜಗ್ಗೇಶ್‌ಗೆ ಮುತ್ತಿಗೆ ಹಾಕಿದ ದರ್ಶನ್ ಅಭಿಮಾನಿಗಳು

    ನಟ ಜಗ್ಗೇಶ್ ಯಾವುದೋ ನಿರ್ಮಾಪಕರೊಟ್ಟಿಗೆ ಮಾತನಾಡುತ್ತಾ ನಟ ದರ್ಶನ್‌ರ ಅಭಿಮಾನಿಗಳನ್ನು ಬದಿದ್ದಾರೆ ಎನ್ನಲಾದ ಆಡಿಯೋ ಒಂದು ಲೀಕ್ ಆಗಿ ತೀವ್ರ ವಿವಾದ ಎಬ್ಬಿಸಿತು. 'ತೋತಾಪುರಿ' ಸಿನಿಮಾದ ಚಿತ್ರೀಕರಣದಲ್ಲಿದ್ದ ಜಗ್ಗೇಶ್ ಅವರನ್ನು ಮುತ್ತಿಗೆ ಹಾಕಿದ ದರ್ಶನ್ ಅಭಿಮಾನಿಗಳು ಜಗ್ಗೇಶ್ ಮೇಲೆ ತೀವ್ರ ವಾಗ್ದಾಳಿ ನಡೆಸಿದರು. ಜಗ್ಗೇಶ್ ಸ್ಪಷ್ಟನೆ ನೀಡಲು ಯತ್ನಿಸಿದರಾದರೂ ಕೊನೆಗೆ ಹಿರಿಯ ನಟನಿಂದ ಬಲವಂತದ ಕ್ಷಮಾಪಣೆ ಕೇಳಿಸಿಕೊಳ್ಳಲಾಯಿತು. ಆ ನಂತರ ಜಗ್ಗೇಶ್ ಅವರು ತಾವು ನಟ ದರ್ಶನ್‌ ಬಗ್ಗೆ ಮಾತನಾಡಿಲ್ಲವೆಂದು ಪ್ರತ್ಯೇಕ ವಿಡಿಯೋ ಒಂದರಲ್ಲಿ ಹೇಳಿದರು. ಆ ಬಳಿಕ 'ರಾಬರ್ಟ್' ಸಿನಿಮಾದ ಪ್ರಚಾರಾರ್ಥ ಮಾಡಲಾದ ಸಂದರ್ಶನದಲ್ಲಿ ನಟ ದರ್ಶನ್ ಅವರು, ತಮ್ಮ ಅಭಿಮಾನಿಗಳ ಪರವಾಗಿ ಜಗ್ಗೇಶ್ ಬಳಿ ಕ್ಷಮಾಪಣೆ ಕೇಳಿದರು. ಅಲ್ಲಿಗೆ ಪ್ರಕರಣ ಇತ್ಯರ್ಥವಾಯಿತು. ಈ ಘಟನೆ ಫೆಬ್ರವರಿ ತಿಂಗಳಲ್ಲಿ ನಡೆದಿತ್ತು.

    'ಪೊಗರು' ಸಿನಿಮಾ ವಿವಾದ

    'ಪೊಗರು' ಸಿನಿಮಾ ವಿವಾದ

    ಧ್ರುವ ಸರ್ಜಾ ನಟನೆಯ 'ಪೊಗರು' ಸಿನಿಮಾ ಬಿಡುಗಡೆ ಆದ ಬಳಿಕ ವಿವಾದ ಉಲ್ಬಣವಾಯಿತು. ಸಿನಿಮಾದಲ್ಲಿ ಬ್ರಾಹ್ಮಣರಿಗೆ ಅವಹೇಳನ ಮಾಡಲಾಗಿದೆ ಎಂದು ಬ್ರಾಹ್ಮಣ ಸಂಘ ಆಕ್ಷೇಪ ವ್ಯಕ್ತಪಡಿಸಿತು. ಬ್ರಾಹ್ಮಣ ಸಂಘದ ಕೆಲವರು ಚಲನಚಿತ್ರ ವಾಣಿಜ್ಯ ಮಂಡಳಿಗೆ ನುಗ್ಗಿ ಜಗಳ ಮಾಡಿದರು. ಬಳಿಕ ನಿರ್ದೇಶಕ ನಂದ ಕಿಶೋರ್ ಅನ್ನು ಎದುರು ಕೂರಿಸಿಕೊಂಡು ಬ್ರಾಹ್ಮಣ ಸಮುದಾಯದ ಪ್ರಮುಖರೊಬ್ಬರು ಅವಾಚ್ಯವಾಗಿ ನಿಂದಿಸಿದ ವಿಡಿಯೋ ಬಿಡುಗಡೆ ಆಯಿತು. ಆ ನಂತರ 'ಪೊಗರು' ಸಿನಿಮಾಕ್ಕೆ ಬೆಂಬಲ ಸೂಚಿಸಿ ಅಹಿಂದ ಸಂಘಟನೆಗಳು ಹಾಗೂ ಧ್ರುವ ಸರ್ಜಾ ಅಭಿಮಾನಿ ಬಳಗ ಪ್ರತಿಭಟನೆ ಮಾಡಿದವು. ಕೊನೆಗೆ ನಿರ್ದೇಶಕ ನಂದ ಕಿಶೋರ್ ಹಾಗೂ ನಟ ಧ್ರುವ ಸರ್ಜಾ ಬ್ರಾಹ್ಮಣ ಸಮುದಾಯದ ಕ್ಷಮೆ ಕೇಳಿ ಪ್ರಕರಣವನ್ನು ಇತ್ಯರ್ಥ ಮಾಡಿದರು.

    ಯಶ್‌ ಕುಟುಂಬದ ಜಮೀನು ವಿವಾದ

    ಯಶ್‌ ಕುಟುಂಬದ ಜಮೀನು ವಿವಾದ

    ನಟ ಯಶ್ ಹಾಸನದ ತಿಮ್ಲಾಪುರದಲ್ಲಿ ಜಮೀನು ಖರೀದಿಸಿದ್ದರು. ಜಮೀನಿಗೆ ಕಾಂಪೌಂಡ್ ಹಾಕುವಾಗ ಯಶ್‌ ಅವರ ಪೋಷಕರು ಹಾಗೂ ಗ್ರಾಮಸ್ಥರ ನಡುವೆ ಜಗಳ ನಡೆದಿತ್ತು. ಈ ಸಂಬಂಧ ಯಶ್ ಪೊಲೀಸ್‌ ಠಾಣೆಗೆ ಭೇಟಿ ನೀಡಿದಾಗ ಗ್ರಾಮಸ್ಥರು ಯಶ್‌ಗೆ ಧಿಕ್ಕಾರ ಕೂಗಿದ್ದರು. ಯಶ್‌ ತಮ್ಮ ಜಮೀನಿಗೆ ಕಾಂಪೌಂಡ್ ಹಾಕಿ ದೇವಸ್ಥಾನಕ್ಕೆ ಹೋಗುವ ರಸ್ತೆ ಮುಚ್ಚಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದರು. ಆದರೆ ನಂತರ ಯಶ್‌ ಅವರ ಮ್ಯಾನೇಜರ್ ಹಾಗೂ ಕುಟುಂಬಕ್ಕೆ ಸಂಬಂಧಿಸಿದವರು ಊರಿನ ಮುಖಂಡರೊಂದಿಗೆ ಕುಳಿತು ಮಾತನಾಡಿದ ಬಳಿಕ ವಿವಾದ ಇತ್ಯರ್ಥವಾಯಿತು. ಗಲಾಟೆ ಮಾಡಿದ್ದಕ್ಕೆ ಊರಿನ ಕೆಲವರು ಕ್ಷಮೆಯನ್ನೂ ಸಹ ಕೇಳಿದರು.

    ಚೈತ್ರಾ ಕೋಟೂರು ಮದುವೆ ವಿವಾದ

    ಚೈತ್ರಾ ಕೋಟೂರು ಮದುವೆ ವಿವಾದ

    ನಟಿ, ಮಾಜಿ ಬಿಗ್‌ಬಾಸ್ ಸ್ಪರ್ಧಿ ಚೈತ್ರಾ ಕೋಟೂರು ಅವರ ಮದುವೆ ವಿವಾದ ಸೃಷ್ಟಿಸಿತು. ಮಾರ್ಚ್ 28ರಂದು ಚೈತ್ರಾ ಕೋಟೂರು ನಾಗಾರ್ಜುನ ಎಂಬುವರನ್ನು ವಿವಾಹವಾದರು ಬಳಿಕ ಅದೇ ದಿನ ರಾತ್ರಿ ಪ್ರಕರಣವು ಪೊಲೀಸ್ ಠಾಣೆ ಮೆಟ್ಟಿಲೇರಿತು. ನಾಗಾರ್ಜುನ್ ಮನೆಯವರು ಚೈತ್ರಾ ಜೊತೆಗಿನ ಮದುವೆ ವಿರೋಧಿಸಿದ್ದರು. ನಾಗಾರ್ಜುನ ಮನೆಯವರು ತಮಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಚೈತ್ರಾ ದೂರು ಸಹ ದಾಖಲಿಸಿದರು. ಆ ಬಳಿಕ ಫೇಸ್‌ಬುಕ್‌ ಲೈವ್‌ನಲ್ಲಿ ಆತ್ಮಹತ್ಯೆ ಯತ್ನವನ್ನು ಮಾಡಿದರು. ಆದರೆ ಬದುಕುಳಿದರು.

    ದರ್ಶನ್-ಅರುಣಾ ಕುಮಾರಿ-ಉಮಾಪತಿ ಶ್ರೀನಿವಾಸ್ ಗೌಡ

    ದರ್ಶನ್-ಅರುಣಾ ಕುಮಾರಿ-ಉಮಾಪತಿ ಶ್ರೀನಿವಾಸ್ ಗೌಡ

    ದರ್ಶನ್ ಹಾಗೂ ಉಮಾಪತಿ ಶ್ರೀನಿವಾಸ್ ಗೌಡ ನಡುವೆ ಅರುಣಾ ಕುಮಾರಿ ಎಂಬ ಮಹಿಳೆ ಬಂದು ದೊಡ್ಡ ವಿವಾದ ಸೃಷ್ಟಿಯಾಯಿತು. ಉಮಾಪತಿ ಶ್ರೀನಿವಾಸ್ ಗೌಡ ಜೊತೆ ಸಂಪರ್ಕದಲ್ಲಿದ್ದ ಅರುಣಾ ಕುಮಾರಿ ಎಂಬ ಮಹಿಳೆ, ದರ್ಶನ್‌ರ ಮೈಸೂರು ಗೆಳೆಯರು ದರ್ಶನ್ ಹಾಗೂ ಉಮಾಪತಿ ಹೆಸರಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಉಮಾಪತಿಗೆ ಹೇಳಿದ್ದರು. ಈ ವಿಷಯವನ್ನು ಉಮಾಪತಿ, ದರ್ಶನ್‌ ಅವರಿಗೆ ತಿಳಿಸಿದರು. ಇದನ್ನು ತಪ್ಪಾಗಿ ಅರ್ಥೈಸಿಕೊಂಡ ದರ್ಶನ್, ಉಮಾಪತಿ, ತಮ್ಮನ್ನು ಮೈಸೂರು ಗೆಳೆಯರಿಂದ ದೂರ ಮಾಡಲು ಹೀಗೆ ತಾವೇ ಅರುಣಾ ಕುಮಾರಿಯನ್ನು ಕರೆತಂದಿದ್ದಾರೆ ಎಂದುಕೊಂಡರು. ಈ ಬಗ್ಗೆ ಮೈಸೂರು ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿ, ಒಂದು ಸುದ್ದಿಗೋಷ್ಠಿ ಸಹ ನಡೆಸಿದರು. ದರ್ಶನ್‌ರ ಮೈಸೂರು ಗೆಳೆಯರು ಉಮಾಪತಿಗೆ ಕರೆ ಮಾಡಿ ಬೆದರಿಕೆ ಸಹ ಹಾಕಿದ್ದಾಗಿ ವರದಿಯಾಯಿತು. ನಂತರ ಉಮಾಪತಿ ಶ್ರೀನಿವಾಸ್ ಗೌಡ, ದರ್ಶನ್‌ರ ಮೈಸೂರು ಗೆಳೆಯರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬಳಿಕ ದರ್ಶನ್ ಹಾಗೂ ಉಮಾಪತಿ ನಡುವೆ ಕಂದಕ ಏರ್ಪಟ್ಟಿತು. ದೊಡ್ಮನೆಯವರು ಮಾರಾಟ ಮಾಡಿದ ಆಸ್ತಿಯನ್ನು ದರ್ಶನ್ ಪಡೆದುಕೊಳ್ಳಲು ಯತ್ನಿಸಿದ್ದಾರೆ ಎಂದು ಉಮಾಪತಿ ಮಾಧ್ಯಮಗಳಿಗೆ ಹೇಳಿದ ಬಳಿಕವಂತೂ ದರ್ಶನ್ ಕೆರಳಿ ಕೆಂಡವಾದರೂ. ಉಮಾಪತಿ ಹಾಗೂ ದರ್ಶನ್ ದೂರಾದರು.

    ಹೋಟೆಲ್‌ನಲ್ಲಿ ದರ್ಶನ್ ಹಲ್ಲೆ!

    ಹೋಟೆಲ್‌ನಲ್ಲಿ ದರ್ಶನ್ ಹಲ್ಲೆ!

    ದರ್ಶನ್-ಉಮಾಪತಿ ಪ್ರಕರಣ ಮುಗಿಯುವ ಮೊದಲೇ ನಿರ್ದೇಶಕ ಇಂದ್ರಜಿತ್ ಲಂಕೇಶ್, ದರ್ಶನ್‌ ಮೇಲೆ ಬಾಂಬ್ ಒಂದನ್ನು ಹಾಕಿದರು. ಮೈಸೂರಿನ ಪ್ರಿನ್ಸ್ ಸಂದೇಶ್ ಹೋಟೆಲ್‌ನಲ್ಲಿ ನಟ ದರ್ಶನ್ ದಲಿತ ಸಪ್ಲೈಯರ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಮೈಸೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದರು. ಇದೇ ಘಟನೆಗೆ ಸಂಬಂಧಿಸಿದಂತೆ ನಿರ್ಮಾಪಕ, ಸಂದೇಶ್ ಪ್ರಿನ್ಸ್‌ ಹೋಟೆಲ್ ಮಾಲೀಕ ಸಂದೇಶ್, ಇಂದ್ರಜಿತ್ ಲಂಕೇಶ್ ಜೊತೆ ಮಾತನಾಡಿರುವ ಆಡಿಯೋ ಬಿಡುಗಡೆ ಮಾಡಿದರು. ಆಡಿಯೋನಲ್ಲಿ ದರ್ಶನ್ ಹಾಗೂ ಗೆಳೆಯರು ಹೋಟೆಲ್‌ನಲ್ಲಿ ವ್ಯಕ್ತಿಯೊಬ್ಬನನ್ನು ಹೊಡೆದ ಬಗ್ಗೆ ಸಂದೇಶ್, ಇಂದ್ರಜಿತ್ ಬಳಿ ಮಾತನಾಡಿದ್ದರು. ಈ ಆಡಿಯೋ ವೈರಲ್ ಆದ ಬಳಿಕ ಸಂದೇಶ್ ಹಾಗೂ ದರ್ಶನ್ ನಡುವೆ ಗೆಳೆತನ ಕಡಿದು ಹೋಯಿತು.

    ಪ್ರೇಮ್ ವಿರುದ್ಧ ದರ್ಶನ್ ಮಾತು

    ಪ್ರೇಮ್ ವಿರುದ್ಧ ದರ್ಶನ್ ಮಾತು

    ಇಂದ್ರಜಿತ್ ಮಾಡಿದ ಆರೋಪಗಳ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡುತ್ತಿದ್ದ ನಟ ದರ್ಶನ್, ಸುಖಾಸುಮ್ಮನೆ ನಿರ್ದೇಶಕ ಪ್ರೇಮ್ ವಿಷಯ ಪ್ರಸ್ತಾಪಿಸಿ ನಿಂದಿಸಿದರು. ''ಪ್ರೇಮ್ ಏನು ದೊಡ್ಡ ಪುಡಾಂಗಾ'' ಎಂದು ದರ್ಶನ್ ಪ್ರಶ್ನೆ ಮಾಡಿದರು. ಇದು ಪ್ರೇಮ್‌ ಹಾಗೂ ರಕ್ಷಿತಾ ಬೇಸರಕ್ಕೆ ಕಾರಣವಾಯಿತು. ''ನಿರ್ದೇಶಕರು ಸಿನಿಮಾ ಮಾಡಿದರೇನೆ ನಟರು ಸ್ಟಾರ್‌ಗಳಾಗುವುದು'' ಎಂದು ಪ್ರೇಮ್ ಸರಿಯಾಗಿಯೇ ಟಾಂಗ್ ನೀಡಿದರು. ರಕ್ಷಿತಾ ಸಹ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹೊರಹಾಕಿದರು. ಬಳಿಕ ರಕ್ಷಿತಾರನ್ನು ಭೇಟಿಯಾದ ನಟ ದರ್ಶನ್ ಕ್ಷಮೆ ಕೇಳಿ ವಿವಾದಕ್ಕೆ ತೆರೆ ಹಾಡಿದರು.

    ಲವ್ ಯೂ ರಚ್ಚು ಅವಘಡ

    ಲವ್ ಯೂ ರಚ್ಚು ಅವಘಡ

    ಆಗಸ್ಟ್ ತಿಂಗಳಲ್ಲಿ ರಚಿತಾ ರಾಮ್ ಹಾಗೂ ಅಜಯ್ ರಾವ್ ನಟಿಸಿದ್ದ 'ಲವ್ ಯೂ ರಚ್ಚು' ಸಿನಿಮಾದ ಚಿತ್ರೀಕರಣದ ವೇಳೆ ನಡೆದ ವಿದ್ಯುತ್ ಅವಘಡದಲ್ಲಿ ಸಾಹಸ ಕಲಾವಿದ ವಿವೇಕ್ ಸಾವನ್ನಪ್ಪಿದರು. ಈ ಸಾವಿಗೆ ಫೈಟ್ ಮಾಸ್ಟರ್‌ ಅವರ ಅಜಾಗ್ರತೆಯೇ ಕಾರಣ ಎಂದು ನಟ ಅಜಯ್ ರಾವ್ ಆರೋಪಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಶಂಕರ್ ರಾಜ್, ಫೈಟ್ ಮಾಸ್ಟರ್ ವಿನೋದ್ ಹಾಗೂ ಅವಘಡ ನಡೆದಾಗ ಕ್ರೇನ್ ಚಾಲನೆ ಮಾಡುತ್ತಿದ್ದ ಮಹದೇವ್ ಅವರನ್ನು ಬಂಧಿಸಿ 14 ದಿನ ಜೈಲಿನಲ್ಲಿಡಲಾಗಿತ್ತು. ನಿರ್ಮಾಪಕ ಗುರು ದೇಶಪಾಂಡೆ ತಲೆಮರೆಸಿಕೊಂಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ರಾಮನಗರ ಪೊಲೀಸರು ನಟಿ ರಚಿತಾ ರಾಮ್, ನಟ ಅಜಯ್ ರಾವ್ ಸೇರಿದಂತೆ ಹಲವರನ್ನು ವಿಚಾರಣೆ ನಡೆಸಿದರು. ಕೊನೆಗೆ ಮೃತ ವಿವೇಕ್ ಕುಟುಂಬಕ್ಕೆ ನಿರ್ಮಾಪಕ ಗುರು ದೇಶಪಾಂಡೆ ಪರಿಹಾರವಾಗಿ 10 ಲಕ್ಷ ಹಣ ನೀಡಿದರು. ಇದೀಗ ಸಿನಿಮಾ ಬಿಡುಗಡೆ ಆಗಲಿದೆ.

    ನಟ ಕೋಮಲ್ ವಿರುದ್ಧ ಭ್ರಷ್ಟಾಚಾರ ಆರೋಪ

    ನಟ ಕೋಮಲ್ ವಿರುದ್ಧ ಭ್ರಷ್ಟಾಚಾರ ಆರೋಪ

    ನಟ ಕೋಮಲ್ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿತು. ಶಾಲೆಗಳು ಆರಂಭ ಆಗಿಲ್ಲವಾದರೂ ಮುನ್ಸಿಪಲ್ ಶಾಲೆ, ಕಾಲೇಜು ಮಕ್ಕಳಿಗೆ ಸ್ವೆಟರ್ ನೀಡುವುದಾಗಿ ಹೇಳಿ ನಟ ಕೋಮಲ್ ಸುಮಾರು 1 ಕೋಟಿ ಬಿಲ್ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಡಿಎಸ್‌ಎಸ್ ಸಂಘಟನೆಯು ರಘು ಎಂಬುವರ ನೇತೃತ್ವದಲ್ಲಿ ಬಿಬಿಎಂಪಿ ಎದುರು ಪ್ರತಿಭಟನೆ ಮಾಡಿತು. ಆದರೆ ಆರೋಪ ಅಲ್ಲಗಳೆದ ನಟ ಕೋಮಲ್, ಆ ಟೆಂಡರ್‌ಗೆ ನಾನು ಅರ್ಜಿ ಹಾಕಿಲ್ಲ ಆ ಟೆಂಡರ್ ನನಗೆ ಸಿಕ್ಕಿಲ್ಲ. ನನ್ನ ಹಾಗೂ ಅಣ್ಣನ ಹೆಸರು ಹಾಳು ಮಾಡಲು ಹೀಗೆ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದರು. ಜಗ್ಗೇಶ್ ಸಹ ಆರೋಪ ಅಲ್ಲಗಳೆದು, ಸುಳ್ಳು ಆರೋಪ ಮಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಟ್ವೀಟ್ ಮಾಡಿದ್ದರು.

    'ಕೋಟಿಗೊಬ್ಬ 3' ಬಿಡುಗಡೆ ವಿವಾದ

    'ಕೋಟಿಗೊಬ್ಬ 3' ಬಿಡುಗಡೆ ವಿವಾದ

    ಸುದೀಪ್ ನಟನೆಯ 'ಕೋಟಿಗೊಬ್ಬ 3' ಸಿನಿಮಾ ಅಕ್ಟೋಬರ್ 14ರಂದು ಬಿಡುಗಡೆ ಆಗಬೇಕಿತ್ತು. ಆದರೆ ಸಿನಿಮಾಕ್ಕೆ ಯುಎಫ್‌ಓ ಪ್ರಮಾಣ ಪತ್ರ ಸಿಗದ ಕಾರಣ ಸಿನಿಮಾ ಶೋ ರದ್ದಾಯಿತು. ಕೆಲವು ವಿತರಕರು ಹಣ ನೀಡದ ಕಾರಣ ಸಿನಿಮಾ ಬಿಡುಗಡೆ ಆಗಲಿಲ್ಲ ಎಂದು ಸೂರಪ್ಪ ಬಾಬು ಕ್ಷಮೆ ಕೇಳಿದರು. ಕೊನೆಗೆ ಸುದೀಪ್ ಅವರು ಮಧ್ಯಪ್ರವೇಶಿಸಿ ಬೇರೆ ವಿತರಕರನ್ನು ಗೊತ್ತುಪಡಿಸಿ ಸಿನಿಮಾವನ್ನು ಒಂದು ದಿನ ತಡವಾಗಿ ಅಂದರೆ ಅಕ್ಟೋಬರ್ 15ರಂದು ಬಿಡುಗಡೆ ಮಾಡಿಸಿದರು. ತಮಗೆ ಕೈಕೊಟ್ಟ ವಿತರಕರಿಗೆ ಕರೆ ಮಾಡಿ ಸೂರಪ್ಪ ಬಾಬು ಅವಾಚ್ಯವಾಗಿ ಬೈದಿದ್ದರು. ಹಾಗಾಗಿ ಸೂರಪ್ಪ ಬಾಬು ವಿರುದ್ಧ ಚಿತ್ರದುರ್ಗದಲ್ಲಿ ಇಬ್ಬರು ವಿತರಕರು ಕೊಲೆ ಬೆದರಿಕೆ ಪ್ರಕರಣ ಸಹ ದಾಖಲಿಸಿದ್ದರು. ಸುದೀಪ್ ಸಹ ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಅಸಮಾಧಾನ ಹೊರ ಹಾಕಿದರು. ಕೊನೆಗೆ ಜಾಕ್ ಮಂಜು ಹಾಗೂ ಇನ್ನಿತರರು ಸೇರಿ 'ಕೋಟಿಗೊಬ್ಬ 3' ಸಿನಿಮಾ ಬಿಡುಗಡೆ ಮಾಡಿದರು, ಸಿನಿಮಾ ಹಿಟ್ ಆಗುವಲ್ಲಿದೆ ಪ್ರಕರಣ ಸುಖಾಂತ್ಯವಾಯಿತು.

    'ಏಕ್‌ ಲವ್ ಯಾ' ಶಾಂಪೆನ್ ವಿವಾದ

    'ಏಕ್‌ ಲವ್ ಯಾ' ಶಾಂಪೆನ್ ವಿವಾದ

    ಪ್ರೇಮ್ ನಿರ್ದೇಶಿಸಿ, ಪತ್ನಿ ರಕ್ಷಿತಾ ನಿರ್ಮಾಣ ಮಾಡುತ್ತಿರುವ 'ಏಕ್‌ ಲವ್ ಯಾ' ಸಿನಿಮಾದ ಕಾರ್ಯಕ್ರಮವೊಂದು ವಿವಾದಕ್ಕೆ ಕಾರಣವಾಯಿತು. ಸಿನಿಮಾದ ಹಾಡು ಬಿಡುಗಡೆ ಮಾಡಲು ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಣ್ಣೆ ಹಾಡಾದ್ದರಿಂದ ನಟಿ ರಚಿತಾ ರಾಮ್, ರಕ್ಷಿತಾ, ಗಾಯಕಿ ಮಂಗ್ಲಿ ಸೇರಿದಂತೆ ಇನ್ನು ಕೆಲವು ಮಹಿಳೆಯರು ಶಾಂಪೆನ್ ಗ್ಲಾಸ್ ಹಿಡಿದು ವೇದಿಕೆ ಮೇಲೆ ಫೋಸ್ ನೀಡುತ್ತಿದ್ದರು ಅದೇ ವೇಳೆಗೆ ಹಿನ್ನೆಲೆಯಲ್ಲಿ ಪುನೀತ್ ರಾಜ್‌ಕುಮಾರ್ ಚಿತ್ರ ಪ್ರದರ್ಶನವಾಗುತ್ತಿತ್ತು. ಅಪ್ಪು ಚಿತ್ರದ ಮುಂದೆ ಶಾಂಪೆನ್ ಬಾಟಲಿ ಹಿಡಿದು ನಟಿಯರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆಕ್ರೋಶ ವ್ಯಕ್ತವಾಯಿತು. ನಟಿ ರಕ್ಷಿತಾ, ರಚಿತಾ ರಾಮ್ ಸೇರಿದಂತೆ ಎಲ್ಲರೂ ಮಾಡಿದ ತಪ್ಪಿಗೆ ಕ್ಷಮೆ ಕೇಳಿದರು.

    ಹಂಸಲೇಖ ವಿವಾದ

    ಹಂಸಲೇಖ ವಿವಾದ

    ಸಂಗೀತ ನಿರ್ದೇಶಕ, ಚಿತ್ರಸಾಹಿತಿ ಹಂಸಲೇಖ ಅವರು ಮೈಸೂರಿನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ''ಪೇಜಾವರ ಸ್ವಾಮಿಗಳು ದಲಿತರ ಮನೆಗೆ ಹೋದರು ಎಂಬುದು ಬಹಳ ಸುದ್ದಿಯಾಗಿತ್ತು. ದಲಿತರ ಮನೆಗೆ ಹೋಗಿ ಪೇಜಾವರ ಸ್ವಾಮಿಗಳು ಅಲ್ಲಿ ಕುಳಿತಿದ್ದರಷ್ಟೆ ಅವರು ಕೋಳಿ ಕೊಟ್ಟರೆ ತಿನ್ನಲಿಕ್ಕಾಗುತ್ತದೇನು? ಕುರಿ ರಕ್ತದ ಫ್ರೈ ಮಾಡಿಕೊಟ್ಟರೆ ಅವರು ತಿನ್ನುತ್ತಿದ್ದರೇನು? ಲಿವರ್ ಫ್ರೈ ಕೊಟ್ಟಿದ್ದರೆ ತಿನ್ನುತ್ತಿದ್ದರೇನು?'' ಎಂದು ಪ್ರಶ್ನೆ ಮಾಡಿದ್ದರು. ಇದರ ವಿರುದ್ಧ ಪೇಜಾವರರ ಭಕ್ತರು, ಬ್ರಾಹ್ಮಣ ಮಂಡಳಿ ಇನ್ನಿತರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಂಸದ ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ ಅವರುಗಳು ಸಹ ಹಂಸಲೇಖ ಹೇಳಿಕೆಯನ್ನು ಖಂಡಿಸಿದರು. ಹಂಸಲೇಖ ವಿರುದ್ಧ ಹಲವು ದೂರುಗಳು ದಾಖಲಾದವು. ಹಂಸಲೇಖ ಕ್ಷಮೆ ಕೇಳಿದರಾದರೂ, ಅವರು ಶ್ರೀಗಳ ಬೃಂದಾವನದ ಮುಂದೆ ನಿಂತು ಕೈಮುಗಿದು ಕ್ಷಮೆ ಕೇಳಬೇಕು ಎಂದು ಬ್ರಾಹ್ಮಣ ಸಂಘ ಒತ್ತಾಯಿಸಿತು. ಹಂಸಲೇಖ ಅವರಿಗೆ ಹಲವು ಸಂಘಟನೆಗಳಿಂದ ಬೆಂಬಲವೂ ವ್ಯಕ್ತವಾಯಿತು. ನಟ ಚೇತನ್ ಅಹಿಂಸ, ಚಿತ್ರಸಾಹಿತಿ ಕವಿರಾಜ್ ಸೇರಿದಂತೆ ಹಲವರು ಹಂಸಲೇಖ ಅವರಿಗೆ ಬೆಂಬಲ ಸೂಚಿಸಿದರು.

    ಅಂಧರ ಕ್ಷಮೆ ಕೋರಿದ ನಿರ್ದೇಶಕ ಸುನಿ

    ಅಂಧರ ಕ್ಷಮೆ ಕೋರಿದ ನಿರ್ದೇಶಕ ಸುನಿ

    'ಸಖತ್' ಸಿನಿಮಾದಲ್ಲಿ ಅಂಧರಿಗೆ ಅವಮಾನ ಆಗುವಂತಹ ದೃಶ್ಯಗಳಿವೆ ಎನ್ನಲಾಗಿದ್ದು, ಸಿನಿಮಾ ಪ್ರದರ್ಶನ ನಿಲ್ಲಿಸುವಂತೆ ಕೋರ್ಟ್ ಮೊರೆ ಹೋಗಲು ಅಂಧರ ಸಮುದಾಯ ಮುಂದಾಗಿತ್ತು. ಇದು ತಿಳಿಯುತ್ತಿದ್ದಂತೆ ನಿರ್ದೇಶಕ ಸುನಿ ಕ್ಷಮೆ ಕೇಳಿದ್ದಾರೆ. "ಸಖತ್ ಸಿನಿಮಾದ ನಿರ್ದೇಶಕ ಸುನೀಲ್ ಕುಮಾರ್ ಆದ ನಾನು ತಿಳಿಯಪಡಿಸುವ ವಿಷಯವೇನೆಂದರೆ, ಸಖತ್ ಸಿನಿಮಾವು ಅಂಧರ ಬಗ್ಗೆಯಾಗಿದ್ದು, ಇದರಲ್ಲಿ ನಿಮಗೆ ನೊಂದ ವಿಷಯವಿದ್ದರೆ, ನಿಮಗೆ ಶುಕ್ರವಾರ, 26-11-2021ರಂದು ಸಿನಿಮಾ ತೋರಿಸಿ ಹಾಗೂ ಅದೇ ದಿನ ಸುದ್ದಿಗೋಷ್ಟಿ ನಡೆಸಿ, ನೀವು ಹೇಳುವ ತಿದ್ದುಪಡಿಗಳನ್ನು ಸರಿಪಡಿಸಿಕೊಳ್ಳಲು ಒಪ್ಪಿರುತ್ತೇನೆ. ಹೀಗಾಗಿ ನೀವು ಚಿತ್ರ ಬಿಡುಗಡೆ ಅನುಕೂಲ ಮಾಡಿಕೊಡಬೇಕೆಂದು ವಿನಂತಿಸಿಕೊಳ್ಳುತ್ತೇನೆ. ತಿಳಿದೋ.. ತಿಳಿಯದೆಯೋ ತಪ್ಪಾಗಿದ್ದರೆ ನಾನು ಮತ್ತು ನನ್ನ ತಂಡದ ಪರವಾಗಿ ನಿಮ್ಮಲ್ಲಿ ಕ್ಷಮೆಯಾಚಿಸುತ್ತೇನೆ.. ಮನ್ನಿಸಿ." ಎಂದು ನಿರ್ದೇಶಕ ಸುನಿ ಕ್ಷಮೆ ಕೇಳಿದರು.

    English summary
    Year End Special: Sandalwood saw many controversies in the year 2021. Darshan, Jaggesh, Hamsalekha many big names involved in the controversy.
    Friday, December 17, 2021, 9:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X